November 23, 2024
purana-1

ಯಾರಿವನು ನರರಿಗೂ ನಾಗರರಿಗೂ ಸಮಾನಬಂಧುವು..?

ಪುರಾಣ ನೀತಿ

(ಹೆಜ್ಜೆ – 5)

ಹಿಂದಿನ ಸಂಚಿಕೆಯಿಂದ

  ಸರ್ಪಯಾಗವು ಸರ್ಪಸಂಕುಲಗಳಿಗೆ ಕಂಟಕವಾಗುವುದನ್ನು ಅರಿತ ವಾಸುಕಿಯು ತನ್ನ ತಂಗಿಯ ಮಗನಲ್ಲಿ “ಈ ಪನ್ನಗಾಧ್ವರವನ್ನು ಹೇಗಾದರೂ ನಿಲ್ಲುವಂತೆ ಮಾಡು” ಎಂದು ನುಡಿಯುತ್ತಾನೆ. ಅಷ್ಟಕ್ಕೂ ಈ ಸರ್ಪಯಾಗವನ್ನು ನಿಲ್ಲಿಸಲು ಸಮರ್ಥನಾದ ಆ ವ್ಯಕ್ತಿ ಯಾರು..? ಅವನಿಗೆ ಯಾಕೆ ಈ ಕೆಲಸವನ್ನು ಸರ್ಪರಾಜ ನೀಡುತ್ತಾನೆ..? ಅಷ್ಟೊಂದು ಸಾಮರ್ಥ್ಯ ಅವನಿಗೆ ಇದೆಯೇ..? ಅವನ ಹಿನ್ನೆಲೆ ಏನು..?

  ಈ ಸರ್ಪಯಾಗವನ್ನು ನಿಲ್ಲಿಸಲು ಹೊರಟವನು ಬೇರೆ ಯಾರೋ ಅಲ್ಲ ಅವನೇ ವಾಸುಕಿಯ ತಂಗಿ ಮಗ “ಆಸ್ತೀಕ”. ಇವನು ನರರಿಗೂ ನಾಗರರಿಗೂ ಸಮಾನಬಂಧುವು ಆಗಿರುವನು. ಹಿಂದೆ “ಯಾಯಾವರ”ರೆಂಬ ಋಷಿಗಳ ಸಂತತಿಯಲ್ಲಿ ಕೊನೆಯವನಾಗಿ “ಜರತ್ಕಾರು” ಎಂಬುವವನೊಬ್ಬನು ಉಳಿದಿದ್ದನು.ಅವನು ಬ್ರಹ್ಮಚಾರಿಯಾಗಿಯೇ ತಪೋನಿರತನಾಗಿದ್ದನು.ಒಂದು ದಿನ ಜರತ್ಕಾರುವು ಅರಣ್ಯದಲ್ಲಿ ಸಂಚರಿಸುತ್ತಿದ್ದಾಗ ಅವನ ಗತಿಸಿ ಹೋದ ಪಿತೃಗಳು ಜೋಲುಬಿದ್ದವರು ಕಾಣಸಿಕ್ಕಿದರು – ವಂಶವನ್ನು ಕಮರಿಸಬಾರದು, ಮದುವೆಯಾಗಿ ಸಂತತಿಯನ್ನು ಪಡೆದು ಪಿತೃಗಳನ್ನು ಉದ್ಧರಿಸಬೇಕೆಂದು ನಿರ್ದೇಶಿಸಿದರು. ತಾನಾಗಿ ಕೇಳಲಾರೆನು-ತನ್ನದೇ ಹೆಸರಿನ ಕನ್ಯೆಯನ್ನೇ ಯಾರಾದರೂ ಕರೆದುಕೊಟ್ಟರೆ ವರಿಸುವೆನೆಂದು ಅವರಿಗೆ ಉತ್ತರಿಸಿ ಹೊರಟುಹೋದನು.

  ಈ ವಿಚಾರ ತಿಳಿದು ವಾಸುಕಿಯು ತನ್ನ ತಂಗಿಯಾದ “ಜರತ್ಕಾರು”ವನ್ನು ತಾನೇ ಕರೆದು ಯಾಯಾವರರ ಜರತ್ಕಾರುವಿಗೆ ಮದುವೆ ಮಾಡಿಕೊಟ್ಟನು. ಪತ್ನಿಯು ಪದ್ಧತಿಯಂತೆ ಪತೀಗೃಹವಾದ- ಜರತ್ಕಾರುವಿನ ಆಶ್ರಮವನ್ನು ಸೇರಿದಳು.ಆ ಗಂಡಹೆಂಡಿರಿಬ್ಬರು ಸಂಸಾರಿಗಳಾದರು ಕೆಲವು ಸಮಯದ ಮೇಲೆ ನಾಗರ ಜರತ್ಕಾರು ಗರ್ಭಿಣಿಯಾದಳು. ಇಬ್ಬರಿಗೂ ಸಂತೋಷವುಂಟಾಯಿತು.

  ಒಂದು ದಿನ ಆಶ್ರಮದಲ್ಲಿ ಮಧ್ಯಾಹ್ನ ಕಳೆದು ನಿದ್ರೆ ಮಾಡಿದ್ದ ಗಂಡು ಜರತ್ಕಾರುವು ಸೂರ್ಯಾಸ್ತವಾಗಲು ಸಮೀಪಿಸಿದರೂ ಎಚ್ಚರಗೊಳ್ಳಲಿಲ್ಲ. ಪತಿಯ ಸಂಧ್ಯಾ ವಿಧಿಗೆ ತೊಡಕಾಗಬಾರದೆಂದು ಹೆಣ್ಣು ಜರತ್ಕಾರು ಗಂಡನನ್ನು ಮೈಮುಟ್ಟಿ ಎಚ್ಚರಿಸುತ್ತಾಳೆ. ಇದರಿಂದ ನಿದ್ರಾಭಂಗಮಾಡಿದಳೆಂದು ಸಿಟ್ಟುಗೊಂಡು,ಅದೇ ಕಾರಣವಾಗಿಟ್ಟುಕೊಂಡು ಆಶ್ರಮವನ್ನು ಬಿಟ್ಟು ಹೊರಟುಹೋದನು.ಅವನಿಗೆ ಅದು ಒಂದು ನೆಪ ಅಷ್ಟೇ, ಅವನಿಗೆ ಸಂಸಾರದ ಜಂಜಾಟ ಬೇಕಾಗಿರಲಿಲ್ಲ.ಪಾಪ ನಾಗರ ಜರತ್ಕಾರು ಏನು ತಾನೇ ಮಾಡಬಲ್ಲಳು? ಹೆಣ್ಣು ಜರತ್ಕಾರು ಗರ್ಭಿಣಿ ಬೇರೆ, ಜಗತ್ತಿಗೆ ಆವರಿಸಿದ ಅವತ್ತಿನ ಕತ್ತಲೆ ಅವಳ ಪಾಲಿಗೆ ಜೀವನದುದ್ದಕ್ಕೂ ಮೆತ್ತಿಕೊಂಡಿತು. ದುಃಖಿಸುತ್ತಲೇ ಕಾದು ನೋಡಿದಳು,ಕಾಡಿನಲ್ಲಿ ಅಡ್ಡಾಡಿದಳು ಕೊನೆಗೆ ಅಣ್ಣನ ಮನೆಯನ್ನು ಸೇರಿಕೊಂಡಳು.

  ಮುಂದೆ ಹೆಣ್ಣು ಜರತ್ಕಾರು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ತನ್ನನ್ನು ಬಿಟ್ಟು ಹೋದ ತನ್ನ ಗಂಡನನ್ನು ತಂದೆಯಾಗಿ ಮಾಡಿ ಅವನ ಪಿತೃಗಳು ಸದ್ಗತಿಯನ್ನು ಹೊಂದುವಂತೆಯೂ ಮಾಡಿದಳು. ಆದರೆ ಅದರೊಂದಿಗೆ ಅವಳೂ ಅವಳ ಮಗನೂ ಬೇರೆ ಗತಿಯಿಲ್ಲದೆ ವಾಸುಕಿಯ ಆಶ್ರಯದಲ್ಲಿಯೇ ದಿನ ಕಳೆಯಬೇಕಾಯಿತು.

  ವಾಸುಕಿಯು ತನ್ನ ತಂಗಿಗೆ ಧೈರ್ಯ ಹೇಳಿ ಅವರಿಬ್ಬರನ್ನೂ ರಕ್ಷಿಸುತ್ತಿದ್ದನು.ಅಂತೆಯೇ ಮಗುವಿಗೆ ಆಸ್ತೀಕನೆಂದು ಹೆಸರಿಟ್ಟು ಮುಂದೆ ಸಕಲ ವಿದ್ಯಾ ವಿಶೇಷಗಳನ್ನೆಲ್ಲಾ ಅಧ್ಯಯನ ಮಾಡಲು ವ್ಯವಸ್ಥೆ ಮಾಡಿದನು. ಆಸ್ತೀಕನು ಎಲ್ಲವನ್ನೂ ಕಲಿತುಕೊಂಡು ದೊಡ್ಡವನಾಗುತ್ತಾ ಬಹುದೊಡ್ಡ ವಿದ್ವಾಂಸನಾದನು. ತಪಸ್ಸನ್ನೂ ಮಾಡಿ ಘನತಪಸ್ವಿಯೆಂದು ಅನ್ನಿಸಿಕೊಂಡನು.ಅವನೇ ಜನಮೇಜಯನ ಸರ್ಪಯಾಗವನ್ನು ನಿಲ್ಲಿಸುವ ಪ್ರಯತ್ನಕ್ಕೆ ವಾಸುಕಿಯಿಂದ ನಿಯೋಜಿತನಾಗಿ ಹೊರಟವನು.ಒಂದೇ ಹೆಸರಿನ ತಾಯಿ ತಂದೆಯರನ್ನು ಪಡೆದಿದ್ದ ಆಸ್ತೀಕನು ಪಿತೃಗಳ ಸಧ್ಗತಿಗಾಗಿಯೇ ಹುಟ್ಟಿಕೊಂಡವನು.ತನ್ನ ತಂದೆಯ ಮುಖವನ್ನೇ ಕಾಣಲಿಲ್ಲ ಆದರೂ ತಾಯಿಯ ಬಳಗದವರನ್ನು ಉಳಿಸುವ ಪ್ರಯತ್ನಕ್ಕೆ ಮುಂದಾದನು ನೇರವಾಗಿ ಹಸ್ತಿನಾಪುರದ ತಕ್ಷಶಿಲೆಗೆ ನಡೆದನು.

  ಅಲ್ಲಿ ಸರ್ಪಯಾಗದ ಯಜ್ಞ ಶಾಲೆಯನ್ನು ಸುಲಭವಾಗಿ ಪ್ರವೇಶಿಸುವುದಕ್ಕೆ ಸಾಧ್ಯವಿರಲಿಲ್ಲ. ಅದಕ್ಕಾಗಿ ಆಸ್ತೀಕನು ಮಾಡಿದ್ದಾದರೂ ಏನು..?

ಮುಂದಿನ ಸಂಚಿಕೆಯಲ್ಲಿ…..

✍🏻 ಎಸ್ ಕೆ ಬಂಗಾಡಿ

Leave a Reply

Your email address will not be published. Required fields are marked *