ಮಳೆಗಾಲ ಆರಂಭ ಆದಂತೆ ವಿವಿಧ ಪ್ರಭೇದಗಳ ಕೆಸು ಗಿಡಗಳು ತಮ್ಮ ತಮ್ಮ ಆಕರ್ಷಣೆಯನ್ನು ತಮ್ಮ ವಿವಿಧ ಬಣ್ಣ ವಿನ್ಯಾಸದ ಚಾಮರಗಳನ್ನು ಪ್ರದರ್ಶಿಸಿ ತಮ್ಮ ಇರುವಿಕೆಯನ್ನು ತೋರಿಸಿ ಕೊಳ್ಳುತ್ತವೆ.ಕೆಸುವನ್ನು ತುಲು ಭಾಷೆಯಲ್ಲಿ ಕೆಲವರು “ತೇವು” ಎಂದರೆ ಇನ್ನು ಕೆಲವರು “ಸೇವು” ಎಂದು ಕರೆಯುತ್ತಾರೆ.ತೇವು ಎಂಬ ಪದವು “ತೂವು” ಎಂಬ ಪದದಿಂದ ಉತ್ಪತ್ತಿ ಆಗಿದ್ದರೆ ಸೇವು ಎಂಬ ಪದವು “ಸೂವು”ಎಂಬ ಪದದಿಂದ ಉತ್ಪತ್ತಿ ಆಗಿದೆ.ತೂವು ಮತ್ತು ಸೂವು ಪದಗಳ ಅರ್ಥ ಒಂದೇ ಆಗಿದೆ.ತೂವು ಮತ್ತು ಸೂವು ಎಂದರೆ ಬೆಂಕಿ.ಕೆಸುವು ಬೆಂಕಿಯಂತೆ ಉಷ್ಣತೆಯ ತುಂಬಾ ಹಾಟ್ ಹೀಟ್ ಸಸ್ಯ ಆಗಿದೆ.ಇದನ್ನು ತುಲುವ ಪೂರ್ವಜರು ಇದರ ಹೆಸರಿನಲ್ಲೇ ತಿಳಿಸಿದ್ದಾರೆ.ಈ ಗಿಡದ ಎಲೆ ದಂಟು ಗೆಡ್ಡೆಗಳ ಲಕ್ಷಣಗಳನ್ನು ಅರಿತು ಕೆಸುವಿಗೆ ತುಲು ಭಾಷೆಯಲ್ಲಿ ತೇವು ಸೇವು ಎಂಬ ಹೆಸರನ್ನು ಇಟ್ಟಿದ್ದಾರೆ.
ಕೆಸುವನ್ನು ಆಹಾರದಲ್ಲಿ ಸೇವಿಸುವಾಗ ಮುಂಜಾಗ್ರತೆ ವಹಿಸಲು ಹೆಸರಿನಲ್ಲೇ ತಿಳಿಸಿದ್ದಾರೆ.ಆರೋಗ್ಯಕ್ಕೆ ಇದನ್ನು ತಿನ್ನಲೇ ಬೇಕು ಮತ್ತು ಅದನ್ನು ಹೇಗೆ ತಯಾರಿಸಿ ತಿನ್ನ ಬೇಕು ಎಂಬುದನ್ನು ಕೂಡಾ ಪೂರ್ವಜರು ತಿಳಿಸಿದ್ದಾರೆ.ಎಲೆ ದಂಟು ಗೆಡ್ಡೆಗಳಲ್ಲಿ ಅಡಗಿರುವ ಉಷ್ಣತೆಯನ್ನು ಕಡಿಮೆ ಮಾಡಿ ತಿನ್ನಲು ಸಲಹೆಗಳನ್ನು ಹೇಳಿದ್ದಾರೆ.ಅವುಗಳ ಉಷ್ಣಾಂಶವನ್ನು ಇಳಿಸಲು ಯಾವುದರಲ್ಲಿ ಬೆರೆಸಿ ಸೇವಿಸಿದರೆ ಉತ್ತಮ ಎಂಬುದನ್ನು ಕೂಡಾ ಅರಿತು ತಿಳಿಸಿದ್ದಾರೆ.
ತುಲುನಾಡಲ್ಲಿ ಹೆಚ್ಚಾಗಿ ಬಳಸುವ ಕೆಸುಗಳಿಗೆ ತಮ್ಮದೇ ಹೆಸರನ್ನು ಇಟ್ಟು ಕರೆಯುತ್ತಾರೆ.ಮರಗಳ ಪೊಟರೆ ಸಂದುಗಳಲ್ಲಿ ಬೆಳೆಯುವ ಕೆಸುವಿಗೆ ಮರ ತೇವು,ಮರ ಸೇವು ಎನ್ನುತ್ತಾರೆ.ಬಾಣಂತಿಯರಿಗೆ ಅಗತ್ಯವಾಗಿ ಔಷಧಿ ಆಗಿ ನೀಡುವ ಕೆಸುವನ್ನು “ಪೆದಿಮೆದಿ ತೇವು ಸೇವು” ಎನ್ನುವುದು.ಪುದ್ದರ್ ಅಂದರೆ ಹೊಸ ಅಕ್ಕಿ ಹಬ್ಬದ ಸಮಾರಂಭಗಳಲ್ಲಿ ಕೆಸುವಿನ ದಂಟಿನ ಸಾಂಬಾರ್ ಕಡ್ಡಾಯ ಇರಲೇ ಬೇಕು ಎಂಬ ಸಂಪ್ರದಾಯ ಇದೆ.ಈ ಕೆಸುವನ್ನು”ಪುದ್ದರ್ದ ತೇವು ಸೇವು”ಎಂದು ಕರೆಯುತ್ತಾರೆ.
ಅಕ್ಕಿ ಹಿಟ್ಟನ್ನು ಅಂಟಿಸಿ ತಯಾರಿಸುವ ಕೆಸು ಎಲೆಯ ಪತ್ರಡೆಗೆ ಪುದ್ದರ್ ಎಲೆಯು ಬಲು ಉತ್ತಮ ಆಗಿದೆ. ಎಲ್ಲೆಡೆ ಬೆಳೆಯುವ ಸಣ್ಣ ಸಣ್ಣ ಎಲೆಯ ಕೆಸುವಿಗೆ ತುಲು ಭಾಷೆಯಲ್ಲಿ ಕಾಟ್ ತೇವು,ಕಾಟ್ ಸೇವು ಎನ್ನುತ್ತಾರೆ.ಇದರ ಎಲೆಗಳನ್ನು ಹಚ್ಚಿ ಅಕ್ಕಿ ಹಿಟ್ಟಿನಲ್ಲಿ ಬೆರೆಸಿ ತಯಾರಿಸುವ ಪತ್ರಡೆಯ ರುಚಿ ಬೊಂಬಾಟ್ ಆಗಿರುತ್ತದೆ.ಕಾಟ್ ಕೆಸು ಎಲೆಯನ್ನು ರೋಲ್ ಮಾಡಿ ಮಡಚಿ ಗಂಟು ತರಹ ಮಾಡಿ ತಯಾರಿಸುವ ಪದಾರ್ಥಗಳನ್ನು “ತೇಟ್ಲದ ಕಜಿಪು” ಎನ್ನುತ್ತಾರೆ. ಕೆಸುವನ್ನು ಸೇವಿಸಲು ಕೆಸುವಿಗೆ ಹೆಸರು ಕಾಳು, ಸೌತೆ ಕಾಯಿ,ಹಲಸಿನ ಬೀಜ,ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೊಳೆ,ಅಂಬಟೆ ಕಾಯಿ ಇತ್ಯಾದಿಗಳನ್ನು ಬೆರೆಸಿ ಉಷ್ಣತೆಯನ್ನು ನಂದಿಸಿ ಕೊಳ್ಳುವುದು ತುಲುನಾಡಲ್ಲಿ ಸಾಮಾನ್ಯ ಆಗಿದೆ.ಮಳೆಗಾಲದಲ್ಲಿ ಅದರಲ್ಲೂ ಆಟಿ ತಿಂಗಳಲ್ಲಿ ಕೆಸುವಿನ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸಲು ಪೂರ್ವಜರು ತಿಳಿಸಿದ್ದಾರೆ.