September 20, 2024

ಹೇ ನಾನು ತುಂಬಾ ಬ್ಯುಸಿ ಉಸಿರಾಡಲೂ ಸಮಯವಿಲ್ಲ ಎಂದು ಹೇಳುವವರು ಒಂದೆಡೆ ಆದರೆ ಲೈಫ್ ತುಂಬಾ ಬೋರಿಂಗ್ ಅಂತಾ ಹೇಳುವವರು ಇನ್ನೊಂದೆಡೆ. ಈ ಬ್ಯುಸಿ ಬದುಕಿನಲ್ಲಿ ಕೆಲವರಿಗೆ ತಮ್ಮ ಪ್ರೀತಿಪಾತ್ರರಿಗೆ ನೀಡಲು ಸ್ವಲ್ಪವೂ ಸಮಯವಿರಲ್ಲ. ಫ್ರೀ ಇರುವವರಿಗೆ ಸಮಯ ಇದ್ದರೂ ಜೊತೆಗಾರರಿಲ್ಲ ಎಂಬ ಚಿಂತೆ. 
           ಪರೀಕ್ಷೆಯನ್ನು ಮುಗಿಸಿ ಹೊರ ಬಂದ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಹೇಗಿತ್ತು? ಎಂದು ಕೇಳಿದರೆ ಪರವಾಗಿಲ್ಲ ಆದರೆ ಸಮಯ ಸಾಕಾಗಲಿಲ್ಲ ಎಂಬುದು ಸಾಮಾನ್ಯವಾಗಿ ಬರುವ ಉತ್ತರ. ಮೊದಲು ಪದವಿಗೆ ಕಾಲಿಡುವಾಗ ಅಯ್ಯೋ ಇನ್ನೂ ಮೂರು ವರುಷ ಕಲಿಯಬೇಕಲ್ಲಾ ಎಂದು ಹೇಳಿದ ವ್ಯಕ್ತಿಯೇ ಮೂರು ವರುಷ ಮುಗಿಯುತ್ತಾ ಬರುವಾಗ ಇಷ್ಟು ಬೇಗ ಸಮಯ ಹೋಯಿತಾ? ಎಂದು ಹೇಳುವುದಂತು ನಿಜ. 


           ಜೀವನದಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವವಿದೆ. ಯಾರೂ ಸಮಯಪಾಲನೆ ಕಲೆ ತಿಳಿದಿರುತ್ತಾರೋ ಅವರು ಸಾಧನೆ ಮಾಡುತ್ತಾರೆ. ಜಗತ್ತಿನ ದೊಡ್ಡ ಚಿಂತಕನಿಗೂ ಇರುವ ಕಾಲ 24 ಗಂಟೆ ಹಾಗೂ ಸಾಮಾನ್ಯನಿಗೂ ಸಿಗುವ ಕಾಲ ಸಹ 24 ಗಂಟೆ. ಆದರೆ ಸಮಯದ ಸದುಪಯೋಗ ತಿಳಿದಿರಬೇಕು. ಯಾಕೆಂದರೆ “ನಮ್ಮ ಸಮಯಕ್ಕೆ ನಾವೇ ಮಾಲೀಕರು.”
           ಕಾಲವು ನಿಲ್ಲದು ಅದು ಸಾಗರದೆಡೆಗೆ ಹರಿಯುವ ನದಿಯಂತೆ. ಇವತ್ತು ಗೆದ್ದವನು ನಾಳೆ ಸೋಲಬಹುದು,ಇವತ್ತು ಬಿದ್ದವನನ್ನು ಕಂಡು ನಕ್ಕವನು ನಾಳೆ ಅವನ ಗೆಲುವನ್ನು ಕಂಡು ಬೆನ್ನು ತಟ್ಟಬಹುದು.ಇವತ್ತು ಜೊತೆಗಿದ್ದವರು ನಾಳೆ ಇರದಿರಬಹುದು. ಅದಕ್ಕೆ ಹಿರಿಯರು ಹೇಳುವುದು “ಕಾಲಾಯಾ ತಸ್ಮೈ ನಮಃ”  ಅಂತ.

“ಕಾಲ ಕೆಲವರ ಕೈ ಹಿಡಿಯುತ್ತದೆ,ಕೆಲವರನ್ನು ಗೆಲ್ಲಿಸುತ್ತದೆ, ಕೆಲವರನ್ನು ಪರೀಕ್ಷಿಸುತ್ತದೆ,ಕೆಲವರನ್ನು ಮರೆಸುತ್ತದೆ, ಕೆಲವರನ್ನು ಸಮಾಧಾನಿಸುತ್ತದೆ, ಕೆಲವರನ್ನು ನಗಿಸುತ್ತದೆ.ಆದರೆ ಕಾಲ ನಮ್ಮನ್ನು ನೋಡಿ ನಗುವಂತೆ ಬದುಕಬಾರದು.ಪ್ರತಿಯೊಬ್ಬರಿಗೂ ಸಮಯಪ್ರಜ್ಞೆಯ ಅರಿವಿರಬೇಕು.”

“ಗ್ರೀಷ್ಮಾ ಕಲ್ಲಡ್ಕ.”

Leave a Reply

Your email address will not be published. Required fields are marked *