November 24, 2024
aati+amavasye+1+copy

            ಕಲೆ, ಸಂಸ್ಕೃತಿ,ಆಚಾರ,ವಿಚಾರಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ನಮ್ಮ ತುಳುವನಾಡು ಹಲವಾರು ಆಚರಣೆಗಳಿಗೆ ಪ್ರಸಿದ್ಧಿ. ಇಲ್ಲಿನ ಪ್ರತಿಯೊಂದು ಜಾನಪದ ಆಚರಣೆಗಳಿಗೆ ಅದರದೇ ಆದ ಮಹತ್ವವಿದೆ… ಪ್ರತೀ ಆಚರಣೆಗಳ ಹಿಂದೆಯೂ ಒಂದೊಳ್ಳೆ ಉದ್ದೇಶ ಅಡಕವಾಗಿರುತ್ತದೆ…. ಪ್ರಮುಖವಾಗಿ ಪರಿಸರ, ಮನುಷ್ಯನ ಆರೋಗ್ಯಕ್ಕೆ ಸಂಬಂಧಪಟ್ಟ ಕಾಳಜಿ ಕಾಣಬಹುದು….ಅದಕ್ಕೆ ಪುಷ್ಟಿ ಎಂಬಂತಿದೆ ಆಟಿ ತಿಂಗಳಿನಲ್ಲಿ ನಡೆಯುವ ಆಟಿ ಅಮಾವಾಸ್ಯೆ ಎಂಬ ಆಚರಣೆ….ತುಳುನಾಡಿನಲ್ಲಿ ನಡೆಯುವ ಆಟಿ ಅಮಾವಾಸ್ಯೆಗೆ ತುಂಬಾನೇ ಮಹತ್ವವಿದೆ. ತುಳುನಾಡಿನ ಜನರು ಸೌರಮಾನ ಪಂಚಾಂಗವನ್ನು ಅನುಸರಿಸುವುದರಿಂದ, ಉಳಿದ ಪ್ರದೇಶಗಳಲ್ಲಿ ಈಗ ಶ್ರಾವಣದ ಸಂಭ್ರಮವಾದರೆ ಕರಾವಳಿಗೆ ಮಾತ್ರ ಆಷಾಢದ ಸಂಭ್ರಮ. 

            ಆಟಿಯಲ್ಲಿ ಏಳು ದಿನಗಳು ಹೋಗುವಂದು ಆಟಿ ಅಮವಾಸ್ಯೆಯನ್ನು ಆಚರಿಸಲಾಗುತ್ತದೆ. ಆಟಿ ತಿಂಗಳಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಮವಾಸ್ಯೆಯಂದು ಸಾಮೂಹಿಕವಾಗಿ ಹಾಳೆ ಮರದ ತೊಗಟೆಯ ಕಷಾಯ ಸೇವಿಸುವುದು ಹಿಂದಿನಿಂದಲೂ ಬೆಳೆದು ಬಂದಂತಹ ಪದ್ಧತಿ. ಕರಿ ಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ತೊಗಟೆಯ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸರ್ವರೋಗ ನಿವಾರಕ ಔಷಧಿ ಗುಣ ಸಮೃದ್ಧವಾಗಿರುವ ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ವರ್ಷಪೂರ್ತಿ ಆರೋಗ್ಯವಂತರಾಗಿರಬಹುದೆಂಬ ನಂಬಿಕೆ ತುಳುವರದ್ದು. ಇದಾದ ಬಳಿಕ ಮೆಂತ್ಯೆ ಗಂಜಿಯನ್ನೂ ಸೇವಿಸಲಾಗುತ್ತದೆ. ಇನ್ನು ರಾಹುಗುಳಿಗ ದೈವಗಳಿಗೆ ಸೆರ್ಪಡೆಗೊಂಡ ಪ್ರೇತಗಳಿಗೆ ಪಣಿಯಾರ ನೀಡುವ ಪದ್ದತಿ ಕೂಡ ನಡೆದುಬಂದಿದೆ. ಈ ಮೂಲಕ ನಮ್ಮನ್ನಗಲಿದ ಹಿರಿಯರನ್ನು ನೆನಪಿಸುವ ಕಾರ್ಯ ಮಾಡಲಾಗುತ್ತದೆ
            ಆಟಿ ತಿಂಗಳು ತುಳುವರಿಗೆ ಸಮೃದ್ಧಿಯ ಕಾಲವಲ್ಲ. ಅಲ್ಲದೆ ಈ ತಿಂಗಳಿನಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. ಕೃಷಿ ಅವಲಂಬಿತ ಪ್ರಾಚೀನ ತುಳುನಾಡಿನಲ್ಲಿ ಈ ತಿಂಗಳಲ್ಲಿ ಯಾವುದೇ ಬೆಳೆಯ ಫಸಲು ಕೊಯ್ಲಿಗೆ ಬರುವುದಿಲ್ಲ. ನಿರಂತರ ಮಳೆಯಿಂದಾಗಿ ರೋಗ ರುಜಿನಗಳ ಹಾವಳಿನೂ ಹೆಚ್ಚು. ಹಿಂದಿನ ಕಾಲದಲ್ಲಿ ಈ ತಿಂಗಳು ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿದ್ದ ದಿನಗಳಿದ್ದವಂತೆ. ಒಂದೆಡೆ ಒಪ್ಪೊತ್ತು ಊಟಕ್ಕೂ ಪರದಾಟ, ಇನ್ನೊಂದೆಡೆ ರೋಗಗಳ ಹಾವಳಿ. ಈ ರೋಗಗಳ ಹಾವಳಿಯಿಂದ ಪಾರಾಗುವುದಕ್ಕೆ ನಮ್ಮ ಜನ ಮೊರೆ ಹೋಗುತ್ತಿದ್ದುದು  ಹಾಳೆ ಮರದ ಕಷಾಯ, ತಜಂಕು, ಸೇವುಗಳಂತಹ ಪ್ರಕೃತಿ ದತ್ತವಾಗಿ ಸಿಗುವ ಪದಾರ್ಥಗಳಿಗೆ…. ಅದೇ ಮುಂದೆ ಆಚರಣೆಯಾಗಿ ಚಾಲ್ತಿಗೆ ಬಂದಿದ್ದು, ಪ್ರತೀ ವರ್ಷ ಆಟಿ ಅಮಾವಾಸ್ಯೆಯಂದು ಹಾಳೆ ಮರದ ಕಷಾಯ ಸೇವಿಸಲಾಗುತ್ತಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬ ನಂಬಿಕೆ ಇದೆ..
            ಆಧುನಿಕತೆಯ ಭರಾಟೆಯಲ್ಲಿ ಹಲವೊಂದು ಸಂಪ್ರದಾಯಗಳು ತೆರೆಮರೆಗೆ ಸರಿಯುತ್ತಿದ್ದರೂ ಕೆಲವೊಂದು ಆಚರಣೆಗಳು ಇಂದಿಗೂ ನಡೆದುಕೊಂಡು ಬರುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಅದೇನೆ ಇದ್ರೂ, ನಮ್ಮ ತುಳುನಾಡಿನ ಆಚರಣೆ ಆರಾಧನೆಗಳಿಗೆ ಅದರದ್ದೇ ಆದ ವೈಶಿಷ್ಟ್ಯತೆ , ಮಹತ್ವ ಇರೋದಂತೂ ನಿಜ. ಅಲ್ಲದೇ ಇಂತಹ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳು ಅಡಗಿರುವುದು ಸತ್ಯ. ನಮ್ಮ ಪೂರ್ವಿಕರು  ಪಾಲಿಸಿಕೊಂಡು ಬಂದಂತಹ ಇಂತಹ  ಆಚರಣೆಗಳನ್ನು  ಮುಂದುವರೆಸಿಕೊಂಡು ಹೋಗಬೇಕಾದಂತಹ ಅಗತ್ಯತೆ ಖಂಡಿತವಾಗಿಯೂ ಇದೆ.
:ದಿವ್ಯ ಉಜಿರೆ

9 thoughts on “ಆಟಿ ಅಮವಾಸ್ಯೆಯ ಮಹತ್ವ-ದಿವ್ಯ ಉಜಿರೆ

  1. ಬರವಣಿಗೆಯ ಶೈಲಿ ಚೆನ್ನಾಗಿದೆ, ಉತ್ತಮ ಮಾಹಿತಿ ಕೊಟ್ಟಿದ್ದೀರಿ.ಇನ್ನಷ್ಟು ಮಾಹಿತಿ ನಿಮ್ಮಿಂದ ಸಿಗುವಂತಾಗಲಿ

  2. ಬರವಣಿಗೆಯ ಶೈಲಿ ಚೆನ್ನಾಗಿದೆ, ಉತ್ತಮ ಮಾಹಿತಿ ಕೊಟ್ಟಿದ್ದೀರಿ.ಇನ್ನಷ್ಟು ಮಾಹಿತಿ ನಿಮ್ಮಿಂದ ಸಿಗುವಂತಾಗಲಿ

  3. ತುಂಬಾ ಸೊಗಸಾಗಿ ಉಲ್ಲೇಖನ ಮಾಡಲಾಗಿದೆ, ತುಳುನಾಡಿನ ಈ ಸಂಸ್ಕ್ರುತಿ ಬಹಳ ಸುಂದರವಾಗಿ ಬಿಂಬಿಸಲಾಗಿದೆ, ಇಂತಹ ಲೇಖನದಿಂದ ನಮ್ಮ ಕಿರಿಯರಿಗೆ ನಮ್ಮ ನಿತ್ಯ ಆಚರಣೆ ಬಗ್ಗೆ ಮಾಹಿತಿ ಜೊತೆಗೆ ಅದನ್ನು ಮುಂದುವರಿಸುವ ಕುತೂಹಲ ಹೆಚ್ಚಾಗುತ್ತೆ, ಧನ್ಯವಾದಗಳು ತಂಡಕ್ಕೆ

Leave a Reply

Your email address will not be published. Required fields are marked *