ದೀಕ್ಷಿತ್ ಭಂಡಾರಿ ಉಜಿರೆ ಛಾಯಾಗ್ರಹಣ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಕಿರುಚಿತ್ರ “ನೀತಿ” ವೀಕ್ಷಕರ ಮೆಚ್ಚುಗೆಯ ಜೊತೆಗೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಬೆಳ್ತಂಗಡಿಯ ಆಮಂತ್ರಣ ಸಂಸ್ಥೆ ಪ್ರತಿವರ್ಷದಂತೆ ಈ ಬಾರಿಯೂ ಆಯೋಜಿಸಿದ್ದ ಅತ್ಯುತ್ತಮ ಕಿರುಚಿತ್ರ ಸ್ಪರ್ಧೆಯಲ್ಲಿ ಸಾಮಾಜಿಕ ಕಳಕಳಿಯ ಸಂದೇಶ ಸಾರುವ “ನೀತಿ” ಚಿತ್ರ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆರಾಧನಾ ಭಟ್ ಅವರ ಸಾಮಾಜಿಕ ಜಾಲತಾಣದ ಗ್ರೂಪ್ ವೊಂದರಲ್ಲಿ ಆಹ್ವಾನಿಸಲಾಗಿದ್ದ ಸ್ಪರ್ಧೆಯಲ್ಲಿ ವಿವಿಧೆಡೆಗಳ ಸುಮಾರು ಮೂವತ್ತೈದು ಕಿರುಚಿತ್ರಗಳು ಭಾಗವಹಿಸಿದ್ದವು. ಈ ಸ್ಪರ್ಧೆಯಲ್ಲಿ “ನೀತಿ” ಕಿರುಚಿತ್ರ ತನ್ನ ಗುಣಮಟ್ಟದ ನಿರೂಪಣೆ, ಅತ್ಯುತ್ತಮ ನಿರ್ದೇಶನ ಮತ್ತು ಸಾಮಾಜಿಕ ಕಳಕಳಿಯ ಸಂದೇಶಕ್ಕೆ ಪ್ರಥಮ ಬಹುಮಾನಪಡೆದುಕೊಂಡಿದೆ. ಜನವರಿ 14ರಂದು ಬೆಳ್ತಂಗಡಿಯ ಅಳದಂಗಡಿ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು ದೀಕ್ಷಿತ್ ಭಂಡಾರಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈಗಾಗಲೇ ಮೂರು ಕಿರುಚಿತ್ರ ಹಾಗೂ ಎರಡು ಆಲ್ಬಮ್ ಹಾಡುಗಳನ್ನು ನಿರ್ದೇಶಿಸಿ ಹೆಸರು ಮಾಡಿರುವ ಉಜಿರೆಯ ದೀಕ್ಷಿತ್ ಭಂಡಾರಿಯರ ಕಿರುಚಿತ್ರ “ಅವನಿ”ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಹೀಗಾಗಿ ಈ ಬಾರಿ ಸಾಮಾಜಿಕ ಕಳಕಳಿಯನ್ನು ಸಾರುವ, ಭ್ರಷ್ಟ ರಾಜಕಾಣಿಗಳಿಗೆ ಕಿವಿಮಾತು ಹೇಳುವ ವಿಚಾರವನ್ನು ಕೈಗೆತ್ತಿಕೊಂಡು ಉತ್ತಮ ಕಿರುಚಿತ್ರವನ್ನು ಹೊರ ತಂದಿರುವ ದೀಕ್ಷಿತ್ ಅವರ ಪ್ರಯತ್ನ ಯಶಸ್ಸು ಕಂಡಿದೆ. “ಶ್ಲಾಘನ” ಎಂಬ ಕಲಾಸಕ್ತರ ತಂಡದೊಂದಿಗೆ ಕೆಲಸ ನಿರ್ವಹಿಸುತ್ತಿರುವ ದೀಕ್ಷಿತ್ ಅವರ ಈ ಯೋಜನೆಗೆ ಮನೋರಾಜ್ ರಾಜೀವ್ ಭಂಡಾರಿ, ನಿಶಾನ್.ಕೆ.ಭಂಡಾರಿ, ಸಂತೋಷ್ ಕುಮಾರ್ ಜೈನ್, ಮೋಹನ್ ಕುಮಾರ್, ಮಹೇಶ್ವರ ಶಾಸ್ತ್ರಿ, ಮೋಹನ್ ಚೌಧರಿ ಮುಂತಾದವರು ನಿರ್ಮಾಪಕರಾಗಿ ತಮ್ಮ ಸಹಕಾರ ನೀಡಿದ್ದು, ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಅಮೀನ್ ಮತ್ತು ಹಿತೇಶ್ ಕಾಪಿನಡ್ಕ ಅವರು ಟ್ರೇಲರ್ ಗೆ ನೀಡಿದ್ದ ಹಿನ್ನೆಲೆ ಧ್ವನಿ, ಕಿರುಚಿತ್ರದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಹಕಾರಿಯಾಯಿತು. ಜೊತೆಗೆ ಪುನೀತ್ ಭಂಡಾರಿ ಉಜಿರೆ, ಆಶಿಕ್ ಭಂಡಾರಿಯವರು ದೀಕ್ಷಿತ್ ಗೆ ಬೆನ್ನೆಲುಬಾಗಿ ನಿಂತು ಚಿತ್ರದ ಯಶಸ್ಸಿಗೆ ಕಾರಣರಾದರು.
ಸೂಪರ್ ಸ್ಟಾರ್ ಉಪೇಂದ್ರ ಅವರ ಅಪ್ಪಟ ಅಭಿಮಾನಿಯಾಗಿರುವ ದೀಕ್ಷಿತ್ ಭಂಡಾರಿಯವರ ಈ ಕಿರುಚಿತ್ರವನ್ನು ಉಪೇಂದ್ರ ಅವರೇ ಬಿಡುಗಡೆಗೊಳಿಸಿ ಶುಭಹಾರೈಸಿದ್ದು, ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಾರಂಭದಿಂದಲೂ ಕುತೂಹಲ ಹೆಚ್ಚಿಸಿಕೊಂಡು ಬಂದಿದ್ದ “ನೀತಿ”, ಈಗ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಗಳಿಸುವುದರೊಂದಿಗೆ ಚಿತ್ರಕ್ಕಾಗಿ ಶ್ರಮಿಸಿದವರಲ್ಲಿ ಸಾರ್ಥಕತೆಯನ್ನು ಮೂಡಿಸಿದೆ.
ಯಾವುದೇ ಸಾಧಕನಿಗೆ ಅಥವಾ ಯಾವುದೇ ಕಲಾವಿದನಿಗೆ ಒಂದು ಪ್ರಶಸ್ತಿ ತನ್ನ ವೃತ್ತಿ ಬದುಕಿನಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲು ಪ್ರೇರೇಪಣೆ ನೀಡುತ್ತದೆ. ಆ ನಿಟ್ಟಿನಲ್ಲಿ ಈ ಪ್ರಶಸ್ತಿ ದೀಕ್ಷಿತ್ ಭಂಡಾರಿಯವರಿಗೆ ತಮ್ಮ ಕಿರುಚಿತ್ರ ಪ್ರಪಂಚ, ಚಲನಚಿತ್ರರಂಗ, ಸಿನಿಮಾಟೋಗ್ರಫಿ, ಕೊರಿಯೋಗ್ರಫಿ, ಫಿಲ್ಮ್ ಡೈರೆಕ್ಷನ್ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಲಿ. ಈ ಮೂಲಕ ಹೆಚ್ಚಿನ ಸಾಧನೆ ಮಾಡಿ ಭಂಡಾರಿ ಸಮಾಜಕ್ಕೆ ಮತ್ತಷ್ಟು ಗೌರವ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ”ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
“ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.”