ಇಲ್ಲಿಯವರೆಗೆ…..
ನವಚೇತನ ಆಸ್ಪತ್ರೆಗೆ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಸುಶೀಲ ಅವರ ಸಂಬಂಧಿ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತನ್ನ ಬಗ್ಗೆ ಬರೆದ ಡೈರಿ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ಅಪ್ಪ ಅಮ್ಮನಿಗೆ ತಿಳಿಯದಂತೆ ಓದುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಮದುವೆ ಆಗುತ್ತಾರೆ. ಅಶೋಕ್ ದಂಪತಿಗಳಿಗೆ ಮಕ್ಕಳು ಆಗದೆ ಇರುವುದರಿಂದ ಅಶೋಕ್ ತನ್ನ ಗೆಳೆಯ ರವಿಯ ಜೊತೆ ವೈದ್ಯರಲ್ಲಿ ಪರೀಕ್ಷೆಗಾಗಿ ಹೋಗುತ್ತಾನೆ. ವೈದ್ಯರು ಅಶೋಕ್ ನಿಗೆ ಮಕ್ಕಳು ಆಗುವುದಿಲ್ಲ ಎಂಬ ಸತ್ಯ ಹೇಳುತ್ತಾರೆ. ಅಶೋಕ್ ನಿಗೆ ಈ ಬಗ್ಗೆ ಒಂದು ಯೋಚನೆ ಬರುತ್ತದೆ. ಅದನ್ನು ರವಿಯ ಬಳಿ ಹೇಳಲು ದೈರ್ಯ ಸಾಲದೇ ಪತ್ರ ಬರೆದು ಇಡುತ್ತಾನೆ. ಅದನ್ನು ಸುಶೀಲ ಗಂಡನಿಗೆ ಗೊತ್ತಿಲ್ಲದೆ ಓದುತ್ತಾಳೆ…..
ಅವಿನಾಭಾವ ಭಾಗ 26
ಮನುಷ್ಯನ ಮಿದುಳಿನಲ್ಲಿ ಪ್ರತಿ ದಿನ ಸರಾಸರಿ 70,000 ದಷ್ಟು ಆಲೋಚನೆಗಳು ಹರಿದಾಡುತ್ತವೆಯಂತೆ.
ಎಲ್ಲ ಆಲೋಚನೆಗಳು ನೆನಪಿನಲ್ಲಿ ಉಳಿಯಲು ಖಂಡಿತಾ ಸಾಧ್ಯವಿಲ್ಲ ಎಂದು ಕೊಂಡ ರವಿ. ಹೌದು ಈಗ ಇದು ನನಗೆ ಹೇಗೆ ನೆನಪು ಆಯಿತು ನಿನ್ನೆ ಜ್ವರ ಎಂದು ಮನೆಯಲ್ಲಿ ಕುಳಿತು ತುಂಬಾ ಪುಸ್ತಕಗಳನ್ನು ಓದುವಂತೆ ಆಯಿತು. ಓದುವಾಗ ಈ ಎಪ್ಪತ್ತು ಸಾವಿರದಷ್ಟು ಆಲೋಚನೆಗಳು ಕೂಡ ಮಿದುಳಿನಲ್ಲಿ ಹರಿದಾಡುತ್ತವೆ ಎಂದು ಅದರಲ್ಲಿ ಓದಿದೆ. ಹಾಗೆ ನೆನಪು ಆಯಿತು. ಹೀಗೆಂದು ಕೊಂಡು ಬೆಳಗಿನ ತಿಂಡಿ ತಿಂದು ಕೆಲಸಕ್ಕೆ ಹೊರಟು ಆಫೀಸಿಗೆ ಬಂದ. ಎಂದಿನಂತೆ ಅಶೋಕ್ ನ ಬಳಿ ಬಂದು ನಿನ್ನೆ ಬರಲು ಆಗದ ಕಾರಣ ಹೇಳಿ ಕುಶಲೋಪರಿ ಮಾತನಾಡಿ ತನ್ನ ಕೆಲಸದಲ್ಲಿ ಮಗ್ನನಾದ.
ಅಶೋಕ್ ನಿಗೆ ಈಗ ತೊಳಲಾಟ ಶುರು ಆಯಿತು. ಬರೆದ ಪತ್ರ ರವಿಗೆ ನೀಡಬೇಕೆ ಅಥವಾ ಮೊದಲು ಸುಶೀಲ ಬಳಿ ಹೇಳಬೇಕಾ ಎಂಬುದು?
ಏನು ಯೋಚನೆ ಮಾಡಿದರು ಸರಿಯಾದ ಮಾರ್ಗ ಹೊಳೆಯಲಿಲ್ಲ……. ಕೊನೆಗೆ ಎನಾದರೂ ಆಗಲಿ. ಮೊದಲು ಸುಶೀಲ ಬಳಿ ಹೇಳುವುದು ಬೇಡ. ರವಿಗೆ ಮೊದಲು ವಿಷಯ ತಿಳಿಯ ಪಡಿಸಬೇಕು ಒಂದಾ ಒಳ್ಳೆಯದು ಆಗುತ್ತದೆ ಇಲ್ಲ ರವಿ ಕೋಪ ಮಾಡಿಕೊಂಡು ಮಾತು ಬಿಡಬಹುದು ಅಷ್ಟೇ ತಾನೇ… ಎಂದು ಕೊಂಡು ಅಶೋಕ್ ತಾನು ಪುಸ್ತಕದ ಒಳಗೆ ಮಡಚಿ ಇಟ್ಟ ಪತ್ರ ತೆಗೆದು ರವಿಯ ಬಳಿ ಬಂದ.
ರವಿ ಅಶೋಕ್‌ನನು ಕಂಡು ಯಾವುದೋ ಕಕ್ಷಿದಾರರ ವ್ಯಾಜ್ಯ ಓದುತಿದ್ದವನು ತಕ್ಷಣ ಅದನ್ನು ಬದಿಗಿಟ್ಟು ಬಾ ಅಶೋಕ್ ಕುಳಿತುಕೊ ಮೊನ್ನೆ ಏನೋ ಸಹಾಯ ಕೇಳಿದ್ದಿ ಮತ್ತೆ ಹೇಳಲೇ ಇಲ್ಲ ಈಗ ನೆನಪು ಆಯಿತು ನೋಡು ಎಂದ. ಅಶೋಕ್ ನಿಗೆ ಎನು ಹೇಳಬೇಕು ತೋಚಲಿಲ್ಲ ಪತ್ರ ಹಿಡಿದ ಕೈ ಮುಂದೆ ಚಾಚಿದಾಗ ಓ ಪತ್ರ ಬರೆದು ತಂದಿದ್ದಿಯ ಬಾರೀ ಒಳ್ಳೆಯ ಅಭ್ಯಾಸ ಮಾರಯ, ಹೀಗೆ ಬರೆಯುತ್ತಾ ಇದ್ದರೆ ಕೈ ಬರಹ ಚೆನ್ನಾಗಿ ಆಗುತ್ತದೆ ಅಂತೆ ಎಂದು ನಗಾಡಿದ.
ನಿನಗೆ ಈಗ ನಗು ಬರುತ್ತದೆ ಈ ಪತ್ರವನ್ನು ಓದಿದ ಮೇಲೆ ನಗುತ್ತಿಯ ಇಲ್ಲ ಸಿಟ್ಟು ಬರುತ್ತದ ನೋಡೋಣ ಎಂದು ಅಶೋಕ್ ಮನಸ್ಸಿನಲ್ಲೇ ಅಂದುಕೊಂಡ. ಅಲ್ಲಿ ಒಂದು ಕ್ಷಣ ಕೂಡ ನಿಲ್ಲದೆ ಅಲ್ಲಿಂದ ಬರ ಬರನೆ ಯಾರೋ ಅಟ್ಟಿಸಿಕೊಂಡು ಬಂದಂತೆ ಮನೆಗೆ ಬಂದ.
ಅಶೋಕ್ ಕಾದಂಬರಿ ಒಳಗಿನಿಂದ ಪತ್ರ ತೆಗೆದು ಕೊಂಡು ಹೋಗಿದ್ದು ಸುಶೀಲ ಕಂಡು ಕಾಣದಂತೆ ಗಮನಿಸಿದ್ದಳು. ಹೋದ ಮರುಕ್ಷಣ ಇಷ್ಟು ರಭಸವಾಗಿ ಹಿಂದೆ ಬಂದುದನ್ನು ಗಮನಿಸಿದಳು. ಆದರೆ ಏನು ಗೊತ್ತಿಲ್ಲದಂತೆ ಇದ್ದು ಬಿಟ್ಟಳು. ಮನಸ್ಸು ಮಾತ್ರ ಜೇನು ಗೂಡಿನ ಒಳಗೆ ಜೇನು ನೊಣಗಳು ಜೇಂಕಾರ ಮಾಡಿದಂತೆ ಯೋಚನೆಗಳು ಒಂದರ ಹಿಂದೆ ಒಂದರಂತೆ ಮುತ್ತಿ ಕೊಂಡಿತ್ತು. “ಸಮಯ ಇದ್ದ ಹಾಗೆ ಇರುವುದಿಲ್ಲ ಎನ್ನುವುದು ಇದಕ್ಕೇ…ಅದು ಹೇಗೆ ಬದಲಾವಣೆ ಆಗುತ್ತದೆ ಎನ್ನುವುದಕ್ಕೆ ನಾವೇ ಉದಾಹರಣೆ ನಿನ್ನೆ ಮೊನ್ನೆವರೆಗೆ ಯಾವುದೇ ರೀತಿಯ ಗುಟ್ಟು ರಹಸ್ಯ ಇಲ್ಲದೆ ಮನಸ್ಸು ಕನ್ನಡಿಯಂತೆ ಇತ್ತು. ಅವರು ನಿಟ್ಟುಸಿರು ಬಿಡುವ ಮುಂಚೆ ನಾನು ಅದು ಯಾಕೆ ಎನ್ನುತ್ತಿದ್ದೆ. ಆದರೆ ಇಂದು ನಾನು ಅವರ ಅಷ್ಟು ವೇಗದ ನಡಿಗೆಯನ್ನು ಕೂಡ ನೋಡಿಯು ನೋಡದಂತೆ ಅಭಿನಯಿಸಿದೆ. ಇದೆಲ್ಲ ಕಾಲದ ಮಹಿಮೆಯೋ ಅಲ್ಲ ಜಗದ ನಿಯಮವೋ ಬಲ್ಲವರಾರು. ನಿಸರ್ಗ ನಿಯಮದಂತೆ ಸೃಷ್ಟಿ ಸ್ಥಿತಿ ಲಯ ಕ್ರಮ ಬದ್ಧವಾಗಿ ನಡೆದರೆ ಚೆನ್ನ. ಇಲ್ಲದಿದ್ದರೆ ಎಲ್ಲವೂ ಅಯೋಮಯ ಆಗುತ್ತದೆ. ಆದರೆ ನನ್ನ ಗಂಡ ಬರೆದ ಪತ್ರ ಓದಿ ರವಿಯ ಪ್ರತಿ ಕ್ರಿಯೆ ಏನಾಗಿರಬಹುದು ಎಂದು ಕೊಂಡಳು…… ಮರುಕ್ಷಣ ಅವಳಿಗೂ ಯಾಕೋ ಎದೆ ಬಡಿತ ಜೋರಾಗಿ ಬಡಿದಂತೆ ಭಾಸವಾಯಿತು. ರವಿ ಕಟ್ಟು ಮಸ್ತಾದ ಗಂಡಸು, ನೀಳವಾದ ದೇಹ, ಹರವಾದ ಎದೆ, ಇಡೀ ದೇಹದಲ್ಲಿ ಎಲ್ಲಿಯೂ ಬೇಡ ಎನಿಸುವ ಅಸಹ್ಯ ಕಾಣುವಂತಹ ಬೊಜ್ಜು ಅಥವಾ ಮಾಂಸ ಇಲ್ಲ, ದಪ್ಪವು ಅಲ್ಲದ ತೆಳು ಅಲ್ಲದ ಮೀಸೆ, ಕಪ್ಪು ಕಪ್ಪಾದ ಕಣ್ಣು, ಆ ಕಣ್ಣಿನಲ್ಲೂ ಒಂದು ರೀತಿಯ ತುಂಟ ನಗು, ಮುಖದಲ್ಲಿ ಮಂದಹಾಸ, ಚುರುಕಾದ ನಡಿಗೆ, ಮಾತಿನಲ್ಲಿ ಗಂಭೀರತೆ, ಹೆಣ್ಣಿನ ಬಗ್ಗೆ ಗೌರವ, ವಾದ ಚರ್ಚೆ ಸಂದರ್ಭದಲ್ಲಿ ಕೂಡ ಹೆಣ್ಣಿನ ಅವಹೇಳನ ಆಗಲಿ ಅಥವಾ ಅವಳ ಶೀಲದ ಬಗ್ಗೆ ಆಗಲಿ ಯಾವುದೇ ಅಪಮಾನದ ಮಾತುಗಳನ್ನು ಹೇಳದೆ ಇರುವ ಶೀಲವಂತ, ಮೇಲು ವರ್ಗ ಕೆಳ ವರ್ಗ, ಮೇಲ್ ಜಾತಿ ಕೆಳಜಾತಿ ಎಂಬ ಬೇಧ ಇಲ್ಲದ ಧರ್ಮ ಧರ್ಮದ ಮದ್ಯೆ ಬಿರುಕು ಸೃಷ್ಟಿಸದ ನೀತಿವಂತ ಈ ರವಿ. ಇಂತಹ ಪುರುಷನಿಂದ ಸೃಷ್ಟಿ ಕಾರ್ಯ ನಡೆಯಬೇಕಾದರೆ ಅದರಲ್ಲಿ ಪಾಲ್ಗೊಳ್ಳುವ ಸ್ತ್ರೀ ಕೂಡ ಪ್ರಕೃತಿಯ ಸೌಭಾಗ್ಯವಂತಳೇ ಇರಬೇಕು. ಎನಿಸಿದರೆ ಮೈ ಮನ ಮಿಟಿದಂತೆ ಭಾಸವಾಗುತ್ತದೆ ”.
( ಮುಂದುವರಿಯುವುದು)