ಭಂಡಾರಿ ಸಮಾಜದ ಹಿತಚಿಂತಕ, ಸಹೃದಯಿ, ಸ್ವಚ್ಚ ನೇರ ನಡೆ ನುಡಿಯ, ಸಾಗರದ ಮಾಧವ ಭಂಡಾರಿಯವರಿಗೆ ಸೆಪ್ಟೆಂಬರ್ 26 ರಂದು ಹುಟ್ಟು ಹಬ್ಬದ ಸಂಭ್ರಮ.
ಮಾಧವ ಭಂಡಾರಿಯವರು ಸ್ನೇಹಿತರ ವಲಯದಲ್ಲಿ “ಭಂಡಾರಿ” ಎಂದೂ, ತಮ್ಮ ಸಹೋದ್ಯೋಗಿಗಳು ಮತ್ತು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ವೋಲ್ಟಾಸ್ ಮಾಧವ ಭಂಡಾರಿಯವರೆಂದೂ ಚಿರಪರಿಚಿತರಾಗಿದ್ದರೂ ನಮ್ಮ ಭಂಡಾರಿ ಬಂಧುಗಳಿಗೆ ಇನ್ನೂ ಮಾಧವ ಭಂಡಾರಿ ಸಾಗರ.
ಕುಂದಾಪುರ ತಾಲೂಕಿನ ಶಿರಿಯಾರದ ನಾರಾಯಣ ಭಂಡಾರಿ ಮತ್ತು ಕೊರ್ಗಿ ಮಿಣುಕು ಭಂಡಾರಿ ದಂಪತಿಯ ಮಗನಾಗಿ ಸಾಗರದಲ್ಲಿ ಜನಿಸಿದ ಇವರು ಸರ್ಕಾರಿ ಜೂನಿಯರ್ ಕಾಲೇಜ್ ನಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ, ಭದ್ರಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಎಲೆಕ್ಟ್ರೀಷಿಯನ್ ಕೋರ್ಸ್ ಮುಗಿಸಿ ಉದ್ಯೋಗ ಅರಸಿ ಬೆಂಗಳೂರು ಸೇರಿದರು.
ತಾನೊಬ್ಬ ಭಂಡಾರಿ, ತಾನೊಬ್ಬ ಕ್ಷೌರಿಕ ಎಂಬುದನ್ನು ಕಾಲಕಾಲಕ್ಕೆ ಗೌರವ ಸೂಚಕವಾಗಿ, ಎಲ್ಲಾ ಕಡೆಯಲ್ಲೂ ಅಗತ್ಯ ಹೇಳಿಕೊಳ್ಳುತ್ತಾ, ನಿರೂಪಿಸಿಕೊಳ್ಳು ತ್ತಾ ಬಂದ ಮಾಧವಣ್ಣನವರು ಅತೀ ಚಿಕ್ಕ ವಯಸ್ಸಿನಲ್ಲಿಯೇ ಕ್ಷೌರಿಕ ವೃತ್ತಿಯನ್ನೂ ಕಲಿತು, ಅಜ್ಜನ ಹಡಪದ ಹಳ್ಳಿಗಳೂ ಸೇರಿ, ವೃತ್ತಿ ಬಂಧುಗಳೊಬ್ಬರೊಟ್ಟಿಗೆ ಕೆಲ ಕಾಲ ಕೆಲಸ ಮಾಡಿದ್ದನ್ನು, ಸಾಗರದ ಸಬ್ ಜೈಲಿನ ಖೈದಿಗಳಿಗೆ ಮತ್ತು ಅಧಿಕಾರಿಗಳಿಗೆ ಕ್ಷೌರ ಮಾಡುತ್ತಿದ್ದ ದಿನಗಳನ್ನು ಈಗಲೂ ಖುಷಿಯಿಂದ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ವೋಲ್ಟಾಸ್ ಸಂಸ್ಥೆ ಸೇರುವುದಕ್ಕೂ ಮೊದಲು ಇವರು ರಾಜ್ಯ ಸರ್ಕಾರಿ ಸ್ವಾಮ್ಯದ ಎರಡು ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ ಮೂರು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವುದು ಬಹುತೇಕರಿಗೆ ತಿಳಿದಿಲ್ಲ. NGEF, HAL, KIOCL ,ಬೆಂಗಳೂರಿನ ರೈಲು ಗಾಲಿ ಮತ್ತು ಅಚ್ಚು ತಯಾರಿಕಾ ಘಟಕ ಮತ್ತು ಕರ್ನಾಟಕ ವಿದ್ಯುಚ್ಛಕ್ತಿ ನಿಗಮಗಳಲ್ಲಿ ಕೆಲವು ಕಾಲ ಸೇವೆ ಸಲ್ಲಿಸಿ ವೃತ್ತಿ ಜೀವನದ ಅತ್ಮತೃಪ್ತಿಯನ್ನು ಅರಸುತ್ತಾ ಹೊರಬಂದು ಸೇರಿದ್ದು “ವೋಲ್ಟಾಸ್” ಸಂಸ್ಥೆಗೆ.
ಮುಂಬಯಿ ಶಾಖೆಯಿಂದ ವೋಲ್ಟಾಸ್ ನ ಪ್ರಯಾಣವನ್ನಾರಂಭಿಸಿದ ಮಾಧವಣ್ಣನವರು ಭಾರತದ ಹಲವಾರು ರಾಜ್ಯಗಳ ಒಟ್ಟು ಇಪ್ಪತ್ತೊಂದು ಶಾಖೆಗಳಲ್ಲಿ ಸರಿಸುಮಾರು ಹದಿನೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದರು.ಸ್ನೇಹಜೀವಿಯಾದ ಇವರು ಎಲ್ಲಾ ಕಡೆಗಳಲ್ಲಿಯೂ ತಮ್ಮ ಸ್ನೇಹವಲಯವನ್ನು ವಿಸ್ತರಿಸುತ್ತಾ ಹೋದರು.ಕನ್ನಡ, ತೆಲುಗು,ತಮಿಳು,ಮಲಯಾಳಂ,ಹಿಂದಿ, ಮರಾಠಿ, ಕೊಂಕಣಿ, ಇಂಗ್ಲೀಷ್ ಇನ್ನೂ ಮುಂತಾದ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲ ಇವರು1999 ರಲ್ಲಿ ವೋಲ್ಟಾಸ್ ಸಂಸ್ಥೆಗೆ ರಾಜೀನಾಮೆ ನೀಡಿ ತಮ್ಮದೇ ಆದ ಸ್ವಂತ ಸಂಸ್ಥೆ ಸ್ಥಾಪಿಸಿದರು.
1999 ರಿಂದೀಚೆಗೆ ತಮ್ಮ ಸ್ವಂತ ಸಂಸ್ಥೆಯಡಿಯಲ್ಲಿ ವೋಲ್ಟಾಸ್ ಸಂಸ್ಥೆಯನ್ನೂ ಒಳಗೊಂಡು, ಖಾಸಗಿ ಮತ್ತು ರಾಜ್ಯ, ಕೇಂದ್ರ ಸರ್ಕಾರಗಳ ಇನ್ನೂರಕ್ಕೂ ಹೆಚ್ಚು ಬೃಹತ್ ಕೈಗಾರಿಕಾ ಉದ್ಯಮಗಳಿಗೆ, ಸೇವೆ ಮತ್ತು ಸಲಹಾ ಸರಬುದಾರರಾಗಿ ಸೇವೆ ಸಲ್ಲಿಸಿದರು.
ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ, ಇಸ್ರೋ, DRDO, BARC, KAIGA, ಹೀಗೆ ಹಲವಾರು ರಾಷ್ಟ್ರೀಯ ಪ್ರತಿಷ್ಟಿತ ಸಂಸ್ಥೆಗಳಿಗೆ ಸೇವೆ ಸಲ್ಲಿಸಿ ತಮ್ಮ ಸಂಸ್ಥೆಯನ್ನು ಗ್ರಾಹಕರ ಅತ್ಯಂತ ನಂಬಿಕಾರ್ಹ ಸಂಸ್ಥೆಯನ್ನಾಗಿ ಬೆಳೆಸಿದರು.
ಒಂದು ಹಂತದಲ್ಲಿ ನೂರಾ ನಲವತ್ತು ಸಿಬ್ಬಂದಿಗಳನ್ನೊಳಗೊಂಡ ಸಂಸ್ಥೆ, ಎಲ್ಲರಿಗೂ ಪಿಂಚಣಿ, ESI ಸೌಲಭ್ಯ ನೀಡುತ್ತಾ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ನಮೂನೆ, ಪ್ರಾಕಾರಗಳ ತೆರಿಗೆಗಳನ್ನು ಪ್ರಾಮಾಣಿಕವಾಗಿ, ಕಾಲಾ ಕಾಲಕ್ಕೆ ಪಾವತಿಸುತ್ತಾ ಒಂದು ಸ್ವಚ್ಛ ಮತ್ತು ಕಳಂಕರಹಿತ ಆಡಳಿತ ನಡೆಸಿ,ಯಾವೊಂದು ಕಪ್ಪುಚುಕ್ಕಿ ಇಲ್ಲದೇ ಸೇವೆ ಸಲ್ಲಿಸಿದರು.
ಇವರ ಕಾರ್ಯವೈಖರಿಗೆ ಮನ್ನಣೆ ನೀಡಿ ರಾಜ್ಯ ಸರ್ಕಾರ ಮತ್ತು ಮೈಸೂರು ಜಿಲ್ಲಾಡಳಿತ ಕಳೆದ ಇಪ್ಪತ್ತೆಂಟು ವರ್ಷಗಳಿಂದ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆಯ ವಿದ್ಯುತ್ ಸರಬರಾಜು ಮಾಡುವ ಪವರ್ ಹೌಸ್ ನ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಇವರಿಗೆ ವಹಿಸುತ್ತಾ ಬಂದಿದೆ.
ಮೊದಲಿನಂತೆ ಕಾರ್ಯದಕ್ಷತೆಯಿಂದ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂದು ಎರಡು ವರ್ಷದಿಂದೀಚೆಗೆ ನಿವೃತ್ತಿಯ ಯೋಚನೆ ಮಾಡಿ ತಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿಯೇ ವಾಸವಾಗಿರುವ ಮಾಧವ ಭಂಡಾರಿಯವರ ಪತ್ನಿ ಶ್ರೀಮತಿ ಭಾರತಿ ಭಂಡಾರಿಯವರು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದವರು. ಇವರಿಗೆ ಒಬ್ಬಳು ಮಗಳು.ಬಿಂದು. ಎಮ್.ಭಂಡಾರಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಆಯುರ್ವೇದ ವೈದ್ಯಕೀಯ ಶಾಸ್ತ್ರದಲ್ಲಿ ಪದವಿ ಪೂರೈಸಿದ್ದಾರೆ.
ಭಂಡಾರಿ ಸಮಾಜದ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿರುವ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಕಾರ್ಯ ಯೋಜನೆಗಳನ್ನು ರೂಪಿಸುತ್ತಾ ಅವುಗಳನ್ನು ಕಾರ್ಯರೂಪಕ್ಕೆ ತರಲು ತುಡಿಯುತ್ತಿರುವ ಮಾಧವಣ್ಣನವರಿಗೆ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಸ್ನೇಹಿತರು,ಆತ್ಮೀಯರು, ಹಿತೈಷಿಗಳು ಆತ್ಮೀಯವಾಗಿ ಶುಭ ಹಾರೈಸುತ್ತಿದ್ದಾರೆ.
ಮಾಧವ ಭಂಡಾರಿಯವರ ಜನ್ಮದಿನದ ಈ ಸುಸಂದರ್ಭದಲ್ಲಿ ಶ್ರೀ ದೇವರು ಮತ್ತು ಅವರ ಇಷ್ಠ ದೈವಗಳು ಅವರಿಗೆ ಆಯುರಾರೋಗ್ಯವನ್ನು ನೀಡಿ ಆಶೀರ್ವದಿಸಲಿ,ಇನ್ನಷ್ಟು ಸಮಾಜಸೇವೆಯನ್ನು ಮಾಡಲು ಶಕ್ತಿ ಚೈತನ್ಯವನ್ನು ದಯಪಾಲಿಸಲಿ ಎಂದು ಹಾರೈಸುತ್ತಾ, ಭಂಡಾರಿವಾರ್ತೆ ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳನ್ನು ಕೋರುತ್ತಿದ್ದೇವೆ.
-ಭಂಡಾರಿವಾರ್ತೆ.”