September 20, 2024

         20-4-2011 , ಸಂಜೆ 5.00 ಗಂಟೆ , ನ್ಯೂಯಾಕ್೯ ಜೆ.ಎಫ್.ಕೆನಡಿ ವಿಮಾನ ನಿಲ್ದಾಣದಲ್ಲಿನ ರನ್ ವೇಯಲ್ಲಿ ನಮ್ಮ ವಿಮಾನ ಭೂ ಸ್ಪರ್ಶ ಮಾಡಿದಾಗ ನಮ್ಮೆಲ್ಲರ ಮುಖದಲ್ಲಿ ನಿರಾಳತೆ ಕಂಡುಬಂದಿತು .ಅಲ್ಲಿಯ ತನಕ ಹತ್ತಿರ ಹತ್ತಿರ 22 ಗಂಟೆ[ದುಬೈ ನಿಲ್ದಾಣದಲ್ಲಿ ಕಳೆದ ಎರಡೂವರೆ ಗಂಟೆಯನ್ನೂ ಸೇರಿಸಿಕೊಂಡು ] ಆಕಾಶದಲ್ಲಿ ಹಾರಾಡಿ ಸುಸ್ತು ಹೊಡೆದು ಸಾಕಪ್ಪ ಈ ವಿಮಾನಯಾನ ಎಂದೆನಿಸಿತು. ವಿಮಾನದಿಂದ ಕೆಳಗಿಳಿದು ಆ ಭವ್ಯ ,ವಿಶಾಲ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ವಿಮಾನ ನಿಲ್ದಾಣದ ಪ್ರತಿಯೊಂದು ವಿಷಯವನ್ನು ಬೆರಗುಗಣ್ಣಿನಿಂದ ನೋಡುತ್ತಾ, ಬ್ಯಾಗೇಜ್ ಬೆಲ್ಟ್ ನಿಂದ ನಮ್ಮ ನಮ್ಮ ಲಗೇಜುಗಳನ್ನು ಎಳೆದುಕೊಂಡು ನಾವು ನಿಲ್ದಾಣದ ಹೊರಗೆ ಬರುವಾಗ ನೇಸರನು ತನ್ನ ಹಗಲಿನ ಡ್ಯೂಟಿಯನ್ನು ಇನ್ನೂ ಮುಗಿಸಿರಲಿಲ್ಲ.
         ನಾವು ಏಳುಮಂದಿ ಅಂದರೆ ನಾನು, ನನ್ನ ಧರ್ಮ ಪತ್ನಿ ಪ್ರೇಮ, ಮಗಳು ಸೋಹಿನಿ, ಅವಳ ಇಬ್ಬರು ಮಕ್ಕಳು ತಿಷಾ ಹಾಗೂ ಶ್ರೀಯಾ , ಮುಂಬಯಿಯ ರಾಜಣ್ಣ ಹಾಗೂ ಅವರ ಧಮ೯ಪತ್ನಿ ಸುಮ, ತಂಡದ ಇತರ ಸದಸ್ಯರೊಂದಿಗೆ ನಮಗಾಗಿ ಕಾದು ನಿಂತಿರುವ ಬಸ್ಸನ್ನೇರಿ ನಮ್ಮ ಹೋಟೆಲಿಗೆ ಬಂದಿಳಿದುಕೊಂಡಾಗ “ಉಸ್ಸಪ್ಪ” ಎಂದೆನಿಸಿತು. ನಾವು ಇಳಿದುಕೊಂಡಿದ್ದು Manhotton at time square ಅನ್ನೋ ಹೆಸರಿನ ಐಶಾರಾಮಿ ಹೋಟೆಲ್ ಒಂದರಲ್ಲಿ . ನ್ಯೂಯಾರ್ಕ್ ನ ಹೃದಯ ಭಾಗದಲ್ಲಿ ಅತ್ಯಂತ ಜನನಿಬಿಡ ಸ್ಥಳದಲ್ಲಿ ಇರುವ ಈ ಹೋಟೆಲ್ ಒಳಹೊಕ್ಕಾಗ ನಮಗೇನೋ ಇಂದ್ರ ನಗರಿಗೆ ಬಂದ ಹಾಗಾಗಿತ್ತು. ಹೋಟೆಲ್‌ಗೆ ಬಂದವರೆ ಆಯಾಯ ಕೊಠಡಿಗಳಲ್ಲಿ ಚೆಕ್‌ ಇನ್ ಆದ ಬಳಿಕ ಸ್ವಲ್ಪ ವಿಶ್ರಾಂತಿ ಪಡೆದೆವು. ಅಷ್ಟರಲ್ಲಿ ನಮ್ಮ ಮಗ ಕೇದಾರ ಬೆಂಗಳೂರಿನಿಂದಲೇ ಕೊಟ್ಟ ಆಮೇರಿಕಾದ ಸಂಯುಕ್ತ ರಾಷ್ಟ್ರದಲ್ಲಿ ಚಾಲನೆಯಲ್ಲಿರುವಂತ ಸಿಮ್ ನ್ನು ನಮ್ಮ ಸೆಲ್ ಪೋನಿಗೆ ಅಳವಡಿಸಿಕೊಂಡೆವು. ಇನ್ನೇನು ಹೊರಗೆ ಕಾಲಿಡಬೆಕೆನ್ನುವಷ್ಟರಲ್ಲಿ ಸೆಲ್ ಪೋನ್ ರಿಂಗಣಿಸಿತು.ನಮ್ಮ ಅಣ್ಣನ ಮಗ ಪ್ರಶಾಂತ್ ಹಾಗೂ ಅಕ್ಕ ನ ಮಗಳು ವಿನಯ ತಮ್ಮ ಪರಿವಾರದೊಂದಿಗೆ ಆಗಮಿಸುತ್ತಿರುವ ಸೂಚನೆಯನ್ನು ಕೊಟ್ಟಿತು.
          ಉಭಯಕುಶಲೋಪರಿ ಆದ ಬಳಿಕ ನಮ್ಮ ಆತಿಥೇಯರ ಮಾರ್ಗದರ್ಶನದಲ್ಲಿ ನ್ಯೂಯಾರ್ಕ್ ನ ಮುಖ್ಯ ಬೀದಿಯಲ್ಲಿ ನಡೆದುಕೊಂಡು ರಾತ್ರಿಯ ಹೊತ್ತಿನಲ್ಲಿ ಜಗಮಗಿಸುವ ವಿದುನ್ಮಾನ ಫಲಕಗಳನ್ನು ನೋಡುತ್ತಾ ಒಂದು ಒಳ್ಳೆಯ ಹೋಟೆಲಿಗೆ ಬಂದೆವು. ಅಮೇರಿಕಾ ಖಂಡದಲ್ಲಿ ಪಿಜ್ಜಾ ದ ಸವಿ ಹೇಗಿರುತ್ತದೆ ಎನ್ನುವ ಅನುಭವ ಆಗ ನನಗೆ ಮೊದಲ ಬಾರಿಗೆ ಆಯಿತು. ನಮ್ಮ ಊಟ ಮುಗಿಸಿಕೊಂಡು ನಾವು ಉಳಿದುಕೊಂಡಿರುವ ಹೋಟೆಲಿಗೆ ಹಿಂತಿರುಗುವ ಹೊತ್ತಿಗೆ ರಾತ್ರಿ 9.00 ಹೊಡೆದಿತ್ತು. ಆತಿಥೇಯರನ್ನು ಆತ್ಮೀಯವಾಗಿ ಬಿಳ್ಳೂಂಡ ಬಳಿಕ ರಾತ್ರಿ ಹೊತ್ತು ನ್ಯೂಯಾಕ್೯ ಹೇಗೆ ಅನಾವರಣಗೊಳ್ಳುತ್ತದೆ ಎಂದು ನೋಡಿ ಬರಲು ನಾನು, ರಾಜಣ್ಣ ಇಬ್ಬರು ನಗರದ ಅತಿ ಮುಖ್ಯವಾದ ತಾಣ ಟೈಮ್ ಸ್ಕ್ವೇರ್ ಗೆ ನಡೆದುಕೊಂಡೇ ಹೋಗಿ ಮೈ ನವಿರೇಳಿಸುಸುವಂತಹ ವಿವಿಧ ರೀತಿಯ ಜಾಹೀರಾತಿನ ಸೊಬಗನ್ನು ನೊಡಿಕೊಂಡು ಬಂದೆವು.
ನ್ಯೂಯಾಕ್೯ ನಗರಕ್ಕೆ ಬಂದ ಪ್ರವಾಸಿಗರು ತಪ್ಪದೆ ವೀಕ್ಷಿಸುವಂತಹ ಹಲವು ಸ್ಥಾವರಗಳಲ್ಲಿ ಒಂದು ಲಿಬರ್ಟಿ ದ್ವೀಪ ಹಾಗೂ ಸ್ಟಾಚ್ಯೂ ಆಫ್ ಲಿಬರ್ಟಿ ಮತ್ತು ಎರಡನೇಯದು ಎಂಪೈರ್ ಸ್ಟೇಟ್ ಬಿಲ್ಡಿಂಗ್ [ಮೂರನೇಯದು ವರ್ಲ್ಡ್ ಟ್ರೇಡ್ ಸೆಂಟರ್ – ಆದರೆ 11-9-2001 ರಂದು ಆಲ್ ಕಾಯ್ದಾ ಉಗ್ರರ ಸಂಚಿಗೆ ಎರಡೂ ಟವರ್ ಗಳು ಭಸ್ಮವಾದ ಬಳಿಕ ಈ ಮೂರನೇ ಕೌತುಕದ ಸ್ಥಾವರದ ತಾಣ ಮಾತ್ರ ನೋಡಲು ಸಿಗುತ್ತದೆ ]ಇದು ಜಗತ್ತಿನೊಳಗೆ ಪ್ರಖ್ಯಾತವಾದವುಗಳಾದುದರಿಂದ ಇವುಗಳನ್ನು ನೋಡದೇನೇ ಇರುವಂತಹ ಪ್ರವಾಸಿಗರು ಅಪರೂಪ ಎಂದರೆ ತಪ್ಪೇನಿಲ್ಲ. ಹಾಗಾಗಿ ಮರುದಿನ ಅಂದರೆ 30-4-2011 ರಂದು ಬೆಳಗ್ಗೆ ನಮ್ಮ ಉಪಹಾರ ಮುಗಿಸಿದವರೇ ನಾವೆಲ್ಲರೂ ” ಸ್ವಾತಂತ್ರ್ಯ” ಎಂಬ ಹೆಸರನ್ನು ಹೊತ್ತ ಆ ಪುಟ್ಟ ದ್ವೀಪವನ್ನು ನೋಡಲು ಅಣಿಯಾದೆವು.
          ಈ ಲಿಬರ್ಟಿ ದ್ವೀಪಕ್ಕೆ ಹೋಗುವುದೆಂದರೆ ಸಾಮಾನ್ಯ ಮಾತಾಗಿರಲಿಲ್ಲ. ಪ್ರತಿಯೊಬ್ಬ ಪ್ರವಾಸಿಯೂ ಹೇಗೆ ಒಬ್ಬ ವಿಮಾನಯಾನಿಯನ್ನು ವಿಮಾನನಿಲ್ದಾಣದಲ್ಲಿ ಕಟುವಾದ ಭದ್ರತಾ ತಪಾಸಣೆಗೆ ಒಳಪಡಿಸುತ್ತಾರೋ ಹಾಗೆಯೇ ಇಲ್ಲಿ ಭದ್ರತಾ ತಪಾಸಣೆಗೆ ಒಳಪಡಿಸುತ್ತಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬನೂ ಪಾಸ್‌ಪೋರ್ಟ್‌‌‌‌ನ್ನು ಕೈಯಲ್ಲಿ ಹಿಡಿದುಕೊಂಡೇ ತನ್ನ ಗುರುತನ್ನು ಸಾಬೀತು ಪಡಿಸಿಕೊಂಡು ಮುಂದುವರಿಯಬೇಕು. ತಪಾಸಣೆ ಆದ ಬಳಿಕ ಅದೇ ಹಡಗನ್ನು ಏರಬೇಕು. ಒಮ್ಮೆ ಈ ಹಡಗು ಚಲಿಸಲು ಹತ್ತಿದರೆ ಪ್ರವಾಸಿಗರು ನಿರಾಳವಾಗಿ ಅತ್ತಿತ್ತ ಅಡ್ಡಾಡಿ ಪ್ರವಾಸದ ಆನಂದವನ್ನು ಅನುಭವಿಸಬಹುದು. ಸ್ಟ್ಯಾಚ್ಯೂ ಆಫ್ ಲಿಬರ್ಟಿಯನ್ನು ದೂರದಿಂದ ಹಾಗೂ ಹತ್ತಿರ ಬಂದಂತೆ ಚಿತ್ರಗಳನ್ನು ಕ್ಲಿಕ್ಕಿಸುವವರು ಬಹಳ . ನಮ್ಮ ಈ ಪುಟ್ಟ ಹಡಗಿನಿಂದಲೇ ನಾವು ಸ್ವಾತಂತ್ರ್ಯ ದೇವಿಯ ಬೃಹತ್‌ ವಿಗ್ರಹದ ಪೋಟೋಗಳನ್ನು ಸಾಕಷ್ಟು ಸಲ ಕ್ಲಿಕ್ಕಿಸಿದೆವು. ದ್ವೀಪ ಮುಟ್ಟಿದ ಹಡಗಿನಿಂದ ಇಳಿದೊಡನೇ ನಾವು ಸಣ್ಣ ಮಕ್ಕಳ ಹಾಗೆ ಉತ್ಸಾಹ ಹಾಗೂ ಆಸಕ್ತಿ ಯಿಂದ ಜಿಗಿದು ಓಡಿ ಹೋಗಿ ವೀಕ್ಷಿಸಲು ಆರಂಬಿಸಿದೆವು. ಈ ದ್ವೀಪದಲ್ಲಿ ಆ ಒಂದು ಪುತ್ಥಳಿ ಯನ್ನು ಬಿಟ್ಟರೆ ಒಂದು ಸಣ್ಣ ವಸ್ತು ಸಂಗ್ರಹಾಲಯವಿದೆ. ಇವೆರಡನ್ನೂ ಹೊರತುಪಡಿಸಿ ಆ ದ್ವೀಪದಲ್ಲಿರುವುದು ಬರೀ ಊಟ ತಿಂಡಿ ಗಳಿಗೆ ಅವಕಾಶ ಹಾಗೂ ಅನುಕೂಲತೆಗಳು. ಇದರಲ್ಲಿ ವಿಶೇಷವಾದ ವಿಷಯವೆಂದರೆ ಆ ದ್ವೀಪದಲ್ಲಿ ಉಳಿದುಕೊಳ್ಳಲು ಅನುಮತಿ ಇಲ್ಲ . ಅವಕಾಶವೂ ಇಲ್ಲ . ಹಾಗಾಗಿ ಅಲ್ಲಿಗೆ ಹೋದ ಪ್ರತಿಯೊಬ್ಬ ಪ್ರವಾಸಿಯೂ ಮತ್ತೆ ನ್ಯೂಯಾಕ್೯ ನಗರಕ್ಕೆ ದಿನದ ಅಂತ್ಯದಲ್ಲಿ ಹಿಂದಿರುಗಲೇಬೇಕು. ಈ ಪುತ್ಥಳಿಯ ಕೆಲವು ವೈಶಿಷ್ಟ್ಯತೆಗಳನ್ನು ತಿಳಿದುಕೊಳ್ಳುವುದು ಈ ಸಂದರ್ಭದಲ್ಲಿ ಯೋಗ್ಯವೆನಿಸಿತು. ಅಮೇರಿಕಾದ ಸಂಯುಕ್ತ ರಾಜ್ಯಗಳು ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡಿರುವುದು 1776 ರಲ್ಲಿ . 1876 ರಲ್ಲಿ ಈ ರಾಷ್ಟ್ರದ ಸ್ವಾತಂತ್ರ್ಯಕ್ಕೆ ನೂರು ವರ್ಷ ಸಂದಾಗ ಮೊದಲ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿತು. ಈ ಸಂದರ್ಭದಲ್ಲಿ ಫ್ರೆಂಚರು ತಮ್ಮ ನೂರು ವಷ೯ಗಳ ಹಿಂದಿನ ವಸಾಹತಿನ ನಿವಾಸಿಗಳಾಗಿದ ಅಮೇರಿಕನ್ನರಿಗೆ ಒಂದು ಔದಾರ್ಯದ ಕೊಡುಗೆಯಾಗಿ ಈ ಪುತ್ಥಳಿಯನ್ನು 1876 ರಿಂದ 1886ರ ಅವಧಿಯ ಹತ್ತು ವರ್ಷಗಳಲ್ಲಿ ನಿರ್ಮಿಸಿ , ಅ೦ದರೆ 28-11-2011 ಕ್ಕೆ ಸರಿಯಾಗಿ 125 ವರ್ಷಗಳ ಹಿಂದೆ ಇದನ್ನು ಅಮೇರಿಕನ್ನರಿಗೆ ಸಮಪಿ೯ಸಿದರು. ಈ 125 ವಷ೯ಗಳ ಅವಧಿಯಲ್ಲಿ ಪುತ್ಥಳಿ ಒಂದು ಸ್ವಲ್ಪವೂ ಕೆಡದೇ, ವಿಕಾರಗೊಳ್ಳದೇ ವಿಕೃತಿಗಳಿಗೆ ಬಲಿಯಾಗದೇ ತನ್ನ ಮೂಲ ಸ್ವರೂಪ ದಲ್ಲೇ ವಿರಾಜಮಾನವಾಗಿದೆ. ಈ ಒಂದು ವೈಶಿಷ್ಟ್ಯಕ್ಕೆ ಕಾರಣವಿಲ್ಲದಿಲ್ಲ. ಇಡೀ ಪುತ್ಥಳಿಯನ್ನು ಉಕ್ಕಿನಿಂದ ಅಥವಾ ಇನ್ನಿತರ ಲೋಹದಿಂದ ನಿರ್ಮಿಸಿಲ್ಲ.. ಪುತ್ಥಳಿ ಯ ಅಸ್ಥಿಪಂಜರವನ್ನು ಉಕ್ಕಿನಿಂದ ನಿರ್ಮಿಸಿ ಅದಕ್ಕೆ ತಾಮ್ರದ ದಪ್ಪ ತಗಡಿನ ಹೊರ ಹೊದಿಕೆಯನ್ನು ಹಾಕಿದ್ದಾರೆ. ಹಾಗಾಗಿ ಒಳಗಿನ ಉಕ್ಕಿನ ಅಸ್ಥಿಪಂಜರಕ್ಕೂ ತುಕ್ಕು ಹಿಡಿಯದ ರೀತಿಯಲ್ಲಿ ಅದನ್ನು ಪ್ಯಾಕ್ ಮಾಡಿದ್ದಾರೆ . ಇದರ ಹೊರಮೈಯನ್ನು ತಾಮ್ರದ ತಗಡಿನಿಂದ ಮುಚ್ಚಿರುವುದರಿಂದ ಇಂದಿಗೂ ಅದೇ ಕಳೆ ಹಾಗೂ ಹೊಳಪನ್ನು ಈ ಮೂತಿ೯ ಹೊಂದಿದೆ.ಇದರ ಒಳಗಿನ ಅಸ್ಥಿಪಂಜರವನ್ನು ವಿನ್ಯಾಸಗೊಳಿಸಿರುವುದು ಫ್ರಾನ್ಸ್‌‌ ನ ಆಗಿನ ಪ್ರಖ್ಯಾತ ಬ್ರಿಡ್ಜ್ ಇಂಜಿನೇಟ್ ಎ.ಜೆ.ಎಫೆಲ್ ಎಂಬಾತ. ಈತನೇ ಮುಂದೆ ಪ್ಯಾರಿಸ್ ನ ವಿಶ್ವವಿಖ್ಯಾತ ಎಫೆಲ್ ಗೋಪುರವನ್ನು ನಿರ್ಮಿಸಿದ. ಈ ಬೃಹತ್ ಮೂತಿ೯ಯ ಎತ್ತರ 150 ಅಡಿಗಳು [ಅಂದರೆ ಅಂದಾಜು 15 ಮಹಡಿಗಳ ಕಟ್ಟಡದ ಎತ್ತರ ದಷ್ಟು ] ಈ ಮೂರ್ತಿಯನ್ನು ಸ್ಥಾಪನೆ ಮಾಡಲಾದ ಆಸ್ತಿವಾರ ಅಥವಾ pedestal 155 ಅಡಿಗಳಷ್ಟು ಎತ್ತರವಿದ್ದು ,ನೆಲದಿಂದ ಇಡೀ ಸ್ಥ‍ಾವರದ ಎತ್ತರ ಬರೋಬ್ಬರಿ 305 ಅಡಿಗಳು ಆಗಿದೆ. ಈ ಪುತ್ಥಳಿಯ ಅಸ್ಥಿ ರಚನೆಗೆ 1,13,398 ಕೆ.ಜಿ [113ಟನ್]ಉಕ್ಕು ಖರ್ಚಾದರೆ ಹೊರಗಿನ ತಾಮ್ರದ ಹೊದಿಕೆಗೆ 28,123 ಕೆ.ಜಿ [28ಟನ್] ತಾಮ್ರ ಖರ್ಚಾಗಿದೆ. ಈ ಮೂರ್ತಿ ಬಲಗೈಯಲ್ಲಿ ಸ್ವಾತಂತ್ರ್ಯ ದೀವಿಗೆ[Torch of liberty]ಎಡಗೈ ಯಲ್ಲಿ ಅಮೇರಿಕಾದ ಸ್ವಾತಂತ್ರ್ಯ ಘೋಷಣೆ ಇರುವ ಫಲಕವನ್ನು ಹಿಡಿದುಕೊಂಡಿರುವುದು ಕಾಣಿಸುತ್ತದೆ. ನಾವು ಹಾಗೂ ನಮ್ಮೊಡನಿದ್ದ ಅಸಂಖ್ಯಾತ ಪ್ರವಾಸಿಗರು ಬೇರೆ ಬೇರೆ ಕೋನಗಳಿಂದ ,ಬೇರೆ ಬೇರೆ ತಾಣಗಳಿಂದ ಆಕೆಯ [ಸ್ವಾತಂತ್ರ್ಯ ದೇವಿಯ] ಭಾವ ಭಂಗಿಗಳನ್ನು ನಮ್ಮ ನಮ್ಮ ಕ್ಯಾಮರಾಗಳ ಮೂಲಕ ಸೆರೆ ಹಿಡಿದೆವು. ಕೆಲವೊಬ್ಬರು ವಿಡಿಯೋ ಚಿತ್ರೀಕರಣದಲ್ಲಿ ಮಗ್ನರಾದರು. ಹಾಗೂ ಹೀಗೂ ಹಲವು ತಾಸುಗಳಷ್ಟು ಸಮಯವನ್ನು ಆಸಕ್ತಿಯುತವಾಗಿ ಕಳೆದು, ವೀಕ್ಷಿಸಿ ನಾವು ಮುಖ್ಯ ಭೂಮಿಗೆ ಬರುವ ಹೊತ್ತಿಗೆ ಸಂಜೆಯಾಗಿತ್ತು. ಮನಸ್ಸು ಧನ್ಯ ಧನ್ಯ ಅನ್ನುತ್ತಿತ್ತು.

✍🏻 ಬಿ ಆರ್ ಮರೋಳಿ

 

Leave a Reply

Your email address will not be published. Required fields are marked *