September 20, 2024

ಸೊರಬ ಮತ್ತು ಶಿರಾಳಕೊಪ್ಪ ವಲಯ ಭಂಡಾರಿ ಸಮಾಜ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಜನವರಿ 26, 2019 ರ ಶನಿವಾರ ಶಿರಾಳಕೊಪ್ಪದ ಸೊರಬ ರಸ್ತೆಯಲ್ಲಿರುವ ಜಾನಕಿರಾಮ ಟ್ರಾವೆಲ್ಸ್ ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಗಣೇಶ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಗೆ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ನೂತನ ಅಧ್ಯಕ್ಷರಾದ ಶ್ರೀಯುತ ಮಾಧವ ಭಂಡಾರಿ ಸಾಗರ,ನೂತನ ಉಪಾಧ್ಯಕ್ಷರಾದ ಶ್ರೀಯುತ ಮೋಹನ್ ಭಂಡಾರಿ ಬಾಳೆಹೊನ್ನೂರು ಮತ್ತು ನೂತನ  ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಸುಧಾಕರ್ ಭಂಡಾರಿ ಶಿರಾಳಕೊಪ್ಪ ಇವರುಗಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.


ಸಭಾ ಕಾರ್ಯಕ್ರಮವು ಮಧ್ಯಾಹ್ನ 12 ಗಂಟೆಗೆ ಶ್ರೀಮತಿ ಉಷಾ ರಮೇಶ್ ಭಂಡಾರಿಯವರ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಸಭೆಯ ಆರಂಭಕ್ಕೆ ಮುನ್ನ ಇತ್ತೀಚೆಗೆ ನಿಧನರಾದ ಸಮಾಜದ ಬಂಧು ಶ್ರೀ ಸಂಜೀವ್ ಭಂಡಾರಿಯವರಿಗೆ ಶ್ರದ್ಧಾಂಜಲಿ ಅರ್ಪಿಸಿ ಒಂದು ನಿಮಿಷದ ಮೌನಾಚರಣೆಯನ್ನು ಆಚರಿಸಲಾಯಿತು.


ಶ್ರೀಯುತ ರಮೇಶ್ ಭಂಡಾರಿಯವರು ಸ್ವಾಗತ ಕೋರಿದರು.ಕಾರ್ಯದರ್ಶಿಗಳಾದ ಶ್ರೀಯುತ ಉಮೇಶ್ ಭಂಡಾರಿಯವರು ವಾರ್ಷಿಕ ಲೆಕ್ಕಪತ್ರ ಮಂಡನೆ ಮತ್ತು ವಾರ್ಷಿಕ ವರದಿಯನ್ನು ವಾಚಿಸಿದರು.
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ನೂತನ ಉಪಾಧ್ಯಕ್ಷರಾದ ಶ್ರೀಯುತ ಮೋಹನ್ ಭಂಡಾರಿ ಬಾಳೆಹೊನ್ನೂರು ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ …”ಭಂಡಾರಿ ಸಮಾಜದ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದರೂ ನನ್ನ ಕೈ ಹಿಡಿದಿದ್ದು ಕುಲಕಸುಬಾದ ಕ್ಷೌರಿಕ ವೃತ್ತಿ.ನನ್ನ ವೃತ್ತಿಯನ್ನು ನಾನು ಅತ್ಯಂತ ಗೌರವಪೂರ್ವಕವಾಗಿ ನಿರ್ವಹಿಸಿಕೊಂಡು ಬಂದಿದ್ದೇನೆ.ಮೊದಲು ನಾವು ಮಾಡುವ ವೃತ್ತಿಯನ್ನು ಗೌರವಿಸುವುದರಿಂದ  ಸಮಾಜದಲ್ಲಿ ನಮ್ಮ ಗೌರವವೂ ಹೆಚ್ಚುತ್ತದೆ ಅದಕ್ಕೇ ನಾನೇ ಉದಾಹರಣೆ.” ಎಂದು ತಮ್ಮ ಮನದಾಳದ ಮಾತುಗಳನ್ನಾಡಿದರು.


ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ನೂತನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಸುಧಾಕರ್ ಭಂಡಾರಿಯವರು ಮಾತನಾಡುತ್ತಾ….”ಕ್ಷೌರಿಕ ವೃತ್ತಿಯನ್ನು ಮಾಡುವವರು ಶೈಕ್ಷಣಿಕವಾಗಿ ಸಬಲರಾಗಬೇಕು. ಶಿಕ್ಷಣದಿಂದ ಮಾತ್ರ ನಮ್ಮ ಜೀವನವನ್ನು, ಜೀವನಮಟ್ಟವನ್ನು ಸುಧಾರಿಸಲು ಸಾಧ್ಯ.ಸಮಾಜದ ಬಂಧುಗಳು ಯಾವುದೇ ವೃತ್ತಿಯಲ್ಲಿದ್ದರೂ ಸಮಾಜದ ಸಂಘಟನೆಗಳಲ್ಲಿ ಭಾಗವಹಿಸಬೇಕು.ಆಗ ಮಾತ್ರ ಸ್ಥಾನಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.” ಎಂದು ಕಿವಿಮಾತು ಹೇಳಿದರು.


ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ನೂತನ ಅಧ್ಯಕ್ಷರಾದ ಶ್ರೀಯುತ ಮಾಧವ ಭಂಡಾರಿ ಸಾಗರ ರವರು ಮಾತನಾಡುತ್ತಾ…..”ನಿಮ್ಮೆಲ್ಲರ ಶುಭಾಶೀರ್ವಾದದಿಂದ ಸಮಾಜದ ಸೇವೆಯನ್ನು ಮಾಡುವಂತಹ ಒಂದು ಅವಕಾಶ ನಮಗೆ ದೊರೆತಿದೆ. ನಾವೆಲ್ಲ ಸಮಾಜದ ಸೇವಾರ್ಥಿಗಳು ಮಾತ್ರ. ಮಾತೆಯರು ಮಕ್ಕಳಲ್ಲಿ ನಮ್ಮ ಜಾತಿ ಕುಲಕಸುಬು ಇವುಗಳ ಬಗ್ಗೆ ಕೀಳರಿಮೆಯನ್ನು ತುಂಬದೇ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವಂತಹ ಮನಸ್ಥಿತಿಯನ್ನು ನಿರ್ಮಾಣ ಮಾಡಬೇಕು.ಯಾವುದೇ ಪರಿಸ್ಥಿತಿಯಲ್ಲಿಯೂ ನಮ್ಮ ಮಕ್ಕಳು ನಾನು ಭಂಡಾರಿ,ನಾನು ಕ್ಷೌರಿಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ರೀತಿಯಲ್ಲಿ ನಾವು ಸಮಾಜದಲ್ಲಿ ಪ್ರಾಮಾಣಿಕವಾಗಿ ಜೀವಿಸಬೇಕು.ಈ ಕಾಲಘಟ್ಟದಲ್ಲಿ ಭಂಡಾರಿ ಬಂಧುಗಳಿಗೆ ಸಮಾಜದಲ್ಲಿ ಗೌರವ ಸಿಗುತ್ತಿದ್ದರೆ ಅದಕ್ಕೆ ಕಾರಣ ನಮ್ಮ ವೃತ್ತಿ ಬಾಂಧವರು.ಅವರು ಸಮಾಜದಲ್ಲಿ ಜನಾನುರಾಗಿಗಳಾಗಿ, ಸ್ನೇಹಜೀವಿಗಳಾಗಿ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು  ಬಂದಿರುವುದರಿಂದಲೇ ಇಂದು ನಮ್ಮ ಭಂಡಾರಿ ಜನಾಂಗಕ್ಕೆ ಸಮಾಜದಲ್ಲಿ ಈ ಮಟ್ಟಿಗಿನ ಗೌರವ ಬೆಲೆ ಸಿಗುತ್ತಿರುವುದು.” ಎಂದು ನುಡಿದು ನೆರೆದಿದ್ದ ಸಮಾಜದ ಬಂಧುಗಳಲ್ಲಿ  ಸ್ವಾಭಿಮಾನದ ಬೀಜವನ್ನು ಬಿತ್ತಿದರು.


ನಂತರ ಸಭೆಯನ್ನುದ್ದೇಶಿಸಿ ಶ್ರೀ ರಘು ಭಂಡಾರಿ ಸೊರಬ, ಶ್ರೀ  ಬಾಬು ಭಂಡಾರಿ ಸೊರಬ, ಶ್ರೀ ಜೋಗು ಭಂಡಾರಿ, ಶ್ರೀಮತಿ ವಸಂತಮ್ಮ ಜೋಗು ಭಂಡಾರಿ, ಶ್ರೀ ರಂಜನ್ ಭಂಡಾರಿ ಮುಂತಾದವರು ಮಾತನಾಡಿದರು. ಶ್ರೀಮತಿ ಗೀತಾ ಸುಧಾಕರ್ ಭಂಡಾರಿಯವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. 


ನಂತರ ಸೊರಬ ಮತ್ತು ಶಿರಾಳಕೊಪ್ಪ ವಲಯ ಭಂಡಾರಿ ಸಮಾಜ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿತು. ಶ್ರೀಯುತ ಜೋಗು ಭಂಡಾರಿಯವರು ಅಧ್ಯಕ್ಷರಾಗಿ, ಶ್ರೀಯುತ ಸತೀಶ್ ಭಂಡಾರಿಯವರು ಕಾರ್ಯದರ್ಶಿಗಳಾಗಿ, ಶ್ರೀಯುತ ನಾಗರಾಜ್ ಭಂಡಾರಿಯವರು ಕೋಶಾಧಿಕಾರಿಗಳಾಗಿ  ಆಯ್ಕೆಗೊಂಡರು. ಆರು ಜನರ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಯಿತು.ಅದರಲ್ಲಿ ಶ್ರೀ ಶಿವಕುಮಾರ ಭಂಡಾರಿ, ಶ್ರೀ ಗಣೇಶ ಭಂಡಾರಿ,ಶ್ರೀ ಪ್ರಸನ್ನ ಭಂಡಾರಿ ಸೊರಬ, ಶ್ರೀ ಶ್ರೀಧರ ಭಂಡಾರಿ ಸೊರಬ,ಶ್ರೀ ಸುರೇಶ್ ಭಂಡಾರಿ ಸೊರಬ ಮತ್ತು ಶ್ರೀ ರಾಘು ಭಂಡಾರಿ ಶಿರಾಳಕೊಪ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು. ಜೊತೆಗೆ ನಾಲ್ಕು ಜನ ಹಿರಿಯ ಸಮಾಜದ ಬಂಧುಗಳ ಸಲಹಾ ಸಮಿತಿಯನ್ನು ರಚಿಸಲಾಯಿತು.ಆ ಸಮಿತಿಯಲ್ಲಿ ಶ್ರೀಯುತ ರಘು ಭಂಡಾರಿ ಸೊರಬ, ಶ್ರೀಯುತ ಬಾಬು ಭಂಡಾರಿ ಸೊರಬ,ಶ್ರೀಯುತ ರಮೇಶ್ ಭಂಡಾರಿ ಶಿರಾಳಕೊಪ್ಪ, ಶ್ರೀಯುತ ಗೋಪಾಲ ಭಂಡಾರಿ ಶಿರಾಳಕೊಪ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು. 
ಆ ನಂತರ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ನೂತನ ಅಧ್ಯಕ್ಷರಾದ ಮಾಧವ ಭಂಡಾರಿ ಸಾಗರ,ಉಪಾಧ್ಯಕ್ಷರಾದ ಮೋಹನ್ ಭಂಡಾರಿ ಬಾಳೆಹೊನ್ನೂರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಸುಧಾಕರ ಭಂಡಾರಿ ಶಿರಾಳಕೊಪ್ಪ  ಇವರುಗಳನ್ನು ಸೊರಬ ಮತ್ತು ಶಿರಾಳಕೊಪ್ಪ ವಲಯ ಭಂಡಾರಿ ಸಮಾಜ ಸಂಘದ ಪರವಾಗಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶಾಲು ಹೊದಿಸಿ, ಫಲತಾಂಬೂಲ ನೀಡಿ, ಮಾಲಾರ್ಪಣೆ ಮಾಡುವುದರೊಂದಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದರು. ಶಿರಾಳಕೊಪ್ಪದ ಹಿರಿಯ ಬಂಧುಗಳಾದ ಶ್ರೀ ನಾಗಪ್ಪ ಭಂಡಾರಿ ಮತ್ತು ಗುಲಾಬಿ ಮಹಾಬಲ ಭಂಡಾರಿಯವರನ್ನು ಸಭೆಯಲ್ಲಿ ಗೌರವಿಸಲಾಯಿತು.


ಸೊರಬ ಮತ್ತು ಶಿರಾಳಕೊಪ್ಪ ವಲಯ ಭಂಡಾರಿ ಸಮಾಜ ಸಂಘದ ನಿರ್ಗಮಿತ ಅಧ್ಯಕ್ಷರಾದ ಶ್ರೀಯುತ ಗಣೇಶ್ ಭಂಡಾರಿಯವರು ಮಾತನಾಡುತ್ತಾ…“ಭಂಡಾರಿ ಸಮಾಜದ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ವಿದ್ಯಾನಿಧಿ,ಉತ್ಸವ ನಿಧಿ ಸ್ಥಾಪಿಸಿದಂತೆ ಆರೋಗ್ಯ ನಿಧಿಯನ್ನು ಸ್ಥಾಪಿಸಬೇಕು. ಅಶಕ್ತರಾದ, ಕಾಯಿಲೆಗೆ ತುತ್ತಾದ,ಅಪಘಾತಕ್ಕೊಳಗಾದ ಸಮಾಜದ ಬಂಧುಗಳಿಗೆ ಸಂಕಷ್ಟದ ಸಮಯದಲ್ಲಿ ನೆರವಾಗಲು ಆರೋಗ್ಯನಿಧಿಯ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಗಮನಹರಿಸಬೇಕು.” ಎಂದು ಸಮಾಜದ ಮೇಲಿರುವ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು.ಕೊನೆಯಲ್ಲಿ ಭಾಸ್ಕರ್ ಭಂಡಾರಿ ಶಿರಾಳಕೊಪ್ಪರವರು ವಂದನಾರ್ಪಣೆ ಮಾಡುವುದರೊಂದಿಗೆ ಸಭೆಗೆ ಮಂಗಳ ಹಾಡಲಾಯಿತು. 


ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *