November 24, 2024
Untitd-1
         ಈ ಜಗದೊಳಗೆ ಮನುಷ್ಯನಾಗಲಿ ಅಥವಾ ಯಾವುದೇ ಜೀವಿಯಾಗಲಿ ಒಳ್ಳೆಯತನದಲ್ಲಿ ಜೀವಿಸಬೇಕು, ಆದರೆ ಅತಿಯಾದ ಒಳ್ಳೆಯತನ  ಅ ಜೀವಿಗೆ ನೆಮ್ಮದಿ ಸಂತೋಷ ದೊರಕುವುದಿಲ್ಲ. ಹಾಗೆಯೇ ಒಬ್ಬ ಮನುಷ್ಯ ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಅತಿ ಒಳ್ಳೆಯವನಾಗಿ ಬದುಕಿ ಜೀವನ  ಸಾಗಿಸಲು ಸಾಧ್ಯವಿಲ್ಲ. 
           ಒಂದು ಕಥೆಯೊಂದಿಗೆ ವಿವರಿಸಿ ಹೇಳೋದಾದ್ರೆ ಒಂದು ಊರಲ್ಲಿ ಒಂದು ಭಯಂಕರ ಸರ್ಪ ವಾಸವಾಗಿತ್ತು. ಆ ಸರ್ಪವನ್ನು ಕಂಡರೆ ಸಾಕು, ಇಡೀ ಊರು ಗಡಗಡ ನಡುಗುತ್ತಿತ್ತು. ಎಂತಹ ಕ್ರೂರವಾದ ಸರ್ಪ ಎಂದು ಜನರು ಶಪಿಸುತ್ತಿದ್ದರು. ಒಂದು ದಿನ ಹಾವಿನ ಹುತ್ತ ಇರುವ ದಾರಿಯಲ್ಲಿ ಋಷಿಯು ಬರುತ್ತಿದ್ದನು. ಜನರು ಹೇಳುವ ಮಾತುಗಳನ್ನು ಕೇಳಿದ್ದ ಋಷಿಯು ಸರ್ಪವನ್ನು ಕುರಿತು ” ನಿನ್ಯಾಕೆ ಒಳ್ಳೆಯವನಾಗಿ ಬಾಳಬಾರದೇ ?” ಎಂದು ಬುದ್ಧಿವಾದ ಹೇಳಿದರು. ಅಂದಿನಿಂದ ಸರ್ಪವು ಯಾರನ್ನು ಕಚ್ಚುತ್ತಿರಲಿಲ್ಲ. ಕೆಲವು ವರುಷಗಳ ನಂತರ ಋಷಿಯು ಪುನಃ ಅದೇ ದಾರಿಯಲ್ಲಿ ಬಂದನು. ಸರ್ಪವು ಅತ್ಯಂತ ಕೃಶವಾಗಿ, ನೋಡಲಾಗದಂತೆ ಇತ್ತು. ಋಷಿಗೆ ಆಶ್ಚರ್ಯವಾಯಿತು. ಸರ್ಪವು ಕೃಶವಾಗಲು ಕಾರಣವೆನೆಂದು ಪ್ರಶ್ನಿಸಿದರು. ಆಗ ಸರ್ಪವು ” ಋಷಿವರ್ಯ ನೀವು ಹೇಳಿದ ಹಾಗೆ ಒಳ್ಳೆಯವನಾಗಿ ಬದುಕಿದೆ ಆದರೆ ಜನ ಅದನ್ನೇ ದುರುಪಯೋಗ ಪಡಿಸಿಕೊಂಡು ನನಗೆ ಕಲ್ಲು ಹೊಡೆಯುತ್ತಿದ್ದಾರೆ.” ಆಗ ಋಷಿ ಸರ್ಪದ ಕುರಿತು ” ನಾನು ಒಳ್ಳೆಯವನಾಗಿ ಬದುಕು ಹೇಳಿದೆ ಆದರೆ ಅನ್ಯರಿಂದ ತೊಂದರೆ ಆದಾಗ ಪ್ರಾಣ ರಕ್ಷಣೆಗೊಸ್ಕರ ಬುಸ್ ಅನ್ನಬೇಡ ಅಂದಿಲ್ಲ.” ಇದರಿಂದ ಜ್ಞಾನೋದಯವಾದ ಸರ್ಪ ತನ್ನ ರಕ್ಷಣೆ ತಾನೇ ಮಾಡಲಾರಂಭಿಸಿತು. 
         ವೈಜ್ಞಾನಿಕವಾಗಿ ಹೇಳೋದಾದ್ರೆ ಅತಿ ಒಳ್ಳೆಯತನವನ್ನು ಜನರು ಬಲಹೀನತೆ ಎಂದು ಭಾವಿಸಬಾರದು ಹೀಗಾಗಿ ನಮ್ಮ ಸುದ್ದಿಗೆ ಯಾರಾದರೂ ಬಂದರೆ ಅವರನ್ನು ಹೆದರಿಸುವಂತೆ ನಾವು ಇರಬೇಕು. 
        ವೈಚಾರಿಕತೆ ಏನೆಂದರೆ ಬಲವಂತರನ್ನು ಕಂಡರೆ ಜನರು ಹೆದರುವರು, ಬಲಹೀನರನ್ನು ಕಂಡರೆ ಜನ ಆಟವಾಡಲು ಪ್ರಯತ್ನಿಸುತ್ತಾರೆ. ಮಾನವನ ಸಹಜ ಗುಣ ಇದೇ ಆಗಿರುವುದರಿಂದ ನಾವು ಸಂದರ್ಭಕ್ಕೆ ತಕ್ಕಂತೆ ವರ್ತಿಸಬೇಕು.
        ಅತಿಯಾದ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವ ಈ ಜಗದಲಿ ಬಲಹೀನರಾಗದೆ ಸಮಯಕ್ಕೆ ಅನುಗುಣವಾಗಿ ವರ್ತಿಸಬೇಕು.
✍🏻: ಎಸ್.ಕೆ.ಬಂಗಾಡಿ

Leave a Reply

Your email address will not be published. Required fields are marked *