ಮನ್ವಿತ್…. ಗಾಯನಕ್ಕೂ ಸೈ…ನೃತ್ಯಕ್ಕೂ ಜೈ
“ಮನ್ವಿತ್” ಈ ಹೆಸರು ಈಗ ಮತ್ತೆ ಪುಟಾಣಿಗಳ ನಾಲಿಗೆ ತುದಿಯಲ್ಲಿ ನಲಿದಾಡುತ್ತಿದೆ. ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್-12 ರಲ್ಲಿ ತನ್ನ ವಿಭಿನ್ನ ಹಾವಭಾವ,ಸುಮಧುರ ಕಂಠದಿಂದ ಕನ್ನಡಿಗರ ಮನಸೂರೆಗೊಂಡು ಕ್ವಾರ್ಟರ್ ಫೈನಲ್ ವರೆಗೆ ಬಂದು ಸ್ಪರ್ಧೆಯಿಂದ ನಿರ್ಗಮಿಸುವಾಗ ತಾನೂ ಅತ್ತು ನೋಡುಗರ ಕಣ್ಣು ತೇವಗೊಳಿಸಿ,ಜ್ಯೂರಿ ಪ್ಯಾನೆಲ್ ನಲ್ಲಿ ಕುಳಿತಿರುವ ದಿಗ್ಗಜರ ಕಣ್ಣಲ್ಲೂ ನೀರು ತರಿಸಿ,ನಿರ್ಣಾಯಕರಾದ ವಿಜಯ್ ಪ್ರಕಾಶ್ ರವರಿಂದ “ಮನ್ವಿತ್ ನಿನ್ನ ಪ್ರಾಮಾಣಿಕತೆ ನನಗೆ ಇಷ್ಟವಾಯಿತು ಕಣೋ…ಕೆಲವರು ತಪ್ಪು ಮಾಡಿ ಅದನ್ನು ಪ್ಯಾಚ್ ಅಪ್ ಮಾಡಲು ಪ್ರಯತ್ನಿಸ್ತಾರೆ.ಆದರೆ ನೀನು ಮಾಡಿದ ತಪ್ಪನ್ನು ನಾವು ಕೇಳುವುದಕ್ಕೆ ಮೊದಲೇ ಒಪ್ಪಿಕೊಳ್ತಿಯಲ್ಲ ಅದು ನಮಗೆಲ್ಲ ಇಷ್ಟ ಆಗೋದು.ನಿನ್ನ ಹಾನೆಸ್ಟಿ ನಿನ್ನನ್ನು ಜೀವನದಲ್ಲಿ ಕೈ ಹಿಡಿದು ನಡೆಸುತ್ತೆ” ಎಂದು ಹೊಗಳಿಸಿಕೊಂಡ ಪ್ರತಿಭೆ ನಮ್ಮ ಭಂಡಾರಿ ಕುಟುಂಬದ “ಮನ್ವಿತ್ ಹರಿಕಿರಣ್ ಭಂಡಾರಿ” ಮತ್ತೆ ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಲಿಟ್ಲ್ ಮಾಸ್ಟರ್ಸ್ (DKD) ಮೂಲಕ ನಮ್ಮನ್ನು ರಂಜಿಸಲು ಬಂದಿದ್ದಾನೆ.
ಅತೀ ಕಡಿಮೆ ವಯಸ್ಸಿಗೆ ಇಷ್ಟೆಲ್ಲಾ ಸಾಧನೆ ಮಾಡಿರುವ ಮನ್ವಿತ್ ನಿಗೆ ವೇದಿಕೆಗಳು ಹೊಸದೇನಲ್ಲ.ಎರಡನೇ ತರಗತಿಯಲ್ಲಿದ್ದಾಗಲೇ ಇಂಟರ್ ನ್ಯಾಷನಲ್ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದ ಮನ್ವಿತ್ ಸೋನಿ ಟೀವಿಯ ಇಂಡಿಯನ್ ಐಡಲ್ ನಲ್ಲಿಯೂ ಕಾಣಿಸಿಕೊಂಡಿದ್ದ. ಕ್ವಿಜ್ ಕಾಂಪಿಟೀಷನ್ ಗಳಲ್ಲಿ ಹಲವಾರು ಬಾರಿ ಪ್ರಶಸ್ತಿ ಬಾಚಿಕೊಂಡಿರುವ ಇವನ ಸಾಮಾನ್ಯ ಜ್ಞಾನದ ಅಗಾಧತೆಯನ್ನು ಕಂಡು ಇವನ ಶಾಲೆಯ ಉಪಾದ್ಯಾಯರುಗಳೇ ಹೌಹಾರಿಹೋಗಿದ್ದರು.ಸಹಪಾಠಿಗಳಿಂದ ಗೂಗಲ್ ತಮ್ಮ ಅನ್ನುವ ನಿಕ್ ನೇಮ್ ಪಡೆದಿರುವ ಮನ್ವಿತ್ ಗೆ ಜೀ ಕನ್ನಡದ ಸರಿಗಮಪ ಲಿಟ್ಲ್ ಚಾಂಪ್ಸ್ ವೇದಿಕೆ ಕೈ ಬೀಸಿ ಕರೆಯಿತು.ವಾರದಿಂದ ವಾರಕ್ಕೆ ತನ್ನ ಹಾಡುಗಾರಿಕೆಯಿಂದ ಎಲ್ಲರ ಮನಗೆದ್ದು ಒಂದೊಂದೇ ಮೆಟ್ಟಿಲು ಏರುತ್ತಾ ಬಂದ ಮನ್ವಿತ್ ಗೆ ಚಾಲೆಂಜ್ ಸ್ವೀಕರಿಸುವುದು ಅಂದರೆ ತುಂಬಾ ಇಷ್ಟ.ಕನ್ನಡ ಸ್ಪಷ್ಟವಾಗಿ ಬರುವುದಿಲ್ಲ ಎಂದು ಕಾಲೆಳೆದಿದ್ದನ್ನು ಗಂಭೀರವಾಗಿ ಪರಿಗಣಿಸಿ ನಿರ್ಣಾಯಕರಾದ ರಾಜೇಶ್ ಕೃಷ್ಣನ್ ರವರು ನೀಡಿದ ಟಂಗ್ ಟ್ವಿಸ್ಟರ್ ಗಳನ್ನು ನಿರರ್ಗಳವಾಗಿ ಒಪ್ಪಿಸಿ ಅವರಿಂದಲೇ ಬೇಷ್ ಅನ್ನಿಸಿಕೊಂಡ.”ಅರಳೀಮರದಲಿ ಚಿಗುರೊಡೆದೆರೆಡೆಲೆ….ಹುಡುಗೀಕೆ
ಮಂಗಳೂರು ಮೂಲದ ಶ್ರೀ ಹರಿಕಿರಣ್ ಭಂಡಾರಿ ಮತ್ತು ಶ್ರೀಮತಿ ನಂದಿನಿ ಹರಿಕಿರಣ್ ಭಂಡಾರಿ ದಂಪತಿಗಳ ಮಗನಾದ ಮನ್ವಿತ್ ಬೆಂಗಳೂರು ಜೆ.ಪಿ ನಗರದ ಸೇಂಟ್ ಪೌಲ್ ಇಂಗ್ಲೀಷ್ ಸ್ಕೂಲ್ ನಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.ಸಂಗೀತವನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಗೀತಾ ಗರುಡಾರವರಿಂದ ಹಿಂದೂಸ್ತಾನಿ ಸಂಗೀತ ಮತ್ತು ಬದರೀಪ್ರಸಾದ್ ರ ಬಳಿ ಸುಗಮ ಸಂಗೀತ ಮತ್ತು ಫಿಲ್ಮೀ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾನೆ.
ಸಿಕ್ಕ ಅವಕಾಶಗಳನ್ನು ಬಾಚಿತಬ್ಬಿಕೊಳ್ಳುವ ಮನ್ವಿತ್ ಗೆ ತಂದೆ ತಾಯಿಯ ನಿರಂತರ ಪ್ರೋತ್ಸಾಹವೂ ಇದೆ. ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಲಿಟ್ಲ್ ಮಾಸ್ಟರ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿ,ಕಾಮಿಡಿ ಕಿಲಾಡಿಗಳು ಖ್ಯಾತಿಯ ಧೀಕ್ಷಾಳೊಂದಿಗೆ,ಮಂಜು ಮಾಸ್ಟರ್ ರ ಮಾರ್ಗದರ್ಶನದಲ್ಲಿ ಸ್ಪರ್ಧೆಗಿಳಿದು ಮೊದಲೆರಡು ವಾರ ನಿರ್ಣಾಯಕರ ಗಮನ ಸೆಳೆಯುವಲ್ಲಿ ವಿಫಲನಾದರೂ ರಕ್ಷಿತಾ ಪ್ರೇಮ್ ರ ಕಠಿಣ ಪರಿಶ್ರಮ ಬೇಕು ಮನ್ವಿತ್ ಅನ್ನುವ ಮಾತನ್ನು ಗಮನದಲ್ಲಿಟ್ಟುಕೊಂಡು ಮೂರನೇ ವಾರ ಮಾಡಿದ ಗೊಂಬೆ ಡ್ಯಾನ್ಸ್ ನೋಡಿ ನಿರ್ಣಾಯಕರೇ ಚಪ್ಪಾಳೆ ತಟ್ಟಿದರು.ಅರ್ಜುನ್ ಜನ್ಯಾರಂತೂ “ಮನ್ವಿತ್ ನೀನು ಸ್ಪರ್ಧೆಯಲ್ಲಿ ಗೆಲ್ತೀಯೋ? ಸೋಲ್ತೀಯೋ? ಗೊತ್ತಿಲ್ಲ. ಆದರೆ ನಿನ್ನ ಹಾರ್ಡ್ ವರ್ಕ್ ನಿನ್ನನ್ನು ಜೀವನದಲ್ಲಿ ತುಂಬಾ ಎತ್ತರಕ್ಕೆ ಕೊಂಡು ಹೋಗುವುದಂತೂ ನಿಜ“ಎಂದು ಮನದುಂಬಿ ಹಾರೈಸಿದರು.
ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7:30 ರಿಂದ 9 ಗಂಟೆಯ ವರೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ DKD ಯಲ್ಲಿ ನಿರೂಪಕಿಯಾಗಿರುವ ಅನುಶ್ರೀಯವರಿಗೆ ಅಕ್ಕಾ ಎನ್ನುತ್ತಾ,ನಿರ್ಣಾಯಕರು ಕೇಳುವ ಪ್ರಶ್ನೆಗಳಿಗೆ ಮುಗ್ಧತೆಯಿಂದ ಉತ್ತರಿಸಿದರೂ ಪ್ರೌಡಿಮೆಯಿಂದ ವರ್ತಿಸುವ ನಮ್ಮ ಭಂಡಾರಿ ಕುಟುಂಬದ ಈ ಅಪ್ಪಟ ಪ್ರತಿಭೆ ಸ್ಪರ್ಧೆಯಲ್ಲಿ ಇನ್ನೂ ಮುಂದುವರಿಯಲು ನಮ್ಮ ನಿಮ್ಮ ಪ್ರೋತ್ಸಾಹ,ಸಹಕಾರವೂ ಬೇಕು.ಮನ್ವಿತ್ ನನ್ನು ಬೆಂಬಲಿಸಲು ನಾವು ಮಾಡಬೇಕಾದುದು ಇಷ್ಟೇ. ನಿಮ್ಮ ಮೊಬೈಲ್ ನಿಂದ MADE ಅಂತ ಟೈಪ್ ಮಾಡಿ 57575 ನಂಬರ್ ಗೆ ಮೆಸೇಜ್ ಮಾಡಿದರಾಯ್ತು. ನೆನಪಿಡಿ ಮೆಸೇಜ್ ಮಾಡುವ ಸಮಯ ಶನಿವಾರ ಸಂಜೆ 7:30 ರಿಂದ ಸೋಮವಾರ ಬೆಳಿಗ್ಗೆ 9:30 ರ ವರೆಗೆ ಮಾತ್ರ. ನಮ್ಮ ನಿಮ್ಮಗಳ ಒಂದೊಂದು ಓಟು ಮನ್ವಿತ್ ಮತ್ತು ಧೀಕ್ಷಾ ರಿಗೆ ತುಂಬಾ ಅತ್ಯವಶ್ಯಕ.ದಯವಿಟ್ಟು ಓಟ್ ಮಾಡಿ.
ಇಂತಹ ಅದ್ಭುತ ಪ್ರತಿಭೆ ನಮ್ಮ ಭಂಡಾರಿ ಕುಟುಂಬದ ಆಸ್ತಿ.ಮನ್ವಿತ್ ಇನ್ನಷ್ಟು ಸಾಧನೆಗಳನ್ನು ಮಾಡಲಿ ತನ್ಮೂಲಕ ಅವನ ಹೆತ್ತವರಿಗೆ,ಭಂಡಾರಿ ಸಮಾಜಕ್ಕೆ,ಅವನಿಗೆ ವಿದ್ಯೆಯನ್ನು ಧಾರೆ ಎರೆದ ಗುರುಗಳಿಗೆ ಹೆಸರು ಕೀರ್ತಿ ತಂದುಕೊಡಲಿ,ಶ್ರೀ ದೇವರು ಮನ್ವಿತ್ ಗೆ ಹೆಚ್ಚಿನ ಶಕ್ತಿ ಚೈತನ್ಯ ನೀಡಿ ಹರಸಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯ ಶುಭ ಹಾರೈಕೆಗಳು.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.