September 20, 2024

ಮ್ ಜೀಯೆಂಗೆ ತೋ ಇಸ್ ಭಾರತ್ ಕೇ ಲಿಯೇ…
ಮರೇಂಗೆ ತೋ ಇಸ್ ಭಾರತ್ ಕೇ ಲಿಯೇ…
ಔರ್ ಮರ್ನೇಕೆ ಬಾದ್ ಭೀ,ಗಂಗಾ ಜಲ್ ಮೆ ಬೆಹತೀ ಹುಯೀ ಹಮಾರೇ ಅಸ್ಥಿಯೋಂಸೇ ಆವಾಝ್ ಆಯೇಗಿ….ಭಾರತ್ ಮಾತಾ ಕೀ ಜೈ.!!!

ನೋಡಿ ಅಟಲ್ ಜೀ ಹೀಗೆ ಬರೆದರು… ಹಾಗೇ ಬದುಕಿದರು ಕೂಡಾ.ಹದಿನೈದರ ಹರೆಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರುವ ಹೊತ್ತಿಗಾಗಲೇ ಅವರೆದೆಯಲ್ಲಿ ದೇಶಪ್ರೇಮ,ದೇಶಭಕ್ತಿಯ ಜ್ವಾಲೆ ಹೊತ್ತಿಕೊಂಡಿತ್ತು.ತಂದೆ ಕೃಷ್ಣ ಬಿಹಾರಿ ವಾಜಪೇಯಿಯವರಿಂದ ರಕ್ತಗತವಾಗಿ ಬಂದ ಆದರ್ಶ ಮತ್ತು ಕವಿತೆ ಗೀಚುವ ಹವ್ಯಾಸ,ತಾಯಿ ಕೃಷ್ಣಾ ದೇವಿಯವರಿಂದ ಬಂದ ದೈವಭಕ್ತಿ ಅವರನ್ನು ಒಬ್ಬ ಸಂಸ್ಕಾರವಂತ ಯುವಕನನ್ನಾಗಿಸಿತ್ತು.ಶಾಲಾ ಕಾಲೇಜು ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ ಅವರನ್ನು ಮಹಾತ್ಮ ಗಾಂಧೀಜಿಯವರ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಆಂದೋಲನ ಬಹುವಾಗಿ ಆಕರ್ಷಿಸಿತು.ಅದಾಗಲೇ ಹದಿಹರೆಯದ ಯುವಕ ಅಟಲ್ ಬಿಹಾರಿ ವಾಜಪೇಯಿಯವರ ಎದೆಯಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿ ಉರಿಯತೊಡಗಿತ್ತು.ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪ್ರಭಾವಕ್ಕೆ ಒಳಗಾಗಿ ಅವರ ಆಪ್ತ ಅನುಯಾಯಿಗಳಲ್ಲೊಬ್ಬರಾಗಿದ್ದರು.ಭಾರತೀಯ ಜನ ಸಂಘ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಅಟಲ್ ಜೀ ಮೂವತ್ಮೂರರ ಚಿಕ್ಕ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಸದನ ಪ್ರವೇಶಿಸಿದರು.ಕಾಂಗ್ರೆಸ್ ಮತ್ತು ನೆಹರೂರವರನ್ನು  ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬಂದರೂ ಎಲ್ಲಿಯೂ ಕಾಂಗ್ರೆಸಿಗರನ್ನಾಗಲಿ,ನೆಹರೂರವರನ್ನಾಗಲಿ ವೈಯಕ್ತಿಕವಾಗಿ ದ್ವೇಷಿಸಲಿಲ್ಲ.ಅಂದೊಮ್ಮೆ ಸದನದಲ್ಲಿ ಮಾತನಾಡುತ್ತಿದ್ದ ಅಟಲ್ ಜೀಯವರನ್ನು ಕಂಡ ಅಂದಿನ ಪ್ರಧಾನಿ ನೆಹರೂ ಈ ಯುವಕ ಮುಂದೊಮ್ಮೆ ಭಾರತದ ಪ್ರಮುಖ ರಾಜಕೀಯ ನಾಯಕನಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭವಿಷ್ಯ ನುಡಿಯುವಷ್ಟರ ಮಟ್ಟಿಗೆ ಪ್ರಖರ ಮಾತುಗಾರರಾಗಿದ್ದರು ಅಟಲ್ ಜೀ.ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುವ ಉತ್ತಮ ವಾಗ್ಮಿ ಅವರಾಗಿದ್ದರು.

ಅಂಧೇರಾ ಛಟೇಗಾ….
ಸೂರಜ್ ನಿಕ್ಲೇಗಾ….
ಕಮಲ್ ಖಿಲೇಗಾ….1980 ರಲ್ಲಿ ಲಾಲ್ ಕೃಷ್ಣ ಅಡ್ವಾನಿ,ದೀನ್ ದಯಾಳ್  ಉಪಾಧ್ಯಾಯರಂತಹ ಹಿತೈಷಿಗಳೊಂದಿಗೆ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶೀರ್ವಾದದೊಂದಿಗೆ ಭಾರತೀಯ ಜನತಾ ಪಕ್ಷ ಹುಟ್ಟು ಹಾಕಿದಾಗ ವಾಜಪೇಯಿ ಹೀಗೆಂದು ಭವಿಷ್ಯ ನುಡಿದಿದ್ದರು.ಅಂಧಕಾರ ಸರಿಸಿ ಭಾರತವನ್ನು ಪ್ರಕಾಶಿಸಲು ಸೂರ್ಯನಷ್ಟೇ ಉಜ್ವಲವಾದ ರಾಜಕೀಯ ಪಕ್ಷವೊಂದರ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಆ ನಿಟ್ಟಿನಲ್ಲಿ ಶ್ರಮಿಸಿದರು.ಬಲಿಷ್ಠ ,ಸಧೃಡ ಭಾರತ ನಿರ್ಮಿಸುವುದು ಅವರ ಗುರಿಯಾಗಿತ್ತು.ಆ ದಾರಿಯಲ್ಲಿ ಮಡದಿ ಮಕ್ಕಳು ಅಡ್ಡವಾಗಬಾರದೆಂದು ಅವಿವಾಹಿತರಾಗಿ ಬದುಕಿದರು.ಇಡೀ ಭಾರತವೇ ನನ್ನ ಮನೆ,ದೇಶದ ಪ್ರತಿ ಪ್ರಜೆಯೂ ನನ್ನ ರಕ್ತಸಂಬಂಧಿಗಳೆಂಬಂತೆ ಬದುಕಿದರು.


ಭಾರತವನ್ನು ಭವ್ಯವಾಗಿ ಕಟ್ಟಬೇಕೆಂಬ ಅದೆಷ್ಟೋ ಕನಸುಗಳನ್ನು ಕಂಡಿದ್ದರು.ಒಮ್ಮೆ ಹದಿಮೂರು ದಿನ,ಒಮ್ಮೆ ಹದಿಮೂರು ತಿಂಗಳು ಅಧಿಕಾರ ಕೈಗೆ ಸಿಕ್ಕು ಮಾಯಾಜಿಂಕೆಯಂತೆ ಜಾರಿ ಹೋದರೂ,ಛಲ ಬಿಡದೇ ಇವರ ಚಿಂತನೆಗಳಿಗೆ ಸಹಮತ ನೀಡಿದ ಎಲ್ಲಾ ಸ್ನೇಹಿತರನ್ನು ಒಗ್ಗೂಡಿಸಿಕೊಂಡು ಎನ್.ಡಿ.ಎ ಮೈತ್ರಿಕೂಟ ರಚಿಸಿ 1999 ರಲ್ಲಿ ಸರ್ಕಾರ ರಚಿಸಿಯೇ ಬಿಟ್ಟರು ಅಟಲ್ ಜೀ.ಸಂಪುಟದಲ್ಲಿ ಎಲ್ಲಾ ಘಟಾನುಘಟಿಗಳೇ.ಅಡ್ವಾಣಿ,ಜಾರ್ಜ್,ಪಾಸ್ವಾನ್,ಮಮತಾ ಬ್ಯಾನರ್ಜಿ,ನಿತೀಶ್ ಕುಮಾರ್, ಶರದ್ ಯಾದವ್,ಮಾರನ್,ಬಾಲು,ಪ್ರಮೋದ್ ಮಹಾಜನ್,ವೆಂಕಯ್ಯ ನಾಯ್ಡು,ಸುಷ್ಮಾ ಸ್ವರಾಜ್…ಬಲಿಷ್ಠವಾದ ತಂಡ ಕಟ್ಟಿಯೇ ಬಿಟ್ಟರು.ಅವರನ್ನು ಸರಿದೂಗಿಸಿಕೊಂಡು,ಸಮಾಧಾನದಿಂದ ಆಡಳಿತ ನಡೆಸುವುದು ಅಷ್ಟು ಸುಲಭಸಾಧ್ಯವಾಗಿರಲಿಲ್ಲ.ಆದರೆ ಇವರ ಸಜ್ಜನಿಕೆಯಿಂದ ಅದನ್ನೂ ಸಾಧಿಸಿ ತೋರಿಸಿ ಸೈ ಎನ್ನಿಸಿಕೊಂಡರು.ಬೇರೆ ಬೇರೆ ತತ್ವ ಸಿದ್ಧಾಂತಗಳ ಇಪ್ಪತ್ತಕ್ಕೂ ಹೆಚ್ಚು ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಡೀ ದೇಶವೇ ಏನು,ಇಡೀ ವಿಶ್ವವೇ ಬೆರಗಾಗುವಂತೆ ಆಡಳಿತ ನಡೆಸಿ ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದರು.ಜಾಗತೀಕರಣದ ಸುಳಿಗೆ ಸಿಲುಕಿ ತರಗೆಲೆಯಂತಾಗಿದ್ದ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸಿದರು.

ಹಾಗೆ ನೋಡಿದರೆ 2004 ರ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟ ನೆಲಕಚ್ಚಲು ಅಂತಹ ಬಲವಾದ ಕಾರಣಗಳೇ ಇರಲಿಲ್ಲ.ಅಬ್ದುಲ್ ಕಲಾಂರಂತದ ದೇಶಭಕ್ತ ವಿಜ್ಞಾನಿಯ ಸಾರಥ್ಯದಲ್ಲಿ ಅಮೇರಿಕಾ ಬೇಹುಗಾರಿಕೆಯ ಕಣ್ತಪ್ಪಿಸಿ,ಪಾಕಿಸ್ತಾನಿ ಗೂಡಚಾರರಿಗೆ ಚಳ್ಳೇಹಣ್ಣು ತಿನ್ನಿಸಿ ಯಶಸ್ವಿಯಾಗಿ ಪೋಖ್ರಾನ್ ಅಣುಪರೀಕ್ಷೆ ನಡೆಸಿ,ಬಲಾಡ್ಯ ರಾಷ್ಟ್ರಗಳ ಆರ್ಥಿಕ ದಿಗ್ಬಂಧನದ ನಡುವೆಯೂ ಕಾರ್ಗಿಲ್ ಯುದ್ಧದಲ್ಲಿ ಪಾಪಿ ಪಾಕಿಸ್ತಾನದ ಕುತಂತ್ರಕ್ಕೆ ಸರಿಯಾಗಿ ಮರ್ಮಾಘಾತ ನೀಡಿ “ಆಪರೇಷನ್ ವಿಜಯ್” ಯಶಸ್ವಿಗೊಳಿಸಿ,ಭಾರತೀಯ ಸೇನಾಧಿಕಾರಿಗಳಿಗೆ ಸೀಮಿತ ಸ್ವತಂತ್ರ ನಿರ್ಧಾರಗಳಿಗೆ ಅವಕಾಶ ಕೊಟ್ಟು,ಅವರಿಗೆ ನೈತಿಕ ಸ್ಥೈರ್ಯ ತುಂಬಿ,ರಕ್ಷಣಾಮಂತ್ರಿಯಾಗಿದ್ದ ಜಾರ್ಜ್ ಫೆರ್ನಾಂಡೀಸ್ ರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಹೊರಗಳೆದು ಇಡೀ ವಿಶ್ವಕ್ಕೆ ಸಾಭೀತು ಪಡಿಸಿದ್ದರು.ದೇಶದ ನಾಲ್ಕೂ ಮೂಲೆಗಳನ್ನು ಸಂಪರ್ಕಿಸುವ,ಎಂಟು ದಿಕ್ಕುಗಳನ್ನು ಸಂಧಿಸುವ “ಸುವರ್ಣ ಚತುಷ್ಪಥ” ಹೆದ್ದಾರಿ ಯೋಜನೆ ಕೈಗೆತ್ತಿಕೊಂಡು ಕ್ಷಿಪ್ರವಾಗಿ ಕಾಮಗಾರಿ ಮುಕ್ತಾಯಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದರು.ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿಯಲ್ಲಿ ಹಳ್ಳಿ ಹಳ್ಳಿಗಳನ್ನೂ ಸಂಪರ್ಕಿಸಲು ಯೋಜನೆಯನ್ನು ಜಾರಿಗೊಳಿಸಿದ್ದರು.ಆರರಿಂದ ಹದಿನಾಲ್ಕು ವರ್ಷದ ನಡುವಿನ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಹೊಂದಬೇಕೆಂಬ ಉದ್ದೇಶದಿಂದ “ಸರ್ವಶಿಕ್ಷಾ ಅಭಿಯಾನ್” ಜಾರಿಗೆ ಬಂದು ಶಿಕ್ಷಣದ ಗುಣಮಟ್ಟದಲ್ಲಿ ಏರಿಕೆ ಕಂಡಿತ್ತು,ನೀರಾವರಿ ಯೋಜನೆಗಳಿಗಾಗಿ ನದಿ ಜೋಡಣೆಯ ಕನಸಿನ “ಗಂಗಾ ಕಾವೇರಿ ಯೋಜನೆ” ಯ ನೀಲಿನಕ್ಷೆ ಸಿದ್ದವಾಗಿತ್ತು.ಮಹಿಳೆಯರ, ಮಕ್ಕಳ,ದುರ್ಬಲರ,ಅಲ್ಪ ಸಂಖ್ಯಾತರ ಸರ್ವತೋಮುಖ ಬೆಳವಣಿಗೆಗೆ ಹಲವಾರು ಯೋಜನೆಗಳು ಜಾರಿಗೊಂಡಿದ್ದವು.ಭವ್ಯ ಭಾರತದ ನಿರ್ಮಾಣಕ್ಕೆ ಹತ್ತು ಹಲವು ಕನಸುಗಳನ್ನು ಕಂಡಿದ್ದರು.ಆದರೆ ಇವರ ಸಾಧನೆಗಳ ಅರಿವು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಸೋತ ಕಾರಣದಿಂದ ಬಿಜೆಪಿ ಕೇವಲ ಇಪ್ಪತ್ತೆರಡು ಪ್ರತಿಶತ ಸ್ಥಾನಗಳಲ್ಲಿ ಜಯಗಳಿಸಿ,ರಬ್ಬರ್ ಸ್ಟ್ಯಾಂಪ್ ಸರಕಾರವೊಂದಕ್ಕೆ ಅವಕಾಶ ಮಾಡಿಕೊಡಬೇಕಾಯಿತು.ಮೊದಲೇ ಕವಿಮನಸಿನ,ಭಾವುಕ ಜೀವಿ ಅಟಲ್ ಜೀ ಅದೆಷ್ಟು ಹತಾಶರಾಗಿದ್ದರೋ?

ನಾಲ್ಕು ದಶಕಗಳಿಂದ ಅದುಮಿಟ್ಟುಕೊಂಡಿದ್ದ ಅದೆಷ್ಟೋ ನಿರೀಕ್ಷೆಗಳು,ಕನಸುಗಳು ನೆಲಕಚ್ಚಿತೆಂದು ಅದೆಷ್ಟು ನೊಂದುಕೊಂಡರೋ?ತನ್ನ ದೇಶದ ಚಿತ್ರಣವನ್ನು ಬೇರೆಯದೇ ರೀತಿಯಲ್ಲಿ ವಿಶ್ವದ ಮುಂದೆ ತೆರದಿಡಬೇಕೆಂಬ ಅವರ ಗುರಿ ಇನ್ನಷ್ಟು ಮುಂದೂಡಲ್ಪಟ್ಟಿತಲ್ಲ ಎಂದು ಅದೆಷ್ಟು ಮರುಗಿದರೋ? ಎಷ್ಟು ಸಮಚಿತ್ತದ,ಸಂಯಮದ,ಸಮಾಧಾನದ ವ್ಯಕ್ತಿಯಾಗಿದ್ದರೂ ಅವರು ಮನುಷ್ಯರೇ ಅಲ್ಲವೇ….?

ಕ್ಯಾ ಖೋಯಾ,ಕ್ಯಾ ಪಾಯಾ ಜಗ್ ಮೇ…
ಮಿಲ್ತೇ ಔರ್ ಬಿಚಡ್ತೇ ಪಗ್ ಮೇ…
ಮುಝೇ ಕಿಸೀಸೆ ನಹೀ ಶಿಖಾಯತ್…
ಯಥ್ಥ್ ಪಿಚಲಾಗಯಾ ಪಗ್ ಪಗ್ ಮೇ.!!!

ಅಟಲ್ ಜೀ….ಆ ಸೋಲು ನಿಮ್ಮದು ಮಾತ್ರವಲ್ಲ, ನಿಮ್ಮ ಸಿದ್ಧಾಂತಗಳದೂ ಅಲ್ಲ.ಆ ಸೋಲು ನಿಜವಾಗಿ ದೇಶದ ಅಭಿವೃದ್ಧಿಯ ಕನಸು ಕಂಡ ಪ್ರತಿಯೊಬ್ಬ ಭಾರತೀಯನದಾಗಿತ್ತು,ಪ್ರತಿಯೊಬ್ಬ ದೇಶ ಪ್ರೇಮಿಯದಾಗಿತ್ತು.ಪ್ರಜ್ಞಾವಂತರಾದ ನಾವೆಲ್ಲಾ ಸೇರಿ ದೇಶದ ಅಭಿವೃದ್ಧಿಯ ವೇಗವನ್ನು ಹತ್ತು ವರ್ಷಗಳಷ್ಟು ಹಿಂದಕ್ಕೆ ಎಳೆದೊಯ್ದು, ಪ್ರಧಾನಿ ಹಣೆಪಟ್ಟಿ ಅಂಟಿಸಿ ಆರ್ಥಿಕ ತಜ್ಞನೊಬ್ಬನನ್ನು ಕಟ್ಟಿಹಾಕಿದ್ದ ಮನೆಯ ಗೂಟಕ್ಕೆ ಕಟ್ಟಿಹಾಕಿ ಬಂದಂತಹ ಸೋಲಾಗಿತ್ತು.2018 ರ ಆಗಷ್ಟ್ ಹದಿನಾರರ ಸಂಜೆ 5:05 ಕ್ಕೆ ನೀವು ದೈಹಿಕವಾಗಿ ಸಾವನ್ನು ಕಂಡರೂ ಮಾನಸಿಕವಾಗಿ ನೀವು ನಿರ್ಜೀವಗೊಂಡು ಹದಿನಾಲ್ಕು ವರ್ಷಗಳೇ ಆಗಿಹೋಗಿತ್ತು.ಸಾಧ್ಯವಾದರೆ ಆ  ಒಂದು ತಪ್ಪಿಗಾಗಿ ನಮ್ಮನ್ನು ಕ್ಚಮಿಸಿಬಿಡಿ…..


ಶುಭವಿದಾಯ ಅಟಲ್ ಜೀ….ಶುಭ ವಿದಾಯ.

…..ಮರ್ನೇಕೆ ಬಾದ್ ಭೀ,ಗಂಗಾ ಜಲ್ ಮೇ ಬೆಹತೀ ಹುಯೀ ಹಮಾರೇ ಅಸ್ಥಿಯೋಂಸೇ ಆವಾಝ್ ಆಯೇಗಿ….ಭಾರತ್ ಮಾತಾ ಕೀ ಜೈ.ಭಾರತ್ ಮಾತಾ ಕೀ ಜೈ.

 

 

 

 

 

✍️ಭಾಸ್ಕರ ಭಂಡಾರಿ ಶಿರಾಳಕೊಪ್ಪ

1 thought on “ಅಟಲ್ ಜೀಗೊಂದು ಅಶ್ರುತರ್ಪಣ ✍️ಭಾಸ್ಕರ ಭಂಡಾರಿ ಶಿರಾಳಕೊಪ್ಪ

Leave a Reply

Your email address will not be published. Required fields are marked *