November 24, 2024
grow

ಹೌದು ಬಿದ್ದಿರುವ ಪಾತಾಳ ಬಹಳ ದೊಡ್ಡದಿದೆ. ಇಂದಿನ ದಿನಮಾನಗಳಲ್ಲಿಯೂ  ಮೇಲೆ ಏಳಲಾರದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದರೆ ಅದರ ಆಳ ಊಹಿಸಲಸಾಧ್ಯವಾಗಿದೆ. ಶೋಷಣೆಯ ಹಾದಿಯಲ್ಲಿ ಇಂದಿಗೂ ತುಳಿತಕ್ಕೊಳಗಾಗುತ್ತಿದ್ದೇವೆ ಎಂದರೆ ಸಮಾಜದ ಕಣ್ಣಿನಲ್ಲಿ ನಾವು ಇಂದಿಗೂ ಬದಲಾಗದೇ ಇರುವುದು ಕಾರಣವಾಗಿರಬಹುದು. ಆದರೆ ಇಂದಿನ ವೈಜ್ಞಾನಿಕ ಯುಗದಲ್ಲಿಯೂ ನಾವು ಅದರಿಂದ ಹೊರಬರುವುದು ಕಷ್ಟವೇನಲ್ಲ ಹೋರಾಟದ ಹಾದಿ ಸುಗಮವಾಗಿಯೇ ಇದೆ ಆದರೂ ಮನಸ್ಸು ಮಾಡದಿರುವುದು ವಿಪರ್ಯಾಸವೇ ಸರಿ.  ಮೊನ್ನೆ ಟಿವಿ1 ನ್ಯೂಸ್ ಚಾನಲ್ ನಲ್ಲಿ ನಮ್ಮ ಕ್ಷೌರಿಕ ಸಮಾಜ ಈ ಸಮಾಜದಲ್ಲಿ ಅನುಭವಿಸುತ್ತಿರುವ ತೊಂದರೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಾಗ ಮನಸ್ಸು ಕದಡಿತು. ಇಂದಿಗೂ ಶೋಷಿತರಾಗಿರುವ ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲವೆಂಬುದು ಕೇಳಿದಾಗ, ಅದನ್ನು ಪಡೆಯಲೋಸುಗವಾಗಿ ರಾಜಕೀಯ ಮುಖಂಡರ ಮನೆಯ ಬಾಗಿಲಬಳಿ ಹೋದಾಗಲೂ ಅವರು ಕಡಿಮೆ ಸಂಖ್ಯೆಯಲ್ಲಿರುವ ನಿಮ್ಮಿಂದ ಏನು ಮಾಡಲು ಸಾಧ್ಯವಿಲ್ಲವೆಂಬುದನ್ನು ತಿಳಿಸಿ ಓಟುಬ್ಯಾಂಕಿನ ಅಳತೆಗೋಲಿಟ್ಟುಕೊಂಡು ಸೌಲಭ್ಯ ನೀಡುವುದಿಲ್ಲ ಎನ್ನುವುದನ್ನು ನೇರವಾಗಿ ಹೇಳಿಕಳುಹಿಸುವಾಗ ಹೌದು ಕ್ಷೌರಿಕ ಸಮಾಜ ಇನ್ನು ಪ್ರಪಾತದಲ್ಲಿಯೇ ಇರುವುದು ಬಹಳ ಸ್ಪಷ್ಟವಾಯಿತು. ರಾಜಕಾರಣಿಯ ಮುಖವಾಡವನ್ನು ಸಮಾಜದ ಮುಂದೆ ಕಳಚಿಟ್ಟದ್ದು ಇನ್ನಷ್ಟು ಉತ್ತಮವಾಯಿತು. ಬಹುಶಃ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಿ ಸಮಾಜಕ್ಕೆ ಸತ್ಯದ ಅರಿವನ್ನು ಮೂಡಿಸಿ ಸರ್ಕಾರದ ಮೇಲೆ ಒತ್ತಡ ಹೇರಿ ಸಿಗಲೇಬೇಕಾದ್ದನ್ನು ಪಡೆಯಲೇಬೇಕಾದ ಅನಿವಾರ್ಯತೆ ಭಂಡಾರಿ ಸಮಾಜದ ಮೇಲಿದೆ.

ಕ್ಷೌರಿಕರು ಸಮಾಜದಲ್ಲಿ ಎದುರಿಸುತ್ತಿರುವ ಕೀಳರಿಮೆಯನ್ನು ಹೋಗಲಾಡಿಸಿಕೊಳ್ಳಬೇಕಾಗಿದೆ. ಸಾಮಾಜಿಕ ನೆಲಗಟ್ಟಿನಲ್ಲಿ ಅನುಭವಿಸುತ್ತಿರುವ ದೌರ್ಜನ್ಯದ ವಿರುದ್ದ ತಿರುಗಿಬೀಳಬೇಕಾಗಿ ಬಂದಿದೆ. ಪೇಟೆಯ ಪ್ರದೇಶದಲ್ಲಿ ಇವುಗಳನ್ನು ಕಾಣಲಿಕ್ಕೆ ಬಹುಶಃ ಸಾಧ್ಯವಿಲ್ಲ. ಆದರೆ ತೀರಾ ಹಳ್ಳಿಯ ಪ್ರದೇಶಗಳಲ್ಲಿ ಇಂದಿಗೆ ಬೇಕಿಲ್ಲದ ಸಂಪ್ರದಾಯಗಳು ಇನ್ನೂ ಉಳಿದುಕೊಂಡಿರುವುದೇ ಸಾಮಾಜಿಕ ಶೋಷಣೆಗೆ ಕಾರಣವಾಗಿದೆ. ಮನೆಯ ಬಾಗಿಲಿಗೆ ಹೋಗುವ ಮುನ್ನ ಇವರು ತಾನು ಕನಿಷ್ಠನೆಂಬ ಭಾವನೆಯಲ್ಲಿಯೇ ನೆಡೆದು ಹೋದರೆ ಅವರು ನೆಡೆಸುಕೊಳ್ಳುವ ಪರಿಯೂ ಅಂತಹುದೇ ಆಗಿರುತ್ತದೆ.  ಆದರೆ ಇದರ ವಿರುದ್ದ ಅಲ್ಲಿನ ಕ್ಷೌರಿಕರು ಎಚ್ಚೆತ್ತುಕೊಂಡು ಹೋರಾಟದ ಹಾದಿ ಹಿಡಿಯದಿರುವುದು ಬಹಳ ಆಶ್ಚರ್ಯ ಮೂಡಿಸಿತ್ತದೆ. ಯಾಕೆಂದರೆ ಇಂದಿಗೆ ಮೊದಲಿನಂತೆ ಪ್ರತಿಯೊಂದಕ್ಕೂ ಮೇಲ್ವರ್ಗದ ಜನರ ನೆಚ್ಚಿಕೊಂಡು ಬದುಕಬೇಕಾದ ಅನಿವಾರ್ಯತೆ ನಮಗಿಲ್ಲ ಮತ್ತು ಅಂತಹ ಹಳ್ಳಿಯ ಪ್ರದೇಶಗಳಲ್ಲಿ ಒಬ್ಬರು ಹೆಚ್ಚೆಂದರೆ ನಾಲ್ಕು ಜನ ಕ್ಷೌರಿಕರಿರಬಹುದೇನೋ. ಪೈಪೋಟಿಯ ಯುಗಲ್ಲಿ ಅಲ್ಲಿ ಅನ್ಯವರ್ಗದವರು ಈ ವೃತ್ತಿಯನ್ನು ಹಿಡಿದಿರುವ ಹೆದರಿಕೆಯೂ ಇಲ್ಲ. ಇಂತಹ ಸಂದರ್ಭದಲ್ಲಿ ಅಲ್ಲಿನ ಕ್ಷೌರಿಕರು ಮನಸ್ಸು ಮಾಡಿದರೆ ಅವರು ಆಡಿದ್ದೇ ಆಟವಾಗುತ್ತದೆ. ಶೋಷಣೆಗೈಯ್ಯುವ ಮೇಲ್ವರ್ಗದ ವಿರುದ್ದ  ಕ್ಷೌರ ಬಹಿಷ್ಕಾರ ಚಳುವಳಿಯನ್ನು ನೆಡೆಸಬಹುದು. ಇದರಿಂದ ಹೊಟ್ಟೆಪಾಡಿಗೆ ಕಲ್ಲುಬೀಳುವ ಸಂಭವವೂ ಇಲ್ಲ ಯಾಕೆಂದರೆ ಮೇಲ್ವರ್ಗದ ಸಂಖ್ಯೆ ಕಡಿಮೆಯಲ್ಲಿರುತ್ತದೆ ಇನ್ನು ಇತರೇ ವರ್ಗದವರು ಬೇಡವೆಂದರೂ ಕ್ಷೌರ ಮಾಡಿಸಿಕೊಂಡು ಹೋಗುತ್ತಾರೆ. ಶೋಷಿಸುವವರ ವಿರುದ್ದ ಹೋರಾಟ ನೆಡೆದಾಗ ಇತರೆ ಶೋಷಿತರೂ ಬೆನ್ನೆಲುಬಾಗಿ ನಿಲ್ಲುವ ಸಂಭವವೂ ಹೆಚ್ಚಿರುತ್ತದೆ. ಇದರಿಂದ ಅಪಾಯವಾಗುವ ಸಂಭವವೂ ಕಡಿಮೆ. ಇಂದಿನ ಮಾಧ್ಯಮ ಮತ್ತು ಜಾಲಾತಾಣಗಳನ್ನು ಸರಿಯಾಗಿ ಬಳಸಿಕೊಂಡರೆ ಹೋರಾಟಕ್ಕೆ ಇನ್ನಷ್ಟು ಬಲವೂ ದೊರೆಯುತ್ತದೆ. ಅಂದಿನ ದಿನದ ಹೀರೋ ಆಗಿ ಆತನೇ ಮಿನುಗುತಿರುತ್ತಾನೆ. ಇದು ಶೋಷಿತ ಕ್ಷೌರಿಕರಿಗಷ್ಟೇ ಅಲ್ಲದೇ ಇನ್ನುಳಿದ ಶೋಷಿತ ವರ್ಗದವರಿಗೂ ಹೋರಾಟದ ಕೆಚ್ಚನ್ನು ಹುಟ್ಟಿಸಲು ನೆರವಾಗುತ್ತದೆ. ಆದರೆ ಇಂದಿನ ದಿನಮಾನದಲ್ಲಿಯೂ ಶೋಷಿತನಾಗಿಯೇ ಜೀವನವನ್ನು ಕಳೆಯುತ್ತಿದ್ದಾನೆ ಎಂದರೆ ಅವನ ಒಗ್ಗಿಹೋದ ಮನಸ್ಸಿಗೆ ಶಹಬ್ಬಾಸ್ ಹೇಳಲೇಬೇಕು.ಮೇಲೇಳಲು ಮನಸ್ಸಿಲ್ಲದ ಮನಸ್ಸಿಗೆ ಧಿಕ್ಕಾರವನ್ನೂ ಹೇಳಲೇಬೇಕು.

ಇನ್ನು ಭಂಡಾರಿ ಸಂಘ ಸಂಸ್ಥೆಯೂ ಬಹಳಷ್ಟು ಶ್ರೀಮಂತಗೊಂಡಿದೆ, ಬಹಳ ಗಟ್ಟಿತನವನ್ನೂ ಹೊಂದಿದೆ. ಆದರೆ ನಮ್ಮ ನಡುವೆಯೇ ನಮ್ಮವನೊಬ್ಬನನ್ನು ಶೋಷಿತನಾಗಿರುವುದನ್ನು ತಪ್ಪಿಸುವ ಕೆಲಸ ಕೈಗೆತ್ತಿಕೊಳ್ಳದಿರುವುದು ವಿಪರ್ಯಾಸವೇ ಸರಿ. ಶೋಷಿತರು ಇರುವ ಸ್ಥಳವನ್ನು ಹೊಕ್ಕು ಅಂದಿನ ಸಮಾಜದ ಮತ್ತು ಇಂದಿನ ಆಧುನಿಕ ಸಮಾಜದ ವ್ಯೆತ್ಯಾಸವನ್ನು ವಿವರಿಸಿ ಅಂದಿನ ಸಮಾಜ ಹಿಂದಿಟ್ಟಿರುವ ವ್ಯೆಜ್ಞಾನಿಕ ವಿಶ್ಲೇಷಣೆ ವಿವರಿಸುವ ಮುಖಾಂತರ ಜನರಿಗೆ ಮನದಟ್ಟು ಮಾಡಿಕೊಡುವ ಬಹುದೊಡ್ಡ ಕ್ರಾಂತಿಯನ್ನೇ ಆರಂಭಿಸಬಹುದಿತ್ತು. ಆತನನ್ನು ಹೋರಾಟಕ್ಕೆ ಪ್ರೇರೇಪಿಸಿ ಬೆನ್ನೆಲುಬಾಗಿ ನಿಂತು ಸಹಾಯವನ್ನು ನೀಡಬಹುದಿತ್ತು. ಕನಿಷ್ಠ ಪಕ್ಷ ಆತನಿಗೆ ಶೋಷಣೆಯನ್ನು ಮನದಟ್ಟು ಮಾಡಿಕೊಟ್ಟು ಬದುಕುತ್ತಿರುವ ಬದುಕು ಸಲ್ಲವೆಂದು ತಿಳಿಹೇಳಬಹುದಿತ್ತು. ಆದರೆ ಸಂಘವು ಇದಾವುದರ ಗೋಜಿಗೆ ಹೋಗದಿರುವುದು ಬಹಳ ನೋವನ್ನುಂಟು ಮಾಡುತ್ತಿದೆ. ಪದೇ ಪದೇ ಹೇಳುವುದು ಒಂದೇ ಆಗಿದೆ ಇಂದಿಗೂ ಅವರು ಅಂತೆಯೇ ಬದುಕುತ್ತಿದ್ದಾರೆಂದರೆ ನೇರ ಅವರೇ ಕಾರಣರಾಗಿದ್ದಾರೆ. ಬೆಳವಣಿಗೆ ಬೇಕಾಗಿದೆ ಬೆಳೆಯಬೇಕೆಂದರೆ ಹೋರಾಟ ಅಗತ್ಯ. ಬೆಳವಣಿಗೆಯ ಹಾದಿಯಲ್ಲಿ ಕಲ್ಲುಮುಳ್ಳುಗಳು ಸಹಜ, ಹೆದರಿ ಹಿಂದೆ ಸರಿದರೆ ಹಿಮ್ಮೆಟ್ಟಿಸುವುದೂ ಸಹಜ.

 

ಸಂಘಗಳಿಂದಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಕಾರ್ಯಗಳೇ ನೆಡೆದಿಲ್ಲವೆಂದೇನಲ್ಲ ಅವರಿಂದಲೂ ಹೋರಾಟ ನೆಡೆದೇ ಇತ್ತು. ಆದರೆ ಅವರೇ ಹೇಳುವಂತೆ ಓಟುಬ್ಯಾಂಕಿನ ರಾಜಕಾರಣ ಬಂಧಿಸಿಬಿಟ್ಟಿತ್ತು. ಬಹುಶಃ ಸಭೆ ಸಮಾರಂಭಗಳಿಗೆ ನಾಯಕರುಗಳನ್ನು ಕರೆಯಿಸಿ ನಮ್ಮ ಅಳಲನ್ನು ತೋಡಿಕೊಂಡು ಅವರಿಂದ ಕೇವಲ ಆಶ್ವಾಸನೆ ಪಡೆದು ಆಗಿಬಿಡುತ್ತದೆಂಬ ನಿಟ್ಟುಸಿರನ್ನು ಬಿಡುವ ಬದಲಿಗೆ ಇಂತಹ ಸಾಮಾಜಿಕ ಚಳುವಳಿಯನ್ನು ಮಾಡುತ್ತಾ ಸಮಾಜದಲ್ಲಿ ಇಂದಿಗೂ ಕ್ಷೌರಿಕ ಕಡಗಣನೆಗೆ ಒಳಗಾಗಿರುವುದನ್ನು ಪರಿಚಯಿಸುತ್ತಾ ತೆರಳಿದ್ದರೆ ನೈಜ ನಿದರ್ಶನಕ್ಕೆ ಸರ್ಕಾರಕ್ಕೆ ಮಣಿಯಲೇಬೇಕಾಗಿರುತಿತ್ತು.  ಬಹುಶಃ ಇಂತಹದೊಂದು ಕಠೋರತೆಯ ವಿರುದ್ದದ ಹೋರಾಟಕ್ಕೆ ಮಾಧ್ಯಮಗಳು ಸಹಕರಿಸುತ್ತಿದ್ದವು. ಹೋರಾಟದ ಹಾದಿ ತೀವ್ರತೆಯನ್ನು ಪಡೆಯುತ್ತಿತ್ತು. ಕಡಿಮೆ ಸಂಖ್ಯೆಯಲ್ಲಿರುವ ಜನರನ್ನು ಜರಿದ ಜನನಾಯಕರುಗಳ ದರ್ಪದ ಮಾತುಗಳು ಅಡಗುತ್ತಿತ್ತು.

ಮುಂದುವರಿಯುವುದು……

ವಿಜಯ್ ಭಂಡಾರಿ ನಿಟ್ಟೂರು, ಹೊಸನಗರ

ಲೇಖಕರ ಪರಿಚಯ :

ವಿಜಯ್ 
ನಿಟ್ಟೂರು, ಹೊಸನಗರ
ವಿದ್ಯಾಭ್ಯಾಸ:- ಪದವಿ
ವೃತ್ತಿ:- ಕ್ಷೌರಿಕ
ಕತೆ, ಲೇಖನ, ಕವಿತೆ ಬರೆಯುವುದು ಹವ್ಯಾಸ

1 thought on “ಬೆಳೆಯಬೇಕಾಗಿದೆ ಬೆಳೆದವರು ತಲೆಯತ್ತಿ ನೋಡುವಂತೆ….-✍ ವಿಜಯ್ ಭಂಡಾರಿ ನಿಟ್ಟೂರು, ಹೊಸನಗರ

Leave a Reply

Your email address will not be published. Required fields are marked *