November 23, 2024
Savita samaja Sagara Protest2

ಬಡಕ್ಷೌರಿಕರ ತುತ್ತು ಅನ್ನಕ್ಕೆ ಕುತ್ತು ತಂದಿರುವ ಬಂಡವಾಳಷಾಹಿಗಳ ವಿರುದ್ಧ,ಪರರಾಜ್ಯಗಳ ಪರದೇಶಿಗಳ ಕ್ಷೌರಿಕ ಕಾರ್ಮಿಕರ ಹಾವಳಿಯ ವಿರುದ್ಧ ಮೊಟ್ಟಮೊದಲನೆಯವರಾಗಿ ಸಿಡಿದೆದ್ದ ಸಾಗರ ತಾಲೂಕಿನ ಸವಿತಾ ಸಮಾಜ ಪ್ರತಿಭಟನೆಗೆ ಕರೆಕೊಟ್ಟಿದ್ದು ಸವಿತಾ ಬಂಧುಗಳಿಂದ ಅಭೂತಪೂರ್ವ ಸ್ಪಂದನೆ ದೊರಕಿತು.ಆಗಸ್ಟ್ 8 ರ ಬುಧವಾರ ಸವಿತಾ ಸಮಾಜದವರೆಲ್ಲರೂ ತಮ್ಮ ತಮ್ಮ ಅಂಗಡಿ,ವ್ಯವಹಾರಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಲು ನೀಡಿದ್ದ ಕರೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಸಮಾಜದ ಬಂಧುಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.

ಸಾಗರದ ಸವಿತಾ ಸಮಾಜ ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಷಣ್ಮುಖಪ್ಪ ಹುಲಿದೇವರಬನ,ಸಾಗರ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ರಾಮಣ್ಣನವರು,ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಂಡಾರಿಯವರು,ಶಿವಮೊಗ್ಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ಮೋಹನ್ ರವರು,ಸ್ವರಾಜ್ ಅಭಿಯಾನದ ಸಾಗರ ತಾಲೂಕಾಧ್ಯಕ್ಷರು,ಭಂಡಾರಿ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ,ಸವಿತಾ ಸಮಾಜದ ಸಲಹಾ ಸಮಿತಿಯ ಸದಸ್ಯರಾದ ಶ್ರೀ ರವಿಪ್ರಕಾಶ್ ಭಂಡಾರಿ ಹೆಗ್ಗೋಡು ಮುಂತಾದ ಸಮಾಜ ಪ್ರಮುಖರ ಮುಂದಾಳತ್ವದಲ್ಲಿ ಶ್ರೀ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಜಮಾವಣೆಗೊಂಡ ನೂರಾರು ಬಂಧುಗಳು,ಸವಿತಾ ಸಮಾಜ ಮಹಿಳಾ ಘಟಕದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು.

ದೇವಸ್ಥಾನದಲ್ಲಿ ಶ್ರೀ ಗಣಪತಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಹೊರಟು,ಶಿವಪ್ಪ ನಾಯಕ ವೃತ್ತ,ಬಿ.ಹೆಚ್.ರಸ್ತೆ,ಅಶೋಕ ರಸ್ತೆ,ಚಾಮರಾಜಪೇಟೆ,ಖಾಸಗಿ ಬಸ್ ನಿಲ್ದಾಣದ ಮುಖಾಂತರ ಹಾದು ಉಪವಿಭಾಗೀಯ ದಂಡಾಧಿಕಾರಿಗಳ ಕಛೇರಿ ಮುಂಭಾಗ ತಲುಪಿ,ಅಗಲಿದ ಹಿರಿಯ ಚೇತನ,ಸವಿತಾ ಸಮಾಜದ ಬಂಧು,ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶ್ರೀ ಕರುಣಾನಿಧಿಯವರ ನಿಧನಕ್ಕೆ ಸಂತಾಪ ಸೂಚಿಸಿ,ಒಂದು ನಿಮಿಷದ ಮೌನಾಚರಣೆ ಆಚರಿಸಲಾಯಿತು. ನಂತರ ಬಂಡವಾಳಶಾಹಿ ಉದ್ಯಮಿಗಳ ಹುನ್ನಾರ,ಉತ್ರರ ಪ್ರದೇಶ,ಬಿಹಾರ,ಜಾರ್ಖಂಡ್,ಬಾಂಗ್ಲಾದೇಶ ಮುಂತಾದ ಕಡೆಗಳಿಂದ ವಲಸೆ ಬಂದು ಸ್ಥಳೀಯವಾಗಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವವರ ಹಾವಳಿಯ ಬಗ್ಗೆ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿಕೊಟ್ಟು, ಅಧಿಕಾರಿಗಳ ಗಮನ ಸೆಳೆದು ಉಪವಿಭಾಗಾಧಿಕಾರಿಗಳಿಗೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿಪತ್ರ ನೀಡಲಾಯಿತು.

ಸವಿತಾ ಸಮಾಜದ ಬೇಡಿಕೆಯ ಮನವಿಪತ್ರಗಳ ಪ್ರತಿಗಳನ್ನು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ,ಸಾಗರದ ಸನ್ಮಾನ್ಯ ಶಾಸಕರಾದ ಶ್ರೀ ಹಾಲಪ್ಪನವರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಕುಮಾರಸ್ವಾಮಿಯವರಿಗೆ ಕಳುಹಿಸುವ ತೀರ್ಮಾನದೊಂದಿಗೆ ಪ್ರತಿಭಟನಾ ಮೆರವಣಿಗೆ ಕೊನೆಗೊಂಡಿತು.

ಅನ್ಯಧರ್ಮೀಯರು,ಬೇರೆ ಬೇರೆ ಪಂಗಡದವರು ನಮ್ಮ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಆರಂಭಿಸಿ,ಕೆಲಸದ ಗಂಧ ಗಾಳಿಯಿಲ್ಲದ ಬೇರೆ ಬೇರೆ ರಾಜ್ಯದ,ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಉದ್ಯೋಗವಕಾಶ ಮಾಡಿಕೊಟ್ಟು,ಅವರಿಗೆ ಇಲ್ಲಿ ಅಕ್ರಮವಾಗಿ ನೆಲೆಸಲು ಅವಕಾಶ ಮಾಡಿಕೊಟ್ಟು ದೇಶದ ಭದ್ರತೆಗೆ ಭಂಗ ತರುವ ಜೊತೆಗೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಸಾಗರ ತಾಲೂಕಿನ ಸವಿತಾ ಸಮಾಜದ ಪ್ರತಿಭಟನೆ ನಿಜಕ್ಕೂ ಸ್ತುತ್ಯಾರ್ಹ.ಪ್ರತಿಭಟನೆಯಲ್ಲಿ ಭಾಗವಹಿಸಿದ ಸವಿತಾ ಸಮಾಜ,ಭಂಡಾರಿ ಸಮಾಜದ ಪ್ರತಿಯೊಬ್ಬ ಸದಸ್ಯರು,ಪದಾಧಿಕಾರಿಗಳಿಗೆ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಾ,ನಿಮ್ಮ ಹೋರಾಟದೊಂದಿಗೆ ಭಂಡಾರಿವಾರ್ತೆ ಸದಾ ಬೆಂಬಲವಾಗಿ ನಿಲ್ಲುತ್ತದೆಂಬ ಭರವಸೆ ನೀಡುತ್ತದೆ.

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

1 thought on “ಸಾಗರ ತಾಲೂಕು ಸವಿತಾ ಸಮಾಜ ಬಂಧುಗಳ ಯಶಸ್ವಿ ಪ್ರತಿಭಟನೆ

  1. Thank you Bhandary Varthe, for your perfect and meaningful report on the issue and event. We thankfully welcome the strength of soildarity shown by the “Samaja” on a serious cause. Thank you all.

Leave a Reply

Your email address will not be published. Required fields are marked *