September 20, 2024

ಅದೊಂದು ವಿಪ್ರಪುರವೆಂಬ ರಾಜ್ಯ, ರಾಜ್ಯದ ರಾಜ ಹಾರವಕರ್ಣ . ರಾಜ್ಯ ಸುಭೀಕ್ಷವಾಗಿ ಸಾಗುತಿತ್ತು, ಆಡಳಿತ ಯಂತ್ರವು ಸೊಗಸಾಗಿ ನಡೆಯುತ್ತಿತ್ತು. ರಾಜನ ಆಳ್ವಿಕೆಯಲ್ಲಿ ಬಡವ ಬಲ್ಲಿದನೆನ್ನದೇ ನ್ಯಾಯವೂ ಚೊಕ್ಕವಾಗಿ ನೀಡುತ್ತಿದ್ದನು. ಕಾಯಕಕ್ಕನುಗುಣವಾಗಿ ಅವರ ಗುಂಪುಗಳನ್ನು ಕಾಯಕದ ಆಧಾರದ ಮೇಲಿನ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅವರವರ ಕಾಯಕದವರ ಪರಿಚಯ ತೀರ ಹತ್ತಿರವಾದ್ದರಿಂದ ವಿವಾಹ ಮತ್ತಿತರ ಕಾರ್ಯಗಳು ಅವರ ಗುಂಪುಗಳೊಂದಿಗೆ ನಡೆಯುತ್ತಿತ್ತು. ವೃತ್ತಿ ಪರಿಚಯದ ಅನುಭವದ ಆಧಾರದ ಮೇಲೆ ಅವರುಗಳ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಅದನ್ನೇ ಕರಗತ ಮಾಡಿಕೊಂಡು ಅದೇ ವೃತ್ತಿಯ ಹಾದಿ ಹಿಡಿದು ಅದೇ ಗುಂಪಿನೊಂದಿಗೆ ಮುಂದುವರೆಯುವ ಪದ್ದತಿ ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಿರುವುದಾಗಿತ್ತು. ಹಾಗೆಯೇ ಆಯಾ ವೃತ್ತಿಗಳಿಗನುಸಾರವಾಗಿ ಅವರುಗಳು ನಡೆದುಕೊಂಡು ಪದ್ದತಿಯೇ ಅವರುಗಳ ಸಂಪ್ರದಾಯವಾಗಿ ಮಾರ್ಪಾಡಾಗಿ ಕಾಲ ಕಳೆದಿತ್ತು.

 ಬರು ಬರುತ್ತಾ ವೃತ್ತಿಶ್ರೇಷ್ಠತೆಯ ಮದ ಪ್ರತಿಯೊಬ್ಬರಲ್ಲೂ ಹುಟ್ಟಲು ಆರಂಭವಾಗಿ ಮೇಲು ಕೀಳೆಂಬ ವಾಂಛೆ ತಾರಕಕ್ಕೇರಿ ವಿದ್ಯಾವಂತರ ಕಾಲಕೆಳಗೆ ಮೇಲು ಕೀಳುಗಳು ಹಂಚಿಹೋದವು. ಹಾರವಕರ್ಣನು ಬದಲಾದ ಸಮಾಜಕ್ಕೆ ಒಗ್ಗಿಕೊಂಡು ರಾಜ್ಯದ ಆಡಳಿತವನ್ನು ನಡೆಸಲಾರಂಭಿಸಿದನು ಬರುಬರುತ್ತಾ ಕೀಳೆಂಬ ಪದವನ್ನು ಹೊತ್ತ ಗುಂಪಿನವರು ಮೇಲೆಂಬ ಗುಂಪಿನವರಿಂದ ಬಹಳ ಹೀನಾಯವಾಗಿ ನಡೆಸಿಕೊಳ್ಳಲು ಆರಂಭಿಸಿದರು. ಕನಿಷ್ಠ ಮಾನವ ಮೌಲ್ಯವೂ ಇಲ್ಲದಾಗಿ ಪ್ರಾಣಿಗಳಿಗಿಂತ ಹೀನಾಯವಾಗಿ ಬಾಳನ್ನು ಕಲ್ಪಿಸಿಕೊಂಡರು. ಅನೇಕ ವರ್ಷಗಳ ಕಾಲ ಇಂತಹ ಹೀನಾಯ ಸ್ಥಿತಿಗೆ ಒಗ್ಗಿಕೊಂಡು, ನಂತರದಲ್ಲಿ ಇದರ ವಿರುದ್ಧ ಸಿಡಿದೇಳುವ ಮನಸ್ಸು ಉಂಟಾದರೂ ಅಲ್ಲಿಯೇ ಹುಟ್ಟಡಗಿಸಿಬಿಡುವ ಮೇಲಿನ ಗುಂಪಿನವರ ಬಲಿಷ್ಠತೆಯ ಮುಂದೆ ಇವರ ಪ್ರಯತ್ನ ನೀರಮೇಲಿನ ಗುಳ್ಳೆಯಂತಾಗಿತ್ತು.

 ಇಂತಹ ದುರಾಡಳಿತದಿಂದ ಬೇಸತ್ತಿದ್ದ ಮತೀಂದ್ರನೆಂಬ ಬಡ ಬ್ರಾಹ್ಮಣ ಸಣ್ಣ ಗುಂಪೊಂದನ್ನು ಮಾನವೀಯತೆಯ ಆಧಾರದ ಮೇಲೆಕಟ್ಟಿಕೊಂಡು ಬಲಿಷ್ಠನಾದ ಬಾಹುಬಲನನ್ನು, ತಂತ್ರ ಸಹಕಾರಿಯಾಗಿ ಚತುರ್ಬುದ್ದಿಯನ್ನು ಜೊತೆಗೆ ಸೇರಿಸಿಕೊಂಡು ಸಣ್ಣ ಸಣ್ಣ ಪ್ರಾಂತ್ಯದಮೇಲೆ ಬುದ್ದಿಬಲದಿಂದ ದಾಳಿಯನ್ನು ನಡೆಸಿ ವಶಪಡಿಸಿಕೊಳ್ಳುತ್ತಾ ಮುಂದೆ ಸಾಗಿದ. ತನ್ನ ಚಾಣಕ್ಯ ನೀತಿಯಿಂದಾಗಿ ಮತೀಂದ್ರನು ಹಾರವಕರ್ಣನ ಸಮಬಲವಾಗಿ ನಿಂತು ಹಾರವಕರ್ಣನನ್ನು ಸೋಲಿಸಿ ವಿಪ್ರಪುರವನ್ನು ವಶಪಡಿಸಿಕೊಂಡ.

 ರಾಜ್ಯ ತನ್ನ ಸುಪರ್ದಿಗೆ ಬಂದಮೇಲೆ ಮತೀಂದ್ರನು ಆಡಳಿತ ಯಂತ್ರದಲ್ಲಿ ಬಹಳವಾಗಿ ಬದಲಾವಣೆಗಳನ್ನು ತಂದು ಬಾಹುಬಲನನ್ನು ರಾಜನನ್ನಾಗಿ, ಚತುರ್ಬುದ್ದಿಯನ್ನು ಮಂತ್ರಿಯಾಗಿ ನೇಮಿಸಿ, ತಾನು ಆಡಳಿತ ಗುರುವಾಗಿ ಮಾರ್ಗದರ್ಶನ ನೀಡುತ್ತಾ ಯಾವ ಪ್ರಜೆ ಯಾವ ವೃತ್ತಿಯಲ್ಲಿ ಆಸಕ್ತಿ ಇರುವುದೋ ಅಂತಹ ವೃತ್ತಿಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಿದ. ರಾಜ್ಯದ ಪ್ರತಿಷ್ಠಿತ ಹುದ್ದೆಗಳಿಗೆ ಅವರ ಅರ್ಹತೆಯನ್ನು ಗಮನಿಸಿ ಅದಕ್ಕೆ ತಕ್ಕ ಹಾಗೆ ನೇಮಕಾತಿಗಳನ್ನು ಮಾಡತೊಡಗಿದ. ಅಶಕ್ತರ ಕೈಯ್ಯಲ್ಲಿ ಇದ್ದ ಹುದ್ದೆಗಳು ಶಕ್ತರ ಕೈಗೆ ಸಿಕ್ಕು ರಾಜ್ಯ ಸುಗಮದ ಹಾದಿ ಹಿಡಿಯಲಾರಂಭಿಸಿತು. ಅಮಲಿನಲ್ಲಿದ್ದು ಅಧಿಕಾರ ಕಳೆದುಕೊಂಡವರ ದಂಗೆಯನ್ನು ಹತ್ತಿಕ್ಕಲು ಸಫಲನಾದ. ರಾಜ್ಯದ ಜನತೆ ಮೊದಲಿಗೆ ಬದಲಾದ ಈ ಕ್ರಮಗಳನ್ನು ಅನುಸರಿಸಲು ಹಿಂಜರಿದರೂ ಕ್ರಮೇಣ ಅವುಗಳಿಗೆ ಒಗ್ಗಿಕೊಂಡರು. ಕಟ್ಟಿಕೊಂಡಿದ್ದ ಗುಂಪುಗಳು ಒಡೆದು ಎಲ್ಲಾ ಗುಂಪುಗಳು ಒಂದಾಗಿ ಬಾಳಲಾರಂಭಿಸಿದರು. ತಾರತಮ್ಯದ ಗೋಡೆ ಕೆಡವಿ ಅವರ ಆಸಕ್ತಿ ಮತ್ತು ಅರ್ಹತೆಯ ಮೇಲೆ ಅವರ ವೃತ್ತಿಯನ್ನು, ಹುದ್ದೆಯನ್ನು, ಅಧಿಕಾರವನ್ನು ನೀಡಲಾಗಿ ಸಮಾನತೆಯ ಸಾರವನ್ನು ಸಾರಿದನು. ಒಡೆದುಹೋಗಿದ್ದ ಸಂಪ್ರದಾಯ, ಸಂಸ್ಕೃತಿಗಳು ಒಂದುಗೂಡಿ ಹೊಸ ಆವಿಷ್ಕಾರ ಪಡೆಯಿತು.

 ಕಾಲಕ್ರಮದಲ್ಲಿ ಮತೀಂದ್ರನು, ಬಾಹುಬಲರು ಅಸುನೀಗಿದರು. ಖಾಲಿಯಾದ ಗುರುವಿನ ಹುದ್ದೆಯನ್ನು ಕಲಾರಂಗದಲ್ಲಿದ್ದ ಮತೀಂದ್ರನ ಮಗನಾದ ಕಲಾಸಿಂಧುವಿಗೂ, ರಾಜನ ಹುದ್ದೆಯನ್ನು ಬಾಹುಬಲನ ಮಗನಾದ ವ್ಯೆವಹಾರಿಕ ರಂಗದಲ್ಲಿದ್ದ ಲಭ್ಯಪ್ರಾಪ್ತಿಗೂ, ಮಂತ್ರಿಯ ಸ್ಥಾನವನ್ನು ಚತುರ್ಬುದ್ದಿಯ ಮಗನಾದ ಕೃಷಿ ಕ್ಷೇತ್ರದಲ್ಲಿದ್ದ ವ್ಯವಸಾಯಪ್ರಿಯನಿಗೂ ಪ್ರಜೆಗಳು ನೀಡಿ ಉಘೇ ಉಘೇ ಎಂದು ಹರ್ಷದಿಂದ ಪಟ್ಟವನ್ನು ಕಟ್ಟಿ ಸಂಭ್ರಮಿಸಲು ಆರಂಭಿಸಿದರು. ಕಾಲ ಬದಲಾಗಿತ್ತು ಜನಗಳು ಮತ್ತದೇ ಕೊಂಪೆಯಲ್ಲಿ ಒದ್ದಾಡಲು.


✍️ ವಿಜಯ್ ನಿಟ್ಟೂರು



Leave a Reply

Your email address will not be published. Required fields are marked *