ದೀಪಾವಳಿಯನ್ನು ಹಿಂದೂ ಹಬ್ಬವಾಗಿ ಆಚರಿಸಲಾಗುತ್ತದೆ. ಕೆಲವೆಡೆ ನಾಲ್ಕು ದಿನಗಳ ಕಾಲ (ಮೊದಲ ದಿನ ನರಕ ಚತುರ್ದಶಿ, ಎರಡನೇ ದಿನ-ಲಕ್ಷ್ಮೀಪೂಜೆ, ಮೂರನೆಯ ದಿನ-ಕಾರ್ತಿಕ ಶುದ್ಧ ಪಾಡ್ಯ ಅಥವಾ ಬಲಿ ಪಾಡ್ಯಮಿ, ನಾಲ್ಕನೆಯ ದಿನ-ಯಮ ದ್ವಿತೀಯ) ಮತ್ತು ಕೆಲವೆಡೆ ಐದು ದಿನಗಳ ಕಾಲ ಆಚರಿಸಲಾಗುತ್ತದೆ. ದೀಪಗಳ ಹಬ್ಬವೆಂದೇ ಇದನ್ನು ಕರೆಯುತ್ತಾರೆ ಅದ್ದರಿಂದ ದೀಪವೇ ಇಲ್ಲಿ ಪ್ರಮುಖ ಆಕರ್ಷಣೆ.
ಹಿಂದೂ ಧರ್ಮದಲ್ಲಿ ದೀಪ ಒಂದು ಮಹತ್ವವುಳ್ಳ ವಿಷಯ ಯಾಕೆಂದರೆ ಅದು ಪವಿತ್ರತೆ, ಒಳ್ಳೆಯತನ ಮತ್ತು ಶಕ್ತಿಯ ಸಂಕೇತವಾಗಿದೆ. ಬೆಳಕಿದೆಯೆಂದರೆ ಕತ್ತಲೆ ಮತ್ತು ದುಷ್ಟ ಶಕ್ತಿಗಳ ಇರುವುದಿಲ್ಲ ಎನ್ನುವ ನಂಬಿಕೆ ಜನರಿಗೆ ಇದೆ. ಆದ್ದರಿಂದ ದುಷ್ಟಶಕ್ತಿಗಳನ್ನು ದುರ್ಬಲಗೊಳಿಸಲು ಮನೆಯ ಪ್ರತಿಯೊಂದು ಮೂಲೆಯಲ್ಲೂ ದೀಪಗಳನ್ನು ಬೆಳಗುತ್ತಾರೆ. ಅಲ್ಲದೆ ವ್ಯಕ್ತಿಯ ಅಂತರಿಕ ಆಧ್ಯಾತ್ಮಿಕ ಬೆಳಕು ಹೊರಗೂ ಸೂಚಿಸಬೇಕೆಂಬ ಸಂದೇಶವನ್ನು ಸಾರಲು ಪ್ರತಿ ಮನೆಯ ಬಾಗಿಲ ಹೊರಗೆ ದೀಪಗಳನ್ನು ಬೆಳಗುತ್ತಾರೆ.
ಹಿಂದೆ ನಮ್ಮ ಬಾಲ್ಯದಲ್ಲಿ ದೀಪಾವಳಿ ಅಂದರೆ ಹೊಸ ಉಡುಪು ಧರಿಸಿ,ತಂದೆ ತರುವ ಪಟಾಕಿ ಸಿಡಿಸಿ ಸಂಭ್ರಮಿಸುವುದಲ್ಲದೆ, ಹಬ್ಬ ಮುಗಿದಾಕ್ಷಣ ಅದರ ಗುಂಗಿನಲ್ಲಿ ಶಾಲೆಗೆ ಹೋಗುತ್ತಿದ್ದೆವು. ನಾವು ಸಿಡಿಸಿದ ಪಟಾಕಿಗಳ ವಿಷಯದಲ್ಲಿ ಸ್ನೇಹಿತರ ಹತ್ತಿರ ಸ್ವಲ್ಪ ಹೆಚ್ಚಾಗಿ ಬಣ್ಣಿಸಿ ಸಂತೋಷ ಪಡುವುದು ಇದು ಅಂದಿನ ಮಕ್ಕಳು ಸಾಮಾನ್ಯವಾಗಿ ನಡೆದುಕೊಳ್ಳುತ್ತಿದ್ದ ರೀತಿ.
ನನ್ನ ಬಾಲ್ಯವನ್ನು ಸಾಗರದ ಮಲೆನಾಡಿನಲ್ಲಿ ಕಳೆದನಾದ್ದರಿಂದ,ಅಲ್ಲಿ ರೈತಾಪಿ ವರ್ಗದ ಜನ ದೀಪಾವಳಿ ಹಬ್ಬವನ್ನು “ದೊಡ್ಡ ಹಬ್ಬ” ಎಂದು ಆಚರಣೆ ಮಾಡುವುದನ್ನು ಕಣ್ಣಾರೆ ಕಂಡ ನೆನಪು ಇಂದಿಗೂ ಇದೆ. ನಮ್ಮ ಕರಾವಳಿಗಿಂತ ಸ್ವಲ್ಪ ಭಿನ್ನವಾಗಿ ಮತ್ತು ಹೆಚ್ಚೇ ಸಂಭ್ರವಾಗಿ ಹಬ್ಬವನ್ನು ಆಚರಿಸುತ್ತಾರೆ ಎನ್ನಬಹುದು. ಇಲ್ಲಿ ಮನೆ ಬಾಗಿಲಿಗೆ ತೋರಣ ಕಟ್ಟಿದರೆ, ಅಲ್ಲಿ ಊರ ಹೆಬ್ಬಾಗಿಲಿಗೆ ತೋರಣ ಕಟ್ಟಿ ಹಬ್ಬದ ದಿನವನ್ನು ಆಚರಿಸುತ್ತಾರೆ. ಅಲ್ಲಿ ಪ್ರಮುಖವಾಗಿ ಸೆಳೆಯುವ ಸದಾ ನೆನಪಾಗಿ ಕಾಡುವುದು ಗೋಪೂಜೆ. ಗೋವುಗಳಿಗೆ ಬಣ್ಣವನ್ನು ಹಚ್ಚಿ, ಬಣ್ಣ ಬಣ್ಣದ ರಿಬ್ಬನ್ ಗಳನ್ನು ಅವುಗಳ ಕೊಂಬಿಗೆ ಕಟ್ಟುವುದು, ವಿಶೇಷವಾಗಿ ತಯಾರಿಸಿದ ತಿಂಡಿಗಳನ್ನು ,ಕೊಬ್ಬರಿ ಮತ್ತು ಹಾಯುವ ಎತ್ತುಗಳಿಗೆ ಹಣವನ್ನು ಸಹ ಕಟ್ಟಿ ಭಕ್ತಿ, ಪ್ರೀತಿಯಿಂದ ಪೂಜಿಸಿ ಹುಲ್ಲುಗಾವಲಿಗೆ ಬಿಟ್ಟುಬರುವುದು ತುಂಬಾ ಸಂತೋಷ ಕೊಡುವ ಮತ್ತು ಹಬ್ಬದ ವಿಶೇಷ.
ನಾವುಗಳು ರೈತರು ಪ್ರೀತಿಯಿಂದ ಶೃಂಗಾರ ಮಾಡಿದ ದನಕರುಗಳ ಕುತ್ತಿಗೆಯಲ್ಲಿ ಕಟ್ಟಿದ್ದ ಅಡಿಕೆ,ಹೂವು ಇವುಗಳನ್ನೆಲ್ಲ ಹರಿದು ಮನೆಗೆ ತರುವುದು ಸಂಭ್ರಮ ಪಡುತ್ತಿದ್ದ ಕ್ಷಣಗಳು ಅಂದಿನ ದಿನಗಳಲ್ಲಿ ಖುಷಿಯ ವಿಚಾರವಾದರೂ, ಅವುಗಳನ್ನು ಓಡಿಸಿ ,ರೈತರು ಪ್ರೀತಿಯಿಂದ ಮಾಡಿದ್ದ ಶೃಂಗಾರ ಹಾಳುಮಾಡುತ್ತಿದ್ದ ರೀತಿಗೆ ಇಂದು ಬೇಸರವೂ ಆಗುತ್ತದೆ, ಜೊತೆಗೆ ನಮ್ಮ ಪೆದ್ದುತನ ನಗು ತರಿಸುತ್ತದೆ. ಹಣವನ್ನು ಕಟ್ಟಿದ ಎತ್ತುಗಳನ್ನು ಮುಟ್ಟಬಾರದು ಅವು ಹಾಯುತ್ತವೆ ಅನ್ನುವ ವಿಶೇಷ ಬುದ್ದಿವಂತಿಕೆ ಇದ್ದದ್ದೆ ನಮ್ಮ ಹೆಚ್ಚುಗಾರಿಕೆ (ಹ್ಹ ಹ್ಹ) ಅನ್ನಬಹುದೇನೋ.
ಹೀಗೆ ಹಲವಾರು ನೆನಪುಗಳನ್ನು ತಂದು ಮುದನೀಡುವ, ಅಪರೂಪಕ್ಕೆ ಊರಿನಿಂದ ಬರುತ್ತಿದ್ದ ನೆಂಟರ ಜೊತೆ, ಸ್ನೇಹಿತರ ಜೊತೆಗೆ ಸಂಭ್ರಮಿಸಿದ ಕ್ಷಣಗಳು ಖುಷಿ ಕೊಡುವುದಂತು ಸತ್ಯ.
✍🏻 ವೆಂಕಟೇಶ ಭಂಡಾರಿ, ಕುಂದಾಪುರ