September 20, 2024
ಆತನೇ ಆಕೆಯ ರೋಲ್ ಮಾಡೆಲ್, ಎವರ್ ಗ್ರೀನ್ ಮತ್ತು ಪವರ್ ಪುಲ್ ಹೀರೋ . ಹೆಚ್ಚಿನ ಹೆಣ್ಣುಮಕ್ಕಳ ಬಾಳಿನಲ್ಲಿ ತಂದೆಗೆ ಅತ್ಯುನ್ನತ ಸ್ಥಾನ. ಹಾಗಂತ ನವಮಾಸ ಗರ್ಭದಲ್ಲಿ ಹೊತ್ತು, ಹೆತ್ತು  ಕಠಿಣ ಹೆರಿಗೆ ನೋವ ಸಹಿಸಿ ಸಾಕಿದ ಅಮ್ಮನಲ್ಲಿ ವಿಶೇಷ ಪ್ರೀತಿ ಇಲ್ಲವೆಂದಲ್ಲ. ಆದರೆ ಬಹಳ ವಿಶೇಷ ಸ್ಥಾನ ತಂದೆಗೆ ; ಆತನ ಅಕ್ಕರೆಗೆ;
          ಅಪ್ಪ ಎಂದರೆ ನಂಬಿಕೆ, ಅಮ್ಮ ಎಂದರೆ ಸತ್ಯ ಎಂಬ ಆತ್ಮ ಸಾಕ್ಷಾತ್ಕಾರದಲ್ಲಿ ಬೆಳೆಯುತ್ತಿರುವ ನಮಗೆಲ್ಲ ಅಪ್ಪನೊಂದಿಗೆ ಹೇಳಿಕೊಳ್ಳಲಾಗದ ಅವಿನಾಭಾವ ಸಂಬಂಧ. 
ಪಿಳಿ ಪಿಳಿ ಕಣ್ಣರಳಿಸಿ ಜಗತ್ತಿಗೆ ಆಗಮಿಸುವ ಪುಟ್ಟ ಕಂದಮ್ಮನಿಗೆ ಹಾಲುಣಿಸುವ ಅಮ್ಮನ ಮುಖ ದಿನವೂ ಕಾಣುತ್ತಿದ್ದರೆ, ಅವಳ ಜೊತೆ ಆಗಾಗ್ಗೆ ಕಂಡುಬರುವ ಪ್ರೀತಿ, ಕಾಳಜಿ ತುಂಬಿದ ಮುಗ್ದ ಮುಖ ತೋರುವ ಮುಗ್ದ ಜೀವಿಯೆಂದರೆ ಅದು ಅಪ್ಪ . ನಾವು ನುಡಿಯುವ ಮೊದಲಕ್ಷರ ಅಮ್ಮನಾದರೂ , ಅಪ್ಪ ಬಳಿ ಬಂದು ಅಪ್ಪಿ- ಮುದ್ದಾಡಿ ನಮ್ಮೆಲ್ಲ ಕೋರಿಕೆಗಳನ್ನು ಗದರದೇ ಪೂರೈಸುವರು.

   

Advt.

     ಅಮ್ಮ ಲಾಲಿಸಿದರೆ , ಅಪ್ಪ ಪಾಲಿಸಿ ಮುತ್ತಿನೊಡನೆ ತನ್ನ ಗಡ್ಡ ತುರಿಸಿ ಕಚಗುಳಿ ನೀಡುತ್ತಾ ಮತ್ತಷ್ಟು ಹತ್ತಿರವಾಗುತ್ತಾರೆ. ಇಲ್ಲಿ ತಂದೆ ಮಗಳ ಜನ್ಮಕ್ಕೆ  ಬರೀ ಕಾರಣೀಕರ್ತನಷ್ಟೇ ಅಲ್ಲ; ತಂದೆ ಮತ್ತು ಮಗಳ ಸಂಬಂಧವೆಂಬುದು ಜನುಮ-ಜನುಮಾಂತರದ ಸಂಬಂಧವಾಗಿದ್ದು, ತಂದೆಯ ಪಾತ್ರ ಕೇವಲ ಪಾಲನೆ ಪೋಷಣೆಗೆ ಮಾತ್ರ ಸೀಮಿತವಲ್ಲದೇ ಅವಳ ವಿದ್ಯಾಬ್ಯಾಸ, ಮದುವೆ , ಮದುವೆ ನಂತರದ ಯೋಗಕ್ಷೇಮ ಎಲ್ಲದರಲ್ಲಿಯೂ ಭಾಗಿಯಾಗುತ್ತಾನೆ. ಹಾಗೆಯೇ ಮಗಳು ಕೂಡ ತಂದೆಗೆ ಮಗಳಾಗಿರದೇ ಮಗನಂತೆ ಮನೆಯ ಜವಬ್ದಾರಿ ತೆಗೆದುಕೊಂಡು ಅಪ್ಪನಿಗೆ ಒಳ್ಳೆಯ ಸ್ನೇಹಿತೆಯಾಗಿ, ಬಂಧು ಬಳಗದ ಕನಸುಗಳಿಗೆ ದಾರಿದೀಪವಾಗಿರುತ್ತಾಳೆ. ತಂದೆಯ ಮುಪ್ಪಿನಾವಸ್ಥೆಯಲ್ಲಿ ಅಥವಾ ಅನಾರೋಗ್ಯದ ಸಮಯದಲ್ಲಿ ಅವರ ಲಾಲನೆ- ಪಾಲನೆ ಮಾಡಿ ತಾಯಿ ಸ್ಥಾನವನ್ನು ನೀಡಬಲ್ಲವಳಾಗಿರುತ್ತಾಳೆ. ಅಪ್ಪ ಎಂದರೆ ಭಯ ಎಷ್ಟಿದೆಯೋ ಅದಕ್ಕೆರಡರಷ್ಟು ಮಿಗಿಲಾದ ಪ್ರೀತಿ ಇದೆ. ಸಹೃದಯಾ, ಕರುಣಾಮಯಿ, ತ್ಯಾಗಮಯಿ, ಜನುಮದಾತ… ಬಣ್ಣಿಸಲಾಗದು ಅವರ ಸಜ್ಜನಿಕೆಯ ವ್ಯಕ್ತಿತ್ವ.

      ತಂದೆ -ಮಗಳು ಹುಟ್ಟಿದ್ದಾಳೆ ಎಂಬ ಸುದ್ದಿ ಕೇಳಿ , ಮರಳಿ ತನ್ನ ತಾಯಿಯೇ ಮರುಹುಟ್ಟು ಪಡೆದಳೆಂಬ ತೃಪ್ತಿಯೊಂದಿಗೆ ಅವಳಿಗಾಗಿ ಜೀವನವನ್ನೆ ಮುಡಿಪಾಗಿಡುತ್ತಾನೆ. ಮಗಳಿಗೂ ತನ್ನ ತಂದೆಯೆಂದರೆ ಎಲ್ಲಿಲ್ಲದ ಹಿಗ್ಗು ; ಆಕೆಗೆ ಅಪ್ಪನೇ ಪ್ರಪಂಚ. ಅಪ್ಪನದು ನಿಜಕ್ಕೂ ಹೋರಾಟದ ಬದುಕು ತಮ್ಮ ಬದುಕಿನ ಕೊನೆಯ ದಿನದವರೆಗೂ ಬೆವರು ಹರಿಸಿ ದುಡಿಯುತ್ತಾ, ಗಳಿಕೆಯ ಹೊಸ ಮಾರ್ಗಗಳನ್ನು ಹುಡುಕುತ್ತಾ ಮನೆಯ ಮಕ್ಕಳ ಜವಬ್ದಾರಿ, ನೂರೆಂಟು ಸವಾಲುಗಳು , ತೊಂದರೆಗಳಿದ್ದರೂ  ಜಗ್ಗದೇ ಅವುಗಳನ್ನು ಎದುರಿಸಿ ಯಾರಿಗೂ ತೋರ್ಪಡಿಸದೇ, ಯಾರ ಮೇಲೂ ಹೊರಿಸದೇ, ತಾನು ಯಾರಿಗೂ ಹೊರೆಯಾಗದಂತೆ ಸ್ವಾವಲಂಬಿಯಾಗಿ ಬದುಕುವ ಅಪ್ಪ ನಿಜಕ್ಕೂ ಅಪ್ಪಟ ಕರ್ಮಯೋಗಿ.
               ಪ್ರತಿಯೊಬ್ಬರು ಪ್ರೀತಿ, ವಾತ್ಸಲ್ಯ,ಮಮತೆ ಇತ್ಯಾದಿಗಳನ್ನು ತಾಯಿಯಿಂದ ಕಲಿತರೆ, ಧೈರ್ಯ, ಹುಮ್ಮಸ್ಸು ಇತ್ಯಾದಿಗಳನ್ನು ತಂದೆಯಿಂದ ಕಲಿಯುತ್ತಾರೆ. ತಂದೆಯ ಬಗ್ಗೆ ಅದೆಷ್ಟು ವಿವರಿಸಿದರೂ ಪದಗಳೇ ಸಾಲದು. ಗಂಡು ಮಕ್ಕಳು ಅಮ್ಮ ನಿಗೆ ಹತ್ತಿರವಾದರೆ , ಹೆಣ್ಣು ಮಕ್ಕಳು ತಂದೆಗೆ ಹತ್ತಿರವಾಗುತ್ತಾರೆ. ಮಗನಿಗೆ ಕೇಳಿದ್ದನ್ನು ಕೊಡದ ಎಷ್ಟೋ ತಂದೆಯಂದಿರು ಮಗಳು ಕೇಳಿದ ಕ್ಷಣ ಮಾತ್ರದಲ್ಲಿ ತಂದು ಕೊಡುತ್ತಾರೆ. ಮಗ ತಂದೆಯ ಬಳಿ ಹೇಳಿಕೊಳ್ಳಲಾಗದನ್ನು ತಾಯಿಯ ಕಿವಿಗೆ ಹಾಕಿ, ತನಗೆ ಬೇಕಾದ್ದನ್ನು ತಾಯಿಯ ಮೂಲಕ ಅಪ್ಪನಿಂದಾಗಬೇಕಾದ ಕಾರ್ಯವನ್ನು ಪೊರೈಸಿಕೊಳ್ಳುತ್ತಾರೆ.
ತಾಯಿ-ಮಗನ ವಾತ್ಸಲ್ಯ, ತಂದೆ ಮಗಳ ಬಾಂಧವ್ಯ ಇದಕ್ಕೆಲ್ಲ ಅದರದ್ದೇ ಆದ ಏನೋ ಒಂದು ಸೆಳೆತವಿದೆ.
        ಅಪ್ಪನೆಂದರೆ ತಿಳಿಹೇಳಲಾಗದ ಭಾವನೆಗಳೊಂದಿಗೆ ಸೋಜಿಗವು ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಅಪ್ಪನೆಂಬ ಕಾಳಜಿಯ ಮುದ್ದು ಮುಖ ನಮ್ಮನ್ನು ಬಾಲ್ಯದಿಂದ ಶುರುಹಚ್ಚಿ ದೊಡ್ಡವರಾದ ಮೇಲು ಬೆಚ್ಚಗಿರಿಸುತ್ತದೆ. ಹೆಣ್ಣು ಕಣ್ಣೀರುಹರಿಸಿ ತನ್ನ ದುಃಖವನ್ನು ಕಡಿಮೆ ಮಾಡಿಕೊಂಡರೇ, ಗಂಡು ,ಗಂಡಾಗಿ ತಾನು ಅಳಬಾರದೆನ್ನುವ ಸಹಜ ಕಟ್ಟುಪಾಡಿಗೆ ಸಿಲುಕಿ ತನ್ನೆಲ್ಲ ನೋವನ್ನು ಸಹಿಸಿಕೊಳ್ಳುವನು. ಆತ ಅಳುವುದೆಂದರೆ ಅದು ಎರಡೇ ಕಾರಣಕ್ಕೆ ತಾಯಿ ಮತ್ತು ಮಗಳಿಗಾಗಿ.
      ತಂದೆಗೆ ಮಗಳ ಮೇಲೆ ವ್ಯಾಮೋಹ ಜಾಸ್ತಿ ಏಕೆಂದರೆ ಮದುವೆಯ ನಂತರ ಮಗಳು ಇನ್ನೊಂದು ಮನೆಗೆ ಹೋಗುತ್ತಾಳೆ ಎಂಬ ಕಾರಣಕ್ಕೆ, ಹೆಣ್ಮಕ್ಕಳ ಮೇಲೆ ಎಲ್ಲಿಲ್ಲದ ಕಾಳಜಿ ಅಪ್ಪನಿಗೆ ಎಂದೂ ಅಳದ ಅಪ್ಪ ಮಗಳನ್ನು ಮದುವೆ ಮಾಡಿ ಕಳಿಸುವಾಗ ಅತ್ತುಬಿಡುತ್ತಾರೆ.
        ಇಂದು ನಾನು ಏನೇ ಆಗಿದ್ದರೂ, ಅದರಲ್ಲಿ ನನ್ನ ಅಪ್ಪನ ಪಾಲು ತುಂಬಾ ಇದೆ. ಎಳವೆಯಲ್ಲೇ ನನ್ನ ಆಸಕ್ತಿಯನ್ನು ಗಮನಿಸಿ ತಿದ್ದಿ ತೀಡಿ ಮಾರ್ಗದರ್ಶನ ನೀಡಿದ ನನ್ನ ಅಪ್ಪ ನನಗೆ ಮೊದಲ ಗುರು. ಅವರೇ ನನ್ನ ರೋಲ್ ಮಾಡೆಲ್ ಅವರೇ ನನ್ನ ಹಿರೋ. ಅಪ್ಪನಿಗೆ ಸಾಟಿ ಬೇರೆ ಯಾರು ಇಲ್ಲ. ಹಾಗಂತ ಅಮ್ಮನ ಪ್ರೀತಿ ಮರೆತಿಲ್ಲ. ಇವರಿಬ್ಬರು ಜಗತ್ತಿನ ನನ್ನ ಬಾಳಿನ ಮುದ್ದು ಕಣ್ಮಣಿ ಗಳು.
 “ಬದುಕ ಪ್ರೀತಿಯ ಕಲಿಸಿ…
ಸತ್ಯ ಮಾರ್ಗದಲ್ಲಿ ಬೆಳೆಸಿ…
ಸರಿಯಾದ ಶಿಕ್ಷಣವ ಕೊಡಿಸಿ…
ಭವ್ಯ ಪಥದಲ್ಲಿ ನಡೆಸಿ…
ಸ್ಫೂರ್ತಿಯಾಗಿರುವವರು ನನ್ನಪ್ಪ”
        ತಪ್ಪುದಾರಿ ಹಿಡಿದಾಗ ಗದರುವ , ಮೀಸೆಯನ್ನು ತಿರುಗಿಸುತ್ತಾ ಬೆತ್ತದ ರುಚಿ ತೋರಿಸಿ ನಂತರ ಮುದ್ದು ಮಾಡದ ಅಪ್ಪನಿಗಿಂತ ಅತ್ತಾಗ ಸಂತೈಸುವ, ಅಪ್ಪನನ್ನು ಬೈದುಕೊಳ್ಳುತ್ತಾ ಸಿಹಿ ಮುತ್ತು ನೀಡಿ ಮತ್ತಷ್ಟು ಆಪ್ತಳಾಗುವ ಅಮ್ಮ ಎಲ್ಲ ಗಂಡುಮಕ್ಕಳಿಗೆ ಹತ್ತಿರವಾಗುವರು. ಆದರೆ ಬೆತ್ತದ ರುಚಿ ತೋರಿಸಿದ ಅಪ್ಪ ಮನದಲ್ಲೆ ಮರುಗುತ್ತಾರೆ ಎಂಬುದು ಯಾರಿಗೂ ತಿಳಿಯುವುದೇ ಇಲ್ಲ. ನಿತ್ಯವೂ ಅಡುಗೆ ಮಾಡಿ ಬಡಿಸುವ ಅಮ್ಮನ ನೆನಪು ಸದಾ ಕಾಡುವ ನಮಗೆ ಜೀವನದುದ್ದಕ್ಕೂ ನಮ್ಮ ಊಟಕ್ಕಾಗಿ ವ್ಯವಸ್ಥೆ ಮಾಡುವ ಅಪ್ಪನನ್ನು ಮರೆಯುತ್ತೇವೆ. ಅಪ್ಪನಲ್ಲಿ ತನ್ನ ಮಕ್ಕಳ ಬಗ್ಗೆ ಅತಿಯಾದ ಒಲವಿದೆ. ಆದರೆ ತಾಯಿ ಮಕ್ಕಳಿಗೆ ಪ್ರೀತಿ ತೋರಿದಷ್ಟು ತೋರಲಾರ. ಅಪ್ಪನ ಪ್ರೀತಿಯೇ ಹಾಗೆ ಸುಲಭವಾಗಿ ಯಾರಿಗೂ ಅರ್ಥವಾಗುವುದಿಲ್ಲ. ಅಪ್ಪ ಅಂದರೆ ಏನೋ ಒಂದು ಅದ್ಭುತ. 
         ಅಮ್ಮನ ಬಗ್ಗೆ ಅವರ ಪ್ರೀತಿಯ ಬಗ್ಗೆ ಬರೆಯುವ ಅದೆಷ್ಟೋ ಕವಿಗಳೂ ಲೇಖಕರು ಕಾಣಸಿಗುತ್ತಾರೆ ಆದರೆ ಅಪ್ಪನ ಬಗ್ಗೆ ಬರೆಯುವವರು ಬಹಳ ವಿರಳ. ಅಪ್ಪನ ಜಗತ್ತಿನಲ್ಲಿ ಸಾವಿರಾರು ವ್ಯವಹಾರಗಳಿದ್ದರೂ ಅವರಿಗೆ ನಿಜವಾದ ಸಂತೋಷ ಕೊಡುವುದು ಮಕ್ಕಳ ಏಳಿಗೆ ಅಭಿವೃದ್ಧಿ. ಜಗತ್ತಿನಲ್ಲಿ ಇಂತಹ ನಿಷ್ಕಲ್ಮಶ ಪ್ರೀತಿಯ ಅಪ್ಪಂದಿರು ಅದೆಷ್ಟೋ ಸಿಗುತ್ತಾರೆ. ಬಾಲ್ಯದಲ್ಲಿ ಪ್ರತಿಯೊಂದು ವಿಷಯಕ್ಕೂ ಅಪ್ಪನನ್ನೇ ದುಂಬಾಲು ಬೀಳುವ ನಾವು ಗೆಳೆಯರೊಂದಿಗೆ ಸಂಪೂರ್ಣವಾಗಿ ಕಳೆದುಹೋದಾಗ , ಅಪ್ಪನ ಎದುರು ಬೇಜವಾಬ್ದಾರಿಯಿಂದ ವರ್ತಿಸಿದಾಗ, ಅಸಹನೆ, ಸಿಟ್ಟು ತೋರಿದಾಗ ಪಾಪ ಅಪ್ಪನಿಗದೆಷ್ಟು ನೋವಾಗಿರಬಹುದು ಅನ್ನುವುದನ್ನು ಯೋಚಿಸುವುದೇ ಇಲ್ಲ ಕಾಲಕ್ಕೆ ತಕ್ಕಂತೆ ನಾವು ಬದಲಾದರೂ ಅಪ್ಪ ಬದಲಾಗೋದೇ ಇಲ್ಲ. ತಾಯಿಗೆ ತಾಯ್ತನ ಇದ್ದಂತೆ ತಂದೆಗೆ ತಂದೆತನದ ಒಲವು ಸದಾ ಜಾಗೃತವಾಗಿರುತ್ತದೆ.
    “ನಾನು ನೋಡಿದ ಮೊದಲ ವೀರ ಬಾಳು ಕಲಿಸಿದ ಸಲಹೆಗಾರ ಬೆರಗು ಮೂಡಿಸೊ ಜಾದುಗಾರ ಅಪ್ಪಾ” ಇದೆಲ್ಲದರ ನಡುವೆ ಇತ್ತೀಚೆಗೆ ಬಹಳ ಜನಪ್ರಿಯತೆ ಪಡೆದ ಇಂತಹ ಹಾಡುಗಳು ಅಪ್ಪನ ನೆನಪು ಸದಾಕಾಲ ನಮ್ಮ ಮನಸ್ಸಿನಲ್ಲಿ ಇರುವಂತೆ  ಮಾಡುತ್ತದೆ.
ಸುಪ್ರೀತ ಭಂಡಾರಿ, ಸೂರಿಂಜೆ

2 thoughts on “ಅಪ್ಪ.. ನೀನಂದ್ರೆ ನನಗಿಷ್ಟ……….. :-✍ ಸುಪ್ರೀತಾ ಭಂಡಾರಿ ,ಸೂರಿಂಜೆ .

  1. ಅಪ್ಪನ ಜಗತ್ತು ….ಅಪ್ಪಾ….
    ನೀನಂದ್ರೆ ನನಗಿಷ್ಟ.
    ಲೇಖನ ಚೆನ್ನಾಗಿ ಮೂಡಿ ಬಂದಿದೆ……
    ಮಹೇಂದ್ರ ಕುಮಾರ್ ಫಲ್ಗುಣಿ.
    ಯುವ ಜಾಗೃತಿ ಮತದಾರರ ವೇದಿಕೆ….

Leave a Reply

Your email address will not be published. Required fields are marked *