November 24, 2024
reservation-in-india

ಇಂದಿಗೆ ಮೀಸಲಾತಿಯ ಅವಶ್ಯಕತೆ ಎಷ್ಟು ? ಇಂದಿನ ಭಾರತಕ್ಕೆ ಜಾತಿಯ ಅಥವಾ ಧರ್ಮದ ಆಧಾರದಮೇಲೆ ಮೀಸಲಾತಿಯನ್ನು ನೀಡುವ ಅಗತ್ಯ ನಿಜವಾಗಿಯೂ ಇದೆಯಾ ಎನ್ನುವುದನ್ನು ಇಂದಿನ ಪ್ರಜ್ಞಾವಂತ ಸಮಾಜ ಪ್ರಶ್ನಿಸಿಕೊಳ್ಳುವ ಅಗತ್ಯ ಖಂಡಿತವಾಗಿಯೂ ಇದೆ… ಒಂದುವೇಳೆ ಅದರ ಆವಶ್ಯಕತೆ ಇಲ್ಲ ಎಂದಾದಲ್ಲಿ ಅದನ್ನು ಸರ್ಕಾರದಲ್ಲಿ ಪ್ರಶ್ನಿಸಿ ಧಿಕ್ಕರಿಸಬೇಕಾದಂತಹ ಕಾರ್ಯ ಪ್ರತಿಯೊಬ್ಬ ಭಾರತೀಯನೂ ಮಾಡಲೇಬೇಕಾಗಿದೆ..

ಒಂದುಕಾಲವಿತ್ತು ಹಿಂದುಳಿದ ವರ್ಗಗಳು ಅಥವಾ ಪಂಥ ದವರು ಸಮಾಜದಲ್ಲಿ ಸಮಾನತೆಯನ್ನು ಕಾಣಲೇಬೇಕು ಎಂದಾದಲ್ಲಿ ಅಲ್ಲಿ ಮೀಸಲಾತಿ ಎನ್ನುವ ಬ್ರಹ್ಮಾಸ್ತ್ರ ಖಂಡಿತವಾಗಿಯೂ ಬೇಕಾಗಿಯೇ ಇತ್ತು. ಇಲ್ಲವಾದಲ್ಲಿ ವಿದ್ಯೆ ಮತ್ತು ಉನ್ನತ ಉದ್ಯೋಗವೆಂಬುದು ಕೆಲವೇ ವರ್ಗದವರ ಕಪಿಮುಷ್ಟಿಯಲ್ಲಿ ಇರುವ ಸಾಧ್ಯತೆ ಇತ್ತು. ಹಿಂದುಳಿದವರು ಮೇಲೇಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳು ಖಂಡಿತವಾಗಿಯೂ ಇತ್ತು. ಆದರೆ ಇಂದಿನ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ ಹಿಂದುಳಿದ ವರ್ಗದವರು ಇಂದು ಉನ್ನತ ವ್ಯಾಸಂಗವನ್ನು ಮಾಡಿದ್ದಾರೆ, ಉನ್ನತ ಹುದ್ದೆಯನ್ನೇರಿದ್ದಾರೆ ಮತ್ತು ಆರ್ಥಿಕವಾಗಿಯೂ ಸಬಲರಾಗಿದ್ದಾರೆ. ಆದರೆ ಅಂದಿಗೆ ಮುಂದುವರಿದ ವರ್ಗಗಳೆಂದು ಕರೆಯಲ್ಪಡುತ್ತಿದ್ದವರ ಚಿತ್ರಣ ಕೂಡ ಬದಲಾಗಿದೆ ಅವರಲ್ಲಿಯೂ ಆರ್ಥಿಕವಾಗಿ ಬೆಂದು ಬೇಯುತ್ತಿರುವ ಕುಟುಂಬಗಳಿವೆ. ವಿಪರ್ಯಾಸವೆಂದರೆ ಆರ್ಥಿಕವಾಗಿ ಸಬಲನಾಗಿರುವ ಹಿಂದುಳಿದ ವರ್ಗದವರೆಂದು ಕರೆಯಲ್ಪಡುವ ವ್ಯೆಕ್ತಿ ಇದೇ ಮೀಸಲಾತಿ ಕೋಟಾದ ಹಿಂದೆಬಿದ್ದು ವಿದ್ಯೆಯನ್ನು, ಉದ್ಯೋಗವನ್ನು ಮತ್ತು ಇತರೇ ಸರ್ಕಾರಿ ಸವಲತ್ತುಗಳನ್ನು ಸುಲಭವಾಗಿ ಪಡೆಯುತ್ತಾನೆ ಆದಕ್ಕೆ ಅರ್ಹನಲ್ಲದಿದ್ದರೂ. ಆದರೆ ಆರ್ಥಿಕವಾಗಿ ದುರ್ಬಲನಾದ ಮುಂದುವರಿದ ವರ್ಗದವನೆಂದು ಕರೆಯಲ್ಪಡುವ ವ್ಯಕ್ತಿ ಇತರೇ ಸರಕಾರಿ ಸವಲತ್ತುಗಳು ಹೋಗಲಿ ಹೇಗೋ ಸಾಲಮೂಲಗಳನ್ನುಮಾಡಿ ಉನ್ನತ ವ್ಯಾಸಂಗವನ್ನೂ ಮಾಡಿ ಅಧಿಕ ಅಂಕಗಳನ್ನು ಪಡೆದಿದ್ದರೂ ಮೀಸಲಾತಿಯೆಂಬ ಮಹಾಭೂತ ಈತನ ಆಸೆ ಆಕಾಂಕ್ಷೆಗಳನ್ನು ನುಚ್ಚುನೂರು ಮಾಡಿ ನುಂಗಿ ನೀರು ಕುಡಿದಿರುತ್ತದೆ. ಅರ್ಹತೆಯಿದ್ದೂ ಅವುಗಳಿಂದ ವಂಚನೆಗೊಳಗಾಗುತ್ತಾನೆ. ಇವೆಲ್ಲಾ ನೆಡೆಯುವುದು ಕೇವಲ ಒಂದೇ ಉದ್ದೇಶಕ್ಕಾಗಿ ರಾಜಕಾರಣಿಗಳು ತಮ್ಮ ಮತಗಳನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ಒಂದು ವರ್ಗವನ್ನು ಓಲೈಸಿಕೊಳ್ಳಲು ಮಾಡುವ ಷಡ್ಯಂತ್ರವಾಗಿದೆ. ಇಷ್ಟೆಲ್ಲಾ ಅರಿವಿದ್ದರೂ ಅದನ್ನು ಧಿಕ್ಕರಿಸಿ ಪ್ರಶ್ನಿಸುವ ಕಾರ್ಯವನ್ನು ನಮ್ಮ ಪ್ರಜ್ಞಾವಂತ ಸಮಾಜ ಮಾಡದೇ ಇರುವುದು ವಿಪರ್ಯಾಸವೇ ಸರಿ.

ಮೀಸಲಾತಿ ಬೇಕೊಬೇಡವೋ ಎಂಬಪ್ರಶ್ನೆಯಲ್ಲ ಆದು ಇದ್ದರೂ ಉತ್ತಮ ಮತ್ತು ಉತ್ತಮ ಯೋಜನೆಯೇ ಸರಿ. ಆದರೆ ಇಲ್ಲಿರುವುದು ಒಂದೇ, ಕೇವಲ ವರ್ಗಗಳ ಮುಖಾಂತರ ಇವರು ದುರ್ಬಲರು ಎಂದು ನಿರ್ಧರಿಸಿ ವಿಂಗಡಿಸಿ ಇದನ್ನು ನೀಡುತ್ತಿರುವುದರಿಂದ ಇದು ಸಲ್ಲಬೇಕಾದ ಫಲಾನುಭವಿಗಳಿಗೆ ಸಲ್ಲುತ್ತಿಲ್ಲ. ಸಲ್ಲಬೇಕಾದವರಿಗೆ ಮೀಸಲಾತಿಯನ್ನು ಸಲ್ಲಿಸಿದರೂ ಅದು ಎಲ್ಲಿಯವರೆಗೆ ಸಲ್ಲಬೇಕು ಎನ್ನುವುದೂ ಅಷ್ಟೇ ಮುಖ್ಯವಾಗಿರುತ್ತದೆ. ಮೀಸಲಾತಿ ಎನ್ನುವಂತಹದ್ದು ಹೇಗೆ ನೀಡಬಹುದು ಎನ್ನುವ ಪಟ್ಟಿ ಈ ಕೆಳಗೆ ನೀಡಿದ್ದೇನೆ ಇಷ್ಟವಾಗಬಹುದು.

1. ದೇಶದಲ್ಲಿನ ಶ್ರೀಮಂತ,ಮಧ್ಯಮ ಮತ್ತು ಬಡವರ್ಗದವರೆಂದು ವಿಂಗಡಿಸಿ. ವಿಂಗಡನೆಯ ಮನೆಯ ಆದಾಯಕ್ಕೆ ತಕ್ಕಂತೆ ಮೀಸಲಾತಿ ಒದಗಿಸಿಲಿ. ಬಡತನ ಎನ್ನುವುದು ಆದಾಯಕ್ಕೆ ಅಂಟಿಕೊಂಡಿದೆಯೆ ಹೊರತು ಜಾತಿ ಅಥವಾ ಧರ್ಮಕ್ಕಲ್ಲ.

2. ಇಂದು ಉಚಿತ ಶಿಕ್ಷಣ ಕಡ್ಡಾಯ ಮಾಡಿದೆ ನಿಜ. ಆದರೆ ಉನ್ನತ ವ್ಯಾಸoಗ ಬಯಸುವ ಬಡವಿದ್ಯಾರ್ಥಿಗಳಿಗೆ ಉಚಿತ, ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಶುಲ್ಕ ಮತ್ತು ಶ್ರೀಮಂತ ವರ್ಗದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ಶುಲ್ಕದ ಜೊತೆಗೆ ಅವರಿಗೆ ಇತರೆ ಕೊಡುಗೆಗಳನ್ನು ನೀಡಲು ಸಾಧ್ಯವಾಗುವುದರಿಂದ ಅದನ್ನು ಬೇಕಾದಲ್ಲಿ ಭರಿಸಿಕೂಳ್ಳಿ.

3. ಉದ್ಯೋಗ ನೀಡುವ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷೀಗಳಿಗೆ ಸರ್ಕಾರಿ ಅಥವಾ ಖಾಸಗೀ ಕ್ಷೇತ್ರಗಳಲ್ಲಿ ಅರ್ಹತೆ ಮತ್ತು ಪ್ರತಿಭೆಗನುಗುಣವಾಗಿ ಉದ್ಯೂಗ ಕಲ್ಪಿಸಲಿ. ಬಡತನ ವಿದ್ಯೆಪಡೆಯಲು ಬೇಕಾದ ಶುಲ್ಕಕ್ಕೆ ಹೊರೆಯಾಗಿದೆಯೇ ಹೊರತು ಅರ್ಹತೆ ಪಡೆದ ಉದ್ಯೋಗಕ್ಕಲ್ಲ.

4. ಸರ್ಕಾರಿ ಸವಲತ್ತುಗಳನ್ನು ನೀಡುವಸಂದರ್ಭದಲ್ಲಿ ಜಾತಿ ಅಥವಾ ಧರ್ಮದ ಆಧಾರದಮೇಲೆ ನೀಡದೆ ಆದಾಯದ ಆಧಾರದಮೇಲೆ ನೀಡಿ. ಬಡತನ ಒಂದೇ ವರ್ಗ ಗಂಟಿಕ್ಕಿಕೊಂಡ ಬುತ್ತಿಯಲ್ಲ ಅದು ಎಲ್ಲಾವರ್ಗದಲ್ಲಿಯೂ ಇದೆ.

5. ಮೀಸಲಾತಿಯನ್ನು ಜಾತಿ ಅಥವಾ ಧರ್ಮಕ್ಕೆ ಆಂಟಿಸದೇ ಕೇವಲ ಆದಾಯಕ್ಕೆ ಅಂಟಿಸಿದರೆ ವಂಶಪಾರಂಪರ್ಯವಾಗಿ ಬಳುವಳಿಯಾಗಿ ಬರುವ ಬತ್ತಳಿಕೆ ಇಲ್ಲದಂತಾಗುತ್ತದೆ. ವ್ಯಕ್ತಿ ಆರ್ಥಿಕನಾಗಿ ಸಬಲನಾದಂತೆ ಮೀಸಲಾತಿಯೂ ಕೊನೆಗೊಳ್ಳುತ್ತಾ ಬರುತ್ತದೆ.

ಬನ್ನಿ ಪ್ರಜ್ಞಾವಂತ ಪ್ರಜೆಗಳೆ ಈಗಿರುವ ಮೀಸಲಾತಿ ಪದ್ದತಿಯನ್ನು ಪ್ರಶ್ನಿಸಬೇಕಾಗಿ ಬಂದಿದೆ. ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳೆಂದು ಜಾತಿ, ಧರ್ಮದ ಮೇಲೆ ಬಿಂಬಿಸಿ ತಮ್ಮ ಮತದ ಗಂಟನ್ನು ಕೂಡಿಟ್ಟುಕೂಳ್ಳುವ ಪ್ರಯತ್ನದ ಮುಖಾಂತರ ಸಲ್ಲಬೇಕಾದವರಿಗೆ ಸಲ್ಲದ ಈ ಕೊಡುಗೆ ಯಾಕೆ ಬೇಕು ???

-Vijay viji 

Leave a Reply

Your email address will not be published. Required fields are marked *