November 24, 2024
depawali-11
        ನಾವು ಬಾಲಕರಾಗಿದ್ದಾಗ ಆಚರಿಸುತ್ತಿದ್ದ ಪರ್ಬ (ದೀಪಾವಳಿ ಹಬ್ಬ) ದ ಶೈಲಿ ಈಗ ನಶಿಸಿ ಹೋಗಿದೆ. ಆ ನೆನಪಿನ ಬುತ್ತಿಯನ್ನು ಬಿಚ್ಚಿದಾಗ ಪರ್ಬದ ನೆನಪು ಮರುಕಳಿಸುತ್ತದೆ. ಅಂತಹ ದಿನಗಳು ನೆನಪು ಮಾತ್ರ. ಈಗ ಅಂತಹ ಆಚರಣೆ ಎಲ್ಲೂ ಇಲ್ಲವಲ್ಲ ಎಂದು ಬೇಸರವಾಗುತ್ತದೆ. ನಾ ಕಂಡ ಅಂದಿನ ಪರ್ಬದ ತುಣುಕುಗಳು ಹೀಗಿವೆ. 
   ಪಟಾಕಿ: ನಮ್ಮ ತಂದೆಯವರು ಪಟಾಕಿ ತರಲು ಹೆಚ್ಚು ಹಣ ಕೊಡುತ್ತಿರಲಿಲ್ಲ. ಅದು ವ್ಯರ್ಥ ಎನ್ನುತ್ತಿದ್ದರು. ಹೆಚ್ಚು ಹಣ ಬೇಕಿದ್ದರೆ ಪೈರು ಕಟಾವು ಆದ ಹೊಲಗದ್ದೆಗಳಲ್ಲಿ “ಕೊರಲ್ ಪೆಜ್ಜಿಲೆ” (ಅಪ್ಪಿ ತಪ್ಪಿ ಉಳಿದ ಪೈರುತೆನೆ ಹೆಕ್ಕುವುದು) ಎನ್ನುತ್ತಿದ್ದರು. ಅಂದು ನಾವು ಎಲ್ಲಾ ಬೊಟ್ಟು ಬೈಲುಗಳಲ್ಲಿ ಭತ್ತ ಬೆಳೆಸುತ್ತಿದ್ದೆವು. ಮನೆಯಲ್ಲಿ ಐದು ಜೊತೆ ಕೋಣ, ಎತ್ತುಗಳು ಇದ್ದವು. ಇಲ್ಲಿ ಐದು ಜೊತೆ ಎಂದರೆ ತುಂಬಾ ಜಮೀನು ಇದ್ದವರು ಎಂದರ್ಥ. ನಾನು ಮತ್ತು ನನ್ನ ತಮ್ಮ ಇಬ್ಬರು ಸೇರಿ ಕಟಾವು ಆದ ಪೈರನ್ನು ಮನೆಗೆ ಸಾಗಿಸಿದ ನಂತರ ಹೊಲಗದ್ದೆಗಳಲ್ಲಿ ಕೊರಲ್ ಹುಡುಕಿ ಭತ್ತ ಸಂಗ್ರಹಿಸುತ್ತಿದ್ದೆವು. ಈ ಭತ್ತಕ್ಕೆ ಮನೆ ಕೊಟ್ಟಿಗೆಯಲ್ಲಿರುವ ಬೃಹತ್ ಭತ್ತದ ರಾಶಿಗಳಿಂದ ಕದ್ದು ಮುಚ್ಚಿ ಭತ್ತವನ್ನು ನಮ್ಮ “ಕೊರಲ್ ಪೆಜ್ಜಿನ” ರಾಶಿಗೆ ಸೇರಿಸುತ್ತಿದ್ದೆವು. ಈ ರೀತಿಯ ‘ಕೊರಲ್ ಪೆಜ್ಜಿದ್’ ಸಂಗ್ರಹವಾದ ಭತ್ತವನ್ನು ಮಾರಿ ಪಟಾಕಿ ತರುತ್ತಿದ್ದೆವು. ನಮ್ಮ ಘಟ್ಟದ ಅಣ್ಣ ಪರ್ಬಕ್ಕೆ ಬಂದರೆ ನಮಗೆ ಖುಷಿಯೋ ಖುಷಿ. ಅವರು ತುಂಬಾ ತುಂಬಾ ಪಟಾಕಿ ತರುತ್ತಿದ್ದರು. 
  ಗೂಡುದೀಪ: ಅಂದು ನಮ್ಮ ಮನೆಯ ಬೇಸಾಯದ ಕೆಲಸಕ್ಕೆ ಬರುತ್ತಿದ್ದ ನಾರಾಯಣ್ಣನವರು ಚೆಂದದ ಗೂಡುದೀಪ ಮಾಡುತ್ತಿದ್ದರು. ಪರ್ಬಕ್ಕೆ ಎರಡು ವಾರ ಇರುವಾಗಲೇ ಗೂಡುದೀಪದ ಕೆಲಸವನ್ನು ರಾತ್ರಿ ಎಲ್ಲಾ ಕುಳಿತು ಮಾಡುತ್ತಿದ್ದೆವು. ಮನೆಯಲ್ಲಿ ವಿದ್ಯುತ್ ದೀಪ ಇಲ್ಲದಿದ್ದರೂ ಎಣ್ಣೆ ದೀಪವನ್ನು ಉರಿಸುವ ಅಳವಡಿಕೆ ಆ ಗೂಡುದೀಪದಲ್ಲಿ ಇರುತ್ತಿತ್ತು. ಗೂಡು ದೀಪವನ್ನು ಮನೆಯ ಎದುರು ಇದ್ದ ದೊಡ್ಡ ಎತ್ತರದ ಅಡಿಕೆ ಮರಕ್ಕೆ ಕಟ್ಟುತ್ತಿದ್ದೆವು. ದಾರದ ಸಹಾಯದಿಂದ ಗೂಡುದೀಪವನ್ನು ಏರಿಸುವ ಮತ್ತು ಇಳಿಸುವ ಕೆಲಸವು ರಗಳೆ ಆಗುತ್ತಿತ್ತು. ಅದರಲ್ಲೂ ಮಳೆ ಬಂದರೆ ತಕ್ಷಣ ಪ್ರವೃತ್ತರಾಗಿ ಗೂಡುದೀಪವನ್ನು ಇಳಿಸುವ ಕಾರ್ಯವು ಬಹಳ ಕಠಿಣವಾಗುತ್ತಿತ್ತು. ಗೂಡುದೀಪಕ್ಕೆ ಸ್ವಲ್ಪ ಎಣ್ಣೆ ಹಾಕಿ ಎಂದು ತಂದೆ ಗದರಿಸುತ್ತಿದ್ದರೂ ನಾವು ದೊಡ್ಡ ಡಬ್ಬಿಯಿಂದ ಕೊಬ್ಬರಿ ಎಣ್ಣೆಯನ್ನೇ ಗೂಡುದೀಪಕ್ಕೆ ಉಪಯೋಗಿಸುತ್ತಿದ್ದೆವು. ಈ ಗೂಡುದೀಪವು ದೀಪಾವಳಿ ಅಮವಾಸ್ಯೆಯಿಂದ ಧರ್ಮಸ್ಥಳದ ದೀಪೋತ್ಸವದವರೆಗೆ ಒಂದು ತಿಂಗಳು ಉರಿಯುತ್ತಿತ್ತು. ಅಡಿಕೆ ಮರವನ್ನು ಹತ್ತಿ ಗೂಡುದೀಪವನ್ನು ಏರಿಸಲು ಮತ್ತು ಇಳಿಸಲು ಲಾಟೆ ಕಟ್ಟುವ ಕೆಲಸ ಸುಲಭ ಆಗಿರಲಿಲ್ಲ. ಬಹಳ ಶ್ರಮವಹಿಸಿ ಈ ಕೆಲಸವನ್ನು ನಿರ್ವಹಿಸುತ್ತಿದ್ದವರು ನಮ್ಮ ಬೇಸಾಯದ ಕೆಲಸಕ್ಕೆ ಬರುತ್ತಿದ್ದ ಕುಟ್ಯಣ್ಣನವರು. 
ಐದು ದಿನದ ಪರ್ಬ: ಪ್ರಥಮ ದಿನದಂದು ನಮ್ಮ ತಂದೆಯವರು ಪರ್ಬದ ಲೆಕ್ಕದಲ್ಲಿ ಬೇಸಾಯದ ಕೆಲಸಕ್ಕೆ ಬರುವವರಿಗೆಲ್ಲಾ ಅಕ್ಕಿ, ಕಾಯಿ, ತರಕಾರಿಗಳನ್ನು ಕೊಡುತ್ತಿದ್ದರು. ತಂದೆಯವರಿಗೆ ತಿಳಿಯದ ರೀತಿಯಲ್ಲಿ ತಾಯಿಯವರು ಅವರ ಲೆಕ್ಕದಲ್ಲೂ ಕೊಡುತ್ತಿದ್ದರು. ಮನೆ ಕೊಟ್ಟಿಗೆ, ಅಂಗಳ ಎಲ್ಲಾ ಸ್ವಚ್ಛಗೊಳಿಸಿ ಸಗಣಿ ಸಾರುವ ಕಾರ್ಯಕ್ರಮ. ಮನೆ ಎದುರು ಮಾವಿನ ಎಲೆಯ ತೋರಣ ಕಟ್ಟುವುದೂ ಇತ್ತು. ಅಂದು ಸಾಯಕಾಲ ಸ್ನಾನದ ಮಂಡೆಗೆ ಶೇಡಿ ಮಣ್ಣಿನ ಬಣ್ಣ ಬಳಿದು ಗೊಂಡೆ ಹೂವಿನ ಹಾರ ಹಾಕಿ ಅಲಂಕರಿಸುವುದು. ನಂತರ ಮನೆಯ ಮಹಿಳೆಯರು ಮತ್ತು ಅವರ ಹಿಂದೆ ಮಕ್ಕಳೆಲ್ಲ ಸೇರಿ ಬಾವಿಯಿಂದ ನೀರು ತಂದು ಮಂಡೆಗೆ ತುಂಬಿಸುವುದು. ನಮ್ಮ ತಾಯಿ ಯಜಮಾನಿಯಂತೆ ಎಲೆ ಅಡಿಕೆ ಜಗಿಯುತ್ತಾ ಚೆಂದವಾಗಿ ಕಾಣುತ್ತಿದ್ದರು. ಹುಡುಗರೆಲ್ಲ ‘ನೆಲಗುಮ್ಮ’ (ಆಗ ಇದ್ದ ಬೆಳ್ಳುಳ್ಳಿ ಗಾತ್ರದ ನೆಲಕ್ಕೆ ಹೊಡೆದು ಸಿಡಿಸುವ ಪಟಾಕಿ) ಹೊಡೆದು ದೀಪಾವಳಿ ಹಬ್ಬಕ್ಕೆ ಸ್ವಾಗತ ಕೋರುತ್ತಿದ್ದೆವು. 
ಎರಡನೆ ದಿನ ಬೆಳಗ್ಗೆ ನಸುಕಿನಲ್ಲೆ ಎದ್ದು ದೇಹಕ್ಕೆ ಪೂರ್ತಿ ಕೊಬ್ಬರಿ ಎಣ್ಣೆಯ ಅಭಿಷೇಕ ಮತ್ತು ಕಿವಿಗೆ ಎಣ್ಣೆ ತುಂಬಿಸುವ ಆನಂದದ ಕ್ಷಣಗಳು. ನಂತರ ಬಿಸಿನೀರಿನ ಸ್ನಾನ. ಬಿಸಿ ನೀರಿನ ಮಂಡೆಯೊಳಗೆ ಕೆಲವು ನಾಣ್ಯಗಳನ್ನು (ಒಂದು ಪೈಸೆಯಿಂದ ಹತ್ತು ಪೈಸೆಗಳು ಮಾತ್ರ) ಹಾಕುವ ಸಂಪ್ರದಾಯ ಇತ್ತು. ಕೊನೆಗೆ ಸ್ನಾನ ಮಾಡಿದವರಿಗೆ ಈ ನಾಣ್ಯಗಳು ಸಿಗಬೇಕೆಂಬ ಕ್ರಮವೂ ಇತ್ತು. ಈ ವಿಷಯದಲ್ಲಿ ನನಗೂ, ತಮ್ಮನಿಗೂ, ಅಕ್ಕನಿಗೂ ಜಗಳವಾಗುತ್ತಿತ್ತು. “ಕೊನೆಗೆ ನಾನು ಸ್ನಾನ ಮಾಡುತ್ತೇನೆ” ಎಂಬ ಹಠ ನಮ್ಮದಾಗಿತ್ತು. ತಾಯಿಯವರಿಗೆ ಕಿರಿಕಿರಿಯಾಗಿ ನಮ್ಮ ಸ್ನಾನದ ಮೊದಲೇ ಚಿಲ್ಲರೆ ಕಾಸುಗಳನ್ನು ತೆಗೆದು ನಮಗೆಲ್ಲ ಹಂಚುತ್ತಿದ್ದರು. ಎಲ್ಲರ ಸ್ನಾನ ಆದ ಬಳಿಕ ಉದ್ದಿನ ದೋಸೆ ಮತ್ತು ಪಂಜಕಜ್ಜಾಯ (ಅವಲಕ್ಕಿ, ಕಾಯಿ, ಬೆಲ್ಲ, ತುಪ್ಪ ಮತ್ತು ಎಳ್ಳು) ದ ರುಚಿ ಸಿಗುತ್ತಿತ್ತು. ಈ ದಿನ ಪ್ರಾರಂಭವಾದ ಉದ್ದು ದೋಸೆಯ “ಬಂದದ ಕರ”ವನ್ನು (ಹಿಟ್ಟಿನ ಮಣ್ಣಿನ ಮಡಕೆ) ತುಳಸಿ ಹಬ್ಬದವರೆಗೂ ತೊಳೆಯುವಂತೆ ಇಲ್ಲ. ದಿನಾಲು ಈ ಮಡಕೆಗೆ ಅಕ್ಕಿ ಮತ್ತು ಉದ್ದು ರುಬ್ಬಿ ಹಾಕುವ ಪದ್ಧತಿ ಇತ್ತು. ದಿನಾಲು ಬಿಸಿಬಿಸಿ ದೋಸೆ ತಿನ್ನುವ ಭಾಗ್ಯ ಇರುತ್ತಿತ್ತು. ಈ ಬಂದದ ಕರವನ್ನು ತುಳಸಿ ಹಬ್ಬದ ನಂತರ ತೊಳೆಯುವಾಗ ಬೇಸರವೂ ಆಗುತ್ತಿತ್ತು. ಏಕೆಂದರೆ ಇಂದಿನಂತೆ ಮನಸ್ಸಾದಾಗ ದೋಸೆ ತಿನ್ನುವ ಭಾಗ್ಯ ಅಂದು ಇರಲಿಲ್ಲ. ‘ನೀರ್ ಮೀಪಿ ಪರ್ಬಕ್ಕೂ’ ನೆಲಗುಮ್ಮ ಹೊಡೆಯುತ್ತಿದ್ದೆವು. 
ಮೂರನೆ ದಿನ ಅಮವಾಸ್ಯೆ. ಕೃಷಿಗೆ ಸಂಬಂಧಪಟ್ಟ ನೇಗಿಲು, ನೊಗ, ಹಲಗೆ, ಪಡಿಮಂಚ, ಒನಕೆ, ಕೊಟ್ರೆ, ಪಿಕ್ಕಾಸ್, ಕೊಕ್ಕೆ ಇತ್ಯಾದಿ ಸಲಕರಣೆಗಳನ್ನು ಸೆಗಣಿ ಸಾರಿಸಿ ಸ್ವಚ್ಛಗೊಳಿಸಿದ ಕೊಟ್ಟಿಗೆಯ ಚಾವಡಿಯಲ್ಲಿ ಚೆಂದವಾಗಿ ಜೋಡಿಸಿ ಅವುಗಳಿಗೆ ಚೆಂಡಲಿಗೆ (ಗೊಂಡೆ ಹೂವು) ಗಿಡಗಳಿಂದ ಅಲಂಕರಿಸಿ ಶೇಡಿ ಮಣ್ಣಿನ ನೀರಿನಿಂದ ಪ್ರೋಕ್ಷಣೆ ಮಾಡಿ ನಂತರ ಧೂಪ ತೋರಿಸುವುದು. ರಾತ್ರಿ ತಂದೆಯವರ ಯಜಮಾನಿಕೆಯಲ್ಲಿ ಬಲಿಯೇಂದ್ರನಿಗೆ ದೀಪ ಇಡುವ ಕಾರ್ಯಕ್ರಮ. ಅವರ ನಿಯಮ ಆದೇಶಗಳಿಗೆ ಅಡ್ಡಿ ಆದಾಗ ತಾಯಿಯವರಿಗೆ ಬಯ್ಗುಳಗಳ ಸುರಿಮಳೆ ಆಗುತ್ತಿತ್ತು. ಕೊನೆಗೆ ತಾಯಿಯವರ ಮಾತುಗಳಿಗೆ ಬೆಲೆ ಕೊಡುವ ಪ್ರಸಂಗಗಳೂ ನಡೆಯುತ್ತಿತ್ತು. ಪ್ರತಿ ಹೊಲಗದ್ದೆಗಳಿಗೆ ಬೈ ಹುಲ್ಲು ರಾಶಿಗಳಿಗೆ, ಗೊಬ್ಬರದ ರಾಶಿಗೆ ಭತ್ತದ ತುಪ್ಪೆ (ಕಣಜ)ಗೆ, ಕೃಷಿಯ ಸಲಕರಣೆಗಳ ಸಮೂಹಕ್ಕೆ ಕೋಲು ನಿನೆ (ಬಿದಿರು ಕೋಲಿಗೆ ಬಟ್ಟೆ ಸುತ್ತಿ ಎಣ್ಣೆಯಲ್ಲಿ ಅದ್ದಿ ಉರಿಸುವ ದೀಪ) ಇಡುವ ಪದ್ಧತಿ ಇತ್ತು. ಬಳಿಕ ಬಲಿಯೇಂದ್ರನ ಪಾಟ್ (ಹಾಡು) “ಓ ಬೊಲೇಂದ್ರ, ಓ ಬೊಲೇಂದ್ರ…ಮಂಜೊಲು ಪಕ್ಕಿ ಮೈ ದೆಪ್ಪುನಗ, ಕೊಟ್ರೆಂಜಿ ಪಕ್ಕಿ ಕೊಡಿಜಾನಗ, ಗುರ್ಗುಂಜಿದ ಕಲೆ ಮಾಜಿನಗ, ನೆಕ್ಕಿದಡಿಟ್ಟ್ ಆಟ ತುಂಬೆದಡಿಟ್ ಕೂಟ… ಆಟಿದ ಅಮಾಸೆಗ್, ಸೋನದ ಸಂಕ್ರಾಂತಿಗ್, ಬೊಂತೆಲ್ದ ಕೊಡಿ ಪರ್ಬೊಗು.. ಈ ಬಲ ಬೊಲೇಂದ್ರಾ ಕೂ…” ಎಂದಾಗ ಮನೆ ಮಂದಿ ಎಲ್ಲಾ ‘ಕೂ’ ಎಂದು ಕರೆಯಬೇಕಿತ್ತು. ಮಕ್ಕಳು ನಾವೆಲ್ಲ ಬೇರೆ ಮನೆಯವರಿಗೆ ಕೇಳುವಂತೆ ಕಿರುಚಿ ‘ಕೂ’ ಎನ್ನುತ್ತಿದ್ದೆವು. ನಮ್ಮ ಮನೆಯ ‘ಕೂ’ ಶಬ್ಧವು ಬೇರೆ ಮನೆಯವರಿಗಿಂತ ಜೋರಿತ್ತು ಎಂಬ ಗತ್ತು ನಮ್ಮಲ್ಲಿತ್ತು. ಇಲ್ಲೂ ಪಟಾಕಿಗಳ ಶಬ್ಧಗಳೊಂದಿಗೆ ಕೋಲುನಿನೆಯ ಬೆಳಕಿಗೆ ಕೇಕೆ ಹಾಕಿ ಹಾರುತ್ತಿದ್ದೆವು. 
ನಂತರ ರಾತ್ರಿ ಲಕ್ಷ್ಮೀ ಪೂಜೆ ನಡೆಯುತ್ತಿತ್ತು. ಅಮವಾಸ್ಯೆ ದಿನ ನಾವು ಚೆಂಡಲಿಗೆ (ಗೊಂಡೆಹೂವು) ಸಂಗ್ರಹಿಸುತ್ತಿದ್ದೆವು. ವಿವಿಧ ಬಣ್ಣದ ಬೇರೆ ಬೇರೆ ಜಾತಿಯ ಚೆಂಡಲಿಗೆ ನಮ್ಮ ಶುಂಠಿ, ಗೆಣಸು, ಮೆಣಸು ಹಿತ್ತಿಲಿನಲ್ಲಿ ಬೆಳೆಯುತ್ತಿತ್ತು. ಈ ಹೂವು ಅಲ್ಲದೆ ನಾವು ಇತರರ ಹಿತ್ತಿಲನ್ನು ಪ್ರವೇಶಿಸಿ ಕದ್ದು ಹೂವು ಶೇಖರಣೆ ಮಾಡುತ್ತಿದ್ದೆವು. ಇದರಲ್ಲೂ ಒಂದು ತರಹ ಮಜಾ ಖುಷಿ ಅಂದು ದೊರೆಯುತ್ತಿತ್ತು. ಹೂವಿನ ಮಾಲೆಗಳನ್ನು ಮಾಡಿ ತಯಾರು ಮಾಡುತ್ತಿದ್ದೆವು. ತಂದೆಯಂತು ಬಹಳ ಬ್ಯುಸಿಯಾಗಿ ಇರುತ್ತಿದ್ದರು. ಲಕ್ಷ್ಮೀ ಪೂಜೆಗೆಂದೆ ಉಪಯೋಗಿಸುತ್ತಿದ್ದ ಕೋಲುಗಳನ್ನು ಅಟ್ಟದಿಂದ ಕೆಳಗಿಳಿಸಿ ಅವುಗಳಿಗೆ ಮಾವಿನ ಸೊಪ್ಪು ಸುತ್ತಿ ಮಂಟಪ ಕಟ್ಟುತ್ತಿದ್ದರು. ಮಂಟಪದೊಳಗೆ ಕುರ್ಚಿ ಇಟ್ಟು ದೇವರುಗಳ ಪೋಟೋ ಇಟ್ಟು ಅಲಂಕರಿಸುತ್ತಿದ್ದರು. ತಪ್ಪದೆ ಅವರ ಬಳುವಳಿಯಿಂದ ಬಂದ ಕಂಚಿನ ಹಣದ ಪೆಟ್ಟಿಗೆಯನ್ನು ಫಳ ಫಳ ಮಿಂಚುವಂತೆ ಹುಳಿ ಉಪ್ಪುಗಳಿಂದ ತೊಳೆದು ದೇವರ ಮಂಟಪದೊಳಗೆ ಇಡುತ್ತಿದ್ದರು. ನಮಗೆಲ್ಲ ನಮ್ಮ ಸ್ಕೂಲು, ಪುಸ್ತಕಗಳನ್ನು ಮಂಟಪದ ಇನ್ನೊಂದೆಡೆ ಇಡಲು ಆದೇಶಿಸುತ್ತಿದ್ದರು. ನಮ್ಮ ಹರಿದ ಪುಸ್ತಕಗಳನ್ನು ಕಂಡು ಪಿಸಿರಿನಿಂದ ಬಯ್ದು ಅವರೇ ಖುದ್ದಾಗಿ ತಟ್ಟಿ (ಬೈಂಡ್) ಹಾಕುತ್ತಿದ್ದರು. ನಂತರ ಅವುಗಳನ್ನು ಮಂಟಪದ ಒಳಗೆ ಇಡುತ್ತಿದ್ದರು. 
ಅಂದು ಮನೆಯವರು ಅಲ್ಲದೆ ಅಕ್ಕಪಕ್ಕದ ಜನರು ನಮ್ಮ ಮನೆಯ ಲಕ್ಷ್ಮೀ ಪೂಜೆಗೆ ಬರುತ್ತಿದ್ದರು. ನಮ್ಮಂತಹ ಮಕ್ಕಳು ನಮ್ಮೊಡನೆ ಸೇರಿ ಅಂಗಳಸುತ್ತ ಕೋಲು ನಿನೆ ಇಟ್ಟು ಭಜನೆ ಮಾಡುತ್ತಿದ್ದೆವು. ನಲಿದು ಕುಪ್ಪಳಿಸುತ್ತಿದ್ದೆವು. ಪೂಜೆಯ ನಂತರ ಪಟಾಕಿ ಬರ್ಸದ ಕಾರ್ಯಕ್ರಮ ಇರುತ್ತಿತ್ತು. ತಾಯಿಯವರು ಪಟಾಕಿ  ಸುಡುವಾಗ ಜಾಗ್ರತೆ ಜಾಗ್ರತೆ ಎನ್ನುತ್ತಿದ್ದರು. ಕೊನೆಗೆ ದೊಡ್ಡ ಕಡಾಯಿಯಲ್ಲಿ ತಯಾರಿಸಿಟ್ಟ ಪಂಜಾಕಜ್ಜಾಯದ ಹಂಚುವಿಕೆ. ಬಳಿಕ ಎನೆಲು ಬೆಳೆಯಲ್ಲಿ ಬೆಳೆಸಿದ ಹೊಸ ಬೆಳ್ತಿಗೆ ಅಕ್ಕಿಯ ಕಪ್ಪರುಟ್ಟಿ ಮತ್ತು ಮೀನಿನ ಗಶಿ ರೆಡಿ ಆಗುತ್ತಿತ್ತು. ಪರ್ಬದ ಮೊದಲು ಹೊಸ ಅಕ್ಕಿಯ ಕಪ್ಪರುಟ್ಟಿ ಮಾಡುವಂತಿರಲಿಲ್ಲ ಊಟದ ನಂತರ ನಾವೆಲ್ಲ ನೆರೆಹೊರೆಯವರ ಮನೆಯಲ್ಲಿ ಜರಗುವ ಲಕ್ಷ್ಮೀ ಪೂಜೆಗೆ ಹೋಗುತ್ತಿದ್ದೆವು, ಮುಗಿಸಿ ಬರುವಾಗ ರಾತ್ರಿ ಮೂರುಗಂಟೆ ಆಗುತ್ತಿತ್ತು. 
ನಾಲ್ಕನೇ ದಿನದ ಹಬ್ಬದಂದು ಮನೆ ಮಂದಿ ಎಲ್ಲರೂ ಬ್ಯುಸಿ ಆಗಿ ಇರುತ್ತಿದ್ದರು. ಅಂದು ಬಲಿಪಾಡ್ಯ, ಗೋವು ಪೂಜೆ, ಧಾನ್ಯಲಕ್ಷ್ಮೀ ಪೂಜೆ, ತುಡಾರ್ (ದೀಪ) ತೋರಿಸುವುದು, ಬೂತೊಲುಗಳಿಗೆ ತಂಬಿಲ, ಕುಲೆಕ್ಲೆಗ್ ಬಡಿಸುವುದು, ಬಗೆಬಗೆಯ ಅಕ್ಕಿ ತಿಂಡಿಗಳ ತಯಾರಿ ಇತ್ಯಾದಿ. ತಂದೆ ತಾಯಿಯವರು ತಮ್ಮ ಪರ್ಬದ ಕೆಲಸಗಳಲ್ಲಿ ಮಗ್ನರಾಗುತ್ತಿದ್ದರು. ಅತ್ತಿಗೆಯವರು ಅತ್ತೆಯವರ ಆದೇಶವನ್ನು ಚಾಚು ತಪ್ಪದೇ ಪಾಲಿಸಬೇಕಿತ್ತು. 
ವಿಸ್ತಾರವಾದ ಹಟ್ಟಿ ತುಂಬಾ ತುಂಬಿ ತುಳುಕುತ್ತಿದ್ದ ಕೋಣ, ಎತ್ತು, ಹಸುಕರುಗಳನ್ನು ಹೊಳೆ ನೀರಿನಲ್ಲಿ ತೊಳೆದು ಸ್ನಾನ ಮಾಡಿಸುವ ಕಾರ್ಯಕ್ರಮದಿಂದ ಆರಂಭ ಆಗುತ್ತದೆ. ಈ ಕೆಲಸಕ್ಕೆ ಬೇಸಾಯದ ಕೆಲಸಕ್ಕೆ ಬರುತ್ತಿದ್ದವರು ಬರುತ್ತಿದ್ದರು. ಸ್ನಾನದ ನಂತರ ಗೊಂಡೆ ಹೂವಿನ ಮಾಲೆಗಳನ್ನು ಅವುಗಳ ಕೊರಳಿಗೆ ಕಟ್ಟಬೇಕು. ಅವುಗಳ ಹಣೆಗೆ ಕುಂಕುಮ ಇಟ್ಟು ಅವುಗಳನ್ನು ಮೇಯಲು ಬಿಡುವುದು. ಈ ದಿನ ಗೋವುಗಳಿಗೆ ಹೊಡೆಯಬಾರದೆಂದು ತಂದೆಯವರ ಕಟ್ಟಪ್ಪಣೆ ಆಗುತ್ತಿತ್ತು. 
ಈ ದಿನದ ಅಕ್ಕಿಯ ಅಡ್ಯೆ (ತಿನಿಸು) ಎಂದರೆ ಬೊಬ್ಬರ್ಯ ಗಟ್ಟಿ. ಇದು ಮನೆಯ ಸಾಕು ಪ್ರಾಣಿಗಳನ್ನು ರಕ್ಷಿಸುವ ದೈವ. ದೊಡ್ಡ ಕೊಡಿ ಬಾಳೆ ಎಲೆಯಲ್ಲಿ ಅಕ್ಕಿ ಹಿಟ್ಟು ಮತ್ತು ತೆಂಗಿನಕಾಯಿ ಮಿಶ್ರಣ ಮಾಡಿ ದೊಡ್ಡ ಕಡುಬು ಮಾಡುತ್ತಿದ್ದರು. ಮೂರು ಅಥವಾ ಐದು ಕಡುಬು ತಯಾರಿಸುವ ಕ್ರಮ. ಈ ಕಡುಬುಗಳನ್ನು ತುಂಡು ಮಾಡದೆ ಮೊರ (ತಡ್ಪೆ)ದಲ್ಲಿಟ್ಟು ಸಸ್ಯಾಹಾರಿ ಪದಾರ್ಥದ ಒಡನೆ ದನದ ಹಟ್ಟಿಯ ಹಿಂಭಾಗದಲ್ಲಿರುವ ಬೊಬ್ಬರ್ಯ ಕಲ್ಲಿನಲ್ಲಿಟ್ಟು ಧೂಪ ತೋರಿಸುವುದು. ಕೈ ಮುಗಿಯುವುದು. ಇನ್ನೊಂದು ದೈವ ನೀಚ ದೈವ (ಬಹುಶ ಕೊರಗಜ್ಜ). ಇವನು ಬೊಬ್ಬರ್ಯನ ಸೇವಕ. ಇವನಿಗೆ ಪೊಟ್ಟು ಗಟ್ಟಿ (ತೆಂಗಿನಕಾಯಿ ಹಾಕಬಾರದು) ಎಂದರೆ ಬಾಳೆ ಎಲೆಯ ಸೀಳು ಎಲೆಯಲ್ಲಿ ಮಡಚಿ ತಯಾರಿಸುವುದು. ಅವನಿಗೆ ಶೇಂದಿ ಮತ್ತು ವಿನಿನ ಗಶಿ ಅಗತ್ಯ. ಬೊಬ್ಬರ್ಯನಿಗೆ ಬಡಿಸಿಟ್ಟ ಅಡಿಗೆಯ ಪಕ್ಕ ಇವನಿಗೆ ಕೈಸೆಟ್ಟಿಯಲ್ಲಿ ಇಡುವುದು ಕ್ರಮ. ಬೊಬ್ಬರ್ಯ ನೀಚನಿಗೆ ಬಡಿಸುವ ಕ್ರಮಕ್ಕೆ “ಬೊಬ್ಬರ್ಯಗ್ ದೀಪುನು” ಎನ್ನುತ್ತಿದ್ದರು. ಈ ಸಂಪ್ರಾದಾಯ ಪ್ರತಿ ತಿಂಗಳ ಅಮವ್ಯಾಸೆಗೆ ಜರುಗುತ್ತಿತ್ತು. ಪೊಟ್ಟು ಗಟ್ಟಿಗಳನ್ನು ಹೊನ್ನೆ, ಹೆಬ್ಬಲಸು, ಗೋಳಿ ಮರದ ಎಲೆಗಳಿಂದಲೂ ತಯಾರಿಸುವ ಕ್ರಮ ಇತ್ತು.
ಎಲ್ಲಾ ಬೂತೋಲುಗಳ ಗುಡಿಗಳನ್ನು ಸ್ವಚ್ಛಗೊಳಿಸಿ ಗೊಂಡೆ ಹೂವುಗಳಿಂದ ಅಲಂಕಾರ ಮಾಡಿದ ನಂತರ ಮಧ್ಯಾಹ್ನ ಎಲ್ಲಾ ಬೂತೊಲುಗಳಿಗೆ ತಂಬಿಲ (ತಾಂಬೂಲ) ಪೂಜೆ ಆದ ನಂತರ ಪನಿಯಾರ ( ಲಘು ಆಹಾರ) ಹಾಕುವುದು. ಅಂದರೆ “ಬೂತೊಲೆಗ್ ಬಜಿಲ್ ಪಾಡುನಿ” ಕಾರ್ಯಕ್ರಮ. ಬಳಿಕ ಕುಲೆಕ್ಕುಲೆಗ್ (ಸತ್ತವರಿಗೆ) ಬಳಸುವುದು. ದೀಪಾವಳಿಗೆ ತಯಾರಿಸಿದ ಎಲ್ಲಾ ತಿಂಡಿ ತಿನಿಸುಗಳನ್ನು ಒಂಭತ್ತು ಎಲೆಗಳಲ್ಲಿ ಬಡಿಸಿ ಪ್ರಾರ್ಥಿಸುವುದು. ಅಂದು ದೀಪಾವಳಿಯಿಂದ ಹಿಡಿದು ತುಲಸಿ ಪೂಜೆಯವರೆಗೆ ಶಾಖಾಹಾರವೇ ಇರುತ್ತಿತ್ತು. ಪ್ರತೀ ಆಚರಣೆಗೆ ಪ್ರತ್ಯೇಕವಾದ ಪಂಚಕಜ್ಜಾಯವನ್ನು ತಯಾರಿಸಬೇಕಿತ್ತು. ಒಮ್ಮೆ ತಯಾರಿಸಿದ ಪಂಚಾಕಜ್ಜಾಯವನ್ನು ಎಲ್ಲಾ ಪೂಜೆ ಆಚರಣೆಗಳಿಗೆ ಉಪಯೋಗಿಸುವಂತಿರಲಿಲ್ಲ. ಕುಲೆಕ್ಕುಲೆಗ್ ಬಡಿಸಿದ ಎಲೆ ಮುಂದೆ ಕೂತು ಮಧ್ಯಾಹ್ನದ ಊಟ ಮುಗಿಯುತ್ತಿತ್ತು. ಈ ಕಾರ್ಯಕ್ರಮಗಳು ನಡೆಯುತ್ತಿರುವಾಗ ನಾವೆಲ್ಲ ನೆಲಗುಮ್ಮ ಬಿಡುತ್ತಿದ್ದೆವು.
ಬಲಿಪಾಡ್ಯದ ರಾತ್ರಿ ನಾವೆಲ್ಲ ಹೊಸ ಬಟ್ಟೆ ಹಾಕುವ ಕ್ರಮ ಇತ್ತು. ನಂತರ ಹೊಸ ಬಟ್ಟೆ ಯುಗಾದಿಗೆ ಇರುತ್ತಿತ್ತು. ಅಂದು ನಾವೆಲ್ಲ ಗೋವುಗಳನ್ನು ಹಟ್ಟಿಗೆ ಬೇಗನೆ ಕೂಡಿಸುತ್ತಿದ್ದೆವು. ಕತ್ತಲಾಯಿತೆಂದರೆ ಗೋವು ಪೂಜೆಯ ಸಡಗರ. ತಾಯಿ ಅಕ್ಕ ಅತ್ತಿಗೆಯವರೆಲ್ಲ ದನಗಳ ಕಾಲುಗಳನ್ನು ತೊಳೆದು ಅವುಗಳಿಗೆ ತಿಲಕ ಇಡುತ್ತಿದ್ದರು. ಧೂಪ ತೋರಿಸುತ್ತಿದ್ದರು. ತಂದೆಯವರು ತಡ್ಪೆಯಲ್ಲಿ ಭತ್ತ, ಎಲೆ‌ಅಡಿಕೆ, ಗೊಂಡೆ ಹೂವು ಇಟ್ಟು ಸುತ್ತಲೂ ಅಡಿಕೆ ಚಿಪ್ಪುಗಳಲ್ಲಿ ದೀಪ ಉರಿಸಿ ಅಲಂಕರಿಸುತ್ತಿದ್ದರು. ಇದಕ್ಕೆ ತುಡರ್ ಎನ್ನುತ್ತಿದ್ದರು. ತುಡಾರ್ (ದೀಪ)ನ್ನು ಪ್ರಥಮವಾಗಿ ಭತ್ತದ ತುಪ್ಪೆ ಅಥವಾ ಗಲಗೆ (ಖಣಜ)ಗೆ ತೋರಿಸಿ ಆರತಿ ಮಾಡುತ್ತಿದ್ದರು. ನಂತರ ತುಡಾರನ್ನು ಹಟ್ಟಿಗೆ ಒಯ್ದು “ತುಡಾರ್ ತೂಲೆ” (ದೀಪಾ ನೋಡಿ) ಎನ್ನುತ್ತಾ ಎಲ್ಲಾ ಹಸುಕರು ಎತ್ತು ಕೋಣಗಳಿಗೆ ತೋರಿಸುತ್ತಿದ್ದರು. ಎಲ್ಲರೂ ಸೇರಿ ಅವುಗಳಿಗೆ ಎರಡೆರಡು ಪೊಟ್ಟು ಗಟ್ಟಿ ತಿನ್ನಿಸುತ್ತಿದ್ದೆವು. ನಂತರ ಧಾನ್ಯ ಲಕ್ಷ್ಮೀ ಪೂಜೆ ಇರುತ್ತಿತ್ತು. ಹಿಂದಿನ ದಿನದಂತೆ ಭಜನೆ, ನಲಿಕೆ, ಬಜಿಲ್, ಪಟಾಕಿ ಮಾಮೂಲು ಆಗಿರುತ್ತಿತ್ತು. ಬಿಲಿಯೇಂದ್ರನಿಗೆ ಕರೆದು ಬೊಬ್ಬರ್ಯ ನೀಚನಿಗೆ ಅಗೆಲ್ ಹಾಕಿ ನಮ್ಮ ಭೋಜನ ಮುಗಿಸಿ ನೆರೆಹೊರೆಯವರ ಧಾನ್ಯಲಕ್ಷ್ಮೀ ಪೂಜೆಗೆ ಹೋಗುತ್ತಿದ್ದೆವು. ರಾತ್ರಿ ಅಲ್ಲೇ ನೆಲದಲ್ಲಿ ಮಲಗಿರುತ್ತಿದ್ದೆವು.
ಐದನೇ ದಿನವೂ “ನಟ್ಟ ಪಾಡ್ಯ” (ಬೇಡುವ ಪಾಡ್ಯ) ಎಂಬ ಆಚರಣೆ ಇತ್ತು. ಈದಿನ ಕೆಳ ಜಾತಿಯವರೆಂದು ಗುರುತಿಸಿ ಕೊಂಡುವರು ಮೇಲ್ಜಾತಿ ಎಂದು ಕರೆಸಿಕೊಂಡವರ ಮನೆ ಮನೆಗೆ ಅತಿಥಿಗಳಾಗಿ ಭೇಟಿ ಆಗುತ್ತಿದ್ದರು. ಅವರಿಂದ ದೋಸೆ, ಗಟ್ಟಿ, ತಿಂಡಿಗಳನ್ನು ಸಂಗ್ರಹಿಸಿ ಅವುಗಳನ್ನು ಒಣಗಿಸಿ ನಂತರದ ದಿನಗಳಲ್ಲಿ ಅಹಾರವಾಗಿ ತಿನ್ನುತ್ತಿದ್ದರು. ನಮ್ಮಲ್ಲಿ ಆದಿನ ಕಡ್ಡಿ ಸ್ಲೇಟ್ ಕೈಯಲ್ಲಿರುತ್ತಿತ್ತು. ಮನೆಗೆ ಎಷ್ಟು ಜನ ಬಂದಿದ್ದರೆಂದು ಬರೆದು ಕೊನೆಗೆ ಲೆಕ್ಕ ಹಾಕುತ್ತಿದ್ದೆವು. ನೂರಕ್ಕೂ ಮೇಲ್ಪಟ್ಟು ಅಂತಹ ಅತಿಥಿಗಳು ಬಂದಿರುವ ನೆನಪಿದೆ. ಆ ದಿನ ಕೃಷಿಕರ ಹಿರಿಯ ಮಂದಿ ಎಲ್ಲಾ ಒಟ್ಟಾಗಿ ಸೇರಿ ಶೇಂದಿ ಕುಡಿದು ಟೈಟಾಗಿ ವಿಶ್ರಾಂತಿ ತೆಗೆದುಕೊಳ್ಳತ್ತಿದ್ದರು. ಬಾಲಕರೆಲ್ಲ ಅವರ ಅಣ್ಣಂದಿರೆಲ್ಲ ಹೊಳೆಯ ಶುದ್ಧ ನೀರಲ್ಲಿ ಸ್ನಾನ ಮಾಡುತ್ತಿದ್ದೆವು. “ಪರ್ಬದ ನೀರ್, ವಿಂದ್” ಎನ್ನುತ್ತಾ ಈಜುತ್ತಾ ಕೇಕೆ ಹಾಡುತ್ತಾ ವಿಜೃಂಭಿಸುತ್ತಿದ್ದೆವು.
ಮಧ್ಯಾಹ್ನದ ನಂತರ ಉಳಿದ ಪಟಾಕಿ ಕಾಲಿ ಕಾಲಿ ಆಗಿರುತ್ತಿತ್ತು. ಹಿಂದಿನ ದಿನಗಳಲ್ಲಿ ಸಿಡಿಸಿದ ಪಟಾಕಿಗಳಲ್ಲಿ ಸಿಡಿಯದೆ ಉಳಿದಿದ್ದ ಪಟಾಕಿಗಳನ್ನು ಹುಡುಕಿ ಹುಡುಕಿ ರಾಶಿ ಹಾಕಿ ಸುಡುತ್ತಿದ್ದೆವು. ಅದೂ ಒಂದು ತರಹದ ಮನೋರಂಜನೆ ಆಗುತ್ತಿತ್ತು. ಐದನೇ ದಿನ ಪರ್ಬದ ರಾತ್ರಿ ಭಜನೆ ಇರುತ್ತಿತ್ತು. ಹೊರಗಿನವರು ಯಾರೂ ಇರುತ್ತಿರಲಿಲ್ಲ. ಮನೆಯವರು ಮಾತ್ರ. ಪರ್ಬ ಮುಗಿಯಿತು ಎಂಬ ಕೊರಗು ನಮ್ಮನ್ನು ಆವರಿಸುತ್ತಿತ್ತು. “ಪರ್ಬ ಒಂಜಿ ವರ್ಸ ಪಿರ ಪೋಂಡುಗೆ” ಎಂದು ಕೆಲವರು ತಮಾಷೆ ಮಾತನ್ನು ಆಡುತ್ತಿದ್ದರು. ಪರ್ಬದಿಂದ ತುಳಸಿ ಹಬ್ಬದವರೆಗೆ ಒಂದು ಮುಡಿ ಆಗುವಷ್ಟು ಅಕ್ಕಿ ರುಬ್ಬುವ ಕೆಲಸ ಇರುತ್ತಿತ್ತು. ದೊಡ್ಡವರು ಚಿಕ್ಕವರು ಎಂಬ ಭೇದ ಇಲ್ಲದೆ ಈ ಕೆಲಸ ನಡೆಯುತ್ತಿತ್ತು. 
ಇಂದು ಅಂದಿನ ಪರ್ಬದ ಗಮ್ಮತ್ತೆ ಇಲ್ಲ. ಈಗಿನ ಕೃಷಿಕರು ಸೋಮಾರಿಗಳಾಗಿ ಹೊಲಗದ್ದೆಗಳನ್ನು ಪಡೀಲ್ ಬಿಟ್ಟಿರುವರು. ಅಂದಿನ ಬೈಲು ಗದ್ದೆಗಳ ಪುಣಿ ಕಟ್ಟ ಪುಣಿಗಳು ಹೊಸ ಮಣ್ಣಿನ ಲೇಪನದಿಂದ ಕಂಗೊಳಿಸುತ್ತಿತ್ತು. ಅದೇ ಈಗ ಮುಳ್ಳು ಪೊದರುಳಿಂದ ಮುಚ್ಚಿ ಹೋಗಿದೆ. ಅಂದಿನ ಆಚರಣೆಗಳನ್ನು ಮುಂದವರಿಸುತ್ತಾ ಬರುತ್ತಿದ್ದರೆ ಈಗಿನ ಪೀಳಿಗೆಯವರೂ ನೋಡಿ ಕಲಿಯಬಹುದಿತ್ತು. ಒಟ್ಟಾರೆ ಈಗ ಅಂತಹ ಹಳ್ಳಿಯ ಪರ್ಬದ ಆಚರಣೆ ಸಂಭ್ರಮ ಇಲ್ಲವಲ್ಲ ಎಂಬ ನೋವು ಇದೆ.
✍ : ಇಗೋ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *