November 22, 2024
kuralda parba2
ನವರಾತ್ರಿ ಬಂತೆಂದರೆ ತಂದೆಯವರ ನೆನಪಾಗುತ್ತದೆ. ಅದರಲ್ಲೂ ಅವರು ಆಚರಿಸುತ್ತಿದ್ದ “ಕೊರಲ್ ಪಾಡುನ ಪರ್ಬ” ದ 
ರೀತಿಗಳು ಕಣ್ಣೆದುರಿಗೆ ಹಾದು ಹೋಗುತ್ತದೆ 
          ಇಲ್ಲಿ ” ಕುರಲ್”,ಅಥವಾ “ಕೊರಲ್” ಎಂದರೆ ಕುತ್ತಿಗೆ ಅಥವಾ ಶಿರ ಎಂದರ್ಥ. ಬೆಳೆದ ಪೈರಿನ ತೆನೆಯ ಮೇಲ್ಭಾಗ ಅಂದರೆ ಶಿರವನ್ನು ಕೊಯ್ದು ಮನೆಗೆ ತಂದು ಕೊರಲ್ ಮುಟ್ಟಿ ಕೈ ಮುಗಿದು ನಮಸ್ಕರಿಸುವುದು (ಕೊರಲ್ಗ್ ಪುಡಿ ಪಾಡುನಿ). ಕುರಲ್ ಪಾಡುನಿ ಅಥವಾ ಕೊರಲ್ ಕಟ್ಟುನಿ ಹಬ್ಬವು ಮುಂದೆ ಪೈರು ಕಟಾವು ಮಾಡುವ ಮುಹೂರ್ತ ಆಗಿರುತ್ತದೆ. ಶುಭದಿನಗಳನ್ನು ನೋಡಿ ಇದರ ಆಚರಣೆ ನಡೆಯುತ್ತದೆ. ತುಲುನಾಡಲ್ಲಿ ದೇವಾರಾಧನೆ ಆರಂಭ ಆದ ಬಳಿಕ ಗೌರಿ ಹಬ್ಬ, ದಸರಾ (ಮಾರ್ನೆಮಿ) ಹಬ್ಬಗಳ ದಿನಗಳಲ್ಲಿ ಹೆಚ್ಚಾಗಿ ಈ ಹಬ್ಬ ನಡೆಯುತ್ತದೆ.
        ನಮ್ಮ ತಂದೆಯವರು ಆಚರಿಸುವ ರೀತಿಯನ್ನು ಮರೆಯಲಾಗದು. ಮನೆ ಸುತ್ತ ಮಳೆಗೆ ಬೆಳೆದು ನಿಂತ ಹುಲ್ಲು, ಸೊಪ್ಪು, ಪೊದೆಗಳನ್ನು ಕೊಯ್ದು ಕಡಿದು ಹಾಕುತ್ತಿದ್ದರು. ಅಂಗಳವನ್ನು ಸ್ವಚ್ಛಗೊಳಿಸಿ ವಿಶಾಲವಾದ ಅಂಗಳಕ್ಕೆ ಹಸುವಿನ ಸೆಗಣಿಯನ್ನು ಸಾರಿಸಲಾಗುತಿತ್ತು . ಮನೆ ಎದುರಿಗೆ ನಮ್ಮಿಂದ ಮಾವಿನ ಎಲೆಗಳಿಂದ ತೋರಣ ಕಟ್ಟಿಸುತ್ತಿದ್ದರು. ಆಗ ಮನೆಯಲ್ಲಿ ಬೆಳಗ್ಗೆ ಸ್ನಾನ ಮಾಡುವ ರೂಢಿ ಇಲ್ಲದಿದ್ದರೂ ಈ ಹಬ್ಬದ ದಿನ ಕಡ್ಡಾಯವಾಗಿ ಎಲ್ಲರೂ ತಲೆ ಸ್ನಾನ ಮಾಡಲೇಬೇಕಿತ್ತು.
       ಜೇಡಿ ಮಣ್ಣಿನ ನೀರಿನಿಂದ ಕಂಬ ಬೋದಿಗೆ ಕಂಬಗಳಿಗೆ ಅಲಂಕಾರ ಮಾಡುತ್ತಿದ್ದರು. ಮನೆಯ ದಾರಂದಗಳಿಗೆ ಜೇಡಿನಿಂದ ಸೂರ್ಯ, ಚಂದ್ರ, ನಕ್ಷತ್ರಗಳ ಚಿತ್ರ ಬಿಡಿಸುತ್ತಿದ್ದರು. ಅದೇ ರೀತಿ ಮನೆಯಲ್ಲಿ ಅಕ್ಕಿ ಅಳೆಯುವ ಕಲಸೆ, ಸೇರು, ಬಲ್ಲ, ಪಾವು ಗಳಿಗೂ ಚಿತ್ರ ಬಿಡಿಸುವ ಕ್ರಮ ಇತ್ತು. ತುಲಸಿ ಕಟ್ಟೆಗೂ ಜೇಡಿ ಮಣ್ಣಿನ ಅಲಂಕಾರ ಇತ್ತು. ಅಲಂಕರಿಸಿದ ಕಲಸೆ ಸೇರುಗಳನ್ನು ತುಳಸಿ ಕಟ್ಟೆಯ ಪಕ್ಕ ಇಡುತ್ತಿದ್ದರು.
        ಮನೆಯಲ್ಲಿ ಬೆಳೆಸಿದ ಸೇವು, ಪದ್ಪೆ ದಂಟು, ಗರ್ಬಿಜ (ದೊಡ್ಡ ಗಾತ್ರದ ಸಿಹಿ ಸೌತೆಕಾಯಿ) , ತುಲುನಾಡ್ ಮುಳ್ಳು ಸೌತೆ, ಅಲಸಂಡೆ, ಬೆಂಡೆಕಾಯಿ, ಹಾಗಲಕಾಯಿ , ಪಟ್ಲಕಾಯಿ ಹೀಗೆ ವಿವಿಧ ತರಕಾರಿಗಳನ್ನು ತುಳಸಿ ಕಟ್ಟೆಯ ಇನ್ನೊಂದು ಮಗ್ಗುಲಲ್ಲಿ ಜೋಡಿಸುತ್ತಿದ್ದರು. ತುಳಸಿ ಕಟ್ಟೆಯ ಇನ್ನೊಂದು ಕಡೆ ಮಾವು ಹಲಸು ಕುಡಿಗಳು, ಕದಿಕೆ, ದಡ್ಡಲ್ ಮರದ ನಾರು, ಇಟ್ಟೇವು ಹೂವು ಗೊಂಚಲು, ಬಿದಿರು ಸೊಪ್ಪು, ತುಂಬೆಹೂವು, ಉಂಬುಗದ ಹೂವು ಇತ್ಯಾದಿ ಕಾಡು ಹೂವುಗಳನ್ನೂ ಪಕ್ಕದಲ್ಲಿ ಇಡುತ್ತಿದ್ದರು. ತಂದೆಯವರು ಸೊಂಟಕ್ಕೆ ಬಿಳಿ ಪಂಚೆ, ಹೆಗಲಿಗೆ ಬಿಳಿ ಶಾಲು, ತಲೆಗೆ ಬಿಳಿ ಮುಂಡಾಸು ಧರಿಸಿ ಸಕತ್ತಾಗಿ ಕಾಣಿಸುತ್ತಿದ್ದರು. ಕೈಯಲ್ಲಿ ಪರ್ದತ್ತಿ (ತೆನೆ ಕೊಯ್ಯುವ ಕತ್ತಿ) ಹಿಡಿದು ಭಕ್ತಿ ಗಂಭೀರದಿಂದ ಬೂತೊಲು ಕೋಣೆಯ ಎದುರಿಗೆ ಬಂದು ಕೈಮುಗಿದು ಅಡ್ಡಬಿದ್ದು ಪ್ರಾರ್ಥಿಸುತ್ತಾರೆ. ಅದೇ ರೀತಿ ಗೋಡೆಯಲ್ಲಿ ನೇತು ಹಾಕಿರುವ ದೇವರ ಫೋಟೋಗಳನ್ನು ಭಕ್ತಿಯಿಂದ ನೋಡುತ್ತಿದ್ದರು. ನಂತರ ಹೊರ ನಡೆದು ಮನ್ಪುದ ಬಲ್ಲ್ (ತೆಂಗಿನ ನಾರಿನಿಂದ ತಯಾರಿಸಿದ ಹಗ್ಗ) ಹಿಡಿದು ಬೆಳೆದು ನಿಂತ ಕಟಾವಿಗೆ ತಯಾರಾದ ಭತ್ತದ ಗದ್ದೆಗೆ ಬರುತ್ತಾರೆ. ತಂದೆಯವರ ಹಿಂದೆ ನಾವೆಲ್ಲರೂ ಖುಷಿಯಿಂದ ಕಂಚು ಬಟ್ಟಲುಗಳನ್ನು (ಅಂದು ಜಾಗಟೆ ಇರಲಿಲ್ಲ) ಹೊಡೆಯುತ್ತಾ ಹೋಗುತ್ತಿದ್ದೆವು. ತಂದೆಯವರು ಗದ್ದೆಗೆ ಇಳಿದು ಪ್ರಕೃತಿಗೆ ವಂದಿಸುತ್ತಿದ್ದರು. ಮುಡಾಯಿ ದಿಕ್ಕನ್ನು ನೋಡಿ ಉದಯವಾಗುತ್ತಿರುವ ಸೂರ್ಯ ದೇವರಿಗೆ ಕೈಮುಗಿದು ಪ್ರಾರ್ಥನೆ ಮಾಡುತ್ತಿದ್ದರು. ಊರನ್ನು ಕಾಯುವ ಕುಡುಮದ ಕೊಡಮಂದಾಯ ರಾಜೆನೆ ದೈವಕ್ಕೂ ಮನಸ್ಸಲ್ಲೇ ಪ್ರಾರ್ಥನೆ ಮಾಡುತ್ತಿದ್ದರು. ಅನ್ನ ಕೊಡುವ ಭೂತಾಯಿಯನ್ನು ಕೈಮುಟ್ಟಿ ಪ್ರಾರ್ಥಿಸುತ್ತಿದ್ದರು. ಪೈರಿನ ಬುಡವನ್ನು ಮುಟ್ಟಿ ನಮಸ್ಕರಿಸಿ ಪರ್ದತ್ತಿ (ಹಲ್ಲುಗಳು ಇರುವ ಕತ್ತಿ) ಯಲ್ಲಿ ಪೈರಿನ ತಲೆ (ಕುರಲ್) ಭಾಗವನ್ನು ಪೊಲಿ ಪೊಲಿ ಪೊಲಿ (ಸಮೃದ್ಧಿ , ಸಂಪತ್ತು) ಎನ್ನುತ್ತಾ ಪೈರು ಕಟಾವು ಮಾಡುತ್ತಾರೆ. ಗದ್ದೆಯ ಬದುವಿನಲ್ಲಿ ಯಲ್ಲಿ ನಿಂತಿದ್ದ ನಾವೆಲ್ಲ ಜೋರಾಗಿ ಅಕ್ಕ ಪಕ್ಕದ ಮನೆಯವರಿಗೆ ಕೇಳುವಂತೆ ಪೊಲಿ ಪೊಲಿ ಎನ್ನುತ್ತಿದ್ದೆವು. ಕತ್ತರಿಸಿದ ಕುರಲ್ ಗಳನ್ನು ಸೂಡಿ (ಕಟ್ಟು) ಮಾಡುತ್ತಾರೆ. 3-5 ಅಂಕೆಗಳಲ್ಲಿ ಸೂಡಿ ಮಾಡಿ ತಂದಿರುವ ಹಗ್ಗದಲ್ಲಿ ಕಟ್ಟಿ ತಲೆಯ ಮೇಲೆ ಇಟ್ಟು ಪೊಲಿ ಪೊಲಿ ಎನ್ನುತ್ತಾ ಮನೆಗೆ ತರುತ್ತಾರೆ. ನಾವೆಲ್ಲಾ ಪೊಲಿ ಪೊಲಿ ಎಂದು ಕಿರುಚುವುತ್ತಾ ಅವರ ಹಿಂದೆ ಬರುತ್ತಿದ್ದೆವು. ತಾಳ, ಬಟ್ಟಲು ಬಾರಿಸುತ್ತಿದ್ದೆವು. ತುಳಸಿಗೆ ಕೊರಲ್ ಸಮೇತ ಮನೆಯವರೊಡನೆ ಪೊಲಿ ಪೊಲಿ ಎಂದು ಭಜಿಸುತ್ತಾ ಮೂರು ಪ್ರದಕ್ಷಿಣೆ ಬಂದು ಕೊರಲ್ ಗಳನ್ನು ಮೊದಲೇ ಅಲಂಕರಿಸಿಟ್ಟ ಕೊರಲ್ ಮಣೆ (ಈ ಉದ್ದೇಶಕ್ಕೆಂದೆ ತಯಾರಿಸಿದ ಎತ್ತರದ ಹಲಸು ಮಣೆ) ಮೇಲೆ ಇರಿಸುತ್ತಾರೆ. ತೆಂಗಿನ ಕಾಯಿ ಒಡೆದು ನೀರನ್ನು ಕೊರಲ್ ಗಳಿಗೂ ತುಳಸಿಗೂ ಸುರಿಸುವುದು. ನಂತರ ಪುಗೆ ಪತ್ತುನು ಅಂದರೆ ಧೂಪದ ಆರತಿ ಮಾಡುವುದು. ಎಲೆ ಅಡಿಕೆಯನ್ನು ಅಗತ್ಯವಾಗಿ ಕುರಲ್ ಗೆ ಅರ್ಪಿಸುವ ಕ್ರಮ ಇತ್ತು . ಪ್ರಥಮವಾಗಿ ಸೂಡಿಯಿಂದ ಬೆಸ ಸಂಖ್ಯೆಯಲ್ಲಿ ಕೊರಲ್ ತೆಗೆದು ತುಳಸಿಗೆ  ಕಟ್ಟುವುದು.

         ಇನ್ನು ಧಾನ್ಯ ಲಕ್ಷ್ಮಿ ಯನ್ನು ಮನೆಯ ಒಳಗೆ ಪ್ರವೇಶ ಮಾಡುವ ಕಾರ್ಯಕ್ರಮ. ತುಳಸಿ ಕಟ್ಟೆ ಎದುರು ಇಟ್ಟ ಕೊರಲ್ ಸಮೇತ ಎಲ್ಲಾ ವಸ್ತುಗಳನ್ನು ಮನೆಯ ಒಳಗೆ ತರುವುದು. ತಂದೆಯವರು ಮಣೆಯಲ್ಲಿ ಎಲೆ ಮೇಲೆ ಇಟ್ಟಿರುವ ಕೊರಲನ್ನು ಕೊರಲ್ ಮಣೆ ಸಮೇತ ತಲೆಯಲ್ಲಿ ಇಡುತ್ತಾರೆ. ಮನೆಮಂದಿ ಎಲ್ಲಾ ಒಂದೊಂದು ವಸ್ತುಗಳನ್ನು ಕೈಯಲ್ಲಿ ಎತ್ಕೊಳ್ಳುತ್ತಾರೆ. ತಾಳ, ಜಾಗಟೆ (ಕಂಚು ಬಟ್ಟಲು) ಯವರು ತಂದೆಯವರ ಮುಂದೆ ಪೊಲಿ ಪೊಲಿ ಎಂಬ ಮೂಲ ಮಂತ್ರವನ್ನು  ಪಠಿಸುತ್ತಾ ಹೋಗುವುದು. ನಮ್ಮ ತಾಯಿಯವರು ಮೆಟ್ಟಲಿನಲ್ಲಿ ತಂದೆಯವರ ಕಾಲುಗಳಿಗೆ ನೀರು ಹಾಕುತ್ತಿದ್ದರು. ಆ ನೀರು ತಂದೆಯವರ ಕಾಲುಗಳ ಇಮ್ಮಡಿಗೂ ಬೀಳ ಬೇಕಿತ್ತು. ಕೆಟ್ಟ ಶಕ್ತಿ ಮನೆ ಒಳಗೆ ಪ್ರವೇಶಿಸ ಬಾರದೆಂಬ ಉದ್ದೇಶ ಅದಾಗಿತ್ತು. ಪೊಲಿ ಪೊಲಿ ಎನ್ನುತ್ತಾ ಕೊರಲ್ ಸಮೇತ ಕೊರಲ್ ಮಣೆಯನ್ನು ತಲೆಯಿಂದ ದೇವರ ಫೋಟೋದ ಎದುರಿಗೆ ಇಡುತ್ತಿದ್ದರು. ದೇವರಪೀಠ ಮತ್ತು ಕೊರಲ್ ಮಣೆಯಲ್ಲಿ ದೀಪ ಹಚ್ಚುತ್ತಿದ್ದರು. ಬೂತೊಲು ಕೋಣೆಯ ಪೀಠದಲ್ಲೂ ದೀಪ ಬೆಳಗಿಸಬೇಕು.
         ಈಗ ಕುರಲ್ಗ್ ಪುಡಿ ಪಾಡುನ ಕಾರ್ಯಕ್ರಮ (ಕೊರಲನ್ನು ಕೈಗಳಿಂದ ಮುಟ್ಟಿ ಪಮಸ್ಕರಿಸುವುದು) .ಆರಂಭದಲ್ಲಿ ತಂದೆಯವರು ಕೈಯಲ್ಲಿ ಕುರಲನ್ನು ಹಿಡಿದು ಶ್ರೀಗಂಧ ಸವರಿ ತುಂಬೆ ಇತ್ಯಾದಿ ಹೂವುಗಳನ್ನು ಇಟ್ಟು ಹಾಲು ಹಾಕುತ್ತಿದ್ದರು. ಎರಡೂ ಕೈಗಳಿಂದ ಕುರಲ್ ಗಳನ್ನು ಭಕ್ತಿಯಿಂದ ನಮಸ್ಕರಿಸುತ್ತಿದ್ದರು. ನಂತರ ಕುರಲ್ ಎದುರು ಅಡ್ಡ ಬೀಳುತ್ತಿದ್ದರು. ನಂತರದ ಸಾಲಿನಲ್ಲಿ ತಾಯಿಯವರು. ಬಳಿಕ ಮನೆ ಮಂದಿ ಎಲ್ಲರೂ ಪೂಜೆ ಸಲ್ಲಿಸುತ್ತಿದ್ದೆವು. ಭೂಮಿ ಇಲ್ಲದವರು ನಮ್ಮ ಮನೆಗೆ ಬಂದು ಕುರಲ್ ಪರ್ಬದಲ್ಲಿ ಭಾಗವಹಿಸಿಸುತ್ತಿದ್ದರು. ಮನೆ ಒಳಗೂ ಕೊರಲ್ಗಳಿಗೆ ಧೂಪದ ಆರತಿಯನ್ನು ತಂದೆಯವರು ಮಾಡುತ್ತಿದ್ದರು. ಕಾಯಿ ಒಡೆಯುತ್ತಿದ್ದರು. ಒಟ್ಟಾರೆ ಕುರಲ್ ಪಾಡುನ ಆರಾಧನೆಯು ಪ್ರಕೃತಿ ಆರಾಧನೆ ಅಡಿಯಲ್ಲಿ ಬರುತ್ತಿತ್ತು.
       ಬಳಿಕ ಕುರಲ್ಗಳಿಂದ ಬೆಸ ಸಂಖ್ಯೆಯಲ್ಲಿ (5, 7, 9, 11) ಭತ್ತವನ್ನು ತೆಗೆದು ಅದರ ಸಿಪ್ಪೆ ತೆಗೆದು ಪುದಿ ಅರಿ (ಹೊಸ ಅಕ್ಕಿ) ಎಂದು ಭಾವಿಸಿ ಅದನ್ನು ಪುಡಿಮಾಡಿ ಶುಧ್ಧ ಹಸು ಹಾಲಿಗೆ ಬೆರೆಸಿ ಕೊರಲ್ ಪಾಡುನ ಧಾರ್ಮಿಕ ಕಾರ್ಯಕ್ರಮದ ತೀರ್ಥ ಸೇವಿಸುತ್ತಿದ್ದೆವು. ಪ್ರಥಮವಾಗಿ ತಾಯಿಯವರು ಈ ತೀರ್ಥವನ್ನು ಲೋಟದಲ್ಲಿ ಎಡೆ ಇಟ್ಟು ಪ್ರಾರ್ಥನೆ ಮಾಡುತ್ತಿದ್ದರು. ನಂತರ ತಂದೆಯವರು ಸ್ವೀಕಾರ ಮಾಡುತ್ತಿದ್ದರು. ತದನಂತರ ಮನೆಯಲ್ಲಿ ಸೇರಿದ ಎಲ್ಲರಿಗೂ ತಾಯಿಯವರು ಹಂಚಿ ತಾನು ಸ್ಟೀಕಾರ ಮಾಡುತ್ತಿದ್ದರು.
        ಈಗ ಕೊರಲ್ ಕಟ್ಟುವ ಸರದಿ. ಬೆಸ ಸಂಖ್ಯೆಯಲ್ಲಿ ಕೊರಲ್ಗಳನ್ನು ಆಯ್ದು ಅವುಗಳನ್ನು ಹಲಸು, ಮಾವು, ಬಿದಿರು ಎಲೆಯೊಳಗೆ ಸುತ್ತಿ ದಡ್ಡಲ್ ಮರದ ನಾರಿನ ಹಗ್ಗದಿಂದ ಸುತ್ತಿ ಕಟ್ಟಿ ಪ್ರಥಮವಾಗಿ ದೇವರ ಮಂಟಪಕ್ಕೆ ತಂದೆಯವರೇ ಕಟ್ಟುತ್ತಿದ್ದರು. ತದನಂತರ ಅವರೇ ಬೂತೊಲು ಮಂಚ, ಸ್ಥಾನಗಳಿಗೆ ಕಟ್ಟುತ್ತಿದ್ದರು. ಕಂಬ , ದಾರಂದಗಳಿಗೆ ಅವರೇ ಚಂದವಾಗಿ ಪೋಣಿಸಿ ಬಿಗಿಯಾಗಿ ಕಟ್ಟುತ್ತಿದ್ದರು. ಅವುಗಳು ಒಂದು ವರ್ಷ ಉಳಿಯುತಿತ್ತು.  ಗುಬ್ಬಚ್ಚಿಗಳು ಬಂದು ಸಾಕಷ್ಟು ತಿನ್ನುತ್ತಿದ್ದವು. ಮನೆಯಲ್ಲಿ ಗೂಡುಕಟ್ಟಿ ಮರಿಗಳಿಗೆ ಈ ಕುರಲ್ಗಳು ಆಹಾರ ಆಗುತ್ತಿತ್ತು.
       ಇದಲ್ಲದೆ ಮನೆಯಲ್ಲಿ ಬೆಂಚು, ಕುರ್ಚಿ, ಮೇಜು, ಕೊಟ್ಟಿಗೆ, ಹಟ್ಟಿ, ಬಾವಿ ಕಟ್ಟೆ, ತೆಂಗುಮರ, ಅಡಿಕೆ ಮರ, ಹಲಸು, ಮಾವು ಮರ, ಒನಕೆಗಳ ಜೋಲಿಗೆ, ನೊಗಗಳ ಜೋಲಿಗೆ, ನೇಗಿಲು ಇತ್ಯಾದಿ ಕೃಷಿ ಸಲಕರಣೆಗಳು ಎಲ್ಲಕ್ಕೂ ನಾವು ಮಕ್ಕಳೆಲ್ಲಾ ಸೇರಿ ಕಟ್ಟಲಿಕ್ಕಿತ್ತು. ಈ ವಿಷಯದಲ್ಲಿ ಮಕ್ಕಳಲ್ಲಿ ಖುಷಿಯಲ್ಲಿ ಜಗಳಗಳು ಆಗುತಿತ್ತು . ನಂತರ ತಂದೆಯವರ ಗರ್ಜನೆಗೆ ಜಗಳ ಶಾಂತ ವಾಗುತ್ತಿತ್ತು. ಕಲಸೆ, ಸೇರು, ಬಲ್ಲ, ಪಾವುಗಳಿಗೆ ಕುರಲ್ಗಳನ್ನು ಸ್ವತಃ ತಂದೆಯವರೇ ತುಂಬಿಸುತ್ತಿದ್ದರು. ಮಧ್ಯಾಹ್ನ ನಂತರ ಉಳಿದ ಕೊರಲ್ಗಳನ್ನು ತಂದೆಯವರೇ ಹೂವು ಸೊಪ್ಪು ಸಮೇತವಾಗಿ ಮನೆಯ ಮಾಡಿಗೆ ಎಸೆಯುತ್ತಿದ್ದರು. ಕುರಲ್ ಕಟ್ಟುವ ಆಚರಣೆಯಲ್ಲಿ ಪ್ರಕೃತಿಯಲ್ಲಿ ಬೆಳೆದ ಪೈರು, ಹೂವುಗಳು, ಮರಗಳಿಗೆ, ಗಿಡಗಳಿಗೆ ,ಸಸ್ಯಗಳಿಗೂ ಭಕ್ತಿ ಒಡನೆ ಗೌರವ ಸಂದಾಯ ಆಗುತ್ತಿತ್ತು.
     ಕೊರಲ್ ಹಾಕುವ ಕಾರ್ಯಕ್ರಮ ಮುಗಿದ ಮೇಲೆ ಉಳಿದ ಕೊರಲ್ ಇತ್ಯಾದಿ ವಸ್ತುಗಳನ್ನು ಕಾಲ ಅಡಿಗೆ ಸಿಗಬಾರದೆಂದು ಮಾಡಿನ ಮೇಲೆ ಎಸೆಯುತ್ತಿದ್ದರು. ಅಲ್ಲದೆ ಧಾನ್ಯದ ಸಮೃದ್ಧಿ ಮಾಡಿನ ಎತ್ತರಕ್ಕೆ ಏರಲಿ ಎಂಬ ನಂಬಿಕೆ. ನಂತರದ ದಿನಗಳಲ್ಲಿ ನಲಿಕೆಯವರು (ತುಲುನಾಡ್ ನರ್ತಕರು) ಈ ಎಸೆದ ಭತ್ತವನ್ನು ಸಂಗ್ರಹಿಸುತ್ತಿದ್ದರು.
       ಉಳ್ಳವರು ಪುದ್ದರ್ ಊಟವನ್ನು ಕುರಲ್ ಪಾಡುನ ದಿನದಂದು ಮಾಡುತ್ತಿರಲಿಲ್ಲ. ಇಲ್ಲದವರು ಈ ದಿನವೇ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಪುದ್ದರ್ ನಂತರದ ದಿನಗಳಲ್ಲಿ ನಡೆಯುತ್ತಿತ್ತು. ಏಕೆಂದರೆ ಅಂದು ಅಟ್ಟದಲ್ಲಿ ತಂದೆಯವರು ಸಾಕಷ್ಟು ಅಕ್ಕಿ ಮುಡಿ ಸಂಗ್ರಹ ಮಾಡುತ್ತಿದ್ದರು.
     ಕುರಲ್ ಪಾಡುನ ದಿನದಂದು ಬಳಸಿದ ಎಲ್ಲಾ ತರಕಾರಿಗಳನ್ನು ಅಂದಿನ  ಊಟಕ್ಕೆ ಬಳಸಿ ಭರ್ಜರಿ ಊಟ ಮಾಡುತ್ತಿದ್ದೆವು. ಆ ದಿನ ನಮ್ಮಲ್ಲಿ ಪಾಯಸ ಇರುತ್ತಿರಲಿಲ್ಲ. ಬದಲಾಗಿ ಪುದ್ದರ್ ದಿನ ಮಾಡುತ್ತಿದ್ದರು.
    ಇಂದಿನ ದಿನಗಳಲ್ಲಿ ಈ ರೀತಿಯ ಆಚರಣೆ ಇಲ್ಲ ವಲ್ಲ ಎಂಬ ಬೇಸರ ಬರುತ್ತದೆ. ತಂದೆಯವರ ನೆನಪುಗಳು ಕಾಡುತ್ತವೆ. ಏನು ಮಾಡಲಿ? ಅವರನ್ನು ನೆನೆದು ಬರೆದ ಈ ಬರಹವನ್ನು ಅವರಿಗೆ ಅರ್ಪಿಸುತ್ತೇನೆ.
✍️ ಇ. ಗೋ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *