ಸೇವೆಯನ್ನೇ ಧ್ಯೇಯವಾಗಿಸಿಕೊಂಡು,ಸಮಾಜದಲ್ಲಿ ಅಶಕ್ತರಿಗೆ ನೆರವು ನೀಡುವ ಮನೋಭಾವದ ಸಮಾನ ಮನಸ್ಕರೆಲ್ಲಾ ಒಗ್ಗೂಡಿ ಸಾಮಾಜಿಕ ಜಾಲತಾಣದಲ್ಲಿ ಒಂದು ಗ್ರೂಪ್ ರಚಿಸಿಕೊಂಡು ಕಳೆದ ಮೂರು ವರ್ಷಗಳಿಂದ ಅತೀ ಬಡಕುಟುಂಬಗಳನ್ನು ಗುರುತಿಸಿ ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ತಂಡವೇ “ಹಿಂದೂ ವಾರಿಯರ್ಸ್ ಗ್ರೂಪ್.”
ಇಂತಹ ಸಮಾಜಮುಖಿ ಚಿಂತನೆಯ ತಂಡದ ಸದಸ್ಯೆ ಪವಿತ್ರ ಭಂಡಾರಿ ವಿ.ಎಂ ನಗರ ನಮ್ಮ ಭಂಡಾರಿವಾರ್ತೆಯೊಂದಿಗೆ ಸದಾ ಸಂಪರ್ಕದಲ್ಲಿದ್ದು ನಾವು ಭಂಡಾರಿವಾರ್ತೆ ಮೂಲಕ ಮಾಡುತ್ತಿರುವ ಸಮಾಜಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ನಾವು ಭಂಡಾರಿವಾರ್ತೆಯಲ್ಲಿ ಯಾವುದಾದರೂ ಸಹಾಯಹಸ್ತಕ್ಕಾಗಿ ವರದಿಗಳನ್ನು ಪ್ರಕಟಿಸಿದಾಗ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ಹಲವರಂತೆ ಪವಿತ್ರ ಭಂಡಾರಿ ವಿ.ಎಂ ನಗರ ನಮ್ಮೊಂದಿಗೆ ಕೈ ಜೋಡಿಸುತ್ತಾರೆ.ಅದೇ ರೀತಿ ನಾವು ಕೆಲದಿನಗಳ ಹಿಂದೆ ಪಿಯುಸಿ ಪೂರೈಸಿ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಒಬ್ಬ ವಿದ್ಯಾರ್ಥಿನಿಯ ಬಗ್ಗೆ ನಮ್ಮ ಭಂಡಾರಿವಾರ್ತೆಯ ಗ್ರೂಪಿನಲ್ಲಿ ಚರ್ಚೆ ನಡೆಸುತ್ತಿರುವಾಗ ಸ್ವಯಂಪ್ರೇರಿತವಾಗಿ ಮುಂದೆ ಬಂದ ಪವಿತ್ರಾರವರು ತಮ್ಮ ಹಿಂದೂ ವಾರಿಯರ್ಸ್ ತಂಡದಿಂದ ಸಹಾಯ ಮಾಡುವ ಭರವಸೆಯನ್ನು ನೀಡಿದರು.ಅದರಂತೆ ಮೂಡುಬಿದಿರೆ ಕೊಡಂಗಲ್ಲು ಮಹಾವೀರ ಕಾಲೇಜಿನಲ್ಲಿ ಪಿಯುಸಿ ಪೂರೈಸಿ ಮುಂದಿನ ವಿದ್ಯಾಭ್ಯಾಸಕ್ಕೆ ದಾರಿಕಾಣದೇ ಆರ್ಥಿಕ ಸಂಕಷ್ಟದಲ್ಲಿದ್ದ ಮೂಡುಬಿದಿರೆ ಇರುವೈಲು ಗ್ರಾಮದ ಶ್ರೀ ಶುಭಕರ ಭಂಡಾರಿ ಮತ್ತು ಶ್ರೀಮತಿ ಮಂಜುಳಾ ಶುಭಕರ ಭಂಡಾರಿ ದಂಪತಿಯ ಪುತ್ರಿ ಕು.ಸುಷ್ಮಾ ರವರನ್ನು ಗುರುತಿಸಿ ತಮ್ಮ ಹಿಂದೂ ವಾರಿಯರ್ಸ್ ಗ್ರೂಪಿನ 50 ನೇ ಸೇವಾ ಯೋಜನೆಯಲ್ಲಿ 12,600 ರೂಪಾಯಿಗಳ ಧನಸಹಾಯ ಒದಗಿಸಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ವಿಶ್ವ ವಿದ್ಯಾಲಯದಲ್ಲಿ ಕಾನೂನು ಪದವಿಗೆ ಪ್ರವೇಶ ಪಡೆಯಲು ಸಹಕರಿಸಿದರು.
ಇತ್ತೀಚೆಗೆ ಮಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಆಯ್ದ ಐದು ಬಡಕುಟುಂಬಗಳ ವಿದ್ಯಾರ್ಥಿಗಳಿಗೆ ಒಟ್ಟು ಐವತ್ತು ಸಾವಿರದ ನೂರು ರೂಪಾಯಿಗಳನ್ನು ಆದ್ಯತೆಯ ಮೇರೆಗೆ ವಿಂಗಡಿಸಿ,ಆಶ್ರಮದ ಪೂಜ್ಯ ಶ್ರೀಗಳಾದ ಶ್ರೀ ಜಿತಕಾಮಾನಂದಜೀ ಯವರ ಅಮೃತ ಹಸ್ತದಿಂದ ವಿತರಿಸಲಾಯಿತು.ನಮ್ಮ ಭಂಡಾರಿ ಸಮಾಜದ ವಿದ್ಯಾರ್ಥಿನಿಯಾಗಿರುವ ಕುಮಾರಿ ಸುಷ್ಮಾ.ಎಸ್.ಭಂಡಾರಿಯವರಿಗೆ 12600/- ರೂಪಾಯಿಗಳ ನಗದನ್ನು ವಿತರಿಸಲಾಯಿತು .
ಹಿಂದೂ ವಾರಿಯರ್ಸ್ ಗ್ರೂಪಿನ ಮುಖಾಂತರ ವಿದ್ಯಾಭ್ಯಾಸಕ್ಕಾಗಿ ಸಹಾಯ ಹಸ್ತ ಪಡೆದಿರುವ ಇತರ ನಾಲ್ಕು ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ .
1) ವಿಟ್ಲದ ಕುಡ್ತಮುಗೇರು ನಿವಾಸಿ, ಪ್ರತಿಭಾವಂತ ಬಡತನತದ ಹುಡುಗ ಗಣೇಶ ಅವರಿಗೆ ಶಿಕ್ಷಣ ಮುಂದುವರಿಸುವ ಸಲುವಾಗಿ ರೂ 8000
2) ಬಜಗೋಳಿ ಬಳಿಯ ಮಾಳ, ಮುಲ್ಲುರಿನ ಅವಳಿ ಮಕ್ಕಳಾದ ರಕ್ಷಿತಾ, ಮತ್ತು ರಾಹುಲ್ ಇವರಿಗೆ ಕಲಿಕೆಗೆ ಮತ್ತು ಇವರಿಗೆ ಆರೋಗ್ಯ ಸಮಸ್ಯೆಯೂ ಇದ್ದು ತಂದೆಯನ್ನು ಕಳೆದುಕೊಂಡು, ಸ್ವಂತ ಸೂರಿಲ್ಲದೆ, ತಾಯಿ ಟೈಲರ್ ವೃತ್ತಿ ಮಾಡುತ್ತಾ ಜೀವನ ನಿರ್ವಹಿಸುತ್ತಿರುವ ಕುಟುಂಬಕ್ಕೆ ತಲಾ ರೂ 10000 ದಂತೆ ಒಟ್ಟು ರೂ 20000
ಹಾಗೂ
3) ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ಶ್ರೀಮತಿ ಸುಂದರಿ ಅವರ ಗಂಡ ಒಂದು ವರ್ಷದ ಮೊದಲು ದೈವದೀನರಾಗಿದ್ದು ಇವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು .ಇವರ 3 ಮಕ್ಕಳಲ್ಲಿ ಬಹಳ ಕಷ್ಟ ದೊಂದಿಗೆ ನರ್ಸಿಂಗ್ ವಿಧ್ಯಾಭ್ಯಾಸ ಮಾಡುತ್ತಿರುವ ಕುಮಾರಿ ಜಯಂತಿ ಅವರ ಕುಟುಂಬಕ್ಕೆ ರೂ 10000 ಸಮಸ್ತ ಹಿಂದೂ ವಾರಿಯರ್ಸ ತಂಡದ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಸಮಾಜಮುಖಿ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೇವಲ ಮೂರು ವರ್ಷದ ಅಲ್ಪಾವಧಿಯಲ್ಲಿಯೇ 50 ನೇ ಸೇವಾ ಯೋಜನೆಯನ್ನು ಪೂರೈಸಿರುವುದು “ಹಿಂದೂ ವಾರಿಯರ್ಸ್ ಗ್ರೂಪ್” ನ ಹೆಗ್ಗಳಿಕೆಯೇ ಸರಿ.ಗ್ರೂಪಿನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ,ಮುಖ್ಯವಾಗಿ ಪವಿತ್ರ ಭಂಡಾರಿ ವಿ.ಎಂ ನಗರ ಗೂ ನಮ್ಮ ಭಂಡಾರಿವಾರ್ತೆ ತಂಡ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಸಮಯ ಬಂದಾಗ ಸಹಾಯಹಸ್ತ ಚಾಚುತ್ತಾ,ಸಹಾಯಹಸ್ತ ಚಾಚುವವರಿಗೆ ಪ್ರೇರೇಪಿಸುತ್ತಾ ಭಂಡಾರಿ ಬಂಧುಗಳ ಮನಗೆಲ್ಲುತ್ತಾ “ಭಂಡಾರಿವಾರ್ತೆ” ಸಾಗುತ್ತಿದೆ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯೆನಿಸುತ್ತದೆ.ಸಹಾಯ ಮಾಡಲು ಹಣವಿದ್ದರೆ ಮಾತ್ರ ಸಾಲದು ಸಹಾಯ ಮಾಡುವ ಗುಣವಿರಬೇಕು ಎಂಬ ಧ್ಯೇಯವಾಕ್ಯದಂತೆ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಕಾರ್ಯನಿರ್ವಹಿಸುತ್ತಿದೆ ಎಂಬುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.ಭಂಡಾರಿವಾರ್ತೆ ಈ ವರ್ಷದಲ್ಲಿ ಹಲವು ಬಡವಿದ್ಯಾರ್ಥಿಗಳ ಶೈಕ್ಷಣಿಕ ಖರ್ಚುವೆಚ್ಚಗಳನ್ನು ನೋಡಿಕೊಂಡಿರುವುದಲ್ಲದೇ,ಹಲವು ಅಶಕ್ತ ಅನಾರೋಗ್ಯಪೀಡಿತರ ಆಸ್ಪತ್ರೆಯ ವೆಚ್ಚಗಳನ್ನು ಭರಿಸಿದೆ.ಇದೆಲ್ಲಾ ಸಾಧ್ಯವಾಗಿದ್ದು ಭಂಡಾರಿವಾರ್ತೆಯ ಕೆಲವು ಸಹೃದಯಿ ಓದುಗರಿಂದ,ಅವರ ಔದಾರ್ಯಕ್ಕೆ ನಾವೆಂದೂ ಚಿರ ಋಣಿಗಳಾಗಿದ್ದೇವೆ.
ಮೊದಮೊದಲು ಭಂಡಾರಿ ಬಂಧುಗಳ ಪ್ರತಿಭೆಗಳಿಗೆ ವೇದಿಕೆಯಾಗಿ,ಮನೆ ಮನೆ ಸುದ್ದಿಗಳನ್ನು ಬಿತ್ತರಿಸುತ್ತಾ ಮನೆಮನಗಳ ಗೆದ್ದು,ಅಶಕ್ತರಿಗೆ ಮತ್ತು ದುರ್ಬಲರಿಗೆ ಸಕಾಲದಲ್ಲಿ ನೆರವಿಗೆ ಧಾವಿಸಿ ಆತ್ಮಬಂಧುವಾಗಿ,ಬಂಧುಗಳ ಜೀವನಮಟ್ಟ,ಆರೋಗ್ಯ,ಉದ್ಯೋಗ,ವಿವಾಹ..
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.