September 20, 2024
ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ದಿನಾಂಕ ಇನ್ನೇನು ಸಧ್ಯದಲ್ಲಿಯೇ ಪ್ರಕಟಗೊಳ್ಳಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವಭಾವಿ ತಯಾರಿಯಲ್ಲಿ ತೊಡಗಿಕೊಂಡಿವೆ. ಜಾತೀವಾರು, ಸಂಖ್ಯಾವಾರು ಲೆಕ್ಕಾಚಾರ ಹಾಕಿ, ತೆರೆಮರೆಯಲ್ಲಿ  ಕಸರತ್ತು ನಡೆಸಿ ತಮ್ಮ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ನಮ್ಮ ಭಂಡಾರಿ ಸಮಾಜದ ಮುಖಂಡರೊಬ್ಬರಿಗೆ  ಉಡುಪಿ ವಿಧಾನಸಭಾ ಕ್ಷೇತ್ರದಿಂದ ಜಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಯಾಗುವ ಯೋಗ ಒದಗಿ ಬಂದಿದೆ. ಅವರೇ ನಮ್ಮ ಭಂಡಾರಿ ಸಮಾಜದ ಮುಖಂಡರಾದ ನಮ್ಮೆಲ್ಲರ ನೆಚ್ಚಿನ ಶ್ರೀ ಬಿರ್ತಿ ಗಂಗಾಧರ ಭಂಡಾರಿಯವರು.
ಇತ್ತೀಚೆಗೆ ಉಡುಪಿ ಜಿಲ್ಲೆಯ ಜಾತ್ಯಾತೀತ ಜನತಾದಳದ ಜಿಲ್ಲಾ ಕಛೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಯೋಗೀಶ್.ವಿ.ಶೆಟ್ಟಿಯವರ ಉಪಸ್ಥಿತಿಯಲ್ಲಿ, ಉಡುಪಿ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳ ಪಕ್ಷದ ಅಧ್ಯಕ್ಷರಾದ ಶ್ರೀ ಅಬ್ದುಲ್ ಖಾದರ್ ಕುಂಜಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀ ಬಿರ್ತಿ ಗಂಗಾಧರ ಭಂಡಾರಿಯವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಶ್ರೀ ಬಿರ್ತಿ ಗಂಗಾಧರ ಭಂಡಾರಿ.
ಉಡುಪಿಯ ಬಿರ್ತಿ ಗ್ರಾಮದ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಜಲಜ ನಾರಾಯಣ ಭಂಡಾರಿ ದಂಪತಿಗಳ ಏಳು ಜನ ಮಕ್ಕಳಲ್ಲಿ ಐದನೆಯವರಾಗಿ ಜನಿಸಿದ ಶ್ರೀ ಗಂಗಾಧರ ಭಂಡಾರಿಯವರು ಮೊದಲಿನಿಂದಲೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡೇ ಬಂದವರು.  ಭಂಡಾರಿ ಕುಟುಂಬದ ಶಕ್ತಿಕೇಂದ್ರ ಕಚ್ಚೂರಿನ ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿ ಭಂಡಾರಿ ಬಂಧುಗಳ ಪ್ರೀತ್ಯಾಧರಗಳಿಗೆ ಪಾತ್ರರಾದರು. ಉಡುಪಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ , ಜೋನಲ್ ಛೇರ್ಮನ್ ಆಗಿ, ರೀಜನಲ್ ಛೇರ್ಮನ್ ಆಗಿ ಪ್ರಸ್ತುತ  LICF ನ ಕೋ-ಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಾ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶ್ರೀ ಗಂಗಾಧರ ಭಂಡಾರಿಯವರು ಉಡುಪಿ ಜಿಲ್ಲಾ ಜಾತ್ಯಾತೀತ ಜನತಾದಳ ಪಕ್ಷದ ಸಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತ ರಾಜಕೀಯವಾಗಿ ಗುರುತಿಸಿಕೊಂಡಿದ್ದರು. ಅವರಲ್ಲಡಗಿರುವ ನಾಯಕತ್ವದ ಗುಣ, ಬೆಂಬಲಿಗರ ಪಡೆ ಮತ್ತು ಅವರ ಸಾಮಾಜಿಕ ಕಳಕಳಿಯನ್ನು ಗಮನಿಸಿ ಪಕ್ಷ ಅವರಿಗೆ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.                                                                                                                            
ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಪಂಗಡದ ವ್ಯಕ್ತಿಯೊಬ್ಬರು ಪ್ರಾದೇಶಿಕ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಸಾಮಾನ್ಯ ಸಂಗತಿಯಲ್ಲ. ನಿಷ್ಕಲ್ಮಶ ವ್ಯಕ್ತಿತ್ವದ,ಜನಾನುರಾಗಿಯಾಗಿರುವ ಶ್ರೀ ಬಿರ್ತಿ ಗಂಗಾಧರ ಭಂಡಾರಿಯವರು ಆಯ್ಕೆಯಾಗಿರುವುದು ಸಮಸ್ತ ಭಂಡಾರಿ ಕುಟುಂಬಕ್ಕೆ ಸಂತಸ ಮತ್ತು ಹೆಮ್ಮೆಯನ್ನು ತಂದುಕೊಟ್ಟಿದೆ. ಈಗ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀಯುತರು ರಾಜಕೀಯದಲ್ಲಿ ಯಶಸ್ಸು ಗಳಿಸಲಿ, ಅವರಿಂದ ಭಂಡಾರಿ ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸಹಾಯ ಸಹಕಾರ ದೊರಕಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮನದುಂಬಿ ಹಾರೈಸುತ್ತದೆ.
ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ. 

Leave a Reply

Your email address will not be published. Required fields are marked *