ಜಂಗಮೆ ಗಿಡದ ಹಣ್ಣುಗಳನ್ನು ನೋಡಿ ತುಲುವನು ಇದಕ್ಕೆ ಕುದ್ಕ ಪಂರ್ದ್ (ನರಿ ಹಣ್ಣು)ದ ಗಿಡ ಎಂದಿದ್ದಾನೆ.ಅದೇ ರೀತಿಯಲ್ಲಿ ಇನ್ನು ಕೆಲವರು ಪುಚ್ಚೆ ಪಂರ್ದ್ (ಬೆಕ್ಕು)ದ ಗಿಡ ಎಂದಿದ್ದಾರೆ.ಇಲ್ಲಿ ಪುಚ್ಚೆ ಎಂದರೆ ಸಾಕು ಬೆಕ್ಕು ಅಲ್ಲ.ಅದು ಪುರುಂಗು(ಪುನುಗು) ಬೆಕ್ಕು ಆಗಿರುತ್ತದೆ.ನರಿ ಮತ್ತು ಪುನುಂಗು ಬೆಕ್ಕುಗಳಿಗೆ ಈ ಹಣ್ಣುಗಳು ಎಂದರೆ ಬಲು ಇಷ್ಟ.ಇವುಗಳ ಕಣ್ಣುಗಳು ನೋಡಲು ತುಸು ಹಳದಿಯಾಗಿ ಜಂಗಮೆ ಗಿಡದ ಹಣ್ಣುಗಳಂತೆ ಹೊಳೆಯುತ್ತದೆ.ಈ ಗಿಡದ ಹಣ್ಣುಗಳನ್ನು ಬರೇ ಈ ಪ್ರಾಣಿಗಳು ತಿನ್ನುವುದಲ್ಲದೆ ನಾವೂ ತಿನ್ನಬಹುದು.ಕಂಚು ಬಂಗಾರದಂತೆ ಹೊಳೆಯುವ ಮೃದುವಾದ ಈ ಹಣ್ಣುಗಳು ಹುಳಿ, ಕಹಿ,ಸಿಹಿ ರುಚಿಗಳಿಂದ ಕೂಡಿದೆ.ಹೊರ ಮೈಯ ಹಳದಿ ಕವಚದೊಳಗೆ ಬಿಳಿಯಾದ ಹತ್ತಿಯಂತಿರುವ ದಪ್ಪನೆಯ ಕೋಶ ಇದೆ.ಇದರೊಳಗೆ ಬೆಕ್ಕಿನ ಕಣ್ಣು ವಿನ್ಯಾಸದ ಅಕ್ಷಿ ಪಟಲ ಜೋಪಾನವಾಗಿ ಜೋಡಣೆ ಆಗಿದೆ.ಇದರ ಬೀಜವು ಕಾಫಿ ಬೀಜದಂತೆ ಕಾಣುತ್ತದೆ.ಬೀಜದ ಹೊರಮೈಗೆ ಮೆದುವಾದ ತಿರುಳು ಅಂಟಿನಂತೆ ಅಂಟಿ ಕೊಂಡಿರುತ್ತದೆ.ಈ ಪ್ರಾಣಿಗಳು ಹೊರ ಕವಚವನ್ನು ತೆಗೆದು ಬೀಜವನ್ನು ನುಂಗುತ್ತವೆ. ಗಟ್ಟಿಯಾದ ಬೀಜವನ್ನು ಮಲ ವಿಸರ್ಜನೆ ಮಾಡುವಾಗ ಹೊರಗೆ ಹಾಕುತ್ತವೆ.ತಿರುಳು ಅವುಗಳ ಹೊಟ್ಟೆಯೊಳಗೆ ಜೀರ್ಣ ಆಗಿರುತ್ತದೆ.ಹಿಂದೆಲ್ಲಾ ಇವುಗಳು ವಿಸರ್ಜನೆ ಮಾಡಿದ ಇದರ ಬೀಜಗಳನ್ನು ಹೊಲ ಗುಡ್ಡಗಳಲ್ಲಿ ಕಾಣಲು ಸಿಗುತಿತ್ತು.
ಈ ಗಿಡದ ಸೊಪ್ಪು ವಿಷಯಕ್ಕೆ ಬಂದಾಗ ಇದರ ಮೂಲ ಹೆಸರು “ಜಂಗಮೆ”ಎಂಬ ಪದವನ್ನು ತುಲುವರು ಹೇಳುತ್ತಾರೆ.”ಜಂಗಮೆ”ಎಂಬ ಪದವು ಅಪ್ಪಟ ತುಲು ಪದವೇ ಆಗಿರುತ್ತದೆ.ಈ ಪದದಲ್ಲಿ “ಜಂಗ” ಮತ್ತು “ಅಮೆ” ಎಂಬ ಎರಡು ಪದಗಳು ಇವೆ.”ಜಂಗ”ಎಂದರೆ ಹಿಂದಿನ ಕಾಲದಲ್ಲಿ ಹುಲ್ಲು ಗುಡಿಸಲು ಮನೆಗಳಲ್ಲಿ ಅಡಿಗೆ ಮನೆಯ ಒಲೆಗಳ ಬೆಂಕಿಯ ಕಿಡಿಗಳು ಮೇಲೇರದಂತೆ ಒಲೆಗಳ ಮೇಲ್ಭಾಗದಲ್ಲಿ ಅಡ್ಡಲಾಗಿ ಮರದ ಹಲಗೆಯನ್ನು ಇಡುತ್ತಿದ್ದರು.ಆ ಹಲಗೆಯಲ್ಲಿ ಉಪ್ಪು,ತರಕಾರಿ ಬೀಜಗಳನ್ನು ,ಇತ್ಯಾದಿಗಳನ್ನು ಕೆಡದಂತೆ ಇಡುತ್ತಿದ್ದರು. ಹಲಗೆಯಲ್ಲಿ ಹಿಡಿದ ಅಂಟಿದ ಕರಿಮಸಿಯನ್ನು “ಜಂಗ್” ಹಿಡಿದಿದೆ ಎನ್ನುವುದು ಇತ್ತು.”ಅಮೆ”ಎಂದರೆ ಅಶುದ್ಧತೆ, ಕೊಳೆತ,ಸ್ವಚ್ಛತೆ ಇಲ್ಲದ್ದು, ಸೂತಕ ಎಂಬ ಅರ್ಥಗಳು. ಜನನ,ಮರಣದ ಸೂತಕ ಅಂದರೆ ಅದು ಮನಸ್ಸಿನ ಒಳಗಿನ ಅಶುದ್ಧತೆ ಎನಿಸುವುದು.ದೇಹದ ತ್ವಚೆಯ ಮೇಲೆ ಸ್ವಚ್ಛತೆ ಇಲ್ಲದೆ ಕೊಳೆ ಹಿಡಿದರೆ ಅದನ್ನು ಜಂಗ್ ಹಿಡಿದಿದೆ ಎನ್ನುತ್ತಾರೆ.ಇಲ್ಲಿ ದೇಹದ ತ್ವಚೆಯ ಮೇಲೆ ಹಿಡಿದ ಅಂಟಿದ ಕೊಳೆಯನ್ನು ಜಂಗದಲ್ಲಿ ಹಿಡಿದ ಕರಿ ಮಸಿಗೆ ಹೋಲಿಕೆ ಮಾಡಿದ್ದಾರೆ.
ಹಿಂದಿನ ಕಾಲದಲ್ಲಿ ದೇಹವನ್ನು ಸ್ವಚ್ಛತೆಯಿಂದ ಇಡಲು ಬೇಕಾದ ಸೋಪುಗಳಂತಹ ವಸ್ತುಗಳು ಉಡುಪುಗಳು ಇರುತ್ತಿರಲಿಲ್ಲ.ದೇಹದ ಸೊಂಟ,ತೊಡೆ,ಕುಂಡೆ,ಕಂಕುಳ ಇತ್ಯಾದಿ ಸಂದುಗಳಲ್ಲಿ ಕೊಳೆ ಹಿಡಿದು ಜಂಗ್ ಹಿಡಿದು ಫಂಗಸ್,ಬೂಸ್ಟ್ (ಪೂಂಕೆ,ಪುಂರ್ಗು)ಹಿಡಿದಂತೆ ಆಗುವುದು ಇತ್ತು.ಈ ಜಂಗ್ ನಂತೆ ಸಂಗ್ರಹವಾದ ಅಂಟಿದ ತ್ವಚೆಯ ಕೊಳೆಯನ್ನು ಈ ಜಂಗಮೆ ಸೊಪ್ಪಿನಿಂದ ಉಜ್ಜಿ ತೆಗೆಯುತ್ತಿದ್ದರು.ಅಂಟಿದ ಕೊಳೆಗೆ ಆ ಜಾಗಗಳಲ್ಲಿ ಕುರು ಏಳುವುದು ಸಾಮಾನ್ಯವಾಗಿತ್ತು. ತುಲು ಭಾಷೆಯಲ್ಲಿ “ಕುರು” ಪದಕ್ಕೆ “ಕುರಿ”ಎನ್ನುವುದು ಇತ್ತು.ಕುರಿ ಎಂದರೆ ಕುರಿಯುನು ಅಥವಾ ಕೊಳೆಯುವುದು.ಇದು ಪುರುಂಗು ಅಥವಾ ಕೆಟ್ಟ ವಾಸನೆ ಬರುತ್ತಿತ್ತು.ಇದರಿಂದ ಹೊರ ಬರಲು ಮತ್ತು ಕುರುವನ್ನು ಸ್ವಚ್ಛಗೊಳಿಸಿ ಗುಣಪಡಿಸಲು ಈ ಗಿಡದ ಎಲೆಗಳನ್ನು ಬಳಸುತ್ತಿದ್ದರು.ಈಗಲೂ ಬಳಸುತ್ತಾರೆ.
(ಕುರಿ ನೀರಿನಲ್ಲಿ ಜಂಗಮೆ ಸೊಪ್ಪು)
ಅಶುಚಿಯಿಂದ ಸಂಗ್ರಹವಾದ ಗಟ್ಟಿಯಾದ ಕೊಳೆಯನ್ನು ತ್ವಚೆಯಿಂದ ಕೆರೆದು ತೆಗೆಯಲು ಅಂದು ಬಳಸುತ್ತಿದ್ದ ಸೊಪ್ಪು ಅದೇ “ಜಂಗಮೆ” ಸೊಪ್ಪು. “ಜಂಗಮ” ಎಂಬ ಪದವು ಕನ್ನಡ ಪದವಾಗಿದ್ದು ಸಂಚರಿಸುವವರು ಎಂಬ ಅರ್ಥವನ್ನು ಕೊಡುವುದು. “ಜಂಗಮೆ”ಎಂದರೆ ದೇಹದಲ್ಲಿ ಅಶುಚಿಯಿಂದ ಅಂಟಿ ಕೊಂಡಿರುವ ಕೊಳೆ ಅಥವಾ ಕುರೆ.ಕುರೆಯಿಂದ ಕುರಿ ಮೂಡುತ್ತದೆ.
(ಕುದ್ಕ|ನರಿ ಮತ್ತು ಪುಂರ್ಗು|ಪುನುಗು ಬೆಕ್ಕು-ಇಷ್ಟದ ಹಣ್ಣು)
ಅಶುಚಿಯಿಂದ ತ್ವಚೆಯಲ್ಲಿ ಮೂಡಿ ಬರುವ ಕುರುಗಳಿಗೆ”ಅಮೆ ಕುರಿ”ಎಂದು ಕರೆಯುತ್ತಿದ್ದರು.ಅದೇ ಕುರು ಕಂಕುಳ ಅಡಿಯಲ್ಲಿ ಮೂಡಿದಲ್ಲಿ ಅದನ್ನು “ಅಮೆ ಚಟ್ಟ್”ಎನ್ನುವುದು.ಆ ಕುರು ಕೈ ತೋಳುಗಳ ಸ್ಪರ್ಶದಿಂದ ಚಟ್ಟೆ ಆಗುತ್ತದೆ.ಆದ್ದರಿಂದ ಆ ಹೆಸರಿನಿಂದ ಕರೆದರು.
ಈ ಕುರುವನ್ನು (ಕುರಿ-ಕೊಳೆತ ಭಾಗ)ಗುಣಪಡಿಸಲು ಪ್ರಪ್ರಥಮವಾಗಿ ಅದರ ಸುತ್ತಲೂ ಹತ್ತಿಕೊಂಡಿರುವ ಜಂಗ್ ಅಥವಾ ಅಂಟಿಕೊಂಡಿರುವ ಕೊಳೆಯನ್ನು ಕೆರೆದು ಸ್ವಚ್ಛ ಗೊಳಿಸಬೇಕು.ಕೆರೆಯುವ ಕೆಲಸವನ್ನು ಈ ಸೊಪ್ಪು ಮಾಡುವುದು.ಈ ಸೊಪ್ಪು ಹಸುರು ಹಸುರು ಆಗಿದ್ದರೂ ಇದರೊಳಗೆ ನೀರಿನ ಅಥವಾ ಎಣ್ಣೆಯ ಅಂಶವೇ ಇರುವುದಿಲ್ಲ.ಎಲೆಗಳನ್ನು ಮುರಿದಾಗ ಕರ್ ಕರ್ ಶಬ್ಧವು ಬರುತ್ತದೆ.ಪುಡಿ ಪುಡಿ ಆಗುತ್ತದೆ.
ಕುರುವಿನ ಕೊಳೆತ ಭಾಗಕ್ಕೆ ನಂಜು ಆಗದಂತೆ ಕುರಿ ನೀರಿನಿಂದ ತೊಳೆಯ ಬೇಕು.ಕುರಿ ನೀರು ಎಂದರೆ ಕೊಳೆತ ಭಾಗವನ್ನು ತೊಳೆಯುವ ನೀರು.ನಂಜು ಆಗದಂತೆ ತಯಾರಿಸುವ ನೀರು.ಆ ನೀರೇ ಸುಣ್ಣ ಮತ್ತು ಹರಸಿನ ಪುಡಿ ಬೆರೆಸಿದ ನೀರು.ಈ ನೀರಿಗೆ ಜಂಗಮೆಯ ಸೊಪ್ಪನ್ನು ಮುರಿದು ಹಾಕುವುದು. ಮುರಿದ ಸೊಪ್ಪುಗಳಿಂದ ಕುರುವಿನ ಸುತ್ತಲೂ ಮೆತ್ತಗೆ ಉಜ್ಜುತ್ತಾ ಉಜ್ಜುತ್ತಾ ಇರುವುದು.ಅದೇ ಕುರಿ ನೀರಿನಿಂದ ತೊಳೆಯುವುದು.ಈ ರೀತಿಯಲ್ಲಿ ಉಜ್ಜಿದಾಗ ಕುರುವಿನ ಸುತ್ತಲೂ ಇರುವ ಜಂಗ್ ಕೊಳೆ ಸ್ವಚ್ಛ ಆಗುತ್ತದೆ.ಈ ರೀತಿಯ ಕ್ರಿಯೆಗೆ ತುಲು ಭಾಷೆಯಲ್ಲಿ “ಪೊಯ್ಯೆ ದೆಪ್ಪುನು”ಅಂತಾರೆ.ತ್ವಚೆಯಲ್ಲಿ ಅಂಟಿರುವ ಕೊಳೆಯನ್ನು ಕಿತ್ತು ತೆಗೆಯುವ ಸೊಪ್ಪೇ “ಜಂಗಮೆ”ಸೊಪ್ಪು.ಈ ಸೊಪ್ಪಿನಿಂದ ಉಜ್ಜಿ ಕುರಿ ನೀರಿನಿಂದ ತೊಳೆದು ನಂತರದಲ್ಲಿ ಕುರುಗೆ ಮದ್ದು ಹಚ್ಚುವುದು.
ಕಂಚಿನ ಬಟ್ಟಲಿನಲ್ಲಿ ಕುರಿ ನೀರು ಮಾಡಿ ಜಂಗಮೆ ಸೊಪ್ಪನ್ನು ಪುಡಿಮಾಡಿ ಹಾಕಿ ಅವುಗಳಿಂದ ತೊಳೆದಾಗ ಬಟ್ಟಲಿನಲ್ಲಿ ಪೊಯ್ಯೆ ಅಂದರೆ ಮರುಳು ಸಂಗ್ರಹ ಆಗುತ್ತದೆ ಎಂದು ಜನರು ಹೇಳುತ್ತಾರೆ.ಆದರೆ ಅದು ಹೊಯ್ಗೆ ಅಥವಾ ಮರುಳು ಅಲ್ಲ.ಅದು ಜಂಗಮೆ ಸೊಪ್ಪಿನ ಕಣಗಳು.ಆ ಕಣಗಳು ಕೊಳೆಯನ್ನು ಹೀರಿ ಹಿಡಿದುಕೊಂಡು ಹೊಯ್ಗೆಯಂತೆ ಮತ್ತಷ್ಟು ಗಟ್ಟಿಯಾಗಿ ಬಿಡುತ್ತದೆ.
ಆ ಕಾಲದಲ್ಲಿ ಶುಚಿತ್ವ ಇಲ್ಲದೆ ತ್ವಚೆಯಲ್ಲಿ ಕುರಿ(ಕೊಳೆತು)ಏಳುತ್ತಿತ್ತು.ಈ ಕಾಲದಲ್ಲಿ ತ್ವಚೆಯು ಶುಚಿ ಆಗಿರುತ್ತದೆ.ಕುರು ಏಳುವುದಿಲ್ಲ.ಆದರೆ ಹೊಟ್ಟೆಗೆ ತಿನ್ನುವ ಆಹಾರವೇ ಶುಚಿ ಇಲ್ಲದೆ ಶರೀರದ ಒಳಗೆ ಕುರು ಏಳುತ್ತೆ.ಅದೇ ಕ್ಯಾನ್ಸರ್.