ಎಲ್ಲರಿಗೂ ಬಹಳ ಮುದಕೊಡುವ ದಿನಗಳೆಂದರೆ ಅದು ಬಾಲ್ಯದ ದಿನಗಳು. ಆ ಕಾಲ ಒಂದಿತ್ತು…ಬಾಲ್ಯ ತಾನಾಗಿತ್ತು ಎಂದು ಕವಿ ಕುವೆಂಪು ಅವರು ಇದಕ್ಕಾಗಿಯೇ ಹೇಳಿರಬೇಕು… ಬಾಲ್ಯದ ನೆನಪುಗಳೇ ಹಾಗೇ ಮೊಗೆದಷ್ಟು ಘಟನೆಗಳ ಸರಮಾಲೆಯೇ ಕಣ್ಣೆದುರು ಬಂದುಬಿಡುತ್ತೆ. ಅದರಲ್ಲೂ ಬಾಲ್ಯದಲ್ಲಿ ಕಂಡ ದೀಪಾವಳಿಯನ್ನು ಮರೆಯಲು ಸಾಧ್ಯವೇ ಇಲ್ಲ. ಹಲವು ಘಟನೆಗಳ ಪೈಕಿ ನನಗೆ ನೆನಪಿರೋದು ತೈಲಾಭ್ಯಂಜನ ಸ್ನಾನ.
50 ವರ್ಷಗಳ ಹಿಂದಿನ ಘಟನೆ. ನಾನು ಹುಟ್ಟಿದ್ದು ಬೆಳೆದದ್ದೆಲ್ಲ ಮಡಿಕೇರಿಯ ಸ್ಟೋನ್ ಹಿಲ್ ಎಂಬ ಊರಿನಲ್ಲಿ. ಮಡಿಕೇರಿ ಅಂದಾಕ್ಷಣ ಸುಂದರ, ರಮಣೀಯ ದೃಶ್ಯಗಳು ಹೇಗೆ ಕಣ್ಣಮುಂದೆ ಬರುತ್ತವೆಯೋ, ಅಲ್ಲಿನ ಹಿಮ ಕೊರೆಯುವ ಚಳಿಯನ್ನು ಅನುಭವಿಸದವರೇ ಬಲ್ಲರು. ಅಂತಹ ಊರಿನಲ್ಲಿ ಬಾಲ್ಯವನ್ನ ಕಳೆದವರು ನಾವು. ಒಟ್ಟು ನಾಲ್ಕು ಮಂದಿ ಮಕ್ಕಳು ನಾವು. ತೈಲಭ್ಯಂಜನ ಸ್ನಾನ ಅನ್ನೋದು ಎಲ್ಲರಿಗೂ ಖುಷಿ ಆದ್ರೆ, ನಮಗೆ ಮಾತ್ರ ಬೆಳಗ್ಗೆ ಏಳುವುದೇ ತಲೆಬಿಸಿ. ಅದಕ್ಕೆ ಕಾರಣವಿಲ್ಲದಿಲ್ಲ. ಮಡಿಕೇರಿಯಲ್ಲಿ ಚಳಿ ಆರಂಭವಾದರೆ ಮಧ್ಯಾಹ್ನ ಬಿಡಿ ಕೆಲವೊಮ್ಮೆ ಸಂಜೆ ಆದ್ರೂ ಬಿಡೋದಿಲ್ಲ. ಅಂತಹ ಮೈ ಕೊರೆಯುವ ಚಳಿಯಲ್ಲಿ ನಮ್ಮ ತಂದೆಯವರು ದೀಪಾವಳಿ ದಿನ ನಮ್ಮನ್ನು ಎಬ್ಬಿಸೋಕೆ ಹರಸಾಹಸ ಪಡ್ತಾ ಇದ್ರು. ಎಷ್ಟು ಎಬ್ಬಿಸಿದರೂ ಏಳದಾಗ ನಾವು ಹೊದ್ದುಕೊಂಡ ಕಂಬಳಿಯನ್ನು ಎಳೆದು ಒತ್ತಾಯದಿಂದ ಕರೆದುಕೊಂಡು ಹೋಗಿ ಎಣ್ಣೆ ಹಚ್ಚುತ್ತಿದ್ದರು. ಬಿಸಿನೀರಿನ ಸ್ನಾನವಾದರೂ ಅಂತಹ ಹಿಮ ಚಳಿಗೆ ಆ ಬಿಸಿ ಯಾವ ಲೆಕ್ಕಾ ಹೇಳಿ?
ಇವೆಲ್ಲ 5 ದಶಕಗಳ ಹಿಂದಿನ ಘಟನೆ. ಆದರೂ ಪ್ರತೀ ದೀಪಾವಳಿ ಬಂದಾಗಲೂ ನೆನಪಾಗುತ್ತವೆ, ನಗು ಕೂಡಾ ತರಿಸುತ್ತವೆ. ಈ ಬಾರಿ ಭಂಡಾರಿ ವಾರ್ತೆಯಿಂದಾಗಿ ಮತ್ತೊಮ್ಮೆ ಅದನ್ನು ನೆನಪಿಸಿಕೊಳ್ಳುವಂತಾಗಿದೆ.