ಅನ್ನ ,ಅಕ್ಕಿ ,ಕಾಯಿ,ಎಲೆ, ಅಡಿಕೆ, ಬಾಳೆ ಗಿಡ, ಬಾಳೆಎಲೆ, ಬಾಳೆಹಣ್ಣು, ಇತರ ಹಣ್ಣು ಹಂಪಲುಗಳು, ನೀರು, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಬೆಲ್ಲ, ಸಕ್ಕರೆ, ಅವಲಕ್ಕಿ, ಹರಳು, ಎಳ್ಳು, ಇತರೆ ಧಾನ್ಯಗಳು, ಹರಸಿನ, ಕುಂಕುಮ, ಕಬ್ಬು, ಲಿಂಬೆ, ಹಲಸು ಎಲೆ,ಹಲಸುಚಕ್ಕೆ, ಮಾವು ಎಲೆ, ತುಳಸಿ ಎಲೆ, ಶ್ರೀಗಂಧ, ಎಣ್ಣೆ, ಅಗ್ನಿ, ಹೂವುಗಳು, ದರ್ಬೆ,ಗರಿಕೆ, ಬಟ್ಟೆ,ಬಳೆ,ನೆಲ್ಲಿಗೆಲ್ಲು, ಹುಣಸೆಗೆಲ್ಲು, ಎಕ್ಕಮಾಲೆ,ವಿವಿಧ ತರಕಾರಿಗಳು,ಜೇಡಿ ಮಣ್ಣು, ಬಿದಿರು ಎಲೆ,ಉಂಬುಗ ಎಲೆ ಇನ್ನಿತರ ವಸ್ತುಗಳು ದೈವ ದೇವರುಗಳಿಗೆ ಪವಿತ್ರ ಎನ್ನುವರು . ಆಳವಾಗಿ ಚಿಂತಿಸಿದರೆ ಇವುಗಳು ದೈವ ದೇವರುಗಳಿಗೆ ಅನಗತ್ಯ. ಅವರಿಗೆ ನಮ್ಮಪ್ರೀತಿ, ವಿಶ್ವಾಸ, ಭಕ್ತಿ, ಧ್ಯಾನ, ಸ್ಮರಣೆ, ನಂಬಿಕೆಗಳೇ ಸಾಕಾಗುವುದು. ಇವುಗಳೆಲ್ಲಾ ಮಾನವನಿಗೆ ಅಗತ್ಯವಿದೆ. ಬದುಕಿ ಬಾಳಲು ಬೇಕಾಗಿರುವುದು. ಈ ವಸ್ತುಗಳೆಲ್ಲ ಪವಿತ್ರವಾಗಿರುವುದು ದೇವರಿಗಲ್ಲ .ಅವು ಎಲ್ಲಾ ಮಾನವನಿಗೆ ಪವಿತ್ರವಾದುದು. ದೇವರ ಹೆಸರಲ್ಲಿ ಅವರ ಎದುರು ಹರಡಿ ಕೊನೆಗೆ ನಾವೇ ಸ್ಟಾಹಾ ಮಾಡುವುದಲ್ಲವೇ? ದೇವರಿಗೆ ಸ್ತೋತ್ರ, ಮಂತ್ರಗಳ ಪಠಣೆ, ಗಂಟೆ, ಜಾಗಟೆ, ಶಂಖಗಳ ನಾದಗಳು ಮಾತ್ರ. ಇನ್ನಷ್ಟು ಇನ್ನಷ್ಟು ಆಳ ಆಳವಾಗಿ ಚಿಂತಿಸಿದರೆ ನಾವು ಆರಾಧನೆ, ಪೂಜೆ ಪುರಸ್ಕಾರಗಳನ್ನು ಮಾಡುವುದು ದೇವರಿಗೆ ಅಲ್ಲವೇ ಅಲ್ಲ. ಬದಲಾಗಿ ಪ್ರಕೃತಿ ಮತ್ತು ಪ್ರಕೃತಿ ಕೊಡುವ ಆಹಾರ ವಸ್ತುಗಳಿಗೆ. ನಮ್ಮನ್ನೆಲ್ಲಾ ಸಾಕಿ ಕಾಪಾಡಿ ಸಲಹುವುದು ಪ್ರಕೃತಿ ದೇವರು. ಪ್ರಕೃತಿ ಇಲ್ಲದೆ ಬದುಕು ಇಲ್ಲ. ಪ್ರಕೃತಿ ಇಲ್ಲದೆ ಸಂಪತ್ತಿಲ್ಲ. ಪ್ರಕ್ರತಿಯೇ ದೇವರು. ಈ ಕಾರಣಕ್ಕೆ ದೇವರುಗಳ ಹೆಸರಲ್ಲಿ ಪ್ರಕೃತಿ ಆರಾಧನೆ ಮಾಡುತ್ತಿದ್ದೇವೆ. ಮಾನವ,ಪ್ರಾಣಿ, ಪಕ್ಷಿ, ಇತರ ಜೀವ ಜಂತುಗಳು ತಿಂದು ಬದುಕುವ ವಸ್ತುಗಳನ್ನು ದೇವರಿಗೆ ಇಟ್ಟು ಪ್ರಕ್ರತಿ ಯನ್ನೇ ಅರಾಧಿಸುತ್ತಿದ್ದೇವೆ.ನಾವು ಮಾಡುವ ಪೂಜೆ ಆರಾಧನೆ ಪ್ರಕೃತಿಗೇ ಸಲ್ಲುತ್ತದೆ ವಿನಹ ದೇವರಿಗಲ್ಲ. ಆರತಿ ಮಂಗಳಾರತಿಯನ್ನು ದೇವರ ಬಿಂಬಗಳಿಗೂ ,ಬಿಂಬದ ಎದುರು ಇಟ್ಟಿರುವ ಪ್ರಕೃತಿ ಒದಗಿಸುವ ವಸ್ತುಗಳಿಗೂ ಮಾಡುತ್ತೇವೆ. ಪ್ರಕೃತಿಯ ವಸ್ತುಗಳಿಗೆ ಪೂಜೆ ಸಮರ್ಪಣೆ ಆಗುತ್ತದೆ. ಯಾಗ ಯಜ್ಞಗಳಲ್ಲಿಯೂ ಪ್ರಕೃತಿ ಕೊಡುವ ವಸ್ತುಗಳನ್ನು ಯಜ್ಞಕುಂಡಕ್ಕೆ ಹಾಕಿ ಪ್ರಕೃತಿ ಸಮರ್ಪಣೆ ಮಾಡುತ್ತೇವೆ.
ಅರಿತಾರಾಯಿ, ಬಚ್ಚಿರೆ ಬಜ್ಜೆಯಿ, ಪೆಲತ್ತ ಕುಕ್ಕುದ ಕೊಡಿ, ಶ್ರೀಗಂಧ ದೈವ ದೇವರುಗಳಿಗೆ ಬಹಳ ಬಹಳ ಪ್ರಾಮುಖ್ಯ ಎನ್ನುವರು. ಅಕ್ಕಿಯಿಂದ ಅನ್ನ ಗಂಜಿ ಮಾಡಿ ಉಣ್ಣುತ್ತೇವೆ. ಬದುಕಲು ಹಸಿವು ನಿವಾರಿಸಲು ಗಂಜಿ ಬೇಕೇ ಬೇಕು. ಅಕ್ಕಿ ಪವಿತ್ರ ಅಲ್ಲವೇ? ಅನಾದಿಕಾಲದಿಂದಲೂ ಎಲೆಅಡಿಕೆಯನ್ನು ಆರೋಗ್ಯದ ದೃಷ್ಟಿಯಿಂದ ಸೇವಿಸುತ್ತಾ ಬಂದಿದ್ದಾರೆ. ಅಡಿಕೆಯಲ್ಲಿ ಅಮಲು ಪದಾರ್ಥ ಇರುವುದರಿಂದ ಖುಷಿ ಪಡಲು ಸೇವಿಸಿದ್ದಾರೆ. ಹಲಸಿನ ಮರ, ಹಲಸಿನ ಹಣ್ಣುಗಳ ಉತ್ಪನ್ನಗಳು ನೂರಾರು. ಅದೇ ರೀತಿ ಮಾವಿನ ಮರ ಮತ್ತು ಹಣ್ಣುಗಳ ಉತ್ಪನ್ನಗಳು ಹತ್ತು ಹಲವು. ಶ್ರೀಗಂಧದ ಮರದಲ್ಲಿ ಅನೇಕ ರೀತಿಯ ಪ್ರಯೋಜನಗಳಿವೆ. ಇವೆಲ್ಲವೂ ಔಷಧೀಯ ಗುಣ ಹೊಂದಿರುವ ವಸ್ತುಗಳಾಗಿವೆ. ಪ್ರಾಣಿ ಪಕ್ಷಿಗಳಿಗೂ ಮಾನವ ತಿನ್ನುವ ಎಲ್ಲಾ ವಸ್ತುಗಳ ಅಗತ್ಯವಿದೆ. ಈ ಎಲ್ಲಾ ಕಾರಣಕ್ಕೆ ಮಾನವನು ದೇವರನ್ನು ಎದುರಿಟ್ಟು ಪ್ರಕೃತಿ ಗೆ ಆರಾಧನೆ ಮಾಡುತ್ತಾ ಬರುತ್ತಿದ್ದಾನೆ.
ಇನ್ನು ತುಳಸಿ ಪೂಜೆಯ ದಿನ ತುಳಸಿ ಕಟ್ಟೆಯಲ್ಲಿ ನೆಲ್ಲಿಕಾಯಿ ಮತ್ತು ಹುಣಸೆ ಹಣ್ಣಿನ ಗೆಲ್ಲುಗಳನ್ನು ಏಕೆ ಇಡುವರೆಂಬ ಪ್ರಶ್ನೆಗೆ ಉತ್ತರಿಸಲೇ ಬೇಕಾಗುವುದು. ಇಲ್ಲೂ ಪ್ರಕೃತಿ ವಂದನೆ ಕಾಣುತ್ತದೆ. ನೆಪಕ್ಕೆ ತುಳಸಿ ಮತ್ತು ನಮ್ಮ ಪ್ರಭುದೇವ ಕೃಷ್ಣ ಪರಮಾತ್ಮನಿಗೂ ಮದುವೆ ಎನ್ನುವರು. ತುಳಸಿಕಟ್ಟೆಯನ್ನು ಗೋಮೂತ್ರ ಗೋಮಯದಿಂದ ಶುಚಿಗೊಳಿಸಿ ಪ್ರಕೃತಿ ನೀಡಿರುವ ಅಕ್ಕಿ, ಕಾಯಿ, ಎಲೆ ಅಡಿಕೆ, ಮಾವು, ಹಲಸು ಚಿಗುರುಗಳೊಡನೆ ನೆಲ್ಲಿಕಾಯಿ, ಹುಣಸೆ ಕುಡಿಗಳನ್ನು ಇಟ್ಟು ತುಳಸಿದೇವಿ (ಪ್ರಕೃತಿ ನೀಡಿದ ತುಳಸಿ ಗಿಡ)ಗೆ
ಕೃಷ್ಣನೊಡನೆ ಮದುವೆಯು ಪೂಜೆಯಲ್ಲಿ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಈಗಿನಂತೆ ಹಣ್ಣು ಹಂಪಲುಗಳ ಅಂಗಡಿ ಇರುತ್ತಿರಲಿಲ್ಲ. ಪೂಜೆಗಳಿಗೆ ಆಯಾಯ ಕಾಲದಲ್ಲಿ ಸಿಗುತ್ತಿದ್ದ ಕಾಡು ಹಣ್ಣುಗಳನ್ನೇ ದೇವರಿಗೆ ಇಟ್ಟು ಆರಾಧನೆ ನಡೆಯುತ್ತಿತ್ತು. ತುಳಸಿ ಪೂಜೆ ಹಬ್ಬದ ಸಮಯದಲ್ಲಿ ಊರಲ್ಲಿ ನೆಲ್ಲಿಕಾಯಿ ಮತ್ತು ಹುಣಸೆ ಕಾಯಿಗಳು ಮಾತ್ರ ದೊರೆಯುತ್ತಿತ್ತು. ಪ್ರಕೃತಿ ನೀಡಿದ ಈ ಕಾಯಿ ಮರದ ಗೆಲ್ಲುಗಳನ್ನು ತುಳಸಿ ಕಟ್ಟೆಯಲ್ಲಿಟ್ಟು ತುಳಸಿ ಒಡನೆ
ಪ್ರಕೃತಿಗೂ ಪೂಜೆ ಸಂದಾಯ ಆಗುತ್ತದೆ. ಕೊರಲ್ ಪಾಡುನ ಪರ್ಬ,ಪುದ್ದರ್, ಸತ್ಯನಾರಾಯಣ ಪೂಜೆ, ಶನಿ ಪೂಜೆ ,ದೈವಾರಾಧನೆ ಇತ್ಯಾದಿ ಎಲ್ಲಾ ಆರಾಧನೆಗಳಲ್ಲಿ ನಾವು ಪೂಜಿಸಿ ಆರಾಧಿಸುವುದು ನಾವು ತಿಂದು ಬದುಕುವ ಪ್ರಕೃತಿ ವಸ್ತುಗಳಿಗೆ ವಿನಹ ಬೇರೆ ಬೇರೆ ದೈವ ದೇವರಿಗಲ್ಲ. ಪ್ರಕೃತಿ ಇದ್ದರೇನೆ ದೇವರು, ಮಳೆ, ಬೆಳಕು, ಜೀವನ ಬದುಕು. ಪ್ರಕೃತಿ ಮುನಿದರೆ ಎಲ್ಲವೂ ಶೂನ್ಯ.