January 18, 2025
bhandara

ಗುತ್ತು ಮನೆತನಗಳ ಆಡಳಿತ ಕೊನೆಯಾಗಿ ಎಕರೆಗಟ್ಟಲೆ ಭೂಮಿ ಪಡೆದ ಉಳುವವರ ಆಡಳಿತದಲ್ಲಿ ಸಮಿತಿ ರಚನೆಯಾಗಿ ನಡೆಯುತ್ತಿರುವ ಮೊದಲ ಗ್ರಾಮದೈವದ ನೇಮ. ಕೆಲ ಸಾಂಪ್ರಾದಾಯಿಕ ಕಟ್ಟುಕಟ್ಟಳೆ, ನಿಯಮಗಳನ್ನು ಬದಲಾಯಿಸುವ ಉದ್ದೇಶ ಹೊಂದಿದ್ದ ಆದಿರಾಜ ಬಳ್ಳಾಲ ಮತ್ತು ಮಣಿವರ್ಧನನ ಯೋಜನೆಯ ಹೊಸ ರೀತಿಯ ನೇಮ ಪದ್ದತಿಯ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನ ಗೊಂದಲ ಮೂಡಿಸಿತ್ತು. ನೇಮದ ದಿನ ಹತ್ತಿರವಾಗುತ್ತಿದ್ದಂತೆ ಸಮಿತಿ ಮತ್ತು ದೈವಚಾಕರಿಯವರು ಕೂಟ ನಡೆಸಿ ಸಮಿತಿಯ ನಿರ್ಣಯಕ್ಕೆ ಬದ್ಧರಾಗಬೇಕೆಂದು ಅಪ್ಪಣೆ ಹೊರಡಿಸಿದರು. ಈ ಕೂಟದಲ್ಲಿ ಉಪಸ್ಥಿತರಿದ್ದ ಅಸ್ರಣ್ಣರಾದ ಉಪದ್ಯಾಯರು, ಗೌಡಚಾರಿ ಮತ್ತು ದಾದು ಇವರ ಹೊಸ ಸಂಪ್ರದಾಯದ ಹುಟ್ಟು ಹಾಕುವಿಕೆಯ ಯೋಜನೆಯನ್ನು ವಿರೋಧಿಸಿದರು. ನಿಮ್ಮ ನಿರ್ಣಯಗಳಿಗೆ ನಮ್ಮ ಸಮ್ಮತಿಯಿಲ್ಲ ಎಂದರು. “ಹಿಂದಿನಿಂದ ನಡೆದು ಬಂದ ಸಂಪ್ರದಾಯ ಹೇಗಿದೆಯೋ ಹಾಗೆಯೇ ನಡೆಯಲಿ ಭಂಡಾರದ ಮನೆ ಬದಲಾಯಿಸುವುದು ಕೂಡಾ ಸರಿಯಲ್ಲ. ರಾಜಕೀಯ, ಅಧಿಕಾರ , ಅಹಂಕಾರಗಳು ದೈವಾರಾಧನೆಯ ಚಾವಡಿ ಪ್ರವೇಶಿಸುವುದು ತರವಲ್ಲ.. ಹೊಸ ವೈಚಾರಿಕತೆಯ ಹೇರಿಕೆಯೂ ಬೇಡ. ಹಳೆಯದನ್ನೇ ಮುಂದುವರೆಸೋಣ” ಎಂದು ಅಸ್ರಣ್ಣರು ತಮ್ಮ ಸಲಹೆಯನ್ನು ನೀಡಿದರು. ಇದಕ್ಕೆ ದಾದು ಮತ್ತು ಗೌಡಚಾರಿ ಕುಟ್ಟಿಯವರು ತಮ್ಮ ಬೆಂಬಲ ಸೂಚಿಸಿದರು. ಅನೇಕ ಹಿರಿಯರು ಇದನ್ನೇ ಅನುಮೋದಿಸಿದರು. ಮಣಿವರ್ಧನರು “ನೀವೆಲ್ಲ ಮೂರ್ಖರು ದೈವರಾಧನೆಯನ್ನು ಇನ್ನಷ್ಟು ರಾಜವೈಭವವಾಗಿ ಮತ್ತು ಅಸುರ ಆಚರಣೆಗಳನ್ನು ಕಡಿಮೆ ಮಾಡಿ ಆಚರಿಸಬೇಕು. ಬದಲಾವಣೆ ಜಗದ ನಿಯಮ ನಾವು ತುಳುನಾಡಿನ ದೈವ-ದೇವತಾರಾಧನೆಯ ನವೋದಯಕ್ಕೆ ಬೆಂಬಲ‌ನೀಡಬೇಕು. ಹಳೆ ಸಂಪ್ರದಾಯದ ಕಟ್ಟುಕಟ್ಟಳೆಯಿಂದ ನಾವು ನಗೆಪಾಟಲಾಗುತ್ತವೆ” ಎಂದು ತಾನೊಬ್ಬ ಸಮಾಜ ಸುಧಾರಕನಾಗಲು ಹೊರಟ್ಟಿದ್ದೇನೆ ಎಂಬಂತೆ ವಾದ ಮಂಡಿಸಿದ. ಇದಕ್ಕೆ ಅಸ್ರಣ್ಣರು “ನಿಮಗೆ ದೈವರಾಧನೆ ಬಗ್ಗೆ ಏನೂ ಗೊತ್ತಿದೆ? ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ಆಚರಣೆ ಬದಲಾಯಿಸಲು ನೀವು ನಾವು ಯಾರು? ನಮಗಿಷ್ಟವಿಲ್ಲದಿದ್ದರೆ ಅದರಿಂದ ದೂರವಿರಬೇಕು ಹೊರತು ಬದಲಾವಣೆ ಮಾಡಲು ನಮಗ್ಯಾವ ಹಕ್ಕಿದೆ. ದೈವಗಳಿಗೆ ಕೋಳಿ ಬಲಿ ಯಾಕೆ ನೀಡಲಾಗುತ್ತೆ ಗೊತ್ತೆ? ಬಲಿಕೊಟ್ಟ ಕೋಳಿಗೆ ದೈವ ಯಾವ ವರ ಕೊಡುತ್ತೆ ಗೊತ್ತಾ? ಕೋಲ ತಂತ್ರದ ದೈವಗಳಿಗೆ ತಂತ್ರ ಪ್ರಕಾರ ರಕ್ತಹಾರ ನೀಡದಿದ್ದರೆ ದೈವರಾಧನೆ ಸಾವಿರಾರು ವರ್ಷಗಳ ತಂತ್ರವಿಧ್ಯೆಯಾದ ಕೋಲತಂತ್ರಕ್ಕೆ ಬೆಲೆಯಿದೆಯೇ? ದೈವ ಸಂತೃಪ್ತಿ ಹೊಂದುವುದೇ?? ಇದೆಲ್ಲ ಗೊತ್ತಿರದೇ ನಿಯಮ ಬದಲಾಯಿಸುವ ಮಾತಾನಾಡಬಾರದು” ಎಂದು ಗಟ್ಟಿ ಧನಿಯಲ್ಲಿ ಹೇಳಿದರು. ಸಭೆಯಲ್ಲಿ ಒಂದು ದೃಢ ನಿರ್ಣಯ ಮಂಡಿಸಲು ಸಮಿತಿಗೆ ಸಾಧ್ಯವಾಗದೇ ಕೊನೆಗೆ ಚಾಕರಿಯವರೆಲ್ಲ ಅಂಗಿ ತೆಗೆದು ಸೇವೆ ಮಾಡಬೇಕೆಂಬ ನಿರ್ಣಯ ಮಾಡಲಾಯಿತು. “ಹೊಸ ನಿಯಮ ಬೇಡವೆಂದ ಮೇಲೆ “ಇದೊಂದು ಯಾಕೆ ಇದು ಕೂಡಾ ಬೇಡವೆಂದು” ದಾದು ಎದ್ದು ನಿಂತು ವಿರೋಧಿಸಿದ. “ಮಡ್ಯಾಲ , ಅಸ್ರಣ್ಣರು, ಚರ್ವ ಹಿಡಿಯುವ ಮೂಲ್ಯನ್ನ, ಮುಕಾಲ್ದಿ ಈ ನಾಲ್ವರು ಬಿಟ್ಟು ಬೇರೆ ಯಾರು ಅಂಗಿ ತೆಗೆದು ಸೇವೆ ಮಾಡುವ ಕ್ರಮ ಮಾಳದಲ್ಲಿ ಇಷ್ಟರವರೆಗೆ ಇಲ್ಲ ಇದು ಸಾಧ್ಯವಿಲ್ಲ ” ಎಂದ. ಈ ಮಾತಿಗೆ ಅಸ್ರಣ್ಣರು ಮತ್ತು ಗೌಡಚಾರಿ ಬೆಂಬಲಿಸಿದರು. ಸಭೆ ಅಪೂರ್ಣವಾಗಿ ಕೂಟ ನಿಂತು ಹೋಯಿತು.

ದಾದು ಮತ್ತು ಅಸ್ರಣ್ಣರು ಬಲ್ಲಾಳ ಮತ್ತು ಮಣಿವರ್ಧನನ ಕೆಂಗಣ್ಣಿಗೆ ಗುರಿಯಾದರು. ” “ನೇಮದಾನಿ ಅಂಗಿ ದೆತ್ತಿಜಡ ದಾದ ಆಪುಂಡು ತೂಲ?” ಎಂಬ ಬೆದರಿಕೆಯೂ ಬಂತು.

ಕೂಟದ ಚರ್ಚೆ ಬಗ್ಗೆ ಊರಿಡೀ ಸುದ್ದಿ ಹರಡಿತು. ಸಮಿತಿಗೆ ವಿರೋಧವಿರುವ ಮೂರು ಅಧಿಕಾರದ ಗುತ್ತಿನವರು ಅಸ್ರಣ್ಣರು , ದಾದು ಮತ್ತು ಗೌಡಚಾರಿ ಈ ಮೂವರನ್ನು ಕರೆಸಿಕೊಂಡು ಯಾವುದೇ ಕಾರಣಕ್ಕೂ ನಿಮ್ಮ ನಿಲುವು ಬದಲಾಯಿಸಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ದೈರ್ಯ ತುಂಬಿದರು. ಭಂಡಾರ ಎರಡನೇ ಭಾವದ ಗುತ್ತಿನಿಂದಲೇ ಹೊರಡಬೇಕು. ಮಣಿವರ್ಧನನ ಮನೆಗೆ ಭಂಡಾರಿಯ ಸತ್ತಿಗೆ , ಅಸ್ರಣ್ಣರು ಹೋಗದಿದ್ದರೆ ಭಂಡಾರ ಹೇಗೆ ನಡೆಯುತ್ತೆ ನೋಡೋಣ ಎಂದು ಸಮಿತಿಗೆ ಸವಾಲೊಡ್ಡಲು ಅಣಿಯಾದರು.

ಬಳ್ಳಾಲ ಮತ್ತು ಮಣಿವರ್ಧನ ತಮ್ಮ ಪರವಾಗಿರುವ ದೈವ ಚಾಕರಿಯವರು ಮತ್ತು ತಾವು ಸಾಕಿಕೊಂಡಿದ್ದ ಪುಡಿ ರೌಡಿಗಳಿಗೆ ನಮ್ಮ ನಿರ್ಣಯದಂತೆ ಭಂಡಾರ ನಡೆದು ನೇಮವಾಗಬೇಕು ವಿರೋಧಿಸಿದವರ ಹುಟ್ಟಾಡಗಿಸಬೇಕು ಎಂಬ ಯೋಜನೆ ಸಿದ್ಧವಾಯಿತು.

ಏಳು ದಿನ ಕಳೆಯಿತು ಹಡೆವು ಕಾರ್ಯಕ್ರಮ ಇದು ಒಂದು ನೇಮದ ನಿಯಮ ಇದು ನೇಮದ ತಯಾರಿ ಮತ್ತು ವ್ರತಚಾರಣೆಯ ಕ್ರಮ. ಇದರಲ್ಲಿ ನೇಮಕ್ಕೆ ಸಂಬಂಧಿಸಿದ ಎಲ್ಲ ಚಾಕರಿಯವರು ಪಾಲ್ಗೊಳ್ಳಬೇಕು. ಈ ವರ್ಷ ಹೊಸತಾಗಿ ಸಮಿತಿಯವರು ಜೊತೆಗೆ ಇವರ ಚೇಲಾಗಳು ಬಂದಿದ್ದರು. ಇಲ್ಲಿ ದಾದು ಮತ್ತು ಗೌಡಚಾರಿ ಕುಟ್ಟಿ ಇವರ ಮೇಲೊಂದು ಕಣ್ಣಿಡಲು ಅವರಿಬ್ಬರ ಬಂಡಾಯ ಶಮನ ಮಾಡುವ ಜವಾಬ್ದಾರಿ ಸಮಿತಿ ಪುಂಡರಿಗೆ ಸಿಕ್ಕಿತ್ತು. ಅಯೋಗ್ಯರು ಕುಡಿದು ಬಂದಿದ್ದರು. ಕುಟ್ಟಿ ಮತ್ತು ದಾದುವಿಗೆ ಹೆಂಡ ಕುಡಿಸಿ ಒಪ್ಪಿಸುವ ಯೋಚನೆ ಅವರಲ್ಲಿತ್ತು. ಆದರೆ ದಾದುವಿಗೆ ಪುಂಡರ ಆಮಿಷದ ಪರಿಣಾಮದ ಅರಿವು ಇದ್ದ ಕಾರಣ ಅವರ ಬಲೆಗೆ ಸಿಕ್ಕಲಿಲ್ಲ. ಕುಟ್ಟಿಯನ್ನು ಕೂಡಾ ಎಚ್ಚರಿಸಿ ಅವರೊಡನೆ ಸೇರಲು ಬಿಡಲಿಲ್ಲ. ಈ ಪುಂಡರು ಅಸಹಾಯಕರಾದರು. ಹಲವು ವಿಫಲ ಪ್ರಯತ್ನಗಳ ನಂತರ ” ನಾಳೆ ಗೊತ್ತಲ್ವ ನಾವು ಹೇಳಿದಂತೆ ಆಗದಿದ್ದರೆ ನಿನ್ನ ಕೈಕಾಲು ನೆಟ್ಟಗಿರಲ್ಲ” ಎಂಬ ಬೆದರಿಕೆ ಹಾಕಿ ಹೋದರು. ಅವರ ಬೆದರಿಕೆಗೆ ಯಾವ ಉತ್ತರವನ್ನೂ ನೀಡದೇ “ಎಲ್ಲ ಆ ದೈವ ನೋಡಿಕೊಳ್ಳುತ್ತಾನೆ” ನನಗೆ ಬುದ್ದಿ ಹೇಳೊಕೆ ನೀವ್ಯಾರು ಹೋಗಿ ಹೋಗಿ ಎಂದು ತನ್ನ ಕೆಲಸದಲ್ಲಿ ಮಗ್ನನಾದ.

ಬೆಳಗಾಯಿತು ಆರು ಗಂಟೆಗೆ ಎದ್ದು ಎಲ್ಲ ತಮ್ಮ ತಮ್ಮ ಜವಬ್ದಾರಿಯ ಕಾರ್ಯಗಳಲ್ಲಿ ಮಗ್ನರಾಗಿ ಗೊನೆ ಕಡಿಯುವ ಮಹೂರ್ತ, ಸ್ವರ್ಣ ಕಂಬ ಏರಿಸುವ ಮಹೂರ್ತ ಮಾಡಿದರು. ನಂತರ ಉಪಹಾರ ಮುಗಿಸಿ ವಿಶ್ರಾಂತಿ ಪಡೆದು ಭಂಡಾರ ಮನೆಗೆ ಹೊರಡಿದರು. ಈಗ ಮತ್ತೆ ವಾದ ವಿವಾದ ಪ್ರಾರಂಭವಾಯಿತು. ದಾದು, ಅಸ್ರಣ್ಣರು ಮತ್ತು ಗೌಡಚಾರಿ ಮೂಲ ಭಂಡಾರ ಮನೆಗೆ ಹೋಗಿ ನಿಂತರು. ಸುಮಾರು ಶೇ.50 ಜನ ಪರಂಪರಾಗತ ನಿಯಮದಂತೆ ಭಂಡಾರ ಹೊರಡಲು ಎರಡನೇ ಭಾವದ ಗುತ್ತಿನ ಭಂಡಾರದ ಮನೆಯಲ್ಲೇ ಜಮಾಯಿಸಿದ್ದರು. ಇನ್ನೊಂದೆಡೆ ಮಣಿವರ್ಧನ ತನ್ನ ಹೊಸ ಭಂಡಾರದ ಮನೆಯಲ್ಲಿ ಭಂಡಾರ ಹೊರಡಲು ಸಿದ್ದತೆ ಮಾಡಿ ತಮ್ಮ ಬೆಂಬಲಿಗರನ್ನು ಒಟ್ಟುಗೂಡಿಸಿದ್ದ. ಭಂಡಾರದ ಪ್ರಮುಖವಾಗಿ ಪಾಲ್ಗೊಳಬೇಕಾದ ದೈವ ಮುಕಾಲ್ದಿ ಮತ್ತು ದೈವ ನರ್ತಕ ತಟಸ್ಥರಾಗಿ ಎಲ್ಲಿಯೂ ಹೋಗದೇ ನೇಮದ ಕಲದಲ್ಲೇ ಉಳಿದರು. ಸಮಿತಿಯವರ ಒತ್ತಡದಿಂದ ಸಂಪ್ರದಾಯ ಮುರಿಯುವಂತಿಲ್ಲ. ಸಂಪ್ರದಾಯ ಪಾಲಿಸಲು ಸಮಿತಿಯವರನ್ನು ಎದುರು ಹಾಕಿಕೊಂಡು ಮೂಲ ಭಂಡಾರದ ಮನೆಗೆ ಹೋಗುವಷ್ಟು ಧೈರ್ಯವೂ ಇಲ್ಲ.. ಕೊನೆಗೆ ದೈವದ ಮೊರೆ ಹೋಗುವುದೊಂದೆ ಬಾಕಿಯಿತ್ತು. ಏನಾಯ್ತೋ ಏನೋ ಭಂಡಾರದ ಮನೆಯಲ್ಲಿ ಅಸ್ರಣ್ಣರ ಪ್ರಾರ್ಥನೆಯ ನಂತರ ಆವೇಶವಾಗಬೇಕಾದ ಮುಕಾಲ್ದಿ ಆವೇಶಗೊಂಡು ತಮ್ಮೊಂದಿಗಿದ್ದ ಎಲ್ಲ ದೈವ ಚಾಕರಿಯವರನ್ನು ಹಿಂಬಾಲಿಸಲು ಹೇಳಿ ಮೂಲ ಭಂಡಾರ ಮನೆಗೆ ತೆರಳಿದರು. ಸಮಿತಿಯವರು ಹೆದರಿ ಸುಮ್ಮನಾದರು. ಆದರೆ ಭಂಡಾರದ ಮನೆಗೆ ಹೋಗದೇ ಅರ್ಧ ದಾರಿಯಲ್ಲಿ ನಿಂತರು.

ಅಸ್ರಣ್ಣರು ಮುಕಾಲ್ದಿ ಮತ್ತು ಇತರ ದೈವ ಚಾಕರಿವರ ಬರುವಿಕೆಗೆ ಕಾಯುತ್ತಿದ್ದರು. ದೈವ ಅವರನ್ನೆಲ್ಲ ಭಂಡಾರದ ಮನೆಗೆ ಕಳುಹಿಸುತ್ತಾನೆ ಎಂಬ ನಂಬಿಕೆಯೂ ಇತ್ತು

ಬಲ್ಲಾಳ ಮತ್ತು ಮಣಿವರ್ಧನ ಅಹಂಕಾರಕ್ಕೆ ದೈವ ಮಣಿಯಲಿಲ್ಲ. ದೈವ ಭಂಡಾರ ಹಿಂದೆ ಹೇಗೆ ನಡೆಯುತ್ತಿತ್ತೋ ಹಾಗೆಯೇ ಅಚ್ಚುಕಟ್ಟಾಗಿ ಅಸ್ರಣ್ಣರ ಪ್ರಯತ್ನದಿಂದ ಹೊರಟಿತು. ತಮ್ಮ ಸೋಲನ್ನು ಅರಗಿಸಿಕೊಳ್ಳಲಾಗದ ಬಲ್ಲಾಳರು ತಮ್ಮ ಚೇಲಾಗಳನ್ನು ಬಿಟ್ಟು ಭಂಡಾರಿ ಮತ್ತು ಗೌಡಚಾರಿಗೆ ಅಂಗಿ ತೆಗೆಯಲು ಹೇಳಿ ತೆಗೆಯದಿದ್ದರೆ ಬಾರಿಸಿ ಎಂದು ಹೇಳಿದ. ದಾರಿ ಮಧ್ಯ ಭಂಡಾರದ ಮೆರವಣಿಗೆ ಸೇರಿಕೊಂಡ ಸಮಿತಿಯವರು ಮತ್ತು ಚೇಲಾಗಳು ದಾದು ಮತ್ತು ಗೌಡಚಾರಿಗೆ ಅಂಗಿ ತೆಗೆಯಲು ಪೀಡಿಸಿದರು. ಮಣಿವರ್ಧನ ಕೂಡಾ ದಾದುವಿನ ಹತ್ತಿರವೇ ಹಿಂಬಾಲಿಸುತ್ತಿದ್ದ. ಇದು ದಾದುವಿನ ಗಮನಕ್ಕೆ ಬಂದಿತು. ಮೈಮುಟ್ಟಿದರೆ ಹಿಂದೆ ಬಾರಿಸಲು ಸಿದ್ಧನಾಗಬೇಕೆಂದುಕೊಳ್ಳುತ್ತಾ ಸತ್ತಿಗೆ ಹಿಡಿದು ಭಂಡಾರದೊಡನೆ ಸಾಗುತ್ತಿದ್ದ. ಸತ್ತಿಗೆಯ ಹಿಡಿಕೆಯನ್ನು ಸಡಿಲಿಸಿ ಇಟ್ಟುಕೊಂಡಿದ್ದ. ತನಗೆ ಪೆಟ್ಟು ಬಿದ್ದರೆ ಮಣಿವರ್ಧನನಿಗೆ ಬಿದಿರಿನ ಹಿಡಿಕೆಯಲ್ಲಿ ಸರಿಯಾಗಿ ಬಾರಿಸುವುದಾಗಿ ಪಕ್ಕದಲ್ಲಿದ್ದ ಕುಟ್ಟಿಯೊಡನೆ ಗಟ್ಟಿ ಧನಿಯಲ್ಲೇ ಹೇಳಿದ. ಅಂಗಿ ತೆಗಿಸುವ ಸಮಿತಿಯವರ ಆದೇಶಕ್ಕೆ ಬೆಲೆ ಸಿಗದಂತೆ ಮಾಡಿತು. ದಾದುವಿನ ಈ ನಿರ್ಧಾರ ಅನೇಕರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನು ಕೆಲ ಸಂಪ್ರದಾಯ ತಿಳಿಯದ ಮೂರ್ಖರ ಟೀಕೆಗೂ ಕಾರಣವಾಯಿತು. ಒಂದು ಅಂಗಿ ತೆಗೆಯಲೂ ಇಷ್ಟೊಂದು ಹಟ ಏಕೆ ಎಂಬ ಪ್ರಶ್ನೆಯೂ ಕೆಲವು ಸಂಸ್ಕೃತಿ ಅರಿಯದ ಅಮಾಯಕರಲ್ಲಿತ್ತು.

ಗಲಭೆ ಭಯದ ನಡುವೆ ಹೇಗೋ ಭಂಡಾರ ಮೆರವಣಿಗೆ ಸಾಂಗವಾಗಿ ನೆರವೇರಿತು. ದೈವ ಚಾಕರಿಯವರು ತಮ್ಮ ತಮ್ಮ ಕೆಲಸ ಬಿಟ್ಟರೆ ಬೇರೆ ಯಾವ ಮಾತುಕತೆಯೂ ಇರಲಿಲ್ಲ. ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿಯಿದ್ದ ಕಾರಣ ಹೆಚ್ಚಿನವರು ಭಯದಿಂದಲೇ ಇದ್ದರು.

ನೇಮದ ಬೂಲ್ಯ ಪಡೆದು ದೈವ ನರ್ತಕರು ವೇಷ ಧರಿಸಿ, ಕಿರೀಟ ತೊಟ್ಟು, ಸಿರಿ ಒಲಿಯ ಆಭರಣಗಳನ್ನು ಧರಿಸಿ, ಹಿರಿಯರ ಆಶೀರ್ವಾದ ಪಡೆದು ವೀಳ್ಯ ತಾಂಬೂಲ ಸ್ವೀಕರಿಸಿ ನರ್ತನ ಸೇವೆಗೆ ಸಿದ್ದರಾದರು. ಇನ್ನೇನೂ ದೈವ ನರ್ತಕನ ಪರತಿ ತೆಂಬರೆ ನುಡಿಸಲು ಪ್ರಾರಂಭ ಮಾಡಿದಳು. ಸೇರಿದ ಸಭಿಕರು ಮತ್ತು ಗುತ್ತಿನವರು , ಸಮಿತಿಯವರು ಗಣ್ಯರು ಒರವೂರಿನವರು ಒಮ್ಮೆ ಗಂಬೀರವಾದ ಮೌನಕ್ಕೆ ಜಾರಿ ತೆಂಬರೆಯ ಶ್ರುತಿಯೊಂದಿಗೆ ಗಗ್ಗರದ ನಾದಕ್ಕೆ ಕಿವಿಯರಳಿಸುವ ಸಮಯ…ಅರ್ಚಕ ಮೂಲ್ಯನ್ನ ದೈವದ ಚರ್ವ ಹಿಡಿದು ಏಕಾಗ್ರತೆಯಿಂದ ನಿಂತಿದ್ದಾನೆ. ಮಡ್ಡೆಲ ಮತ್ತು ಬಳಗದವರು ಕಂಚಿನ ಎಣ್ಣೆಯ ಕಮಂಡಲದೊಂದಿಗೆ ದೀವಟಿಗೆ ಪಂಚ ಪಂಜಿನ ದೀವಟಿಗೆ ಹಿಡಿದು ಮೌನವಾಗಿ ಸಮಚಿತ್ತದಿಂದ ನಿಂತಿದ್ದಾರೆ. ಭಂಡಾರಿ ಸತ್ತಿಗೆ ಹಿಡಿದು ಮುಕಾಲ್ದಿಯ ಪಕ್ಕ ಭಕ್ತಿಯಿಂದ ನಿಂತಿದ್ದಾನೆ. ಸಮಿತಿಯವರು ..ಗುತ್ತಿನವರು ತಮ್ಮ ದಿರಿಸುಗಳನ್ನು ಸರಿಪಡಿಸುತ್ತಾ ಜರಿಯ ಶಾಲುಗಳನ್ನು ಹೆಗಲಿಗೆ ಹಾಕಿಕೊಂಡು ತಮ್ಮಲ್ಲಿಗೆ ದೈವ ಬಂದು ಮರ್ಯಾದೆ ಕೊಡುವುದನ್ನು ಸ್ವೀಕರಿಸಲು ಉತ್ಸುಕರಾಗಿದ್ದಾರೆ. ಇಂತಹ ಶುಭ ಸಂದರ್ಭದಲ್ಲಿ ಸತ್ತಿಗೆ
ಹಿಡಿದಿದ್ದ ದಾದುವಿನ ಹತ್ತಿರ ಬಂದ ಸಮಿತಿಯ ಶೀನ ಶೆಟ್ಟಿ ಅಂಗಿ ತೆಗಿಯಲು ಸೂಚಿಸಿದ. ದಾದು ಈತನ ಮಾತಿಗೆ ಸ್ಪಂದಿಸಲಿಲ್ಲ. ಇದರಿಂದ ಕೋಪಗೊಂಡ ಶೀನ ಶೆಟ್ಟಿ ಜೋರಾದ ಧನಿಯಲ್ಲಿ ಅಬ್ಬರಿಸಲು ಪ್ರಾರಂಭಿಸಿದ “ಅಂಗಿ ತೆಗೆ ಬೇಗ ಇಲ್ಲದಿದ್ದರೆ ಪಕ್ಕದಲ್ಲಿದ್ದ ಹಲಸಿನ ಮರ ತೋರಿಸಿ ಆ ಮರಕ್ಕೆ ಕಟ್ಟಿಹಾಕುತ್ತೇನೆ ಅಂಗಿ ಚಡ್ಡಿ ಎಲ್ಲ ಜಾರಿಸುತ್ತೇವೆ” ಎಂದು ಏರುಧನಿಯಲ್ಲಿ ಕೂಗಿಕೊಂಡ. ದಾದು ಮರು ಮಾತನಾಡಲಿಲ್ಲ. ತೆಂಬರೆಯ ಶಬ್ದ ಮಾತ್ರ ಅವನಿಗೆ ಕೇಳುತಿತ್ತು‌. ಈ ನೇಮ ನಿಲ್ಲಬಾರದು. ಈ ಪುಂಡರ ದುಷ್ಕೃತ್ಯಕ್ಕೆ ದೈವ ಕಲ ವೇದಿಕೆಯಾಗಬಾರದು‌ ಎಂಬುದು ದಾದುವಿನ ಮನಸ್ಸಿನೊಳಗೆ ಹರಿದಾಡಿತು. ಯಾವ ಪ್ರತಿಕ್ರಿಯೆಯನ್ನೂ ಕೊಡಲಿಲ್ಲ. ಏರುಧ್ವನಿ ಮತ್ತು ಹೆಚ್ಚಾಯಿತು. ದಾದು ಅಂಗಿ ತೆಗೆಯುವ ಯಾವುದೇ ಮಾತಿಗೆ ಸೊಪ್ಪು ಹಾಕದೇ ತನ್ನ ಕರ್ತವ್ಯ ಮಾಡುತ್ತಿದ್ದ. ಶೀನ ಶೆಟ್ಟಿಯ ಹುಚ್ಚಾಟಕ್ಕೆ ಸಮಿತಿ ವಿರೋಧಿಗಳಾದ ಗುತ್ತಿನ ಮನೆಯವರು ಮಧ್ಯಪ್ರವೇಶಿಸಿ “ದೈವಕಲದಲ್ಲಿ ಇದೆಂತ ಹುಚ್ಚಾಟ.. ಇದು ಯಾವ ರೀತಿಯ ನೇಮ? ನಾವು ಎದ್ದು ಹೋಗುತ್ತೇವೆ” ಎನ್ನುತ್ತಾ ಹೆಗಲಲ್ಲಿದ್ದ ಜರಿ ಶಾಲನ್ನು ತೆಗೆದು ಎದ್ದು ನಿಂತರು. ತುಂಬಿದ ಸಭೆ ಸಾಸಿವೆ ಕಾಳು ಬಿದ್ದರೂ ಕೇಳುವಷ್ಟು ಮೌನ. ಒಂದು ಕ್ಷಣ ಪುಂಡ ಶೀನ ಶೆಟ್ಟಿಯ ಅಹಂಕಾರದ ಮಾತು.. ದುರ್ಜನರ ಪ್ರಾಬಲ್ಯ ಸಜ್ಜನರ ಮೌನ‌… ಇನ್ನೊಂದೆಡೆ ಸರ್ವಲಂಕಾರ ಭೂಷಿತರಾಗಿ ಗಗ್ಗರ ಸೇವೆ ಎದ್ದು ಬರಲು ಸಿದ್ದವಾಗಿರುವ ದೈವಗಳು… ಇದನ್ನೆಲ್ಲ ನೋಡುತ್ತಾ ಮೂಕವಿಸ್ಮಿತರಾಗಿರುವ ದೈವ ಭಕ್ತ ಸಮೂಹ.. ದಾದುವಿನ ಕಣ್ಣಾಲಿಗಳು ತನಗರಿವಿಲ್ಲದಂತೆ ಒದ್ದೆಯಾದವು.

 

ಮುಂದುವರೆಯುವುದು….

✍️ ಪ್ರಶಾಂತ್ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *