November 22, 2024
temple-final
ದೇವಸ್ಥಾನಗಳು ಏಕೆ ನಿರ್ಮಾಣವಾದವು ಎಂಬ ಪ್ರಶ್ನೆಗೆ ಪೂಜೆಗಾಗಿ ಅಥವಾ ಪ್ರಾರ್ಥನೆಗಾಗಿ ಎಂಬ ಸರಳ ಉತ್ತರ ದೊರೆಯಬಹುದು. ಶ್ರೀ ಸದ್ಗುರು ಜಗ್ಗಿ ವಾಸುದೇವ ಹೇಳಿರುವಂತೆ ಭಾರತೀಯ ಪ್ರಾಚೀನ ದೇವಾಲಯಗಳ ಸೃಷ್ಟಿ ಈ ಉತ್ತರವನ್ನು ನಿರೀಕ್ಷಿಸುವುದಿಲ್ಲ. ದೇವಸ್ಥಾನ ಅಥವಾ ದೈವಿ ಶಕ್ತಿ ಕೇಂದ್ರಗಳು ನಮಗೆ ತರಂಗಗಳ ಇರುವಿಕೆಯನ್ನು ಸೂಚಿಸುವ ಕೇಂದ್ರಗಳು. ಪ್ರಕೃತಿಯಲ್ಲಿ    ಶಕ್ತಿ ತರಂಗಗಳು ಎಲ್ಲೆಡೆಯೂ ಇರುತ್ತವೆ. ಆದರೆ ಅನುಭವಕ್ಕೆ ಸಿಗುವುದಿಲ್ಲ. ಸೆಲ್ ಪೋನುಗಳು ಶಬ್ದ ತರಂಗವನ್ನು ಸ್ವೀಕರಿಸಿ ನಮಗೆ ನೀಡುತ್ತವೆ. ಹಾಗೆಯೇ ದೇವಾಲಯಗಳು ದೊಡ್ಡ ಏಕಮುಖ ಸೆಲ್ ಪೋನುಗಳು ನಮಗೆ ಕೇವಲ ತರಂಗಗಳ ಅನುಭವವನ್ನು ನೀಡುತ್ತವೆ. 
ದೇವಾಲಯ ಒಂದು ಸಾಧನ. ದೇವಾಲಯ ಎಂಬುದು ನಿರ್ದಿಷ್ಟ ಜಾತಿ, ಗುಂಪು ಮತ್ತು ಮತಧರ್ಮಕ್ಕೆ ಸೇರಿರುವ ಆಲಯವಲ್ಲ. ಈ ಪುಟ್ಟ ಸಾಧನದ ಕೀರ್ತಿಯ ಅರಿವು ಇಲ್ಲದವರಿಗೆ ಈ ವಿಶ್ಲೇಷಣೆ ಅಪಥ್ಯವೆನಿಸಬಹುದು. ಭಾವನೆಗೆ ದಕ್ಕೆಯಾಗಬಹುದು.  ಇದೊಂದು ಕೇವಲ ಬೌತಿಕ ಸಾಧನವೆಂಬ ಅರ್ಥವಲ್ಲ. ಇದೊಂದು ಸ್ಥಳ ಎಂಬುದಕ್ಕೆ ಅರ್ಥವಿಲ್ಲ. ಆಧ್ಯಾತ್ಮ ಸಾಧನ ಅಥವಾ ಸಂಪರ್ಕ ಮಾಧ್ಯಮ ಎಂಬ ಅರ್ಥ ಸೂಕ್ತ. ಏಕೆಂದರೆ ದೇವಾಲಯ ಕ್ರಿಯಾಶೀಲ ಶಕ್ತಿಯ ಮೂಲವಾಗಿದೆ.
ದೇವಾಲಯ ನಿರ್ಮಿಸಲು ಬೇಕಾದ ಸಲಕರಣೆಗಳೊಂದಿಗೆ ಧ್ಯಾನಲಿಂಗವೊಂದನ್ನು ಇಡಲಾಗುತ್ತದೆ. ಇದು ಪುಟ್ಟ ಸಾಧನವಾದರೂ ಪ್ರಮುಖ ಭಾಗವೆಂದೇ ಪರಿಗಣಿಸಲ್ಪಡುತ್ತದೆ. ಬಾಗಿಲಿನ ಜೋಡನೆಗೆ ಸ್ಕ್ರೂ ಗಳು ಎಷ್ಟು ಮುಖ್ಯವೋ ಹಾಗೆ. ಇಲ್ಲಿ ಸ್ಕ್ರೂ ನ ಗಾತ್ರ ನೋಡಬೇಡಿ. ಅದರ ಸಾಮರ್ಥ್ಯದ ಬಗ್ಗೆ ಯೋಚಿಸಿ. 
ಹಿಂದೆ ಮುನ್ನೂರು ನಾಲ್ಕು- ನೂರು ವರ್ಷಗಳ ಕಾಲ ದೇವಸ್ಥಾನದ ನಿರ್ಮಾಣಕಾರ್ಯಗಳು, ಅಭಿವೃದ್ದಿ ಕಾರ್ಯಗಳು ನಡೆಯುತ್ತಿದ್ದವು. ದೇವಸ್ಥಾನದ ಅಭಿವೃದ್ದಿ  ಎಂಬುದು ಒಂದು ತಲೆಮಾರಿಗೆ ಸೀಮಿತವಲ್ಲ.‌ಇದು ನಡೆಯುತ್ತಲೇ ಇರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಾಲ್ಕೈದು ಅಥವಾ ಹೆಚ್ಚಿನ ತಲೆಮಾರಿನ ಜನ ಈ ದೇವಾಲಯಕ್ಕಾಗಿ ದುಡಿಯುತ್ತಾರೆ. ಐದಕ್ಕೂ ಹೆಚ್ಚು ತಲೆಮಾರಿನ ರಾಜಕುಟುಂಬದವರು ನಿರ್ಮಾಣ ವೆಚ್ಚ ಭರಿಸುತ್ತಾರೆ, ವಾಸ್ತು ಶಿಲ್ಪಿಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಆದರೆ ಇಲ್ಲಿ ಯಾವ ಕಲ್ಲುಗಳಲ್ಲಿಯೂ ರಾಜರುಗಳ, ಸೇವಕರ, ವಾಸ್ತು ಶಿಲ್ಪಿಗಳ  ಹೆಸರು ಹಾಕಲಾಗುವುದಿಲ್ಲ. ಏಕೆಂದರೆ ದೇವಸ್ಥಾನದ ನಿರ್ಮಾಣ ಅಥವಾ ಅಭಿವೃದ್ಧಿಯಲ್ಲಿ ಅನೇಕ ತಲೆಮಾರುಗಳ‌ ಶ್ರಮವಿರುತ್ತದೆ.                                                                                                                                                                                              
ದೇವಸ್ಥಾನಗಳ ಸ್ಥಳದ ಆಯ್ಕೆ ಹೇಗಿರುತ್ತದೆ? 
ಸದ್ಗುರು ಒಂದು ಸನ್ನಿವೇಶವನ್ನು ವಿವರಿಸುತ್ತಾ ಇಂತಹ ಜಾಗ ದೇವಾಲಯ ನಿರ್ಮಾಣಕ್ಕೆ ಸೂಕ್ತ ಎನ್ನುತ್ತಾರೆ.
“ಹಿಂದೆ ಒಬ್ಬ ಒಕ್ಕಲು ಕೃಷಿಕನೊಬ್ಬ ತನ್ನ ಕೊನೆ‌ ಕಾಲದಲ್ಲಿ ತನ್ನ ಇಬ್ಬರು ಮಕ್ಕಳಿಗೆ ಕೃಷಿಯಿಂದ ಬರುವ ಆದಾಯವನ್ನು ಸಮನಾಗಿ ಹಂಚಿಕೊಳ್ಳಬೇಕು ಇದು ತನ್ನ ಕೊನೆಯ ಬಯಕೆಯೆಂದು ಕೊನೆಯುಸಿರೆಳೆದ. ತಂದೆಯ ಮಾತನ್ನು ದಿಕ್ಕರಿಸದೇ ಸಮನಾಗಿ ಬೆಳೆ ಹಂಚಿಕೊಂಡರು. ಇಬ್ಬರು ಸಹೋದರರಲ್ಲಿ ಒಬ್ಬ ಮಗ  ಮದುವೆಯಾದ. ಐದು ಮಕ್ಕಳನ್ನು ಪಡೆದ. ಇನ್ನೊಬ್ಬ ಮದುವೆಯಾಗದೇ ಒಂಟಿಯಾಗಿದ್ದ. ಹಲವು ವರ್ಷ ಕಳೆದ ನಂತರ ಮದುವೆಯಾದ ಸೋದರನಿಗೆ ತನ್ನ ತಮ್ಮ ಒಂಟಿಯಾಗಿದ್ದಾನೆ. ನನಗೆ ಮಕ್ಕಳಿದ್ದಾರೆ. ಮಕ್ಕಳು ದೊಡ್ಡವರಾಗಿದ್ದಾರೆ. ಪಕ್ಕದ ಜಮೀನುಗಳನ್ನು ಗೇಣಿಗೆ ಪಡೆದು ಬೆಳೆ ಬೆಳೆಯಬಹುದು. ಆದರೆ ತನಗೆ ವಯಸ್ಸಾದಂತೆ ತಮ್ಮನಿಗೂ ವಯಸ್ಸಾಯಿತು. ಆತನಿಗೆ ತಾನು ಸಹಾಯ ಮಾಡಬೇಕು.
ಆದರೆ ಆತ ಸಹಾಯ ನಿರೀಕ್ಷಿಸಲಾರ ಮತ್ತು ಪಡೆಯಲಾರ ಎಂಬುದು ಅಣ್ಣನಿಗೆ ಗೊತ್ತಿತ್ತು. ಇದಕ್ಕಾಗಿ ಒಂದು ರಾತ್ರಿ ತಮ್ಮನಿಗೆ  ತಿಳಿಯದಂತೆ ತಮ್ಮನ ದಾನ್ಯ ಸಂಗ್ರಹಿಸುವ ಗೋದಾಮಿಗೆ ದಿನಕ್ಕೊಂದು ಧಾನ್ಯದ ಚೀಲವನ್ನು ಇಡುವ ನಿರ್ಧಾರ ಮಾಡಿದ. ಯಾಕೋ ಗೊತ್ತಿಲ್ಲ ಅದೇ ದಿನ ತಮ್ಮನಿಗೂ ಅಣ್ಣ ನ ನೆನಪಾಗಿ ಆತನಿಗೆ ಹೆಂಡತಿ  ಐವರು ಮಕ್ಕಳು ಇದ್ದಾರೆ. ತನಗೆ ಆಹಾರ ಧಾನ್ಯಗಳ ಅಗತ್ಯವಿರುವುದಕ್ಕಿಂತ ಹೆಚ್ಚು ಅಣ್ಣನ ಕುಟುಂಬಕ್ಕಿದೆ. ಇದಕ್ಕಾಗಿ ನಾನೇದರೂ ಸಹಾಯ ಮಾಡಬೇಕೆಂದು ದಿನ ಒಂದೊಂದೆ ಚೀಲ ಆಹಾರ ಧಾನ್ಯಗಳನ್ನು  ಅಣ್ಣನ ಗೋದಾಮಿನಲ್ಲಿ ಇಟ್ಟ. ಹೀಗೆ ನಡೆಯುತ್ತಲೇ ಇತ್ತು. ಒಂದು ದಿನ ರಾತ್ರಿ ಹೊತ್ತು ಮೂಟೆ ಹೊತ್ತುಕೊಂಡು ಎದುರು ಬದುರಾದರು. ತಮ್ಮನಿಗೆ ಪರಿಸ್ಥಿತಿ ಅರ್ಥವಾಯಿತು. ಏನೂ ಮಾತಾಡಲಿಲ್ಲ‌. ಕೊನೆಗೆ ಅವರಿಬ್ಬರೂ ಕಾಲವಾದರು.  ಈ ಇಬ್ಬರೂ ಸಹೋದರರ ಒಳ್ಳೆಯ ಮನಸ್ಸುಗಳು ಪರಸ್ಪರ ಮುಖಾಮುಖಿಯಾದ ಗೌಪ್ಯ ಸಹಾಯ ಹಸ್ತದ ಕತೆ ಬಯಲಾದ ಜಾಗ ದೇವಾಲಯ ನಿರ್ಮಿಸಲು ಸೂಕ್ತವೆನಿಸಿತು. ಮುಂದಿನ ತಲೆಮಾರು ಅಲ್ಲೆ ದೇವಾಲಯ ನಿರ್ಮಿಸಿತು. “
 ದೇವಾಲಯ ನಿರ್ಮಾಣ ಭಾರತದಲ್ಲಿ ದೈವಿ ಸೂಕ್ಷ್ಮ ಸ್ಥಳಗಳಲ್ಲೇ ನಿರ್ಮಾಣವಾಗುತಿತ್ತು ಎಂಬ ವಾದವಿದೆ. ದೈವಿಕ ಶಕ್ತಿ ಮನುಷ್ಯನ ಒಳ್ಳೆಯ ಕಾರ್ಯಗಳಿಂದಲೇ ಸಿದ್ದಿಸುತ್ತದೆ. ಧರ್ಮಾತ್ಮರು ಇರುವಲ್ಲಿ ದೇವರ ಸಾನಿಧ್ಯವಿರುತ್ತದೆ ಎಂಬುದನ್ನು ಸದ್ಗುರು ಉದಾಹರಿಸಿದ ಈ ಮೇಲಿನ ಕತೆಯ ಮೂಲಕ ತಿಳಿಯಬಹುದು.                                                                              
ದೇವಾಲಯಗಳು ನೀಡುವ ಆತ್ಮ‌ತೃಪ್ತಿಗಳು:
ದೇವಾಲಯಗಳಲ್ಲಿ ಶ್ರಮಕ್ಕೆ ತಕ್ಕ ಫಲ ದೊರೆಯಲೇ ಬೇಕು. ಇಲ್ಲವಾದರೆ ಮನುಷ್ಯನಾದವನು ತೃಪ್ತನಾಗಲು ಸಾಧ್ಯವಿಲ್ಲ. 
ಆತ್ಮ ತೃಪ್ತಿ ನೀಡುವುದು ದೇವಾಲಯದ ಪರಮಗುರಿ. ಇಲ್ಲಿ ಊಳಿಗ , ಪ್ರತಿಫಲ ಬಯಸದ ಶ್ರಮದಾನ ಅರ್ಥ ಕಳೆದುಕೊಳ್ಳುತ್ತದೆ. ಇದಕ್ಕಿಂತ ತನ್ನ ಶ್ರಮ ವ್ಯಯಿಸಿ ಪೂರ್ವನಿರ್ಧಾರಿತ ಪ್ರತಿಫಲ ಪಡೆಯುವವನೇ  ಶ್ರೇಷ್ಠ (ಬ್ರಾಹ್ಮಣ)ನಾಗುತ್ತಾನೆ. ಮನುಷ್ಯ ದುಡಿಯುವುದರಲ್ಲಿ ಹೇಗೆ ಸಂತಸ ಕಾಣುತ್ತನೋ … ಅದರ ಫಲ ಅನುಭವಿಸಲೂ ಅಷ್ಟೇ ಹಾತೊರೆಯುತ್ತಾನೆ.
ಊಳಿಗಕ್ಕೆ ಒಳಗಾದವ ಒಂದು ಹೊತ್ತಿನ ಊಟ ಬಯಸಬಹುದು. ಶ್ರಮದಾನ, ಸಂಪತ್ತು ದಾನ ಮಾಡಿದವನು ದೇವರ ಅನುಗ್ರಹ ಅಥವಾ ರಾಜ , ಮಂತ್ರಿಗಳು ತನ್ನ ಗುರುತಿಸಬೇಕೆಂದು ಬಯಸಬಹುದು.  ರಾಜನಾದವನು ತನ್ನ ಮನೆತನದವರು ನಿರ್ಮಿಸಿದ ದೇವಾಲಯವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ದೇವಾಲಯದ ಸಂಪತ್ತಿನ ಮೇಲೆ ಹಿಡಿತ ಸಾಧಿಸಬಹುದು. ದೇವರ ಭಯ ಭಕ್ತಿ ಹುಟ್ಟಿಸಿ ರಾಜ್ಯದ ಪ್ರಜೆಗಳನ್ನು ತನ್ನ ಹಿಡಿತದಲ್ಲಿರಿಸಬಹುದು. ವಾಸ್ತು ಶಿಲ್ಪಿ ಪ್ರತಿ ಫಲದ ಜೊತೆಗೆ ಆಸ್ಥಾನದ ಆಶ್ರಯ , ಸನ್ಮಾನ ಮತ್ತು ಬಹುಮಾನವನ್ನು ಬಯಸಬಹುದು. ದೇವಾಲಯ ಬಯಕೆಯ ತಾಣವಾಗುತ್ತದೆ. ಇಲ್ಲಿ ತಾನೇನೂ ಪಡೆದಿಲ್ಲ  ಎಂಬುದು ಅರ್ಥ ಕಳೆದುಕೊಳ್ಳುತ್ತದೆ. ದೇವಾಲಯ ಇರುವುದೇ ಏನನಾದರೂ ಪಡೆದುಕೊಳ್ಳಲು. ಜ್ಞಾನಿಯಾದವನು ಶಕ್ತಿ ತರಂಗಗಳ ಅನುಭವಿಸಲೂ ದೇವಾಲಯಕ್ಕೆ  ಬಂದು ಆತ್ಮಶುದ್ದಿ  ಮಾಡಿಕೊಳ್ಳುತ್ತಾನೆ.  ಶಕ್ತಿ ತರಂಗಗಳ ಅರ್ಥೈಸುತ್ತಾನೆ.  ಭಾಗಶಃ ದೇವರ ಸಾಮಿಪ್ಯ ತಲುಪುತ್ತಾನೆ. ದೇವರ ಮಾತುಗಳು ಆತನಿಗೆ ಕೇಳಿಸುತ್ತವೆ. ಆತ ಕೂಡಾ ಏನೋ ಪಡೆದೇ ಹೋಗುತ್ತಾನೆ.
ಭಯದಿಂದ ದೇವರ ಕಂಡವರು ಪರಮ ಭಕ್ತರ ವೇಷ ತೊಡುತ್ತಾರೆ. ಭಕ್ತಿಯ ಪರಾಕಾಷ್ಠೆ ತೋರಿಸಿಕೊಳ್ಳುವಲ್ಲಿ ಆತ್ಮ ತೃಪ್ತಿ ಪಡೆಯುತ್ತಾರೆ.                                                                                                                                                                                                                                                       
ಆಧುನಿಕ ಭಾರತದ ದೇವಸ್ಥಾನಗಳು  ಹೇಗಿವೆ?
ಕಾಲ ಬದಲಾದಂತೆ ಭಾರತದ ಪ್ರಾಚೀನ ವಿಜ್ಞಾನ ಮರೆಯಾಗಿ ಜಾತಿ ಮತಗಳ ವಿಜೃಂಬಣೆ ಅಧಿಕವಾಗಿ ಪೂಜೆ , ಉತ್ಸವ ಆಚರಣೆಗಳು , ಸಾಮೂಹಿಕ ಪ್ರಾರ್ಥನೆ ಮುಂತಾದುವುಗಳೇ ದೇವಸ್ಥಾನಗಳಲ್ಲಿ ಸ್ಥಾನ ಪಡೆಯಿತು. ಪಾಶ್ಚಿಮಾತ್ಯ ಮತಗಳ ಪ್ರಭಾವದಿಂದ ಘೋರಿಗಳು ದೇವಾಲಯಗಳಾದವು , ಪ್ರಾರ್ಥನಾ ಕೇಂದ್ರಗಳು , ಭಜನಾ ಕೇಂದ್ರಗಳು ದೇವಸ್ಥಾನವಾಯಿತು. ದೇವಸ್ಥಾನಗಳನ್ನು ಪ್ರಾರ್ಥನಾ ಕೇಂದ್ರಗಳಿಗೆ ಸೀಮಿತಗೊಳಿಸಲಾಗಿದೆ. ದೇವಸ್ಥಾನದ ಮಹಿಮೆಯನ್ನು ಅದರ ಸಂಪತ್ತಿನ ಆಧಾರದಲ್ಲಿ ಅಳೆಯಲಾಗುತ್ತಿದೆ. ಅತಿ ಹೆಚ್ಚು ದೇಣಿಗೆ ನೀಡಿದವರ ಹೆಸರನ್ನು ಅಲ್ಲಲ್ಲಿ ಕೆತ್ತಲಾಗುತ್ತದೆ. ಭಕ್ತಿಯನ್ನು ದುಡ್ಡಿನಿಂದಲೇ ಅಳೆಯುವ ಕೆಟ್ಟ ಸಂಪ್ರದಾಯ ಈಗಾಗಲೇ ದೇಶದೆಲ್ಲೆಡೆ ವಿಜೃಂಬಿಸುತಿದೆ. ಪ್ರಾಚೀನ ಕಾಲದಲ್ಲಿ ದೇವಾಲಯವನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ನಿರ್ಮಿಸಲಾಗುತಿತ್ತು. ಸಮಾಜ ಸೇವೆ, ಯೋಗ, ಧ್ಯಾನ , ಆಧ್ಯಾತ್ಮ ಶಿಕ್ಷಣ, ಶೋಧನೆ ಮತ್ತು ಪ್ರಸಾರ, ಸಂಪತ್ತಿನ ರಕ್ಷಣೆ, ಪ್ರಕೃತಿ ಆರಾಧನೆ  ಮುಂತಾದ ಶ್ರೇಷ್ಠ ಕಾರ್ಯಗಳಿಗಾಗಿ ಬಳಸಿಕೊಳ್ಳಲಾಗುತಿತ್ತು. ಆಗಮ ಶಾಸ್ತ್ರಕ್ಕೆ ಚ್ಯುತಿ ಬಾರದಂತೆ ವೈಜ್ಞಾನಿಕವಾಗಿ ದೇವಾಲಯದ ನಿರ್ಮಾಣವಾಗುತಿತ್ತು‌. ಆದರೆ ಈಗಿನ ದೇವಾಲಯಗಳು ಶಾಪಿಂಗ್ ಕಾಂಪ್ಲೆಕ್ಸ್ ಗಳಾಗಿ, ಚರ್ಚ್, ಮಸೀದಿಗಳಂತೆ ಪ್ರಾರ್ಥನಾ ಮಂದಿರಗಳಾಗಿ, ತಮ್ಮ ತಮ್ಮ ಜಾತಿ – ಪಂಗಡಗಳ ಕ್ಲಬ್ ಗಳಾಗಿ  ಬದಲಾಗಿದೆ. ಬಣ್ಣ ಬಣ್ಣದ ಬೆಳಕಿನ ಅಲಂಕಾರ , ವಿಪರೀತ ಶಬ್ದ ಮಾಲಿನ್ಯ ಮಾಡುವ ಸಾಧನಗಳು ಕಂಡುಬರುತ್ತವೆ. ದಕ್ಷಿಣ ಭಾರತದ ಜನ ಈಗಲೂ ದೇವಸ್ಥಾನದಲ್ಲಿ ಸ್ವಲ್ಪಹೊತ್ತು ಕುಳಿತುಕೊಳ್ಳುವ ಕಟ್ಟುಪಾಡು ಹೊಂದಿದ್ದಾರೆ. ಇದು ದೇವಾಲಯಗಳಲ್ಲಿ ಮಾಡಲೇಬೇಕಾದ ನಿಜವಾದ ಕ್ರಮ.
 ಅಂದರೆ ದೇವಾಲಯದಲ್ಲಿ ಕುಳಿತುಕೊಂಡ ಕ್ಷಣ ಧ್ಯಾನದ ಬಗೆಗಿನ ಅಲ್ಪ ಜ್ಞಾನವಿಲ್ಲದವರು ಕೂಡಾ ಧ್ಯಾನಸ್ಥರಾಗುತ್ತಾರೆ ಎಂಬುದು ಆಧ್ಯಾತ್ಮ ಗುರುಗಳ ವಾದ. ಇದು ಪ್ರಾಚೀನ ದೇವಾಲಯಗಳ ಶಕ್ತಿಯಾಗಿತ್ತು. ದೇವಾಲಯಗಳಲ್ಲಿ ಪೂಜೆ , ಅರ್ಪಣೆ ಮಾಡಿದಕ್ಷಣ ದೇವರು ವರ ನೀಡಲಾರ ಎಂಬುದನ್ನು ನಾವು ಅರಿತಿರಬೇಕು. ಪೂಜೆ, ಅರ್ಪಣೆ ಉತ್ಸವಗಳು ಸಂಸ್ಕೃತಿಯ ಆಚರಣೆಗಳಷ್ಟೇ ಹೊರತು ದೇವರ ತಲುಪುವ ಮಾರ್ಗವಲ್ಲ. ನಿಶಬ್ಧ ಪರಿಸರದಲ್ಲಿ ತರಂಗ ಕಂಪನಗಳ ಸೃಷ್ಟಿಸುವ ಮಂತ್ರೋಚ್ಚಾರ , ಜಾಗಟೆ ಗಂಟೆಗಳ ನಾದ , ಪಂಚ ವಾದ್ಯಗಳ ಸ್ವರಗಳು ವಿಶೇಷ ಪ್ರಪಂಚವನ್ನು ಸೃಷ್ಟಿಸುತ್ತವೆ ನಿಜ ಇವೆಲ್ಲ ಕೇವಲ ಸಲಕರಣೆಗಳಷ್ಟೇ.. ಇವುಗಳು ಜೀವ ಪಡೆಯಬೇಕಾದರೆ ದೇವಸ್ಥಾನಗಳ ಮೂಲ ಆತ್ಮ ಧ್ಯಾನಲಿಂಗ ಮುಖ್ಯ. ಮೂಲ ಆಶಯ ಮರೆತ ದೇವಾಲಯಗಳು ನಿರ್ಜೀವ ಕಟ್ಟಡಗಳಷ್ಟೇ ! ಧ್ಯಾನ ಲಿಂಗದ ಮುಂದೆ ಕುಳಿತಾಗ  ಪ್ರತಿಯೊಬ್ಬನನ್ನು ಧ್ಯಾನಕ್ಕೆ ತಳ್ಳುವ , ಹೊಸ ಪ್ರಪಂಚಕ್ಕೆ ಕರೆದೊಯ್ಯುವ ಶಕ್ತಿ ಇರುವಲ್ಲಿ ಮಾತ್ರ ದೇವರ ಅಸ್ತಿತ್ವ ಕಾಣಬಹುದು.
ಆತ್ಮ ತೃಪ್ತಿಯಿಂದ ದೇವರ ಕಾಣಲು ಸಾಧ್ಯವಾದರೆ ಆತ ನಿಮ್ಮೊಡನೆ ಸದಾ ಸಂಹವನದಲ್ಲಿದ್ದು ಕಾಪಾಡುತ್ತಾನೆ. 
                                                                                                                                                 
ಸರ್ವೇಃ ಭವಂತುಃ ಸುಖಿನಃ 
                                
✍️ ಪ್ರಶಾಂತ್ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *