September 20, 2024

      ಚೀನಾದಿಂದ ಆಮದಾದ ಗೂಡುದೀಪಗಳ ಹಾವಳಿಯಿಂದ ಮನೆಯಲ್ಲಿ ಗೂಡುದೀಪ ತಯಾರಿಸಿ, ದೀಪಾವಳಿ ಆಚರಿಸುವವರ ಸಂಖ್ಯೆ ಕ್ಷೀಣಿಸಿರುವುದನ್ನು ಗಮನಿಸಿ, ಈ ಬಾರಿಯ ದೀಪಾವಳಿಗೆ ಮನೆಯಲ್ಲಿ ಬಿದಿರು ಕಡ್ಡಿ,ಬಣ್ಣದ ಕಾಗದ,ಮಿಂಚು ಇವನ್ನೆಲ್ಲಾ ಉಪಯೋಗಿಸಿ ಗೂಡುದೀಪ ತಯಾರಿಸುವವರನ್ನು ಉತ್ತೇಜಿಸುವ ಉದ್ದೇಶದಿಂದ ​ಭಂಡಾರಿವಾರ್ತೆ ಮತ್ತು ಭಂಡಾರಿ ಯೂತ್ ವಾರಿಯರ್ಸ್​ ಪ್ರಾಯೋಜಕತ್ವದಲ್ಲಿ ​ಗೂಡುದೀಪ ಸ್ಪರ್ಧೆ​ ಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸುವವರು ನಮಗೆ ಫೋನ್ ಮಾಡಿ ತಿಳಿಸಿದರೆ ನಮ್ಮ ತಂಡ ಅವರ ಮನೆಗೆ ತೆರಳಿ, ಅವರ ಮನೆಯ ಗೂಡುದೀಪಗಳನ್ನು ಅವಲೋಕಿಸಿ, ನಂತರ ಆಕರ್ಷಕವಾದ ಗೂಡುದೀಪಗಳಿಗೆ ಪ್ರಶಸ್ತಿ ನೀಡುವುದೆಂದು ತೀರ್ಮಾನಿಸಲಾಯಿತು. ಆ ತಂಡದಲ್ಲಿ ನಾನು ಮನೋರಾಜ್ ರಾಜೀವ್, ಅವಿನಾಶ್ ಭಂಡಾರಿ, ಪ್ರದೀಪ್ ಭಂಡಾರಿ, ಕಿಶೋರ್ ಸೊರ್ನಾಡ್ ಮತ್ತು ಕೃಷ್ಣಾನಂದ ಭಂಡಾರಿ ಶಕ್ತಿನಗರ ಇದ್ದು, ಫೋನ್ ಮಾಡಿ ಮಾಹಿತಿ ನೀಡಿದವರ ಮನೆಮನೆಗೆ ತೆರಳಿ ಗೂಡುದೀಪಗಳನ್ನು ಪರೀಕ್ಷಿಸುವುದೆಂದು ತೀರ್ಮಾನಿಸಿದೆವು. ಅದರಂತೆ ನಾವು ಮೊದಲು ಹೊರಟಿದ್ದು ಸುರತ್ಕಲ್ ಕಡೆಗೆ.

     1.  ಸುರತ್ಕಲ್ ನ ಚೊಕ್ಕಬೆಟ್ಟು ​ಭಂಡಾರಿಹೌಸ್​ ತಲುಪಿದಾಗ ನಮಗೆ ತುಂಬಾ ಆತ್ಮೀಯವಾದ ಸ್ವಾಗತ ದೊರೆಯಿತು. ಅವರು ನೀಡಿದ ಆತಿಥ್ಯ ಸ್ವೀಕರಿಸಿ, ಅವರೇ ತಯಾರಿಸಿದ ಗೂಡುದೀಪ ಪರಿಶೀಲಿಸಿ, ಅದರ ಒಂದೆರಡು ಫೋಟೋ ಮತ್ತು ವಿವರ ದಾಖಲಿಸಿಕೊಂಡೆವು. ಅವರ ಮನೆಯ ಗೂಡುದೀಪ ಆಕರ್ಷಕವಾಗಿತ್ತು. ಅವರ ಮನೆಯ ಗೂಡುದೀಪಕ್ಕಿಂತ ನಮ್ಮನ್ನು ಹೆಚ್ಚು ಸೆಳೆದಿದ್ದು ಅವರ ಮನೆ ಮತ್ತು ಅವರ ಅವಿಭಾಜ್ಯ ಕುಟುಂಬ. ಆ ಮನೆಯಲ್ಲಿ ಅವರು ಸುಮಾರು 22 ಜನ ಒಟ್ಟಾಗಿ ವಾಸಿಸುತ್ತಿದ್ದಾರೆ. ಆ ಮನೆಯ ಹಿರಿಯ ಜೀವ ​ಅಪ್ಪಿಭಂಡಾರಿ​ ಮತ್ತು ಮಕ್ಕಳು, ಸೊಸೆಯಂದಿರು,ಅಳಿಯಂದಿರು, ಮೊಮ್ಮಕ್ಕಳು ಅವರ ಆತ್ಮೀಯತೆ, ಅನ್ಯೋನ್ಯತೆ, ಆ ನಗು, ಆ ವಾತಾವರಣ ಇವೆಲ್ಲಾ ನೋಡಿ ನಮಗೆಲ್ಲ ಹಬ್ಬದೂಟ ಮಾಡಿದಷ್ಟು ಖುಷಿಯಾಯ್ತು. ನಾವು ಅಲ್ಲಿದ್ದ ಅಲ್ಪ ಸಮಯದಲ್ಲಿ ನಾವೆಲ್ಲ ಒಂದೇ ಕುಟುಂಬದವರೇನೋ ಅನ್ನಿಸುವಷ್ಟು ಪ್ರೀತಿಯನ್ನು ನಮಗವರು ನೀಡಿದರು.ಅವರಿಗೆ ಸಿಹಿ ನೀಡಿ,ಹಬ್ಬದ ಶುಭಾಶಯ ಕೋರಿ ಅಲ್ಲಿಂದ ಹೊರಟಾಗ ಅವರ  ತೋಟದಲ್ಲಿ ಬೆಳೆದ ಹೀರೇಕಾಯಿಗಳನ್ನು ನಮಗೆ ನೀಡಿ ನಮ್ಮನ್ನವರು ಬೀಳ್ಕೊಟ್ಟರು. ಕೂಡುಕುಟುಂಬವಾಗಿ ಗೂಡುದೀಪದಂತಿರುವ ಆ ಮನೆಯಲ್ಲಿ ​ಅಪ್ಪಿಭಂಡಾರಿ​ ಯೆಂಬ ದೀಪ ಸದಾ ಬೆಳಗುತ್ತಿರಲಿ ಎಂದು ಹಾರೈಸುತ್ತ ಅಲ್ಲಿಂದ ನಾವು ಹೊರಟದ್ದು ಸೀದಾ ಉಪ್ಪಿನಂಗಡಿಗೆ.

[gdwpm-gallery id=”1786″]

ಸುರತ್ಕಲ್ ನ ಚೊಕಬೆಟ್ಟು ​ಭಂಡಾರಿಹೌಸ್ ನಲ್ಲಿನ ಸಂಭ್ಹ್ರಮ

     2.  ಉಪ್ಪಿನಂಗಡಿಯ ​ರಾಮಕುಂಜದ ಕೆದಿಲ​ದಲ್ಲಿ ವೃತ್ತಿಯಿಂದ ರಾಜ್ಯ ರಸ್ತೆ ಸಾರಿಗೆಯಲ್ಲಿ ನಿರ್ವಾಹಕರಾಗಿರುವ ಪ್ರಕಾಶ್ ಭಂಡಾರಿ ಮತ್ತು ವಿಶಾಲಾಕ್ಷಿ ದಂಪತಿಗಳ ಮನೆ ತಲುಪಿದಾಗ ನಮಗೆ ನಗುಮೊಗದ ಸ್ವಾಗತ ದೊರೆಯಿತು. ನಮಗವರು ನಿರೀಕ್ಷೆಗೂ ಮೀರಿದ ಆತಿಥ್ಯವನ್ನು ನೀಡಿದರು. ನಮ್ಮ ಗಮನ ಸೆಳೆದಿದ್ದು ಅವರ ಮನೆಯ ವಿಶೇಷವಾದ ಗೂಡುದೀಪ. ಅದು ತುಂಬಾ ಆಕರ್ಷಕವಾಗಿತ್ತು.ಅದರ ಬಗ್ಗೆ ಕೇಳಿದಾಗ ಅವರು ಅವರ ಮಗಳ ಕಡೆ ಕೈ ತೋರಿಸಿದರು. ಅಲ್ಲಿ ಅವರ ಮಗಳು ಪ್ರಗತಿ, ಸುಮಾರು ಹದಿನೆಂಟು ವರ್ಷ ಪ್ರಾಯ ಇರಬಹುದು. ಕುರ್ಚಿಯಲ್ಲಿ ಕುಳಿತಿದ್ದಾಳೆ.ಅವಳಿಗೆ ಎರಡು ಕಾಲೂ ಸ್ವಾಧೀನ ಇಲ್ಲ. ಬಾಲ್ಯದಿಂದ ಎಲ್ಲರಂತೆ ಇದ್ದವಳಿಗೆ ಎರಡು ಮೂರು ವರ್ಷದಿಂದೀಚೆಗೆ ಒಮ್ಮಿಂದೊಮ್ಮೆಗೆ ಹೀಗೆ ಆಗಿದೆಯೆಂಬ ವಿಷಯ ಕೇಳಿ ನಮಗೆಲ್ಲ ತುಂಬಾ ಸಂಕಟವಾಯಿತು. ಆದರೆ ಅವಳಲ್ಲಡಗಿರುವ ಕೌಶಲ್ಯಗಳನ್ನು ನೋಡಿದರೆ ಎಂಥವರೂ ತಲೆದೂಗಬೇಕು.ಹತ್ತನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿರುವ ಪ್ರಗತಿ ಚಿತ್ರಕಲೆಯಲ್ಲಿ ಸಿದ್ಧಹಸ್ತೆ. ಅವಳು ರಚಿಸಿರುವ ಚಿತ್ರಗಳು ನೈಜವಾಗಿ ಮೂಡಿಬಂದಿವೆ. ಪ್ರಾಣಿಪಕ್ಷಿಗಳ ಚಿತ್ರಗಳಂತೂ ಜೀವ ಪಡೆದಂತಿವೆ. ತೆಂಗಿನಕಾಯಿ ಚಿಪ್ಪಿನಲ್ಲಿ ಅವಳು ಮಾಡುವ ಕಲೆಯಂತೂ ಅದ್ಬುತ. ಉಲ್ಲನ್ ದಾರದಲ್ಲಿ,ಹಳೆಯ ಸೀರೆ ಬಟ್ಟೆಯಲ್ಲಿ ಅಪರೂಪದ ಕಲೆಯನ್ನು ಅರಳಿಸುವ ಛಾತಿ ಅವಳಿಗಿದೆ. ಕಳೆದ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ 98% ಅಂಕ ಪಡೆದಿರುವ ಇವಳ ತಂಗಿ ಪ್ರಕೃತಿ ಮತ್ತು 9 ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ವಿಖ್ಯಾತ್ ಮೂವರು ಸೇರಿ ತಯಾರಿಸಿದ ಗೂಡುದೀಪ ನಾವು ನೋಡಿದ ಎಲ್ಲಾ ಗೂಡುದೀಪಗಳನ್ನು ಮೀರಿಸುವಂತಿತ್ತು. ಅವರಿಗೆ ಸಿಹಿತಿನಿಸು ನೀಡಿ,ಹಬ್ಬದ ಶುಭಾಶಯ ಕೋರಿ, ಅವರ ಮನೆಯ ಗೂಡುದೀಪದ ಫೋಟೋ ಮತ್ತು ವಿವರ ದಾಖಲಿಸಿಕೊಂಡು ಹೊರಟಾಗ ಅವರ ಸುಂದರ ಸಂಸಾರಕ್ಕೆ ಅಂಗವಿಕಲತೆಯ ರೂಪದಲ್ಲಿ ಬಂದು ಬಡಿದಿರುವ ಸಿಡಿಲಾಘಾತವನ್ನು ನೆನೆದ ನಮ್ಮ ತಂಡದವರ ಕಣ್ಣಾಲಿಗಳು ತೇವವಾಗಿದ್ದು ಆ ಕತ್ತಲಿನಲ್ಲಿ ಯಾರೂ ಗಮನಿಸಲಿಲ್ಲ.

[gdwpm-gallery id=”1787″]

ಕೆದಿಲ​ದ ಪ್ರಕಾಶ್ ಭಂಡಾರಿ ಮತ್ತು ವಿಶಾಲಾಕ್ಷಿ ದಂಪತಿಗಳ ಮನೆಯಲ್ಲಿ

      ಅಲ್ಲಿಂದ ಹೊರಟ ನಮ್ಮ ತಲೆಯಲ್ಲಿ ಒಂದು ಆಲೋಚನೆ ಹುಟ್ಟಿತು. ಅಷ್ಟು ಪ್ರತಿಭಾವಂತೆಯಾದ ಪ್ರಗತಿ ಭಂಡಾರಿಯ ಆರೋಗ್ಯ ಸುಧಾರಿಸಬೇಕು,ಅವಳು ಎಲ್ಲರಂತೆ ಕಾಲೇಜಿಗೂ ಹೋಗಬೇಕು.ಈ ನಿಟ್ಟಿನಲ್ಲಿ ​ಭಂಡಾರಿವಾರ್ತೆ, ಭಂಡಾರಿ ಯೂತ್ ವಾರಿಯರ್ಸ್‌ ಮತ್ತು ಕಷ್ಟ ಕಾಲದಲ್ಲಿ ಕೈಜೋಡಿಸುವ ಒಂದಷ್ಟು ಭಂಡಾರಿ ಬಂಧುಗಳು​ ಎಲ್ಲಾ ಒಟ್ಟಾಗಿ ಆ ಮಗುವಿಗೆ ಸಹಾಯಹಸ್ತ ಚಾಚುವ ಪ್ರಯತ್ನವನ್ನು ಯಾಕೆ ಮಾಡಬಾರದು?ಸ್ವಲ್ಪ ಆಲೋಚಿಸೋಣ…..

     3.  ಉದ್ಯೋಗ ನಿಮಿತ್ತವಾಗಿ ದೂರದ ದುಬಾಯಿಯ ಕತಾರ್ ನಲ್ಲಿ ನೆಲೆಸಿರುವ ಮೂಲತಃ ಮಂಗಳೂರು ಅಳಪೆಯ ಮಾರಪ್ಪ ಭಂಡಾರಿ ಮತ್ತು ಕಲ್ಯಾಣಿ ಮಾರಪ್ಪ ಭಂಡಾರಿಯವರ ಮಗ  ​ಮೋಹನ್ ಭಂಡಾರಿ ಜಪ್ಪಿನಮೊಗರು​ ಇವರು ಸಹ ಗೂಡುದೀಪದ ಫೋಟೋ ಕಳಿಸುವುದರ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ದೂರದ ದೇಶದಲ್ಲಿದ್ದರೂ ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ಗೂಡುದೀಪವನ್ನು ಅವರೇ ತಯಾರಿಸಿ, ಹಬ್ಬವನ್ನು ಸಂಭ್ರಮಿಸಿದ ಪರಿ ನಮ್ಮನ್ನೆಲ್ಲಾ ಮುದಗೊಳಿಸಿತು. ​ಭಂಡಾರಿವಾರ್ತೆ​ ಯ ಖಾಯಂ ಓದುಗರಾದ ಅವರಿಗೆ ನಾವು ಹಬ್ಬದ ಶುಭಾಶಯ ಕೋರುತ್ತೇವೆ.

[gdwpm-gallery id=”1788″]

ಕತಾರ್ ನ ಮೋಹನ್ ಭಂಡಾರಿ ಜಪ್ಪಿನಮೊಗರು

ಭಂಡಾರಿ ಬಂಧುಗಳ ಹಬ್ಬದ ಸಂಭ್ರಮದೊಂದಿಗೆ ನಾವೂ ಜೊತೆಗೂಡಿ ಸಂಭ್ರಮಿಸಿದ ಈ ಬಾರಿಯ ದೀಪಾವಳಿಯನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ.ಇಂತಹ ಅದ್ಬುತ ಅನುಭವ ಮತ್ತು ಅನುಭಾವವನ್ನು ನನಗೆ ದೊರಕಿಸಿಕೊಟ್ಟ ​ಭಂಡಾರಿವಾರ್ತೆ​ ತಂಡಕ್ಕೆ ನಾನು ಚಿರರುಣಿ.

✍🏻: ಮನೋರಾಜ್ ರಾಜೀವ್
ಕಾನೂನು ಸಲಹೆಗಾರರು
ಭಂಡಾರಿವಾರ್ತೆ

ನಿರೂಪಣೆ….
ಭಾಸ್ಕರ್ ಭಂಡಾರಿ. ಸಿ.ಆರ್.​ ​ಶಿರಾಳಕೊಪ್ಪ

Leave a Reply

Your email address will not be published. Required fields are marked *