
ಭಾರತ ದೇಶದ ಪ್ರಾಚೀನ ನಾಗರಿಕತೆಯ ಕಾಲದಲ್ಲಿ ಜಾತಿಪದ್ದತಿ ಇತ್ತು ಎಂಬುದಕ್ಕೆ ಯಾವುದೇ ಕುರುಹುಗಳು ಸಿಗುವುದಿಲ್ಲ. ಹಿಂದೆ ನಾಗರಿಕತೆಯ ಜನ ತಮ್ಮನ್ನು ತಮ್ಮ ಜನ್ಮಸ್ಥಳ ಅಥವಾ ಮೂಲಸ್ಥಾನದ ಹೆಸರಿನ ಮೂಲಕ ಅಥವಾ ವಂಶವಾಹಿ ಹೆಸರಿನ ಮೂಲಕ ಗುರುತಿಸಿಕೊಳ್ಳುತ್ತಿದ್ದರು. ಇನ್ನು ಕೆಲವರು ತಮಗೆ ಸಿಕ್ಕ ಗೌರವ ಅಥವಾ ಬಿರುದಿನಂತೆ ಗುರುತಿಸಿಕೊಳ್ಳುತ್ತಿದ್ದರು. ರಾಜವಂಶಗಳು ಸೂರ್ಯವಂಶ , ಚಂದ್ರವಂಶ ಮುಂತಾದ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದರು. ಇಷ್ಟೇ ಅಲ್ಲದೇ ಸಮಾಜದಲ್ಲಿ ಗೌರವ ಹೊಂದಿದ ವೃತ್ತಿಗಳು, ಸ್ಥಾನಮಾನಗಳು ಹೆಸರಿನೊಂದಿಗೆ ಸೇರಿಕೊಳ್ಳುತ್ತಿದ್ದವು. ಭಟರು ಅಥವಾ ಬಂಟರು, ಭಂಡಾರದ ಕಾವಲುಗಾರ ಭಂಡಾರಿ , ಚಿಕಿತ್ಸೆ ನೀಡುವವನು ವೈದ್ಯ ಅಥವಾ ಬೈದ್ಯ, ಪುರೋಹಿತರು ಪೂಜಾರಿ, ಅಸ್ರಣ್ಣ, ವೇದಮೂರ್ತಿ , ಉಪಾದ್ಯಾಯ ಮುಂತಾದ ಹೆಸರುಗಳು. ಪ್ರಬಲ ರಾಜರು ಪಡೆಯುವ ಚಕ್ರವರ್ತಿ, ಬಳ್ಳಾಲ , ಸಾಮ್ರಾಟ್ ಮುಂತಾದ ಬಿರುದುಗಳು. ನಂತರದ ದಿನಗಳಲ್ಲಿ ಸೇನಾ ನಾಯಕರು ನಾಯಕ. ಆಳುವವನು ಅರಸ, ಗುತ್ತು, ಬರ್ಕೆ, ಹಿಂದಿನ ಪಂಚಾಯತ್ ಅಧಿಕಾರಿಗಳು ಮತ್ತು ತೆರಿಗೆ ಅಧಿಕಾರಿಗಳು, ಪಟೇಲ , ಶಾನುಭೋಗ ಮುಂತಾದುವುಗಳು ಇಂದು ಮನೆತನಗಳ ಹೆಸರಾಗಿ ಗುರುತಿಸಿಕೊಂಡಿವೆ.