September 20, 2024

” ಯೋಗಮಾಸಾಂ ತು ಯೋ ವಿದ್ಯಾದ್ದೇಶಕಾಲೋಪಪಾದಿತಮ್।

ಪುರುಷಂ ಪುರುಷಂ  ವೀಕ್ಷ್ಯ ಸ ಜ್ಞೇಯೋ ಭಿಷಗುತ್ತಮಃ॥”

ಎಂದರೆ- ಯಾವ ವೈದ್ಯರು ರೋಗಿಯ ಸ್ಥಿತಿಗತಿಗಳನ್ನು ಅರಿತು ಕಾಲ , ದೇಶ ಹಾಗೂ ವಯಸ್ಸಿಗೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಾನೋ ಆತನೇ ಉತ್ತಮ ಚಿಕಿತ್ಸಕ ಎಂದು  ಚರಕ ಸಂಹಿತೆಯಲ್ಲಿ ಹೇಳಲಾಗಿದೆ ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಗೆ ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸಿ ಅವನಿಗೆ ಪುನರ್ಜನ್ಮ ನೀಡುವ ಮಹತ್ಕಾರ್ಯಕ್ಕಾಗಿ  “ವೈದ್ಯೋ ನಾರಾಯಣ ಹರಿ”  ಎಂದು ವೈದ್ಯರನ್ನು ದೇವರೆಂದು ಪರಿಗಣಿಸಲಾಗಿದೆ.

ಜಾತಿ ಮತ ಪಂಥ ಮೀರಿ ನಿಂತ ಮನುಜ ಕುಲ ಒಂದೇ ಎಂಬ ವೃತ್ತಿ ಧರ್ಮ ಪಾಲಿಸುವ ತನ್ನ ಸುಖವ ಮರೆತು ಕಾಯ ವಾಚಾ ಮನಸಾ ದುಡಿಯುವ ವೈದ್ಯ ಮಹಾಶಯರ  ಸಾಲಿನಲ್ಲಿ  ಬೆಂಗಳೂರಿನ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ  ಹಿರಿಯ ವೈದ್ಯಾಧಿಕಾರಿ ಡಾ॥ ಸುಮತಿ ಲಕ್ಷ್ಮಣ್ ಕರಾವಳಿ ಯವರು ಕೂಡ ಸೇರಿದ್ದಾರೆ ಎಂದರೆ ತಪ್ಪಾಗಲಾರದು.

ಕೊರೊನಾ ಸೋಂಕಿನ ವಿರುದ್ಧ ಹೋರಾಡಿದ ಜೊತೆಗೆ ಎಲ್ಲರ ಉಳಿವಿಗಾಗಿ ನಿರಂತರವಾಗಿ ಶ್ರಮಿಸಿದ ವೈದ್ಯರನ್ನು ವಿಶ್ವ ವೈದ್ಯರ ದಿನಾಚರಣೆಯ ಸಲುವಾಗಿ ಜುಲೈ  26 ನೇ ಬುಧವಾರದಂದು  ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಾರಾಯಣ ಹೃದಯಾಲಯದ  ನೇತೃತ್ವದಲ್ಲಿ  ಬೆಂಗಳೂರು ಟೌನ್ ಹಾಲ್ ನಲ್ಲಿ  ಏರ್ಪಡಿಸಿದ ಸಮಾರಂಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ  ಪ್ರಾಮಾಣಿಕ ಸೇವೆ ಸಲ್ಲಿಸಿದ ಆಸ್ಪತ್ರೆಗಳ ಕೆಲವು ವೈದ್ಯರನ್ನು ಗೌರವಿಸಿ ಅತ್ಯುತ್ತಮ ವೈದ್ಯರೆಂದು ಪ್ರಶಸ್ತಿ ನೀಡಿ ಸನ್ಮಾನಿಸಿದವರಲ್ಲಿ ಡಾ॥ ಸುಮತಿ ಲಕ್ಷ್ಮಣ ಕರಾವಳಿ ಕೂಡಾ ಒಬ್ಬರಾಗಿರುತ್ತಾರೆ. ಇದು ಇವರ ವೃತ್ತಿಯಲ್ಲಿರುವ ಪ್ರಾಮಾಣಿಕತೆಗೆ ಸಂದ ಗೌರವವಾಗಿದೆ.

ಡಾ॥ ಸುಮತಿಯವರು ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಪದವಿಯನ್ನು ಪಡೆದು ತನ್ನ ತವರೂರಾದ ಸಾಗರ ತಾಲ್ಲೂಕಿನ ತಾಳಗುಪ್ಪ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ವೃತ್ತಿಜೀವನಕ್ಕೆ ಕಾಲಿಟ್ಟರು. ಅಲ್ಲಿಂದ ಕನಕಪುರದ ಹಾರೋಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸಿ ಅಲ್ಲಿಂದ ಬೆಂಗಳೂರಿನ ದೊಡ್ಡನೆಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ತನ್ನ ಹನ್ನೊಂದು ವರ್ಷಗಳ ಅಧಿಕಾರಾವಧಿ ಕಾಲದಲ್ಲಿ ದೊಡ್ಡನೆಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರದ ಅನುದಾನ ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಮಾದರಿ ಆಸ್ಪತ್ರೆಯನ್ನಾಗಿ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಸೇವಾ ಕೇಂದ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ ಮತ್ತು ಇವರ ಅತ್ಯುತ್ತಮ ಸೇವೆಯನ್ನು ಗುರುತಿಸಿ “ಕರುನಾಡ ಅಮೂಲ್ಯ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು ಹಾಗೂ ದೊಡ್ಡನೆಕ್ಕುಂಡಿ ಸುತ್ತಮುತ್ತಲಿನಲ್ಲಿ ನಾಗರಿಕರ ಆರೋಗ್ಯ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವ ಅತ್ಯುತ್ತಮ ಡಾಕ್ಟರ್ ಎಂದೇ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕಳೆದ ನಾಲ್ಕು  ವರ್ಷಗಳಿಂದ ಬೆಂಗಳೂರಿನ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೇವೆ ಸಲ್ಲಿಸುತ್ತಿದ್ದು ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಿಗೆ ಸೂಕ್ತ ಮುನ್ನೆಚ್ಚರಿಕೆಯನ್ನು ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನವರಿಕೆ ಮಾಡಿ ಧೈರ್ಯ ತುಂಬಿದ್ದಾರೆ. ಮತ್ತು ಜನರಿಗೆ ಕೊರೊನಾ ಲಸಿಕೆ ಅಚ್ಚುಕಟ್ಟಾಗಿ ನೀಡಲು ವ್ಯವಸ್ಥೆ ಮಾಡಿರುತ್ತಾರೆ. ಸಿದ್ಧಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು  ಸರಕಾರದ ಸಹಕಾರದಿಂದ ಮತ್ತು ಇಲಾಖೆಯ ಮೇಲಧಿಕಾರಿಗಳ ಪೋತ್ಸಾಹದಿಂದ ನಿರ್ಮಾಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಡಾ॥ ಸುಮತಿ ಲಕ್ಷ್ಮಣ್ ಕರಾವಳಿಯವರು ಕಳೆದ 23 ವರ್ಷಗಳಿಂದ ಪ್ರಾಮಾಣಿಕವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ .

ಸಾಗರ ತಾಲ್ಲೂಕು ಕಾರ್ಗಲ್ ಶ್ರೀ ಮಹಾದೇವ ಮತ್ತು ಶ್ರೀಮತಿ ರಾಜಮ್ಮ ದಂಪತಿಯ ಪುತ್ರಿಯಾಗಿರುವ ಡಾ॥ ಸುಮತಿ ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಕರಾವಳಿ ಕೇಬಲ್& ಇಂಟರ್ನೆಟ್ ಸರ್ವಿಸಸ್ ಇದರ ಮಾಲಕರು ಮತ್ತು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಸೇವಾ ಟ್ರಸ್ಟಿನ ಉಪಾಧ್ಯಕ್ಷರಾಗಿದ್ದ ಹಾಗೂ ಪ್ರಸ್ತುತ ಬೆಂಗಳೂರು ಭಂಡಾರಿ ಸಮಾಜ ಸಂಘದ ಗೌರವ ಅಧ್ಯಕ್ಷರಾಗಿರುವ ಸಮಾಜದ ಕೊಡುಗೈ ದಾನಿ ಶ್ರೀ  ಲಕ್ಷ್ಮಣ್ ಕರಾವಳಿಯ ಅವರ ಧರ್ಮಪತ್ನಿಯಾಗಿರುತ್ತಾರೆ.

ಇವರ ಮೊದಲ ಪುತ್ರರಾದ ಡಾ॥ ಹರ್ಷಿತ್ ಎಲ್. ಭಂಡಾರಿ ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿಯನ್ನು ಅತ್ಯುತ್ತಮ ಅಂಕದೊಂದಿಗೆ ಪಡೆದು  ವೈದ್ಯಕೀಯ ತರಬೇತಿಯನ್ನು ಪೂರೈಸಿ ಎಮ್.ಡಿ. ವ್ಯಾಸಂಗ ಮಾಡುವ ಪೂರ್ವ ಸಿದ್ಧತೆಯಲ್ಲಿದ್ದಾರೆ .

ಎರಡನೆಯ ಪುತ್ರ  ಆದಿತ್ಯ ಎಲ್. ಭಂಡಾರಿಯವರು ಬೆಂಗಳೂರಿನ ಸಿ. ಎಂ.ಆರ್.ಐ ಟಿ ಇಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ  ಬಿ .ಇ. ವ್ಯಾಸಂಗ ಮಾಡುತ್ತಿದ್ದಾರೆ .

ಡಾ॥ ಸುಮತಿ ಲಕ್ಷ್ಮಣ ಕರಾವಳಿಯವರು ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಜನ ಸೇವೆಯನ್ನು ಮಾಡಿ ಉನ್ನತ ಹುದ್ದೆಯನ್ನು ಅಲಂಕರಿಸಿ ಸಂತೃಪ್ತಿಯ ಜೀವನ ಮುನ್ನಡೆಸಲು ಕಚ್ಚೂರು ಶ್ರೀ ನಾಗೇಶ್ವರ ದೇವರ  ಅನುಗ್ರಹ ಸದಾ ಕಾಲ ಇರಲಿ ಎಂಬುದಾಗಿ  ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ .

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *