September 20, 2024

ಜನಮೇಜಯನ ಸಕಲ ಪಾಪಗಳನ್ನು ನಾಶಮಾಡಲು ವೇದವ್ಯಾಸರು ಸೂಚಿಸಿದ ಮಾರ್ಗ ಯಾವುದು…?

ಪುರಾಣ ನೀತಿ.

(ಹೆಜ್ಜೆ- 8)

ಹಿಂದಿನ ಸಂಚಿಕೆಯಿಂದ…

  ಋಷಿಮುನಿಗಳೆಲ್ಲಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಮತ್ತೆ ಎಲ್ಲರೂ ಭಗವಾನ್ ವೇದವ್ಯಾಸರ ಕಡೆಗೆ ನೋಡಿದರು. ಆಗಲೇ ಜನಮೇಜಯನು ಮತ್ತಾವುದೋ ಅಂತಃಸ್ಫೂರ್ತಿಯಿಂದ ಪ್ರೇರಣೆಗೊಂಡು ವ್ಯಾಸ ಮಹರ್ಷಿಗಳಿಗೆ ನಮಸ್ಕಾರಮಾಡಿ ಎದ್ದು ನಿಂತು ಕೈ ಜೋಡಿಸಿ ವಿನಮ್ರವಾಗಿ “ಭಗವಾನ್ ತಾವು ನನ್ನ ಮುತ್ತಾತರ ಕಾಲದಿಂದಲೂ ಇದ್ದವರು, ನಮ್ಮ ವಂಶವನ್ನು ಉದ್ಧರಿಸಿದವರು ನನ್ನ ಮೇಲೆ ಪೂರ್ಣ ಕೃಪೆಯಿಟ್ಟು ನನ್ನನ್ನು ರಕ್ಷಿಸಬೇಕು” ಎಂದು ಪ್ರಾರ್ಥಿಸಿ ನಮಸ್ಕರಿಸಿದನು.

  ವ್ಯಾಸಭಗವಾನರು ಮುಗುಳ್ನಗುವನ್ನು ಬೀರುತ್ತ ಮಹಾರಾಜನನ್ನು ಹರಸಿ ತಮ್ಮ ಪ್ರಿಯ ಶಿಷ್ಯರಾದ ವೈಶಂಪಾಯನರನ್ನು ಕರೆದು “ಸಹನೆ ಮತ್ತು ಅಸಹನೆಗಳ ಪ್ರತೀಕಗಳೇ ಎನ್ನಬಹುದಾಗಿದ್ದ ಆ ಪಾಂಡವಕೌರವರ ವೃತ್ತಾಂತವನ್ನು ಭಗವಾನ್ ಶ್ರೀ ಕೃಷ್ಣನ ಮಹಿಮಾತಿಶಯಗಳೊಂದಿಗೆ ನಮ್ಮಿಂದ ನೀನು ಕೇಳಿ ತಿಳಿದಿರುವೆಯಷ್ಟೆ? ಪಾಪಭೀರುವಾದ ಈ ಮಹಾರಾಜನಿಗೆ ಆ ವೃತ್ತಾಂತವನ್ನು ವಿಶ್ರುತಪಡಿಸು, ಅದನ್ನು ಶ್ರದ್ಧಾ ಭಕ್ತಿಗಳಿಂದ ಆಲಿಸುವುದರ ಮೂಲಕ ಅವನ ಸಕಲ ಪಾಪಗಳೂ ನಾಶವಾಗಲಿ.ಆ ದೈವ ಭಕ್ತಿಯ ಪ್ರಚೋದನೆಯಿಂದ ಅವನು ಪಾವನನಾಗಲಿ, ಧರ್ಮ ಮಾರ್ಗವನ್ನು ತಿಳಿದು ನಡೆದು ಕೃತಾರ್ಥನಾಗಿ ಸಕಲ ಶ್ರೇಯಸ್ಸನ್ನೂ ಹೊಂದಲಿ” ಎಂದು ಆಜ್ಞಾಪಿಸಿದರು.

  ವೈಶಂಪಾಯನರಿಗೆ ಇಂಥಾ ಅಪ್ಪಣೆಯು ಅನಿರೀಕ್ಷಿತವಾಗಿತ್ತು. ಅಂತೆಯೇ ಅವರು ಕ್ಷಣಕಾಲ ತನ್ನ ಮಾನಸಿಕ ಆಂದೋಲನದೊಂದಿಗೆ ಸೆಣಸಾಡಿ, ಸಂತೈಸಿಕೊಂಡು ಭಗವಾನರಿಗೆ ಅಭಿವಾದನಮಾಡಿ ನಿಂತುಕೊಂಡರು. ಜನಮೇಜಯನು ಪದ್ಧತಿಯಂತೆ ಅವರ ಪಾದಗಳನ್ನು ತೊಳೆದು ಆರ್ಚನೆಮಾಡಿ ಕೈ ಹಿಡಿದು ಸಿದ್ಧವಾಗಿದ್ದ ಪ್ರವಚನಪೀಠವನ್ನೇರಿಸಿದನು

 ವೈಶಂಪಾಯನರು ಧ್ಯಾನಸ್ಥರಾಗಿ ಕೈಜೋಡಿಸಿಕೊಂಡು ಶ್ರೀ ಗುರು ದೇವತಾ ಪ್ರಾರ್ಥನೆಯನ್ನು ಮಾಡಿ, ವಿಘ್ನೇಶ್ವರನನ್ನು ಸಂಸ್ತುತಿಸಿ ಅಲ್ಲಿ ನೆರೆದಿದ್ದ ಸರ್ವರಿಗೂ ಕೇಳುವಂತೆ ಜನಮೇಜಯನ ಪೂರ್ವಜರ ಪುಣ್ಯೇತಿಹಾಸವನ್ನು ನಿರೂಪಿಸಲು ಉಪಕ್ರಮಿಸಿದರು.

  ಪುರಾಣ ನೀತಿಯಲ್ಲಿ ಒಂದನೇ ಸಂಚಿಕೆಯಿಂದ ಎಂಟನೆ ಸಂಚಿಕೆಯವರೆಗೆ ನೀವು ಹಲವು ನೀತಿಯನ್ನು ತಿಳಿದುಕೊಳ್ಳಬಹುದು, ಉತ್ತಂಕನ ಸ್ವಾರ್ಥ, ತನ್ನಲ್ಲಿರುವ ಕ್ರೋಧವನ್ನು ಇನ್ನೊಬ್ಬನ ಮುಖಾಂತರ ಶಮನಮಾಡಿಕೊಳ್ಳುವ ರೀತಿ, ಶೃಂಗಿಯ ಪಿತೃ ಭಕ್ತಿ, ಪರೀಕ್ಷಿತ ಮಹಾರಾಜನ ದುಡುಕಿನಿಂದ ದಕ್ಕಿದ ಮರಣ, ಕಾಶ್ಯಪನೆಂಬ ಬಹುದೊಡ್ಡ ಮಾಂತ್ರಿಕನಾದರೂ ಮೋಹದಿಂದ ತನ್ನ ವಿದ್ಯೆಯನ್ನು ಮಾರಿಕೊಂಡ ರೀತಿ, ಕದ್ರುವಿನ ಶಾಪ ಫಲಿಸಿದ ರೀತಿ… ಇದೆಲ್ಲಾ ಓದಿ ತಿಳಿದು ಮನುಷ್ಯ ಒಳ್ಳೆಯ ಗುಣಗಳನ್ನು ತನ್ನಲ್ಲಿ ತೊಡಗಿಸಿಕೊಂಡು ತನ್ನ ಜೀವನವನ್ನು ಧರ್ಮದ ಪಥದಲ್ಲಿ ನಡೆಸಿಕೊಂಡು ಹೋಗಬೇಕು ಎಂದು ತಿಳಿಸುತ್ತಾ ಪುರಾಣ ನೀತಿಯ ಈ ಪುರಾಣ ಕಥೆಯನ್ನು ಮುಗಿಸುತ್ತಿದ್ದೇನೆ.

  ಮುಂದಿನ ಸಂಚಿಕೆಯಲ್ಲಿ ಇನ್ನೊಂದು ಪುರಾಣ ಕಥೆಯೊಂದಿಗೆ ನೀತಿಯನ್ನು ತಿಳಿಯೋಣ…

✍🏻 ಎಸ್ ಕೆ ಬಂಗಾಡಿ.


Leave a Reply

Your email address will not be published. Required fields are marked *