ನಾವು ಸಣ್ಣವರಿದ್ದಾಗ ಆಚರಿಸಿದ ದೀಪಾವಳಿಯ ನೆನಪು ಇನ್ನೂ ಹಸಿರಾಗಿದೆ. ದೀಪಾವಳಿಯ ಪ್ರಾರಂಭದ ದಿನ ಬೆಳಗ್ಗಿನ ಜಾವ ಮೂರು ಗಂಟೆಗೆ ಏಳಬೇಕಾಗಿತ್ತು. ನನಗೋ ಅಷ್ಟು ಬೇಗ ಏಳಲು ಈ ಸಿಹಿ ನಿದ್ರೆ ಬಿಡಬೇಕಲ್ಲ. ಎಷ್ಟು ಕರೆದರೂ ಏಳದಾಗ ಅಕ್ಕಂದಿರಿಬ್ಬರು ಎರಡು ಏಟು ಕೊಟ್ಟು ಎಬ್ಬಿಸುತ್ತಿದ್ದರು. ಆ ಮೇಲೆ ಬಿಸಿ ನೀರಿನ ಸ್ನಾನ ಮಾಡಿಸಿ ಬೆಳಗಿನ ಜಾವ ನಮ್ಮ ಗದ್ದೆ ಹಾಗೂ ತೋಟಕ್ಕೆ ಕೇದಗೆ ಅಂದ್ರೆ ಮುಳ್ಳಿನ ಬುಡ ಹಾಕಿ ಬರುವ ಕೆಲಸಕ್ಕೆ ಕಳಿಸುತ್ತಿದ್ದರು. ಅದು ಯಾರ ಮುಖವೂ ನೋಡದೇ ಈ ಕೆಲಸ ಮಾಡಬೇಕಿತ್ತು.
ಮಾರನೇ ದಿನವೂ ಹಾಗೇ, ಗೋಪೂಜೆ ಮಾಡುವ ಸಂಪ್ರದಾಯ ನಮ್ಮ ಮನೆಯಲ್ಲೂ ಇತ್ತು. ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ನನ್ನನ್ನು ಹಿಡಿದು ಬಾಚಣಿಗೆಯಿಂದ ಹೊಡೆದು ಎಳೆದುಕೊಂಡು ಬರುತ್ತಿದ್ದ ಅಕ್ಕಂದಿರು ಮೈಗೆ ಎಣ್ಣೆ ತಿಕ್ಕಿ ಸ್ನಾನ ಮಾಡಿಸಿ, ತದ ನಂತರ ಗೋ ಪೂಜೆ ಮಾಡಿಸುತ್ತಿದ್ದರು. ಅನಂತರ ಗದ್ದೆ ತೋಟ ಮನೆಗೆ ಪಂಜಿನ ದೀಪ ಹಚ್ಚುವ ಕೆಲಸ. ಹೀಗೆ ಪ್ರತಿಯೊಂದು ಆಚರಣೆಯನ್ನು ಸಂಪ್ರದಾಯಬದ್ಧವಾಗಿ ಆಚರಿಸುತ್ತಿದ್ದೆವು
ಬಾಲ್ಯದಲ್ಲಿ ಕಳೆದ ಒಂದೊಂದು ಘಟನೆಗಳು ಅವಿಸ್ಮರಣೀಯ. ಅದರಲ್ಲೂ ಹಬ್ಬದ ದಿನಗಳಂತೂ ಪ್ರತೀ ಬಾರಿ ನೆನಪಾಗುತ್ತವೆ. ನೆನೆದಾಗ ಈಗಲೂ ನಗು ತರಿಸುತ್ತವೆ.
ಮಹೇಂದ್ರ ಕುಮಾರ್ ಫಲ್ಗುಣಿ ..
ರಾಜ್ಯಾದ್ಯಕ್ಷರು
ಯುವ ಜಾಗೃತಿ ಮತದಾರರ ವೇದಿಕೆ.