November 22, 2024
Gruha Shanti pooja

Gruha Shanti pooja

ಗ್ರಹ ದೋಷ ಶಾಂತಿಗಾಗಿ ಸಾವಿರಗಟ್ಟಲೆ ಖರ್ಚು ಮಾಡಿ ಜ್ಯೋತಿಷ್ಯರ ಕಿಸೆ ತುಂಬಿಸುವ ಕಾಲ ಇದು. ಆದರೆ ನಮ್ಮ ಹಿರಿಯರು ಇಂತಹ ಗೋಜಿಗೆ ಹೋಗುತ್ತಿರಲಿಲ್ಲ. ಪ್ರತಿ ಅಮಾವಾಸ್ಯೆ ಅಥವಾ ಪ್ರತಿ ವರ್ಷ ಬರುವ “ಆಟಿದ ಅಮಾಸೆ” ದಿನ ತಮ್ಮದೇ ರೀತಿಯಲ್ಲಿ ಅವರ ಹಿರಿಯರಿಂದ ನೋಡಿ ಕಲಿತುಕೊಂಡು ಬಂದ ಕ್ರಮಗಳನ್ನು ಅನುಸರಿಸುತ್ತಿದ್ದರು. ಆ ಕಾರ್ಯಕ್ರಮ ಬಹಳ ಸರಳವಾಗಿದೆ. ಪ್ರತಿಮನೆಯಲ್ಲೂ ಮಾಡಬಹುದಾಗಿದೆ. ಬರುವ ಆಟಿ ತಿಂಗಳ ಅಮಾವಾಸ್ಯೆ ದಿನ ಮಾಡುವುದಾದರೆ ಮಾಡಬಹುದು. 
   ಹಿಂದೆಲ್ಲ ಆಟಿ ಅಮಾಸೆ ದಿನ 16 ವರ್ಷವರೆಗಿನ ಮಕ್ಕಳಿಗೆ ಮನೆಯಲ್ಲಿಯೇ “ತೊರತ್ ದೆಪ್ಪುನ” ಕಾರ್ಯಕ್ರಮ ಇತ್ತು. ಆ ದಿನ ಮಕ್ಕಳೆಲ್ಲ ಬೆಳಗ್ಗೆ 6 ಗಂಟೆಗೆ ಎದ್ದು ಹಲ್ಲುಜ್ಜಿ “ಪಾಲೆ ಕತ್ತೆದ ಕಷಾಯ” ಕುಡಿದು ಗೇರು ಬೀಜ ಬೆಲ್ಲ ತಿಂದು ಸ್ನಾನಕ್ಕೆ ರೆಡಿಯಾಗಬೇಕಿತ್ತು. ಮಣ್ಣಿನ ಹಂಡೆ ತುಂಬಾ ಬಿಸಿನೀರು ರೆಡಿಯಾಗುತ್ತು ಹಿರಿಯರಿಂದ ತಲೆಸ್ನಾನ ಮಾಡಿ ಮಕ್ಕಳೆಲ್ಲರೂ ಬಲು ಖುಷಿಯಿಂದ ಮಣೆಇಟ್ಟು ಸಾಲಾಗಿ “ತೊರತ್ತ್ ದೆಪ್ಪುನ” ಪೂಜೆಗೆ ಕೂರಬೇಕಿತ್ತು. ಈ ಪೂಜೆಯ ನಂತರ ತಾರಾಯಿ ಗಂಜಿ ತಿಂದು ಪಾಲೆ ಕಷಾಯದ ಉಷ್ಣವನ್ನು ಶಮನಗೊಳಿಸುತ್ತಿದ್ದರು.
“ತೊರತ್ತ್ ದೆಪ್ಪುನ”ಧಾರ್ಮಿಕ ಪೂಜೆ ಈ ರೀತಿ ನಡೆಯುತ್ತಿತ್ತು. 16 ವರ್ಷದ ಒಳಗಿನ ಮಕ್ಕಳ ಸಂಖ್ಯೆ ನೋಡಬೇಕು. ಉದಾಹರಣೆಗೆ ಐದು ಜನ ಇದ್ದರೆ ಅವರನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಮಣೆ ಅಥವಾ ಚಾಪೆಯ ಮೇಲೆ ಕೂರಿಸಬೇಕು. ಐವರಿಗೂ ಕೊಡಿಬಾಳೆ ಎಲೆಯನ್ನು ಹಾಕ ಬೇಕು. ಎದುರು ಒಂದು ದೀಪ ಇರಲಿ. ಜನರಿಗೊಂದು ದೀಪ ಇಟ್ಟರೆ ಲೇಸು. ಗಂಧದ ಕಡ್ಡಿ ಹಚ್ಚಿಡಿ. ಲೋಬಾನ ಧೂಪ ಉತ್ತಮ. 9 ಬಗೆಯ ಧಾನ್ಯ(ನವ ಧಾನ್ಯ)ಗಳನ್ನು ಒಂದು ಹರಿವಾಣದಲ್ಲಿ ಬೆರೆಸಿ ಇಡಿ.9 ಬಗೆಯ ಕಾಡು ಹೂಗಳನ್ನು (ವಿವಿಧ ಬಗೆಯ ಇದ್ದರೆ ಒಳ್ಳೆಯದು). ಇನ್ನೊಂದು ಹರಿವಾಣದಲ್ಲಿ ಸಂಗ್ರಹಿಸಿ ಇಡುವುದು. ಭತ್ತ,ತೊಗರಿ, ಕಡಲೆ,ರಾಗಿ ಗೋಧಿ,ಜೋಳ, ಎಳ್ಳು,ಸಾಸಿವೆ ಮತ್ತು ಹುರುಳಿ ಈ ಧಾನ್ಯಗಳನ್ನು ಸಂಗ್ರಹಿಸಿಡುವುದು. ಎಲ್ಲಾ ಇಡೀ ಕಾಳು ಆಗಿರಬೇಕು. ತೊಗರಿ ಇಡೀ ಕಾಳು ಸಿಗದ ಪಕ್ಷ ತೊಗರಿಬೇಳೆ ಉಪಯೋಗಿಸಬಹುದು. ತೊಗರಿ ಅಗತ್ಯವಾಗಿರಬೇಕು. ಇದು ಮಂಗಳ ಗ್ರಹಕ್ಕೆ ಇಷ್ಟವಾದುದು. 5 ನಾಣ್ಯವನ್ನು ರೆಡಿ ಮಾಡಿ ಇಡಬೇಕು.
ಮನೆಯ ಮೂಲೆ ಮೂಲೆಗಳಲ್ಲಿ ಧೂಪ ತೋರಿಸುವುದು. ಹರಡಿರುವ ಎಲೆಗಳಿಗೆ, ಮಕ್ಕಳಿಗೆ ಧೂಪ ತೋರಿಸುವುದು. ಬೆರೆಸಿಟ್ಟ ಒಂದಷ್ಟು ಹೂಗಳನ್ನು ಕೈಯಲ್ಲಿ ಹಿಡಿದು  ಬೇರೆ ಬೇರೆ ಆಗಿ ಪ್ರತಿ ಮಕ್ಕಳ ತಲೆಗೆ 9 ಸಲಸುತ್ತು ತಂದು ಎಲೆಯ ಮಧ್ಯಕ್ಕೆ ಹಾಕುವುದು. ನಂತರ ನವಧಾನ್ಯಗಳನ್ನು ಆದೇರೀತಿ 9ಸುತ್ತು ತಂದು ಎಲೆಗೆ ಹಾಕುವುದು. ಅದೇ ರೀತಿಯಲ್ಲಿ ನಾಣ್ಯವನ್ನು ಎಲೆಗೆ ಹಾಕುವುದು. ಎಲ್ಲಾ ಎಲೆಯಲ್ಲಿ ಕುಂಕುಮ ಇಡಬೇಕು. ನಂತರ ಅವರ ಎಲೆಗಳನ್ನು ನೆಲದಿಂದ ತೆಗೆದು 9ಸಲ ತಲೆಗೆ ಸುತ್ತು ತಂದು ಎಲ್ಲಾ ಎಲೆಗಳನ್ನು ಕೈಯಲ್ಲಿ ಹಿಡಿದು ಕೊಂಡಿರುವ ಬುಟ್ಟಿಯಲ್ಲಿ ಹಾಕಿ ಅವುಗಳನ್ನು ಹರಿಯುವ ನೀರಿನಲ್ಲಿ ಬಿಡುವುದು. ಬೇಕಾದಲ್ಲಿ ಬುಟ್ಟಿಯನ್ನು ವಾಪಾಸು ತರಬಹುದು. ನೆಲದಿಂದ ತೆಗೆದ ಎಲೆಗಳನ್ನು ಇನ್ನೊಮ್ಮೆ ನೆಲದಲ್ಲಿ ಇಡಬಾರದು. ಸಂಗ್ರಹಿಸಿಟ್ಟ ಆ ಬುಟ್ಟಿಯನ್ನೂ ಮನೆಯ ನೆಲದಲ್ಲಿ ಇಡಬಾರದು. ಕೂಡಲೆ ನೀರಲ್ಲಿ ಇಡಲು ಅಸಾಧ್ಯ ಆದಲ್ಲಿ ಆ ಬುಟ್ಟಿಯನ್ನು ಅಂಗಳದಲ್ಲಿ ಇಡಬಹುದು. ಎಲೆ ಹೊರಗೆ ತೆಗೆದುಕೊಂಡು ಹೋದ ನಂತರ ಮಕ್ಕಳು ದೇವರಿಗೆ ವಂದಿಸುವುದು. ನಂತರ ದೈವಗಳಿಗೆ ವಂದಿಸುವುದು. ಹತ್ತಿರ ಯಾವುದಾದರೂ ಒಂದು ನಾಗ ಬನ ಇದ್ದರೆ ಅಲ್ಲಿ ಹೋಗಿ ವಂದಿಸುವುದು. ಅಲ್ಲಿಯ ಪವಿತ್ರ ಮಣ್ಣನ್ನು ಹಣೆಗೆ ಅಡ್ಡವಾಗಿ ಧರಿಸುವುದು. ನಾಗಬನ ಹತ್ತಿರ ಇಲ್ಲದಿದ್ದರೆ ನಾಗ ದೇವರನ್ನು ನೆನೆದು ದೇವರ ಅಥವಾ ಬೂತೊಲೆ ಗಂಧ ಹಾಕುವುದು. ಈ ರೀತಿಯ ಶಾಂತಿಯನ್ನು ಮನೆಯ ಯಾವುದೇ ಸದಸ್ಯರು ಮಾಡಬಹುದು. “ತೊರತ್ತ್ ದೆಪ್ಪುನ” ಈ ಕಾರ್ಯ ನಿರ್ವಹಿಸುವವರು ಮನೆ ಹಿರಿಯರು ಆಗಿರುತ್ತಾರೆ. ಈಗಿನ ಕಾಲಕ್ಕೆ ಅದು ತಂದೆ ಅಥವಾ ತಾಯಿ ಆಗಿರಬಹುದು.
 
ಇ .ಗೋ.ಭಂಡಾರಿ ,ಕಾರ್ಕಳ.

Leave a Reply

Your email address will not be published. Required fields are marked *