November 25, 2024
jiddu
      ಆಳವಾದ ಮಾನಸಿಕ ಕ್ರಾಂತಿಯನ್ನು ಬಯಸುವಾತ ಅಧಿಕಾರದಿಂದ ಮುಕ್ತನಾಗಬೇಕಲ್ಲವೇ? ಆತ ತಾನೇ ಸೃಷ್ಟಿಸಿಕೊಂಡ ಅಥವಾ ಇತರರು ತನ್ನ ಮೇಲೆ ಹೇರಿದ ಅಧಿಕಾರದ ಆಶ್ರಯವನ್ನು ನಿರಾಕರಿಸಬಬೇಕು,ಇದು ಸಾಧ್ಯವೇ? ನಾನು ನನ್ನದೇ ಅನುಭವವನ್ನು, ಅನುಭವದ ಅಧಿಕಾರವನ್ನು, ಆಶ್ರಯಿಸದೆ ಇರುವುದು ಹೇಗೆ ಸಾಧ್ಯ? ಪುಸ್ತಕ ಗುರುಗಳು, ಮೇಷ್ಟರು,ಚರ್ಚ್, ಮಠ, ನಂಬಿಕೆಗಳು ಇಂಥ ಬಾಹ್ಯ ಅಧಿಕಾರ ರೂಪಗಳನ್ನೆಲ್ಲ ನಿರಾಕರಿಸಿದಾಲೂ ನನ್ನ ಸ್ವಂತ ತೀರ್ಮಾನ, ಸ್ವಂತ ಅನುಭವ, ಸ್ವಂತ ವಿಶ್ಲೇಷಣೆಗಳನ್ನು ಅವಲಂಬಿಸಬಹುದೆಂಬ ಭಾವನೆ ಇರುತ್ತದೆ. ಆದರೆ ಹೀಗೆ ಸ್ವಂತ ಅನುಭವ, ತೀರ್ಮಾನ, ವಿಶ್ಲೇಷಣೆಗಳನ್ನು ನೆಚ್ಚಿಕೊಳ್ಳುವುದು ಸಾಧ್ಯವೇ?  ನನ್ನ ಅನುಭವವೆಂಬುದು ನನ್ನ ಬದುಕಿನ ರೂಢಿಯ ಫಲಿತಾಂಶ, ಹಾಗೆಯೇ ನಿಮ್ಮದು ಕೂಡ ನಿಮ್ಮ ರೂಢಿಯ ಫಲಿತಾಂಶ. ನಾನು  ಮುಸ್ಲಿಂ, ಹಿಂದೂ ಅಥವಾ ಬೌದ್ಧನಾಗಿ ಬೆಳೆದಿರುವುದು. ನನ್ನ ಅನುಭವವೆಂಬುದು ನನ್ನ ಸಂಸ್ಕೃತಿ  ಸಮಾಜ,ಧರ್ಮ ಮತ್ತು ಆರ್ಥಿಕ ಸಂಗತಿಗಳ ಆಧಾರದ ಮೇಲೆ ರೂಪಗೊಂಡಿರುತ್ತದೆ.ನಿಮ್ಮ  ಅನುಭವವು ಹಾಗೆಯೇ. ನನ್ನ ತೀರ್ಮಾನಗಳು ಕೂಡ ಸಂಗ್ರಹಗೊಂಡ ನೆನಪುಗಳ,ಅನುಭವಗಳ,ವರ್ತಮಾನವನ್ನು ಸಂಧಿಸುವ ಭೂತಕಾಲದ ಪರಿಣಾಮವೇ ಅಲ್ಲವೇ ?  ಹೀಗೆ ನನ್ನನ್ನೇ ಪ್ರಶ್ನಿಸಿಕೊಂಡಾಗ,ನನ್ನ ಸಮಸ್ಯೆಯನ್ನು ಅರ್ಥಮಾಡಿಕೊಂಡಾಗ,ಕೇವಲ ಒಂದು ಸ್ಥಿತಿಯಲ್ಲಿ ಮಾತ್ರ ಸತ್ಯದ,ಹೊಸತನದ,ಕ್ರಾಂತಿಕಾರಿ ದರ್ಶನ ಸಾಧ್ಯವೆಂದು ಹೊಳೆಯುತ್ತದೆ‌.  ಆ ಸ್ಥಿತಿ ಅಂದರೆ ಮನಸ್ಸು  ಪೂರ್ಣವಾಗಿ ಖಾಲಿಯಾಗಿರುವ ಸ್ಥಿತಿ.

“ಭೂತಕಾಲವೆಂಬುದಿಲ್ಲದೆ,ವಿಶ್ಲೇಷಕನಿಲ್ಲದೆ,ಅನುಭವವಿಲ್ಲದೆ,ತೀರ್ಮಾನವಿಲ್ಲದೆ,ಯಾವುದೇ ಬಗೆಯ ಅಧಿಕಾರವಿಲ್ಲದೆ,ಮನಸ್ಸು ಪೂರಾ ಖಾಲಿಯಾಗಿರುವ ಸ್ಥಿತಿಯಲ್ಲಿ ಸತ್ಯ ಹೊಳೆಯುತ್ತದೆ”…

      ನಮ್ಮಲ್ಲಿ ಎಲ್ಲರಿಗೂ ಅಸಂಖ್ಯಾತವಾದ ಸಮಸ್ಯೆಗಳಿವೆ.ಅವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ಬಗ್ಗೆ ನಮಗೆ ಅರಿವು ಇರಬೇಕಲ್ಲವೇ? ನಮ್ಮನ್ನು ನಾವು ತಿಳಿಯುವುದು ಬಹಳ ಕಷ್ಟದ ಕೆಲಸ.ಈ ಕೆಲಸ ಏಕಾಂತದಲ್ಲಿ,ಲೋಕದಿಂದ ದೂರವಾಗಿದ್ದು ಒಂಟಿತನದಲ್ಲಿ ಸಾಧಿಸಬಹುದಾದ ಕೆಲಸವಲ್ಲ.ನಮ್ಮನ್ನು ನಾವು ತಿಳಿಯುವುದು ಮುಖ್ಯ. ಆದರೆ ಅದಕ್ಕಾಗಿ ನಾವು ಸಂಬಂಧಗಳನ್ನು ಕಡಿದುಕೊಳ್ಳಬೇಕಾಗಿಲ್ಲ.ಒಂಟಿಯಾಗಿದ್ದು, ಏಕಾಂತವಾಸದಲ್ಲಿದ್ದು.ಅಥವಾ ಪುಸ್ತಕಗಳನ್ನು ಓದಿ ನಮ್ಮನ್ನು ನಾವು ಸಂಪೂರ್ಣವಾಗಿ, ನಿಜವಾಗಿ ತಿಳಿದುಕೊಳ್ಳಲು ಸಾಧ್ಯ ಎಂಬುದು ತಪ್ಪು ಕಲ್ಪನೆ. ನಮ್ಮ ಬಗ್ಗೆ  ನಾವು ಪಡೆಯುವ ಅರಿವು ಒಮ್ಮೆ ಸಾಧಿಸಿ ಮುಗಿಸಿಬಿಡಬಹುದಾದ ಗುರಿಯಲ್ಲ. ಅದೊಂದು ನಿರಂತರವಾದ ಕೆಲಸ. ನಮ್ಮನ್ನು ನಾವು ತಿಳಿಯ ಬೇಕಾದರೆ ಕ್ರಿಯೆಗಳಲ್ಲಿ ನಮ್ಮನ್ನು ನಾವು ನೋಡಿಕೊಳ್ಳಬೇಕು. ನಮ್ಮ ಸಮಾಜದೊಡನೆ, ಮನುಷ್ಯರೊಡನೆ, ಗಂಡನೊಡನೆ, ಹೆಂಡತಿಯೊಡನೆ, ಸಹೋದರ ಸಹೋದರಿಯೊಡನೆ ನಿಮ್ಮ ಸಂಬಂಧ ಹೇಗಿದೆ ಎಂದು ನೋಡಿಕೊಳ್ಳಿ, ನೀವು ಹೇಗೆ ಪ್ರತಿಕ್ರಿಯೆ ತೋರುತ್ತಿರಿ ಎಂಬುದನ್ನು ಗಮನಿಸಿ. ಆದರೆ ಹೀಗೆ ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ ಮನಸ್ಸು ಬಹಳ ಎಚ್ಚರವಾಗಿರಬೇಕು, ನಮ್ಮಲ್ಲಿ ತೀಕ್ಷ್ಣವಾದ ಗ್ರಹಿಕೆ  ಇರಬೇಕು..
      ನಾವು ಹೇಗಿದ್ದೇವೆಯೋ ಹಾಗೆಯೇ ನಮ್ಮನ್ನು ತಿಳಿಯಬೇಕೇ ಹೊರತು ನಾವು ಏನಾಗಬೇಕೆಂದಿದ್ದೇವೆ ಎಂಬುದನ್ನಲ್ಲ. ನಾವು ಏನಾಗಬೇಕೆಂದಿದ್ದೇವೆ ಎಂಬುದು ಆದರ್ಶ, ಅದ್ದರಿಂದೇ ಕಾಲ್ಪನಿಕವಾದದ್ದು, ನಿಜವಲ್ಲದ್ದು. ಏನು ಇದೆಯೋ ಅದನ್ನು ಮಾತ್ರ ಬದಲಾಯಿಸಬಹುದಲ್ಲದೆ, ಏನು ಆಗಬೇಕೆಂದಿದ್ದೇವೆಯೋ ಅದನ್ನು ಬದಲಿಸಲು ಸಾಧ್ಯವಿಲ್ಲ. ನಾವು ಹೇಗಿದ್ದೇವೆಯೋ ಹಾಗೆಯೇ ನಮ್ಮನ್ನು ಕಾಣಲು ಮನಸ್ಸು ಬಹಳ ಬಹಳ ಎಚ್ಚರವಾಗಿರಬೇಕು. ಏಕೆಂದರೆ ಏನು ಇದೆಯೋ ಅದು ಸದಾ ಬದಲಾಗುತ್ತಿರುತ್ತದೆ. ಈ ಬದಲಾವಣೆಯನ್ನು ಅರಿಯಲು ಮನಸ್ಸು ಸ್ವತಂತ್ರವಾಗಿರಬೇಕು, ಯಾವುದೇ ನಂಬಿಕೆ,ವರ್ತನೆಯ ವಿನ್ಯಾಸ, ಧರ್ಮಗಳಿಗೆ ಕಟ್ಟುಬಿದ್ದಿರಬಾರದು. ಕಟ್ಟುಬಿದ್ದಿರುವ ಮನಸ್ಸು ಏನನ್ನೂ ಅದು ಇರುವಂತೆಯೇ ಗ್ರಹಿಸಲಾರದು. ನಮ್ಮನ್ನು ನಾವು ತಿಳಿಯಬೇಕಾದರೆ ನಮ್ಮ ಮನಸ್ಸು ಎಲ್ಲ ಆದರ್ಶ,ಎಲ್ಲ ನಂಬಿಕೆಗಳಿಂದ ಮುಕ್ತವಾಗಿರಬೇಕು. ಅವು ನಮ್ಮ ನೋಟಕ್ಕೆ ಬಯಕೆಯ ಬಣ್ಣವನ್ನು ತಂದುಬಿಡುತ್ತವೆ. ನಾನು ದುರಾಸೆಯವನು, ಅಸೂಯೆ ತುಂಬಿದವನು, ಕ್ರೂರಿ, ಇತ್ಯಾದಿ ಏನೇನೋ ಆಗಿದ್ದರೆ ಆಗ ಅಹಿಂಸೆ, ಔದಾರ್ಯಗಳ ಆದರ್ಶವನ್ನು ಇಟ್ಟುಕೊಂಡು ಫಲವೇನು? ನಿಮ್ಮನ್ನು ನೀವು ಹೇಗಿದ್ದಿರೋ ಹಾಗೆ ನೋಡುಕೊಳ್ಳಿ, ಕುರೂಪಿ ಅಥವಾ ಸುಂದರ,ದುಷ್ಟ ಅಥವಾ ತರಲೆ, ಏನಾದರೂ ಆಗಿರಿ,ಯಾವುದೇ ವಿಕೃತಿ ಇಲ್ಲದೆ,ನೀವು ಹೇಗಿದ್ದೀರೋ ಹಾಗೆ ನಿಮ್ಮನ್ನು ಕಾಣಲು ಸಾಧ್ಯವಾದರೆ ಅದೇ ಗುಣ‌. ಗುಣವಿಲ್ಲದೆ ಮನಸ್ಸು ಸ್ವತಂತ್ರವಾಗಲಾರದು.
      ನಮ್ಮ ಬಗ್ಗೆ ನಮಗೆ ಜ್ಞಾನವಿಲ್ಲದಿದ್ದರೆ ಆಗ ಎಲ್ಲಾ ಅನುಭವಗಳು ಭ್ರಮೆಯನ್ನು ಮಾತ್ರ ಹುಟ್ಟಿಸುತ್ತವೆ.ನಮ್ಮ ಬಗ್ಗೆ ನಮಗೆ ಅರಿವಿದ್ದರೆ ಆಗ ಅನುಭವವು ನೆನಪುಗಳ  ಗತಿಯನ್ನು ಉಳಿಸುವುದಿಲ್ಲ.ನಮ್ಮ ಬಗ್ಗೆ ನಾವು ಅರಿಯುವುದೆಂದರೆ ಕ್ಷಣ ಕ್ಷಣವೂ ನಮ್ಮ ಉದ್ದೇಶ, ಹಂಬಲ,ಆಲೋಚನೆ, ಹಸಿವುಗಳ ಬಗ್ಗೆ ಇರುವುದನ್ನು ಇರುವಂತೆ ಕಂಡುಕೊಳ್ಳುವುದು.  ನನ್ನ ಅನುಭವ ಎಂಬ ಮಾತೇ ಮೌಢ್ಯ ಮತ್ತು ಭ್ರಮೆಗಳನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಸೂಚಿಸುತ್ತದೆ, ಅದ್ದರಿಂದ ನಮ್ಮನ್ನು ನಾವು ಅರಿಯುವುದು ನಿರಂತರ ಪ್ರಕ್ರಿಯೆಯಾಗಿದೆ .
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು

ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ), ಭಂಡಾರಿ ವಾರ್ತೆ

2 thoughts on “ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ – (ಧ್ಯಾನ- 5)

  1. ಬದುಕಿಗೆ ಉತ್ತಮ ಅರಿವು ತಿಳಿಸಿದ್ದಿರಿ ಸರ್.

Leave a Reply

Your email address will not be published. Required fields are marked *