January 18, 2025
Avinabhava Feauture Image

ಇಲ್ಲಿಯವರೆಗೆ…..

ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ಅವರ ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಸಂಬಂಧಿ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತನ್ನ ಜೀವನದ ಬಗ್ಗೆ ಬರೆದ ಡೈರಿ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ಅಪ್ಪ ಅಮ್ಮನಿಗೆ ತಿಳಿಯದಂತೆ ಓದುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಮದುವೆ ಆಗುತ್ತಾರೆ. ಅಶೋಕ್ ನ ಗೆಳೆಯ ರವಿಚಂದ್ರ ಇವರ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು .ಅಶೋಕ್ ದಂಪತಿಗಳಿಗೆ ಮಕ್ಕಳು ಆಗದೆ ಇರುವುದರಿಂದ ಆಶೋಕ್ ರವಿಯ ಜೊತೆ ವೈದ್ಯರಲ್ಲಿ ಪರೀಕ್ಷೆಗಾಗಿ ಹೋಗುತ್ತಾನೆ. ವೈದ್ಯರು ಅಶೋಕ್ ನಿಗೆ ಯಾವತ್ತೂ ಮಗು ಆಗಲಾರದು ಎಂಬ ಸತ್ಯವನ್ನು ಹೇಳುತ್ತಾರೆ. ಇದನ್ನು ಸುಶೀಲ ನಲ್ಲಿ ಹೇಗೆ ಹೇಳುವುದು ಎಂಬ ತೊಳಲಾಟದಿಂದ ನರಳುತ್ತಾನೆ ಅಶೋಕ್……

ಅವಿನಾಭಾವ ಭಾಗ 21

“ ಕೋಪಗೊಳ್ಳುವುದಕ್ಕಿಂತ ಕಣೀರಿಡುವುದು ಒಳಿತು. ಏಕೆಂದರೆ ಕೋಪ ಇನ್ನೊಬ್ಬರಿಗೆ ನೋವನ್ನುಂಟು ಮಾಡಿದರೆ ಕಣ್ಣ ಹನಿಯು ಆತ್ಮದ ಪ್ರತಿನಿಧಿ. ಅದರಿಂದ ಮನಸ್ಸು ಹಗುರಾಗುತ್ತದೆ.”
ಬೆಳಗ್ಗೆ ಬೇಗ ಎಚ್ಚರ ಆಗಲಿಲ್ಲ ಸುಶೀ ಗೆ ಅಶೋಕ್ ಮಾತ್ರ ಬೇಗ ಎದ್ದು ವಾಕಿಂಗ್ ಹೋಗುವ ಎಂದಿನ ರೂಢಿಯಂತೆ ಇಂದು ಹೋಗಿದ್ದ.. ವಾಕಿಂಗ್ ಮುಗಿಸಿ ಹಿಂದೆ ಬರುವಾಗ ಯಾವಾಗಲೂ ತಿಂಡಿ ಕಾಫಿ ರೆಡಿ ಆಗುತಿತ್ತು. ಆದರೆ ಇಂದು ಸುಶೀ ಎದ್ದಿರಲಿಲ್ಲ.
ಸುಶೀಗೆ ಎಚ್ಚರ ಆಗಲಿಲ್ಲ ನಿದ್ದೆ ಮಾಡಲಿ ಎಂದು ಅಶೋಕ್ ಸುಶೀ ಗೆ ತನಗೆ ಹಾಗೂ ಅಪ್ಪನಿಗೆ ಕಾಫಿ ರೆಡಿ ಮಾಡಿ ಅಪ್ಪನಿಗೂ ನೀಡಿ ಸುಶೀ ಗೆ ತೆಗೆದಿಟ್ಟು ತಾನು ಕುಡಿದ. ಮನಸ್ಸು ಒಂದು ತರ ಮೋಡ ಕವಿದ ವಾತಾವರಣ ಇದ್ದ ಹಾಗೆ ಉಲ್ಲಾಸ ಉತ್ಸಾಹ ಇರಲಿಲ್ಲ. ಕಾಫಿ ಕುಡಿದು ಮುಗಿಯುವ ಹೊತ್ತಿಗೆ ಸುಶೀ ಎದ್ದು ಹೊರಗೆ ಬಂದಳು. ಮುಖ ಊದಿ ಕೊಂಡು ಕಣ್ಣು ಕೆಂಪಗೆ ಆಗಿತ್ತು. ಅವಳ ಊದಿ ಕೊಂಡ ಮುಖ ನೋಡಿಯೇ ಅಶೋಕ್ ನಿಗೆ ತಿಳಿಯಿತು. ನಿನ್ನೆ ನನಗಾಗಿ ಸಮಾಧಾನದ ಮಾತುಗಳನ್ನು ಆಡಿದ್ದಾಳೆ ಎಂದು…..
ಪರಸ್ಪರ ಹೆಚ್ಚು ಮಾತನಾಡದೆ ಅವರಿಬ್ಬರೂ ತಮ್ಮ ಕೆಲಸದಲ್ಲಿ ಮಗ್ನರಾದರು.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ “ ಆಗುವುದು ಎಲ್ಲಾ ಒಳ್ಳೆಯದಕ್ಕೆ , ಆಗಲಿರುವುದು ಒಳ್ಳೆಯದಕ್ಕೆ” ಎಂದು ಹೇಳಿರುವುದನ್ನು ಎಲ್ಲರೂ ಬೇರೆಯವರಿಗೆ ಉಪದೇಶ ಮಾಡುತ್ತಾರೆ ಆದರೆ ತಾವೇ ಏನಾದರೂ ಸಮಸ್ಯೆಗೆ ಸಿಕ್ಕಿ ಕೊಂಡಾಗ ಚಿಂತಿಸಿ ಒದ್ದಾಡುತ್ತಾರೆ. ಇದು ಲೋಕ ರೂಢಿ. ನಾವು ಕೂಡ ಬೇರೆಯವರ ಸಮಸ್ಯೆ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ ಎಂದು ಹೇಳಿ ಮರೆತುಬಿಡುತ್ತೇವೆ. ಆದರೆ ನಾವೇ ಆ ಸುಳಿಯಲ್ಲಿ ಸಿಲುಕಿ ಕೊಂಡಾಗ ಕುಳಿತಲ್ಲಿ ನಿಂತಲೀ ಅದೇ ತಲೆಯಲ್ಲಿ ತುಂಬಿಕೊಂಡು ಯಾವುದೇ ಕೆಲಸವನ್ನು ಮಾಡಲು ಉಲ್ಲಾಸವೇ ಇರುವುದಿಲ್ಲ. ಅಶೋಕ್ ನಿಗೆ ಪದೇ ಪದೇ ನಿನ್ನೆ ವೈದ್ಯರು ಹೇಳಿದ ಮಾತು
“ಮಗು ಯಾರದಾದರೆ ಏನು ಅದನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಮುಖ್ಯ, ನನ್ನ ಮಗುವೇ ಪಡೆಯಬೇಕು ಎನ್ನುವುದು ಒಂದು ರೀತಿಯ ಮನುಷ್ಯನ ವಿಚಿತ್ರ ಮನೋಭಾವ. ಮಗು ಎಂಬುದು ಏನೂ ಅರಿಯದ ಮುಗ್ಧ ಒಂದು ಜೀವ, ಮಗುವನ್ನು ಹೇಗೆ ಯಾವ ರೀತಿಯಲ್ಲಿ ಸಾಕುತ್ತೀರಿ ಎಂಬುದು ಮುಖ್ಯ. ಮಗುವನ್ನು ಪ್ರೀತಿಯಿಂದ ಸಾಕಿದರೆ ಯಾವುದೇ ಮಗು ಕೂಡ ನಮ್ಮದೇ ಮಗು ಆಗಲು ಸಾಧ್ಯ” ಕಿವಿಯಲ್ಲಿ ಹೇಳಿದಂತೆ ಕೇಳುತ್ತಿತ್ತು. ಈ ಮಾತು ನೆನಪಿಗೆ ಬಂದು ಬಂದು ಏನೋ ಒಂದು ಯೋಚನೆ ಅಶೋಕ್ ನಿಗೆ ಬಂತು. ಯಾಕೆ ಹೀಗಾಗಬಾರದು? ಎಂದು ಕೂಡ ಯೋಚನೆ ಬಂದು ಈ ರೀತಿಯ ಯೋಚನೆಯನ್ನು ಸುಶೀ ಒಪ್ಪುವಳೇ ಅಥವಾ ನನ್ನ ಬಗ್ಗೆ ಅಸಹ್ಯ ಪಟ್ಟು ಕೊಂಡರೆ ಎಂಬಿತ್ಯಾದಿ ಯೋಚನೆ ಬಂದು ನೋಡೋಣ ಎಂಬ ತೀರ್ಮಾನಕ್ಕೆ ಬಂದ ಅಶೋಕ್.


ರವಿ ಆಫೀಸ್ ಗೆ ಬಂದು ಅಶೋಕ್ ನ ಕರೆದು ಕುಶಲೋಪರಿ ವಿಚಾರಿಸಿ ನಿನ್ನೆ ವೈದ್ಯರು ಹೇಳಿರುವುದು ಸುಶೀಲ ಬಳಿ ಹೇಳಿರುವೆಯಾ ಎಂದು ಕೇಳಿದ. ರಾತ್ರಿ ನಡೆದ ಎಲ್ಲಾ ಮಾತುಕತೆಯನ್ನು ಅಶೋಕ್ ರವಿಯ ಬಳಿ ಹೇಳಿ ಸುಶೀ ತುಂಬಾ ನೊಂದುಕೊಂಡಿದ್ದಾಳೆ, ಒಂದೇ ದಿನದಲ್ಲಿ ಅವಳ ಮುಖದ ಹೊಳಪನ್ನೇ ಕಳೆದುಕೊಂಡಿದ್ದಾಳೆ ಹೀಗೆ ಆದರೆ ಮುಂದೆ ಹೇಗೆ ಎಂದು ತಿಳಿಯುತ್ತಿಲ್ಲ ರವಿ ಎಂದು ತನ್ನ ಮನಸ್ಸಿನ ದುಗುಡ ದುಮ್ಮಾನವನು ಹೇಳಿದ.
ಏನು ಹೇಳಬೇಕು ಮತ್ತು ಏನು ಮಾಡಬೇಕು ಎಂದು ನನಗೆ ತೋಚುತ್ತಿಲ್ಲ ಅಶೋಕ್ ನೀನೇ ಏನಾದರೂ ತೀರ್ಮಾನ ಮಾಡಬೇಕು. ಸುಶೀಲ ಅವರಿಗೆ ಏನು ತಿಳಿಯುತ್ತದೆ, ಪಾಪ ಹೆಣ್ಣು ಹೃದಯ. ತಮ್ಮ ಒಡಲಿನಿಂದ ಮಗು ಬಂದು ಮಡಿಲಲ್ಲಿ ಮಲಗಿ ತಾನು ಲಾಲಿ ಹಾಡಬೇಕು, ತನ್ನಿಂದ ಒಂದು ಜೀವ ಹುಟ್ಟಬೇಕು ಎಂಬ ಬಯಕೆ ಪ್ರತಿ ಹೆಣ್ಣಿಗೂ ಪ್ರಕೃತಿ ಸಹಜ ಅಶೋಕ್, ಪ್ರಕೃತಿಯಲ್ಲಿ ಹೆಣ್ಣು ಎಂಬುದು ಇರುವುದರಿಂದಲೇ ಈ ಭೂಮಿ ಇದೆ. ಹೆಣ್ಣು ಎಂಬುದು ಒಂದು ಶಕ್ತಿ ಅವಳ ಮೂಲಕವೇ ಪ್ರತಿ ಜೀವಿಯೂ ತನ್ನ ಹುಟ್ಟು ಪಡೆಯುತ್ತಾನೆ. ಹೆಣ್ಣು ಎಂಬುದು ಇಲ್ಲದಿದ್ದರೆ ಇಲ್ಲಿ ಏನು ಇಲ್ಲ ಎಲ್ಲವೂ ಶೂನ್ಯ…. ಹೆಣ್ಣು ಮತ್ತು ಮಣ್ಣು ಈ ಇಬ್ಬರೂ ಬರಡು ಆಗಲು ಅವರಿಗೆ ಇಷ್ಟವೇ ಇರುವುದಿಲ್ಲ ಅದು ಭೂಮಿಗೆ ಇರಬಹುದು ಅಥವಾ ಹೆಣ್ಣಿಗೂ ಇರಬಹುದು…. ಭೂಮಿ ಹೇಗೆ ಪ್ರತಿ ಒಂದು ಬಿಂದು ನೀರಿಗಾಗಿ ಕಾದು ಮೊದಲ ಒಂದು ಬಾರಿಯ ತುಂತುರು ಮಳೆ ನೀರನ್ನು ಪಡೆದು ತನ್ನ ಕಂಪನ್ನು ಬೀರುತ್ತಾಳೋ ಅದೇ ರೀತಿ ಹೆಣ್ಣು ತನ್ನ ಒಡಲಿನಲ್ಲಿ ಮಗು ಪಡೆದು ಧನ್ಯತೆಯ ಭಾವವನ್ನು ತಾಳುತ್ತಾಳೆ.ಇದು ನಿಸರ್ಗ ನಿಯಮ…..
ನಾವು ಆದರೆ ನಮ್ಮ ನೋವು ನಲಿವುಗಳನ್ನು ಹೊರಗೆ ಬಂದು ಮಾತನಾಡಿ ಒಂದು ಕ್ಷಣ ಕಳೆಯಬಹುದು. ಆದರೆ ಸುಶೀಲ ಮನೆಯಲ್ಲಿಯೇ ಇರುವ ಜೀವ ಅವರ ನೋವನ್ನು ಹೇಗೆ ಕಳೆಯಲು ಸಾಧ್ಯ!! ಎಂದು ಹೇಳಿ ಅಶೋಕ್ ನ ಮುಖ ನೋಡಿದ ರವಿ.
ನನಗೆ ಒಂದು ಯೋಚನೆ ಬಂದಿದೆ ರವಿ ಆ ಯೋಜನೆ ಸಫಲ ಆದರೆ ನಮ್ಮ ಮನೆಯಲ್ಲಿ, ಮನದಲ್ಲಿ ನಂದನವನ ಆಗುವುದು ನಿಶ್ಚಿತ ಎಂದ ಅಶೋಕ್…..

( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ.

Leave a Reply

Your email address will not be published. Required fields are marked *