ನಾವು ಈಗ ಹೇಳಲು ಹೊರಟಿರುವ ಸ್ಥಳ ಪುರಾಣ ಅದೊಂದು ದೇವಿ ಕ್ಷೇತ್ರ, ಭಂಡಾರಿಗೊಲಿದ ದೇವಿಯು ಮುಂದಕ್ಕೆ ಅಲ್ಲಿಯೇ ನೆಲೆ ನಿಂತು ಭಕ್ತರ ಕಷ್ಟಗಳನ್ನು ಪರಿಹರಿಸುತ್ತ ಬಂದಂತಹ ಶಕ್ತಿ ಕ್ಷೇತ್ರ. ಅದು ಯಾವುದೆಂದು ತಿಳಿಯಬೇಕಾದರೆ ಕೆಳಗಿನ ಇತಿಹಾಸವನ್ನು ಮೇಲುಕು ಹಾಕೋಣ.
ಕ್ರಿ.ಶಕ 1140 ರಲ್ಲಿ ಬಂಗವಾಡಿಯ ಗಂಗವಂಶಜ ಚಂದ್ರಶೇಖರನು, ಹೊಯ್ಸಳ ವಿಷ್ಣುವರ್ಧನರಾಯನೊಡನೆ ಯುಧ್ಧ ಮಾಡಿ ವೀರ ಸ್ವರ್ಗ ಸೇರುತ್ತಾನೆ. ಅವನ ಮಗ 10 ವರ್ಷ ಪ್ರಾಯದ ರಾಜಕುಮಾರ ಕಾಮರಾಯನನ್ನು ಪ್ರಧಾನಿ ಕೃಷ್ಣಪಯ್ಯನು ವೈರಿಗಳಿಂದ ರಕ್ಷಿಸಲು ಘಟ್ಟ ಸೀಮೆಗೆ ಕರೆದೊಯ್ದು ರಕ್ಷಿಸುತ್ತಾನೆ. ಕ್ರಮೇಣ ವಿಷ್ಣುವರ್ಧನನ ಮರಣಾನಂತರ ತನ್ನ ಪರಿವಾರ ಸಮೇತ ರಾಜಕುಮಾರ ಕಾಮರಾಯನನ್ನು ಕರೆದುಕೊಂಡು ಬಂಗವಾಡಿ ಸೀಮೆಗೆ ಬರುತ್ತಾನೆ.
ಹಿಂದನ ಕಾಲದಲ್ಲಿ ರಾಜಮನೆತನದ ಯಾರದೇ ಕ್ಷೌರ ಹಾಗೂ ಉಗುರು ತೆಗೆದರೂ ಅದನ್ನು ಹೊಳೆಯಲ್ಲಿ ಬಿಡುತ್ತಿದ್ದರು. ಯಾರ ಕೈಗೂ ಅಥವಾ ಕಾಲಿಗೆ ಸಿಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದರು. ಹಾಗಾಗಿ ಒಂದು ದಿನ ಕಾಮರಾಯನ ಉಗುರು ಹಾಗೂ ತಲೆಗೂದಲು ಕತ್ತರಿಸಿದ ರುಧ್ರ ಭಂಡಾರಿಯು ತನ್ನ ಉಗುರು ತೆಗೆಯುವ ಕೊಲ್ಲಿಯನ್ನು ಅಲ್ಲೆ ಬಿಟ್ಟು ಹೊಳೆಯ ಕಡೆ ಹೊರಡುತ್ತಾನೆ. ಹೀಗೆ ರಾಜಕುಮಾರನ ಉಗುರು ಹಾಗೂ ತಲೆಗೂದಲನ್ನು ಹೊಳೆಯಲ್ಲಿ ಬಿಟ್ಟು ಹಿಂತಿರುಗಿ ಬಂದು ನೋಡಿದರೆ ಆಚ್ಚರಿಯೊಂದು ಕಾದಿತ್ತು.
ತಾನು ಬಿಟ್ಟು ಹೋದ ಕೊಲ್ಲಿ ಮಾಯವಾಗಿ ಸರ್ಪವೊಂದು ಹೆಡೆ ಎತ್ತಿ ನಿಂತಿತ್ತು ಇದನ್ನು ಕಂಡ ರುಧ್ರ ಭಂಡಾರಿ ಬೆಚ್ಚಿಬೀಳುತ್ತಾನೆ. ಈ ವಿಷಯವನ್ನು ಮಂತ್ರಿ ಕೃಷ್ಣಪಯ್ಯನಿಗೆ ತಿಳಿಸಲು ತನ್ನ ಪರಿವಾರದ ಜೊತೆ ಕೊಲ್ಲಿ ಮಾಯವಾದ ಸ್ಥಳಕ್ಕೆ ಬಂದರೆ ಆತನಿಗೂ ಒಂದು ಆಚ್ಚರಿಯೊಂದು ಕಾದಿತ್ತು. ಅಲ್ಲಿದ್ದ ಕೊಲ್ಲಿ ಮಾಯವಾದುದಲ್ಲದೆ ಸರ್ಪವೂ ಮಯಾವಾಗಿತ್ತು. ಈ ಸ್ಥಳದಲ್ಲಿ ಏನೋ ವಿಶೇಷ ಇದೆ ಅದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಆ ದಿನ ಅಲ್ಲೆ ರಾತ್ರಿ ನಿದ್ರಿಸುತ್ತಾರೆ. ಬೆಳಗ್ಗಿನ ಜಾವ ಕನ್ಯೆಯಾಗಿ ಕನಸಿನಲ್ಲಿ ಕಾಣಿಸಿಕೊಂಡ ಆ ಶಕ್ತಿಯು ” ಕೃಷ್ಣಪಯ್ಯ ನೀವಿನ್ನು ಚಿಂತಿಸಬೇಡಿ ಕೊಲ್ಲಿ ಮಾಯವಾದ ಈ ಸ್ಥಳದಲ್ಲಿ ನಾನು ಕೊಲ್ಲಿ ದುರ್ಗೆಯಾಗಿ ನೆಲೆಯಾಗುತ್ತೇನೆ. ನನಗೆ ದೇವಾಲಯ ನಿರ್ಮಿಸುವುದಾಗಿ ಸಂಕಲ್ಪ ಮಾಡಿಕೊಳ್ಳಿ ನಿಮ್ಮ ಕಷ್ಟ ನಿವಾರಣೆಯಾಗಿ ಇಲ್ಲಿಗೆ ಬರುವ ರಾಜನನ್ನು ಭೇಟಿಯಾಗಿ ಅವನಲ್ಲಿ ಕೇಳಿಕೊಂಡಾಗ ನಿಮ್ಮ ರಾಜ್ಯ ಮರಳಿ ದೊರಕಲಿದೆ” ಎಂದು ಹೇಳಿದಂತಾಗುತ್ತದೆ. ಈ ವಿಷಯವನ್ನು ಮರುದಿನ ಮಟ್ಟೂರ ಬೀರಬಲ್ಯಯನಿಂದ ಪ್ರಶ್ನೆ ಇರಿಸಿದಾಗ ಅದೇ ಚಿಂತನೆ ಕಂಡು ಬರುತ್ತದೆ ಅದರ ಪ್ರಕಾರ ಕೊಲ್ಲಿ ದುರ್ಗೆಯ ದೇವಾಲಯ ನಿರ್ಮಿಸುವ ಸಂಕಲ್ಪ ಮಾಡಲಾಗುತ್ತದೆ.
ಇದಾದ ಕೆಲ ಸಮಯ ನಂತರ ಕೊಲ್ಲಿ ದುರ್ಗೆಯ ಅಭಯದಂತೆ ವೀರನರಸಿಂಹ ಬಲ್ಲಾಳನಿಂದ ಕಾಮರಾಯನಿಗೆ ರಾಜ್ಯ ದೊರಕುತ್ತದೆ. ನಂತರ ದೇವಾಲಯ ನಿರ್ಮಿಸಿ ಕೊಲ್ಲಿ ದುರ್ಗೆಯನ್ನು ಪೂಜಿಸಿಕೊಂಡು ಬಂದರು. ರುಧ್ರ ಭಂಡಾರಿಗೆ ‘ಭಂಡಾರಿ ಕೋಡಿ’ ಎಂಬ 20 ಎಕರೆ ಭೂಮಿಯನ್ನು ಉಂಬಳಿ ನೀಡಲಾಯಿತು. ಹಾಗೆಯೇ ರುಧ್ರ ಭಂಡಾರಿ ತುಳನಾಡಿನ ಅಳಿಯ ಕಟ್ಟಿನ ಭಂಡಾರಿ ಸಮಾಜದ ಹೆಣ್ಣನ್ನು ವಿವಾಹವಾಗಿ ಜೀವನ ಸಾಗಿಸುತ್ತಾನೆ. ಕ್ರಮೇಣ ಅವನ ವಂಶದವರೆಲ್ಲ 1940 ರ ಸಮಯದಲ್ಲಿ ಅಳಿದು ಹೋಗಿ ಅವರ ಭೂಮಿ ಯಾರದ್ದೊ ಪಾಲಾಯ್ತು. 1940 ನೇ ಇಸವಿ ತನಕ ಆ ವಂಶದ ಮಾಯಿಲ ಭಂಡಾರಿ ರಾಜರ ಬೆಳ್ಗೊಡೆ ಹಿಡಿಯುತ್ತಿದ್ದು. ಉಳ್ಳಾಕುಳ ದೈವಗಳ ಗಡಿ ಕೂಡ ಹಿಡಿಯುತ್ತಿದ್ದರು. ಹಾನ್ಯೊಟ್ಟು ಬರ್ಕೆಯಲ್ಲಿ ಇವರ ಮನೆ ಇತ್ತು ಇವರು ಬಂಗರನ್ನಾಯ ಬಳಿಯವರಾಗಿದ್ದರು.
ಹೀಗೆ ರುಧ್ರ ಭಂಡಾರಿಯ ಕೊಲ್ಲಿ ಮಾಯವಾದ ಸ್ಥಳದಲ್ಲಿ ಕೊಲ್ಲಿ ದುರ್ಗೆಯಾಗಿ ನೆಲೆನಿಂತಿರುವ ಆ ಶಕ್ತಿಯು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾ ಊರನ್ನು ಕಾಪಾಡುತ್ತ ಬರುತ್ತಿದ್ದಾಳೆ.
✍- ಎಸ್. ಕೆ. ಬಂಗಾಡಿ