ದಿ ಹಿಂದೂ ಪತ್ರಿಕೆ ಪ್ರಾಯೋಜಕತ್ವದಲ್ಲಿ ಮಂಗಳೂರಿನ ಕೆನರಾ ಕಾಲೇಜ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ “ಜಿಲ್ಲಾ ಮಟ್ಟದ ವಿಜ್ಞಾನ ಮೇಳ-2018” ರಲ್ಲಿ ನಮ್ಮ ಭಂಡಾರಿ ಕುಟುಂಬದ ಹೆಮ್ಮೆಯ ಪುತ್ರ ಕುಮಾರ್ ರಾಹುಲ್. ಹೆಚ್.ಪಿ. ಪ್ರಥಮ ಬಹುಮಾನ ಗಳಿಸಿರುತ್ತಾರೆ.
ಮೂಲ್ಕಿಯ ಕಿಲ್ಪಾಡಿಯಲ್ಲಿರುವ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ರಾಹುಲ್, ಸುರತ್ಕಲ್ ಮುಕ್ಕದಲ್ಲಿ ಬೇಕರಿ ವ್ಯವಹಾರ ಮಾಡಿಕೊಂಡಿರುವ ಶ್ರೀ ಪುರುಷೋತ್ತಮ ಭಂಡಾರಿ ಮತ್ತು ಶ್ರೀಮತಿ ಅನಿತಾ ಪುರುಷೋತ್ತಮ ಭಂಡಾರಿಯವರ ಸುಪುತ್ರ.
ಜಿಲ್ಲೆಯ ಬೇರೆ ಬೇರೆ ಶಾಲೆಯ ಸುಮಾರು ಐದು ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಕೂಡಿದ,ನೂರಾ ಹತ್ತು ತಂಡಗಳು ಭಾಗವಹಿಸಿದ್ದ ಈ ಮೇಳದಲ್ಲಿ ರಾಹುಲ್ ನಿರ್ಮಿಸಿದ ಸ್ಮಾರ್ಟ್ ಬೆಡ್ ತೀರ್ಪುಗಾರರ ಗಮನ ಸೆಳೆದು ಪ್ರಥಮ ಬಹುಮಾನ ಬಾಚಿಕೊಂಡಿತು.ಈ ಸ್ಮಾರ್ಟ್ ಬೆಡ್ ನ ವಿಶೇಷತೆಗಳೆಂದರೆ-
“ಇದು ಪ್ರಾಶ್ವವಾಯು ಪೀಡಿತರಿಗೆ,ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಮತ್ತು ಮಲಗಿದ್ದಲ್ಲಿಂದ ಎದ್ದು ಓಡಾಡಲಾರದವರಿಗೆ ಆನೆಬಲ ಒದಗಿಸುತ್ತದೆ.ಬ್ಯಾಟರಿ ಚಾಲಿತವಾಗಿರುವ ಬೆಡ್ ಅಸಹಾಯಕ, ಅಶಕ್ತ ರೋಗಿಗಳಿಗೆ ಬಾತ್ ರೂಮ್,ಟಾಯ್ಲೆಟ್ ರೂಮ್ ವರೆಗೆ ಕರೆದುಕೊಂಡು ಹೋಗಿ ವಾಪಾಸು ಕರೆತರುವ ಹಾಗೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ. ಇದು ರಿಮೋಟ್ ಕಂಟ್ರೋಲ್ ವ್ಯವಸ್ಥೆ ಹೊಂದಿರುವುದು ವಿಶೇಷ.”
ಈ ರೀತಿಯ ಕಲ್ಪನೆ ಇಡೀ ವಿಶ್ವದಲ್ಲಿಯೇ ಪ್ರಥಮ ಎನ್ನಬಹುದು.ತಾಂತ್ರಿಕವಾಗಿ ಮತ್ತು ಸಂಶೋಧನಾತ್ಮಕವಾಗಿ ಅತ್ಯಂತ ಕ್ರಿಯಾಶೀಲವಾಗಿರುವ ಈ ಆವಿಷ್ಕಾರ ಸಹಜವಾಗಿ ಪ್ರಥಮ ಬಹುಮಾನ ಗಳಿಸಿತು. ಪ್ರಶಸ್ತಿಪತ್ರ,ಪಾರಿತೋಷಕ, ಒಂದು ಬೈಸಿಕಲ್, ಐದು ಸಾವಿರ ರೂಪಾಯಿ ನಗದು, ಕೆಲವು ಪುಸ್ತಕಗಳು ಹಾಗೂ ಇನ್ನೂ ಅನೇಕ ಉಡುಗೊರೆಗಳು ಬಹುಮಾನ ರೂಪದಲ್ಲಿ ದೊರೆತಿವೆ.
ಹದಿನಾಲ್ಕರ ಹರೆಯದಲ್ಲಿಯೇ ಮುಂದಿನ ವಿಜ್ಞಾನಿಯಾಗುವ ಮುನ್ಸೂಚನೆ ನೀಡುವಂತಹ ಸಾಧನೆ ಮಾಡಿರುವ ರಾಹುಲ್ ನಮ್ಮ ಭಂಡಾರಿ ಕುಟುಂಬದ ಹೆಮ್ಮೆ.ಮುಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಿ ಹೆತ್ತವರಿಗೂ, ಊರಿಗೂ, ಓದಿದ ಶಾಲೆಗೂ ಜೊತೆಗೆ ನಮ್ಮ ಭಂಡಾರಿ ಕುಟುಂಬಕ್ಕೂ ಗೌರವ ತಂದುಕೊಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
Congratulations ….All the best to your future….