September 20, 2024

  ಬೆಳಕಲ್ಲದ ಬೆಂಕಿಯಂತಹ ಬೆಳಕೊಂದು ಎತ್ತರಕ್ಕೇರಿ ಮತ್ತೆ ಕೆಳಗಿಳಿದು, ಮಿಂಚಿ ಮರೆಯಾಯಿತು. ಹುಣ್ಣಿಮೆಯ ಚಂದಿರನು ಕೂಡಾ ಮೋಡದೊಳಗೆ ಅವಿತಿದ್ದ. ಕಗ್ಗತ್ತಲಲ್ಲಿ ಏನೂ ಕಾಣದೇ ಭಯ ಬೀತಿಯಿಂದ ಬಲವಾದ ಹೆಜ್ಜೆ ಹಾಕುತ್ತಾ.. ಓಡುತ್ತಾ ಅಂದಾಜು ನೂರು ಮೀಟರ್ ಓಡಿದ. ಹಿಂತಿರುಗಿ ನೋಡದೇ ಮತ್ತೆ ಟಾರ್ಚ್ ಬಟನ್ ಒತ್ತಿದಾಗ ಟಾರ್ಚ್ ಮತ್ತೆ ಉರಿಯಲು ಆರಂಭಿಸಿತು. ಇದು ದಾದುವಿನ ಭಯವನ್ನು ಮತ್ತಷ್ಟು ಹೆಚ್ಚಿಸಿತು. ಯಾವುದೋ ದೆವ್ವದ ಸವಾರಿಯೇ ಇದ್ದಿರಬೇಕು. ಊರಿನ ಹಿರಿಯರ ಬಾಯಲ್ಲಿ ಈ ಪ್ರದೇಶ ಕುರ್ಪಲ್ ಬೂತದ ಸಂಚಾರವಿರುವ ಪ್ರದೇಶ ಎಂಬ ಮಾತು ಕೇಳಿಬರುತ್ತಿದದ್ದು ನೆನಪಾಯಿತು. ಕುರ್ಪಲ್ ಬೂತ ಅಂದ್ರೆ ತುಂಬಾ ಅಪಾಯಕಾರಿ ದೆವ್ವ ಹಿಡಿದು ಬಿಟ್ಟರೆ ನಮ್ಮ ಕತೆ ಮುಗಿಯಿತು. ಮೇಲೆ ಕೊಂಡುಹೋಗಿ ಕೆಳಗೆ ಬೀಳಿಸುತ್ತದೆ ಎಂಬ ಬೂತದ ಕತೆಗಳು ಕೂಡಾ ಚಾಲ್ತಿಯಲ್ಲಿತ್ತು. ಈ ಮಾತುಗಳು ದಾದುವಿನ ಮನದಲ್ಲಿ ಪ್ರತಿಧ್ವನಿಸಲೂ ಆರಂಭಿಸಿದಾಗ ಮತ್ತಷ್ಟು ಭಯಗೊಂಡು ಸರ ಸರನೆ ಕಳ್ಳು ಮುಳ್ಳುಗಳ ಹಾದಿಯಲ್ಲಿ ಸಾಗಿ ಮನೆ ಸೇರಿಕೊಂಡ.

ಮನೆ ಸೇರಿದ ದಾದು ಯಾರೊಡನೆಯೂ ಮಾತಾನಾಡಲಿಲ್ಲ. ಮಲಗಿದರೂ ನಿದ್ದೆ ಹತ್ತಲಿಲ್ಲ… ಬೆಳಗ್ಗೆ ಯಾಗುತ್ತಲೇ ಚಳಿ ಜ್ವರ ಆರಂಭವಾಯಿತು. ವಿಪರೀತ ಜ್ವರದ ಕಾರಣ ಒಂದು ವಾರ ಹಾಸಿಗೆ ಹಿಡಿದಿದ್ದ. ಕುರ್ಪಲ್ ಬೂತದ ಸವಾರಿಗೆ ಸಿಕ್ಕಿ ಬಚಾವಾದ ಸುದ್ದಿ ಊರಿಡೀ ಹಬ್ಬಿತು. ಚಿಕ್ಕಲ್ ತೋಡಿನ‌ಹತ್ತಿರ ಕುರ್ಪಲ್ ಬೂತ ಇರುವುದು ನಿಜವೆಂದು ಎಲ್ಲರಿಗೂ ಮನದಟ್ಟಾಯಿತು. ಮತ್ತೆ ಆ ಪ್ರದೇಶದಲ್ಲ ಜನ ಭಯ ಭೀತಿಯಿಂದ ಓಡಾಡಲು ಪ್ರಾರಂಭಿಸಿದರು. ಬೂತ ಜ್ವರ ಕ್ರಮೇಣ ಇಳಿಯಿತು. ದಾದು ಮತ್ತೆ ತನ್ನ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದ. ಊರಿನ ದೈವದ ಭಂಡಾರ ಚಾಕರಿ ಮಾಡುವವರನ್ನು ಯಾವ ಪ್ರೇತ ಪಿಶಾಚಿ ದೆವ್ವಗಳು ತೊಂದರೆ ಮಾಡುವುದಿಲ್ಲ. ದೈವದ ಅಭಯ ಆಶೀರ್ವಾದ ಸದಾ ಅವರ ಮೇಲಿರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿತ್ತು.

ಮಳೆಗಾಲ ಪ್ರಾರಂಭವಾಗಿ ಊರಿನಲ್ಲಿ ಜನ ತಮ್ಮ ಕೃಷಿ ಕಾರ್ಯ ಆರಂಭಿಸಿದ್ದರು. ಈ ಸಂದರ್ಭ ಕರ್ನಾಟಕ ಸರ್ಕಾರದಿಂದ ದೇವರಾಜ್ ಅರಸ್ ಮುಖ್ಯಮಂತ್ರಿಯಾದರು. ಇವರ ಸರ್ಕಾರ ಬಂದಾಗಲೇ ಉಳ್ಳವರ ಭೂಮಿಯನ್ನು ಉಳುಮೆ ಮಾಡುವವರಿಗೆ ದಾನವಾಗಿ ನೀಡಬೇಕೆಂಬ ಕಾನೂನು ಜಾರಿಗೊಳಿಸಲು ಉತ್ಸುಕತೆಯನ್ನು ತೋರಿದ್ದರು. ಆದರೆ ಅಂದಿನ ಸರ್ಕಾರದ ಸುದ್ದಿಗಳು ಬೆಂಗಳೂರು ಬಿಟ್ಟರೆ ಉಳ್ಳವರ ಮನೆಗೆ ಮಾತ್ರ ತಲುಪುತಿತ್ತು. ಕುಗ್ರಾಮಗಳ ಜನರಿಗೆ ತಿಳಿಯಲು ತುಂಬಾನೇ ಸಮಯ ಬೇಕಾಗಿತ್ತು. ಈ ಸುದ್ದಿಯನ್ನು ಜಮೀನುದಾರರು ಆದಷ್ಟು ಗೌಪ್ಯವಾಗಿರಿಸಿದ್ದರು. ಈ ಭೂಸುಧಾರಣಾ ಕಾಯ್ದೆಗಳು ಮೂರು ನಾಲ್ಕು ವರ್ಷ ವಿಧಾನಸೌಧದಲ್ಲಿ ಕೈ ಕಾಲು ಇಲ್ಲದೇ ನಿಸ್ತೇಜವಾಗಿ ದೂಳು ಹಿಡಿದು ಬಿದ್ದಿದ್ದವು.

ಈ ಕಾಯ್ದೆ ಜಾರಿಗೆಯಾಗುವ ಮುನ್ಸೂಚನೆ ಗ್ರಾಮದ ಎಲ್ಲಾ ಜಮೀನಿದಾರರಿಗೆ ಇತ್ತು. ಹೀಗಾಗಿ ತಮ್ಮ ರಕ್ಷಣೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಆರಂಭಿಸಿದರು. ನಿಧಾನವಾಗಿ ಒಕ್ಕಲು ಮಾಡುತ್ತಿದ್ದ ಒಕ್ಕಲು ಕುಟುಂಬವನ್ನು ಒಕ್ಕೆಲೆಬ್ಬಿಸಿದರು. ಕೆಲ ಕುಟುಂಬಗಳ ಅರ್ಧದಷ್ಟು ಜಮೀನನ್ನು ತಾವೇ ಇಟ್ಟುಕೊಂಡರು. ಈ ಬೆಳವಣಿಗಳಿಂದ ಜನ ಭೂಸುಧಾರಣಾ ಕಾಯ್ದೆ ಜಾರಿಯಾಗುವ ಬಗ್ಗೆ ಸುಳಿವು ಪಡೆದುಕೊಂಡರು. ತಮ್ಮ ಕೈಯಿಂದ ಭೂಮಿ ತಪ್ಪಿ ಹೋಗುವ ಭಯದಿಂದ ಜಮೀನುದಾರರು ಅಲ್ಲಲ್ಲಿ ಬೆಳೆದಿದ್ದ ಬೆಲೆ ಬಾಳುವ ಮರಗಳನ್ನು ಕಡಿದು ಮಾರಿದರು. ಸ್ಥಳೀಯ ಆಡಳಿತದಲ್ಲಿ ಜನಪ್ರತಿನಿಧಿಯಾಗಿದ್ದವರಲ್ಲಿ ಹೆಚ್ಚಿನವರು ಜಮೀನುದಾರರಾಗಿದ್ದ ಕಾರಣ ಜನರಿಗೆ ಯಾವ ಮಾಹಿತಿಯನ್ನು ತಿಳಿಯಲು ಬಿಡಲಿಲ್ಲ. ಇದರ ಬದಲು ಭೂಸುಧಾರಣೆ ಕಾನೂನು ಜಾರಿಯಾದರೆ ನೀವು ಪ್ರತಿ ವರ್ಷ ಸರ್ಕಾರಕ್ಕೆ ಹಣದ ರೂಪದಲ್ಲಿ ತೆರಿಗೆ ಕಟ್ಟಬೇಕು. ನಮಗೆ ಕೊಡುವ ಗೇಣಿಗಿಂತ ಜಾಸ್ತಿ ತೆರಿಗೆ ಮೂಲಕ ಸರ್ಕಾರ ಸಂಗ್ರಹಿಸುತ್ತೆ. ನಿಮ್ಮ ರಕ್ಷಣೆಗೆ ಇರುವ ಗುತ್ತು ಮನೆತನ ನಶಿಸಿ ಹೋಗುತ್ತೆ , ಊರಿನ ದೈವರಾಧನೆ, ಸಂಸ್ಕೃತಿ ಸಂಪ್ರದಾಯಕ್ಕೆ ಈ ಕಾನೂನು ಅಂತ್ಯ ಹಾಡುತ್ತೆ. ಭಂಡಾರದ ಮನೆ , ಭಂಡಾರ ಚಾಕರಿಯವರು ಎಲ್ಲರಿಗೂ ಸಂಚಕಾರವಾದ ಕಾನೂನು ಇದು. ಇದಲ್ಲದೇ ನಮ್ಮಲ್ಲಿರುವ ಅರಣ್ಯಪ್ರದೇಶವನ್ನು ಅರಣ್ಯರಕ್ಷಣೆಯ ಕಾನೂನು ತಂದು ನಮ್ಮ ಮತ್ತು ಕಾಡಿನ ಸಂಬಂಧವನ್ನು ಕಡಿತಗೊಳಿಸುತ್ತಾರೆ ಎಂದೆಲ್ಲ ಜನರ ಮನಸ್ಸನ್ನು ಭೂಸುಧಾರಣಾ ಕಾಯ್ದೆಯ ಬಗ್ಗೆ ನಕಾರಾತ್ಮಕ ಮಾಹಿತಿಯನ್ನು ಜನರ ಮನಸ್ಸಲ್ಲಿ ಬಿತ್ತುವ ಕೆಲಸ ಮಾಡಿದ್ದರು. ಹೀಗಾಗಿ ಬಹುತೇಕ ಜಮೀನ್ದಾರರ ಅಡಿಯಾಳುಗಳೇ ಇದ್ದ ಕಾರಣ ಭೂಸುಧಾರಣಾ ಕಾಯ್ದೆ ಬಂದರೂ ಅದು ನಮ್ಮ ಊರಿಗೆ ಬೇಡ ಎಂಬ ನಿಲುವು ಹೊಂದಿದ್ದರು.

ದೇವರಾಜ್ ಅರಸ್ ಎಂಬ ಮುಖ್ಯಮಂತ್ರಿ ತಮ್ಮ ಕಾಯ್ದೆಯನ್ನು ಜಾರಿಗೊಳಿಸಿ ಅಧಿಕಾರಿಗಳಿಗೆ , ತನ್ನ ಮಂತ್ರಿ , ಶಾಸಕ ವರ್ಗಕ್ಕೆ ಹೊಸ ಭೂಸುಧಾರಣಾ ಕಾಯ್ದೆಯಲ್ಲಿ ರೈತರಿಗೆಲ್ಲರಿಗೂ ಭೂಮಿ ನೀಡುವ ಕಾರ್ಯ ತುರ್ತಾಗಿ ಆಗಬೇಕು ಎಂದರು. ಇದಕ್ಕಾಗಿ ವಿಶೇಷ ಟ್ರಿಬ್ಯುನಲ್ ಕೋರ್ಟ್ ಗಳು ಸ್ಥಾಪನೆಯಾದವು. ಈ ಸಂದರ್ಭ ಭೂಮಿಗಾಗಿ ಗ್ರಾಮ ಗ್ರಾಮಗಳಲ್ಲಿ ಸಂಘರ್ಷವೇ ನಡೆಯಿತು. ಮಾಳದಲ್ಲೂ ನಡೆಯಿತು. ಇಲ್ಲಿನ ಹೆಚ್ಚಿನ ಜಮೀನ್ದಾರರು ಕಿಲಾಡಿಗಳಾಗಿದ್ದರು. ತಮಗೆ ಬೇಕಾದಷ್ಟು ಹೊಲಗದ್ದೆ, ಜಮೀನನ್ನು ತಮ್ಮ ಹೆಸರಲ್ಲಿ ಮಾಡಿಕೊಂಡರು. ಮೂಲಗೇಣಿದಾರರನ್ನು ಬಿಟ್ಟು ಬೇರೆಲ್ಲ ಸಣ್ಣ ಹಿಡುವಳಿದಾರರನ್ನೆಲ್ಲ ಒಕ್ಕಲೆಬ್ಬಿಸಲಾಯಿತು. ಅರಣ್ಯ ಕಾನೂನಿನ ಗುಮ್ಮ ಹರಡಿದ ಕಾರಣ ಭಾರೀ ಅರಣ್ಯದ ನಾಶವೇ ನಡೆಯಿತು. ಮುಂದಿನ ವರ್ಷವೇ ಚುನಾವಣೆ ನಡೆಯುವುದಿತ್ತು. ಜಮೀನ್ದಾರರೆಲ್ಲ ಭೂಸುಧಾರಣಾ ಕಾಯ್ದೆಯಲ್ಲಿ ತಮಗಾದ ಅನ್ಯಾಯಕ್ಕೆ ರಾಜಕೀಯವನ್ನೇ ತ್ಯಜಿಸಿದರು. ಕಾಂಗ್ರೆಸ್ ಸ್ಥಳೀಯ ನಾಯಕರನ್ನೆಲ್ಲ ಪ್ರಾಯಶಃ ಕಳೆದುಕೊಂಡಿತು. ಜಮೀನ್ದಾರರ ಜಮೀನು ಒಕ್ಕಲು ಮಾಡುವ ರೈತರ ಕೈಗೆ ಬಂತು. ಇಷ್ಟರವರೆಗೆ ತಮ್ಮ ಧಣಿಯನ್ನು ರಾಜನಂತೆ ನೋಡುತ್ತಿದ್ದ ಗೇಣಿದಾರರಿಗೆ ರಾಜನನ್ನೆ ಎದುರು ಹಾಕಿಕೊಳ್ಳುವ ಸಂಕಟ ಒಂದೆಡೆಯಾದರೆ ಸ್ವಂತ ಜಮೀನಿನ ಹಕ್ಕು ಪತ್ರ ಸಿಕ್ಕಿದ ಖುಷಿ ಇನ್ನೊಂದೆಡೆ ಇತ್ತು. ತನ್ನನ್ನು ಸದಾ ರಕ್ಷಿಸುತ್ತಿದ್ದ ಆಶ್ರಯ ಅರಸಿ ಬಂದ ತಮ್ಮ ಹಿರಿಯರಿಗೆ ಉಳಲು ಭೂಮಿ ನೀಡಿ ಆಶ್ರಯ ನೀಡಿದ ಧಣಿಯ ಜಾಗವನ್ನು ಸರ್ಕಾರದ ಕಾನೂನು ಮಾಡಿದೆ ಎಂದು ಕಿತ್ತುಕೊಂಡರೆ ದೇವರು ಮೆಚ್ಚುತ್ತಾನೆಯೇ ಎಂದು ಮರುಕಪಡುವ ಮುಗ್ದರು ಕೂಡಾ ಇದ್ದರು. ಇನ್ನು ಕೆಲ ಬಡ ಗೇಣಿದಾರರಲ್ಲಿ ಡಿಕ್ಲರೇಶನ್ ನೀಡಿದ ನಂತರ ಆ ಭೂಮಿಯ ವ್ಯಾಲ್ಯುವೇಶನ್ ಸರ್ಕಾರಕ್ಕೆ ಪಾವತಿಸಲು ಸಾಧ್ಯವಿಲ್ಲದೇ ಅದಕ್ಕೂ ಧಣಿಯ ಮನೆಗೆ ಹೋಗಿ ಬೇಡುವ ಪರಿಸ್ಥಿತಿ ಇತ್ತು. ಕೆಲ ರೈತರು ಹಣ ಕಟ್ಟಲಾಗದೇ ಜಮೀನು ಪಡೆಯಲಾಗಲಿಲ್ಲ. ಸರ್ಕಾರವೂ ಹಣ ಕಟ್ಟಲಾಗದವರಿಗೆ ಯಾವ ಕರುಣೆಯನ್ನು ತೋರಲಿಲ್ಲ. ಡಿಕ್ಲರೇಶನ್ ಕಾನೂನಿನ ಎಡವಟ್ಟುಗಳಿಂದವೋ ಏನೋ ಭೂ ವ್ಯಾಜ್ಯಗಳು ಮಿತಿಮೀರಿದವು ಗೇಣಿದಾದರರು ಮತ್ತು ಜಮೀನ್ದಾರರ ನಡುವೆ, ಗೇಣಿದಾರ ಗೇಣಿದಾರರ ನಡುವೆ, ಭೂ ವಿವಾದ ನ್ಯಾಯಾಲಯವನ್ನು ತಲುಪಿತು. ಒಟ್ಟಿನಲ್ಲಿ ಜಮೀನ್ದಾರರ ಭಯದಿಂದ ಸಂಘಟಿತವಾಗಿ ಸಹಬಾಳ್ವೆಯಿಂದ ವಾಸಿಸುತ್ತಿದ್ದ ಜನ ಒಬ್ಬರಿಗೊಬ್ಬರು ವೈರತ್ವ ಬೆಳೆಸಿಕೊಂಡು ಹಿಂದೆ ಇದ್ದ ಊರಿನ ಪರಿಕಲ್ಪನೆ ಸ್ವಾರ್ಥದ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಬದಲಾವಣೆಯತ್ತ ಸಾಗಿತು. ಬದಲಾವಣೆ ಜಗದ ನಿಯಮ ಎಂಬಂತೆ ಬದುಕುತ್ತಿದ್ದ ದಾದು ಸರ್ಕಾರಿ ಜಮೀನಲ್ಲಿ ಇದ್ದ ಕಾರಣ ಈ ಹೊಸ ಭೂಸುಧಾರಣಾ ಕಾಯ್ದೆ ತನ್ನ ಜೀವನದಲ್ಲಿ ಬದಲಾವಣೆಯನ್ನು ತರಲಿಲ್ಲ.ಆದರೆ ವಿಪರೀತ ಅರಣ್ಯ ನಾಶ, ಕುದುರೆಮುಖದ ಅದಿರು ಕಾರ್ಖಾನೆ , ಕೇಂದ್ರ ಸರ್ಕಾರ ಹುಲಿ ಬೇಟೆಗೆ ಪ್ರೋತ್ಸಾಹ ನೀಡಿದ್ದು, ಹುಲಿ ಬೇಟಿಯಾಡಿದವರಿಗೆ ಬಹುಮಾನ ನೀಡುತ್ತಿದದ್ದು, ಮಾಳ ಕಾಡಿನಿಂದ ಮಲ್ಲೇಶ್ವರದವರೆಗೆ ಇದ್ದ ಬೃಹತ್ ಗಾತ್ರದ ಮರಗಳನ್ನು ಆನೆಗಳನ್ನು ಬಳಸಿ ಕಡಿದು ಸಾಗಿಸಿದ್ದು, ಇಂತಹ ಬದಲಾವಣೆಗೆ ದಾದು ಸಾಕ್ಷಿಯಾಗಿದ್ದ. ತನ್ನ ನೆಚ್ಚಿನ ಊರಿನ ದೈವ ಹೌಟಲ್ದಾಯ ಹುಲಿಯ ರೂಪದಲ್ಲಿ ಮಾಳದ ಕುದುರೆಲ್ ಎಂಬ ಅರಸರ ಅರಮನೆಯ ಗೋವನ್ನು ಹಿಡಿಯಲು ಬಂದಿದ್ದ . ಆಗ ರಾಜ ಕುದುರೆಲರು ಹುಲಿಯೊಂದಿಗೆ ಹೋರಾಡಿದ್ದರು.ಈ ರಣ ಭೀಕರ ಹೋರಾಟದ ಪರಿಣಾಮ ಹುಲಿಯೊಂದಿಗೆ ಕುದುರೆಲ್ಲರು ವೀರ ಮರಣವನ್ನಪ್ಪಿದರು. ವೀರ ಮರಣವನ್ನಪ್ಪಿದ ಹುಲಿ ಮತ್ತು ಕುದುರೆಲ್ಲರು ಅಮರರಾದರು. ಹೌಟಲ್ದಾಯನ ಆಗಮನ ನಂತರ ಮಾಳದಲ್ಲಿ ಹುಲಿ ಬೇಟೆ ಇರಲಿಲ್ಲ. ಆದರೆ ಸರ್ಕಾರದ ಮೂರ್ಖ ನಿರ್ಧಾರದಿಂದ ಹುಲಿ ಸಂತತಿಯೇ ನಶಿಸಿತು. ಹೌಟಲ್ದಾಯ ನೇಮಕ್ಕೆ ದಿನ ನಿಗದಿಯಾದರೆ ಎರಡು ಹುಲಿಗಳು ಸಂಬಂಧಪಟ್ಟ ಗುತ್ತಿನ ಮನೆಯ ನಡುವೆ ಸಂಚಾರ ಮಾಡುತ್ತಿದ್ದವು. ನೇಮ ನಡೆಯುತ್ತಿದ್ದರೆ, ಹುಲಿಯ ಮರಿಗಳು ಆಡುತ್ತಿದ್ದವು. ಇನ್ನು ಇಂತಹ ದೃಶ್ಯವನ್ನು ನೋಡಲು ಸಾಧ್ಯವಿದೆಯೇ? ಹುಲಿ ಸಂತತಿಯನ್ನು ನಾಶ ಮಾಡುವುದು ಒಂದೇ ದೈವದ ಮೇಲಿನ ನಂಬಿಕೆ ನಶಿಸುವುದು ಕೂಡಾ ಒಂದೇ ಅಲ್ಲವೇ? ಎಂಬ ಭಾವನೆ ದಾದುವಿನ ಮನಸ್ಸಿಗೆ ಬರುತಿತ್ತು. ತನಗೆ ಇಂತಹ ವಿಚಾರಗಳು ಮನಸ್ಸಿಗೆ ಬಂದಾಗ ಮೂರ್ತಿಯವರಲ್ಲಿ ಚರ್ಚಿಸುತ್ತಿದ್ದ.

“ಹಿಂದೆ ಒಮ್ಮೆ ಮೈಸೂರು ರಾಜರು ಬ್ರಿಟಿಷರ ಸಾಮಂತರಾಗಿದ್ದಾಗ ಗಣಿಗಾರಿಕೆಗಾಗಿ ಕಬ್ಬಿಣದ ಅದಿರು ಹುಡುಕುತ್ತಾ ಬಂದಿದ್ದ ಭೂಗರ್ಭ ತಜ್ಞ ಡಾ.ಸ್ಮಿತ್ ಎಂಬಾತ ಇದೇ ಕಾಡಿನಲ್ಲಿ ಹುಲಿಯ ಬಾಯಿಗೆ ಆಹಾರವಾಗಿದ್ದ. ಇಲ್ಲಿನ ಪ್ರಕೃತಿಯನ್ನು ನಾಶ ಮಾಡಲು ಬಂದವರಿಗೆ ಇಲ್ಲಿನ ಪ್ರಕೃತಿ ಮಾತೆಯೇ ಉತ್ತರ ಕೊಡುತ್ತಾಳೆ ನಮ್ಮಂತ ಸಾಮಾನ್ಯರಿಂದ ಇದನ್ನೆಲ್ಲ ತಡೆಯಲು ಸಾಧ್ಯವಿಲ್ಲ. 200-300 ವರ್ಷ ಹಳೆಯ ಕಾಡಿನ ಮರಗಳು ನೀಡುತ್ತಿದ್ದ ಶುದ್ಧಗಾಳಿ ಆರರಿಂದ ಏಳು ತಿಂಗಳು ಕಾಲ ಕಾಲಕ್ಕೆ ಸಮತೋಲನವಾಗಿ ಸುರಿಯುತ್ತಿದ್ದ ಮಳೆ ಎಲ್ಲವೂ ಕಡಿಮೆಯಾಗತೊಡಗಿತು. ಸಿಡಿಲು ಮಳೆ , ಗಾಳಿ ಮಳೆ , ಅತಿವೃಷ್ಟಿ- ಅನಾವೃಷ್ಟಿ ನೋಡದ ಜನ ಈ ಮರ ಕಡಿದ ನಂತರ ಪ್ರಕೃತಿಯ ಅಸಮತೋಲನ ಆಗಿದ್ದಕ್ಕೆ ಸಾಕ್ಷಿಯಲ್ಲವೇ?” ಎಂದು ಮೂರ್ತಿಯವರು ತಮ್ಮಲ್ಲಿ ಮರುಕಪಡುತ್ತಾ,  “ಹುಲಿಗಳನ್ನು ಕೊಲ್ಲಿಸಿ ಬಹುಮಾನ ನೀಡಿದ ಬೃಹತ್ ಗಾತ್ರ ಮರಗಳನ್ನು ಕತ್ತರಿಸಿ ಮಾರಿದ ಸರ್ಕಾರದ ನಾಯಕಿ ಇಂದಿರಾ ಕೊನೆಗೆ ಸೋಲಿನ ಭಯದಿಂದ ಚುನಾವಣೆಗಾಗಿ ಇಲ್ಲಿನ ಜನರ ಕಾಲು ಹಿಡಿದು ಓಟು ಕೇಳಲು ಇದೆ ಪ್ರಕೃತಿಮಾತೆಯ ಮಡಿಲಿಗೆ ಬರಬೇಕಾಯಿತು.” ಮಾಡಿದ ಕರ್ಮ ಎಂದೂ ಬಿಡದು. ಎಂದರು ಕೋಪದಿಂದ

ಉಳುವವನೇ ಹೊಲದೊಡೆಯ ಭೂಸುಧಾರಣೆ ಕಾನೂನಿನ ಪರಿಣಾಮ ಜನರ ರಾಜ ಮತ್ತು ದೈವ ಭಕ್ತಿ ಭಯಗಳು ಕಡಿಮೆಯಾಯಿತು. ಜನ ಊರಿನ ಸಾಂಪ್ರಾದಾಯಿಕ ಕಾನೂನು ಕಟ್ಟಳೆ ಬಿಟ್ಟು ಸರ್ಕಾರದ ಕಾನೂನಿನ ಕಡೆಗೆ ಸಾಗಿದರು. ಗೇಣಿದಾರರು ಜಮೀನಿನ ಒಡೆಯರಾದ ಪರಿಣಾಮ ರಾಜಕೀಯಕ್ಕೆ ಪ್ರವೇಶಿಸಿದರು. ಕ್ರಮೇಣ ಗೇಣಿದಾರರಾಗಿದ್ದವರು ಜನಪ್ರತಿನಿಧಿಗಳಾದರು , ಗುತ್ತಿನವರ ಬಲ ಅಧಿಕಾರ ನಿಧಾನವಾಗಿ ನೆಲಕಚ್ಚಿತು. ಕೆಲವರು ಎಕರೆಗಟ್ಟಲೇ ಭೂಮಿ ಕಳೆದುಕೊಂಡರು. ದುಡಿಯುವ ಕೈಗಳಿಲ್ಲದೇ ಗುತ್ತಿನ ಜಮೀನ್ದಾರರು ಇದ್ದ ಸಂಪತ್ತನ್ನು ಕರಗಿಸಿ ಪ್ರಾಯಶಃ ಬಡವರಾದರು ಒಂದು ಗುತ್ತು ಮನೆಯಲ್ಲಿ ವಿಧವೆ ಚೆನ್ನಮ್ಮರ ಅಧಿಕಾರವಿತ್ತು. ಇದು ಭಂಡಾರದ ಮನೆಯಾಗಿತ್ತು. ಇವರು ಭೂಸುಧಾರಣಾ ಕಾಯ್ದೆಯಿಂದ ನಿಷ್ಕಷ್ಟ್ರ ಸ್ಥಿತಿಗೆ ತಲುಪಿದರು. ಇದ್ದ ಬಹುತೇಕ ಭೂಮಿ ಕಳೆದುಕೊಂಡರು. ಗೇಣಿದಾರರ ಡಿಕ್ಲರೇಶನ್ ಇವರ ಅಂಗಳದವರೆಗೂ ಬಂದಿತ್ತು. ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ಮಕ್ಕಳು ಒಂದು ಹೊತ್ತಿನ ಊಟಕ್ಕಾಗಿ ಅದನ್ನೆಲ್ಲ ಮಾರಬೇಕಾಯಿತು. ಇದ್ದ ಎಲ್ಲ ಸಂಪತ್ತನ್ನು ಮಾರಿ ಕೊನೆಗೆ ಉಳಿದಿದ್ದು ದೈವದ ಭಂಡಾರ ಮಾತ್ರ!!

ಚೆನ್ನಮ್ಮ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಆಸ್ತಿ ಮಾರಿ ನಗರಕ್ಕೆ ವಲಸೆ ಹೋಗುವ ನಿರ್ಧಾರ ಮಾಡಿದರು‌. ಮೊದ ಮೊದಲು ಸಹಾಯಕ್ಕೆ ನಿಂತಿದ್ದ ಇತರ ಮಾಜಿ ಜಮೀನ್ದಾರರು ನಿಸ್ಸಾಹಾಯಕರಾಗಿದ್ದರು. ಗುತ್ತಿನ ದೈವಗಳಿರುವ ಭಂಡಾರದ ಮನೆಯನ್ನು ಹಿಂದಿನ ಸಂಪ್ರದಾಯದಂತೆ ಪಾಲಿಸಿ ಉಳಿಸಲು ಇಂದಿನ ಪರಿಸ್ಥಿತಿಗೆ ಕಷ್ಟ ಎಂದು ಎಲ್ಲರೂ ಹಿಂದೆ ಸರಿದರು. ಗುತ್ತಿನ ಮನೆ ಮಾರಲೇ ಬೇಕಾಯಿತು. ಒಬ್ಬ ಮಾಜಿ ಗೇಣಿದಾರ ಮಣಿವರ್ದನ ಎಂಬಾತ 30 ಎಕರೆ ಜಮೀನಿನ ಒಡೆಯನಾಗಿದ್ದ. ಗುತ್ತು ಮನೆಯ ಗತ್ತು ನನಗೂ ಬೇಕೆಂಬ ಹುಮ್ಮಸ್ಸಿನಲ್ಲಿದ್ದ. ಗುತ್ತು ಮನೆಯನ್ನು ಚೆನ್ನಮ್ಮನಿಂದ ಖರೀದಿಸಿದ ನಂತರ ದೈವ ಭಂಡಾರಕ್ಕೆ ಮಾಜಿ ಗೇಣಿದಾರನೊಬ್ಬ ಒಡೆಯನಾದ. ಇದೊಂದು ಕ್ರಾಂತಿಕಾರಿ ಬದಲಾವಣೆ.

ಬಹುಶಃ ಪ್ರಜಾಪ್ರಭುತ್ವದ ಬಂದಾಗಿನಿಂದ ಮೊದಲ ಬಾರಿಗೆ ಕುಗ್ರಾಮಗಳಲ್ಲಿನ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿತು. ಅಂದಿನವರೆಗೆ ಜಮೀನ್ದಾರರ ಕೈಯಲ್ಲಿದ್ದ ಅಧಿಕಾರ ಗೇಣಿದಾರರು ಜಮೀನಿನ ಒಡೆಯರಾದ ಕಾರಣ ಗೇಣಿದಾರರ ಕೈಗೆ ಬಂದಿತ್ತು. ಕಾಂಗ್ರೆಸ್ ಪಕ್ಷ ಗೇಣಿದಾರರನ್ನು ನಾಯಕರನ್ನಾಗಿ ಬೆಳೆಸಲು ಪ್ರಾರಂಭಿಸಿ ಜಮೀನ್ದಾರರನ್ನು ಮೂಲೆಗುಂಪು ಮಾಡಿದರು. ಭೂಸುಧಾರಣಾ ಕಾಯ್ದೆಯ ಮತ ಬ್ಯಾಂಕ್ ಸಾಮಾನ್ಯ ಜನರನ್ನು ನಾಯಕರನ್ನಾಗಿಸಿತು. ಈ ದಶಕ ಮಾಳದ ನವೋದಯದ ದಶಕವಾಗಿತ್ತು. ಕುದುರೆಮುಖ ಅದಿರು ಕಾರ್ಖಾನೆ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಮಾಳದ ಮೂಲಕ ಹಾದು ಹೋಯಿತು. ಈವರೆಗೆ ರಸ್ತೆಯನ್ನೆ ಕಾಣದ ಜನ ನುಣುಪಾದ ನೀಲಿ ರಸ್ತೆಯ ಜೊತೆಗೆ ಬೃಹದಾಕಾರದ ವಾಹನ , ಯಂತ್ರಗಳನ್ನು ಕಂಡರು. ತನ್ನ ಸುತ್ತ ನದಿ ಹೊಂದಿರುವ ಮಳೆಗಾಲದಲ್ಲಿ ದ್ವೀಪ ಗ್ರಾಮವಾಗಿದ್ದ ಮಾಳ ಶಾಶ್ವತ ಸೇತುವೆ ಪಡೆದ ನಂತರ ಅಮೂಲಾಗ್ರ ಬೆಳವಣಿಗೆ ಸಾಧಿಸಿತು. ಒಂದು ಸುಧಾರಣೆ ಎಷ್ಟು ಒಳ್ೞೆಯದೋ ಅಷ್ಟೇ ಕೆಟ್ಟದಾಗಿರುತ್ತದೆ. ಕುದುರೆಮುಖದ ರಸ್ತೆ ಕೆಲಸದಲ್ಲಿ ಸ್ಥಳೀಯರಿಗೂ ಕೆಲಸ ದೊರೆಯಿತು. ಈಗ ಜನ ಕೂಲಿಗಾಗಿ ಕಾಳು ಎಂಬಲ್ಲಿಂದ ಕೂಲಿಗಾಗಿ ಕಾಸು ಎಂಬ ಹೊಸ ಪದ್ದತಿಗೆ ಬದಲಾದರು. ಬೆಟ್ಟ ಅಗೆದು ಕಲ್ಲು ಬಗೆದು ಮಾಡಿದ ರಸ್ತೆಯ ಕಾಮಗಾರಿ ಸಂದರ್ಭ ಅದೆಷ್ಟು ಹುಟ್ಟು ಸಾವು ಆಗಿತ್ತೋ ದೇವರೇ ಬಲ್ಲ. ಹೇಗೋ ರಸ್ತೆಯೊಂದು ನಿರ್ಮಾಣವಾಯಿತು. ಊರಿನ ಶೇಂದಿ ಅಂಗಡಿಗಳೆಲ್ಲ ಸರ್ಕಾರದ ಮಧ್ಯ ಮಾರಾಟ ಮಳಿಗೆಗಳಾದವು. ಶ್ರೀಮಂತರ ಸೊತ್ತಾಗಿದ್ದ ಬೀಡಿ ಸಿಗರೇಟುಗಳು ಸಾಮಾನ್ಯರ ಕೈಯಲ್ಲೂ ಬಂದಿತು‌. ಶೇಂದಿ ಕುಡಿಯುತ್ತಿದ್ದರೆಲ್ಲ ಸರ್ಕಾರ ಮಾರುವ ಸ್ಪಿರಿಟ್ ಮಧ್ಯ ಕುಡಿಯಲು ಆರಂಭಿಸಿದರು. ದಾದು ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಕುಡುಕರು ಹೆಚ್ಚಿದರು. ಕುಡಿತದ ಪರಿಣಾಮ ಅಲ್ಲಲ್ಲಿ ಗಲಾಟೆಗಳು ಕೂಡಾ ಸಾಮಾನ್ಯವಾಗಿತ್ತು.

ಈ ಎಲ್ಲ ಸುಧಾರಣೆಗಳು ಜನರನ್ನು ಬದಲಾಯಿಸಿತು. ಕುರುಡು ಕಾಂಚಾಣದ ಕುಣಿತ ಊರ ಜನರನ್ನೆಲ್ಲ ಕುಣಿಸುತಿತ್ತು. ಗುತ್ತಿನ ಮನೆತನಗಳು ಅಧಿಕಾರ ಕಳೆದುಕೊಂಡು ದೈವ ಭಂಡಾರದ ಚಾಕರಿಯಲ್ಲಿ ಆಸಕ್ತಿ ಕಳೆದುಕೊಂಡ ವ್ಯಕ್ತಿಗಳನ್ನು ಹೊಂದಿದ್ದವು. ಕಾಂಚಾಣದ ಪ್ರಭಾವ , ಭೂ ಒಡೆತನ ಮತ್ತು ಮಧ್ಯದ ಅಮಲು , ರಾಜಕೀಯ ಇವೆಲ್ಲವೂ ಅಹಂಕಾರಿಗಳ ಹುಟ್ಟಿಗೆ ಕಾರಣವಾಯಿತು.
ದೈವದ ಭಂಡಾರದ , ನೇಮ ನಡೆಸುವ ಅಧಿಕಾರ ಗುತ್ತಿನ ಮನೆಯವರಿಗೆ ಮಾತ್ರ ಯಾಕೆ ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಊರಿನ ಎಲ್ಲರಿಗೂ ಅಧಿಕಾರ ಸಿಗಬೇಕು . ನೇಮ ಸಮಿತಿ ನಿರ್ಮಾಣವಾಗಬೇಕು ಎಂದು ಮಣಿವರ್ಧನನ ಕುಮ್ಮಕ್ಕಿನಿಂದ ಚರ್ಚೆ ಪ್ರಾರಂಭವಾಯಿತು. ಅದಕ್ಕೆ ಸರಿಯಾಗಿ ಗುತ್ತಿನ ಮನೆತನದವರ ಆಲಸ್ಯ ಮತ್ತು ನಿಸ್ಸಾಹಯಕತೆಯ ಪರಿಣಾಮ ನೇಮ ಸಮಿತಿ ರಚಿಸಿ ಊರಿನ ವಾರ್ಷಿಕ ನೇಮೋತ್ಸವ ಮಾಡುವುದೆಂದು ನಿರ್ಣಯಿಸಲಾಯಿತು. ಇದಕ್ಕೆ ಮಾಜಿ ಗೇಣಿದಾರರ ರಾಜಕೀಯ ದುರೀಣ 50 ಎಕರೆ ಭೂಮಿಯ ಒಡೆಯ ಆಧಿರಾಜ ಬಲ್ಲಾಳ ಎಂಬಾತ ಅಧ್ಯಕ್ಷನಾದ. ಮಣಿವರ್ಧನ ಶೆಟ್ಟಿ ಉಪಾಧ್ಯಕ್ಷ ಇನ್ನು ಮಾಜಿ ಗೇಣಿದಾರ ಬಂಟ, ಬಿಲ್ಲವ ಮತ್ತು ಇತರ ಜಾತಿಯವರು ಪದಾಧಿಕಾರಿಗಳಾದರು. ಗುತ್ತಿನವರನ್ನು ಪ್ರಾಯಶಃ ಭಂಡಾರ ಚಾಕರಿಯ ಅಧಿಕಾರದಿಂದ ಹೊರಗಿಡಲಾಯಿತು.

ಇದು ಒಂದು ಅಹಂಕಾರಿ ಅಧಿಕಾರ ದಾಹಿಗಳ ಸಮಿತಿಯಾಗಿತ್ತು. ಇದು ಭಂಡಾರ ಚಾಕರಿಯಿಂದ ಹಿಂದಿನ ಎಲ್ಲ ಸಂಪ್ರದಾಯಗಳಿಗೆ ಕೊಳ್ಳಿಯಿಟ್ಟಿತು. ದೈವ ಚಾಕರಿಯ ಭಂಡಾರಿಯಾಗಿದ್ದ ದಾದುವಿಗೆ ಈ ಬೆಳವಣಿಗೆ ತುಂಬಾ ಕಹಿಯೆನಿಸಿತು. ದೈವ ಚಾಕರಿಯ ಯಾರಿಗೂ ಇದು ಇಷ್ಟವಿರಲಿಲ್ಲ. ಗುತ್ತುಮನೆತನದ ಸಂಪ್ರದಾಯ ಅಂದಿನ ನೇಮದ ಕಟ್ಟುಕಟ್ಟಳೆ, ದೈವ ಭಕ್ತಿ , ಭಯಕ್ಕಿಂತ ಹೆಚ್ಚು ಪ್ರೀತಿ. ದೈವ ಶಕ್ತಿಯ ಸಿದ್ದಿ. ಇವೆಲ್ಲವೂ ಸಮಿತಿಗಳಿಂದ ನಿರೀಕ್ಷಿಸಲೂ ಸಾಧ್ಯವೇ?? ಎಂಬ ಅಭಿಪ್ರಾಯವನ್ನು ದಾದು ಹೊಂದಿದ್ದ. ಗುತ್ತುಮನೆತನದ ವಾರೀಸುದಾರರು, ಹಿರಿಯರಲ್ಲಿ ಈ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿ ಇದು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದ. ತೆಂಕು ಮಾಳದ ಏಳು ಗುತ್ತುಗಳಲ್ಲಿ ಒಂದು ಮಾರಲ್ಪಟ್ಟಿತ್ತು. ಇನ್ನುಳಿದ ಆರರಲ್ಲಿ ಮೂರು ನಿಸ್ತೇಜರಾಗಿ ಸಮಿತಿಗೆ ಬೆಂಬಲ ನೀಡಿದರು. ಉಳಿದ ಮೂವರು ಸಮಿತಿ ರಚನೆಯ ವಿರುದ್ಧವಾಗಿ ನಿಂತರು. ಪರಿಣಾಮ ದೈವ ಭಂಡಾರ ಮನೆಯೊಂದು ಮೂರು ಬಾಗಿಲು ಆಯಿತು. ಇದನ್ನು ಸರಿಪಡಿಸುವ ಸೂಕ್ತ ನಾಯಕರಾಗಲಿ ಹಿರಿಯರಾಗಲಿ ಊರಿನಲ್ಲಿ ಇರಲಿಲ್ಲ‌. ಸರಿ ಮಾಡಬೇಕಾದವರು ವೈರತ್ವ ಹೊಂದಿದ್ದರು‌‌. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಮಿತಿ ನೇಮಕ್ಕೆ ದಿನ ನಿಗದಿ ಮಾಡಿತ್ತು. ಭಂಡಾರ ಚಾಕರಿವರನ್ನು ಕರೆಸಿ ಸಮಿತಿಯ ಹೊಸ ನಿಯಮಗಳನ್ನು ತಿಳಿಸಲಾಯಿತು. ಸಮಿತಿಯ ದರ್ಪದ ಮಾತುಗಳು ದೈವದ ಭಂಡಾರ ಚಾಕರಿಯವರ ಕಣ್ಣಾಲಿಯನ್ನು ಒದ್ದೆ ಮಾಡಿತು. ಹೊಸ ನಿಯಮದ ಪ್ರಕಾರ ದೈವಕ್ಕೆ ಕೋಳಿ ಬಲಿ ಇಲ್ಲ. ದೈವ ಚಾಕರಿವರೆಲ್ಲ ಅಂಗಿ ತೆಗೆಯಬೇಕು. ಸಮಿತಿಯವರಿಗೆ ದೈವ ಕಟ್ಟುವವನು ಮೊದಲ ಗೌರವ ನೀಡಬೇಕು. ಭಂಡಾರದ ಮನೆಯಿಂದ ಭಂಡಾರ ಬರುವ ಕ್ರಮ ಇಲ್ಲ. ಮಣಿವರ್ಧನ ಮನೆಯಿಂದ ಬಂದರೆ ಸಾಕು. ಇನ್ನೊಂದು ಭಂಡಾರ ಮನೆಯ ಭಂಡಾರ ಸಮಿತಿ ಅಧ್ಯಕ್ಷರ ಮನೆಯಲ್ಲಿಡಬೇಕು. ಇಂತಹ ಅನೇಕ ಬದಲಾವಣೆಗೆ ಸಮಿತಿ ಸೂಚಿಸಿತು.ಆಧಿರಾಜ ಬಲ್ಲಾಳನ ಹೊಸ ಸಾಮ್ರಾಜ್ಯದ ಹೊಸ ನಿಯಮಕ್ಕೆ ಮೊದಲು ವಿರೋಧ ಪಡಿಸಿವನು ದಾದು ಭಂಡಾರಿ. ಇದು ರೋಚಕ ಇತಿಹಾಸವನ್ನೇ ಸೃಷ್ಟಿಸಿತು.

 

ಮುಂದುವರೆಯುವುದು….

✍️ ಪ್ರಶಾಂತ್ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *