September 20, 2024

ಇಂದಿನ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆ ಜೊತೆಗೆ ಪೂರಕವಾಗಿ ಕೆಲವು ಪಠ್ಯೇತರ ಚಟುವಟಿಕೆಗಳು, ಹವ್ಯಾಸಗಳು ಇದ್ದರೆ ವಿದ್ಯಾರ್ಥಿಯ ಮಾನಸಿಕ, ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ.ಆ ದೃಷ್ಟಿಕೋನದಿಂದ ಪೋಷಕರು ತಮ್ಮ ಮಕ್ಕಳನ್ನು ನೃತ್ಯ, ಸಂಗೀತ, ಚಿತ್ರಕಲೆ, ಕರಾಟೆ, ಸಂಗೀತ ವಾದ್ಯಗಳ ನುಡಿಸುವಿಕೆ ಹೀಗೆ ಇವೇ ಮೊದಲಾದ ಕಲಾ ಪ್ರಾಕಾರಗಳ ತರಬೇತಿಗೆ ಉತ್ತೇಜನ, ಪ್ರೋತ್ಸಾಹ ನೀಡುತ್ತಿದ್ದಾರೆ.ಇದು ಒಳ್ಳೆಯ ಬೆಳವಣಿಗೆ ಕೂಡ. ಹೀಗೆ ಗುರುಗಳಿಂದ ಶಾಸ್ತ್ರೋಕ್ತವಾಗಿ ಅಭ್ಯಸಿಸಿ ಕಲೆಯನ್ನು ಕರಗತ ಮಾಡಿಕೊಳ್ಳುವವರದು ಒಂದು ವರ್ಗವಾದರೆ, ಇನ್ನೊಂದು ವರ್ಗದ ವಿದ್ಯಾರ್ಥಿಗಳು ಯಾವುದೇ ಗುರುಗಳ ಮಾರ್ಗದರ್ಶನವಿಲ್ಲದೇ ತಮ್ಮ ಸ್ವಪ್ರಯತ್ನದಿಂದ ಸಾಧನೆ ಮಾಡಿರುವುದನ್ನು ನಾವು ಕಾಣಬಹುದು. ಈ ದಿನ ನಾವು ಈ ಎರಡನೇ ವರ್ಗಕ್ಕೆ ಸೇರಿದ ಭಂಡಾರಿ ಪ್ರತಿಭೆಯೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ.ಈತನಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ತನ್ನ ಚಿತ್ರಕಲಾ ಪ್ರತಿಭೆಯನ್ನು ಸಿಕ್ಕ ಅವಕಾಶಗಳಲ್ಲಿ ತುಂಬಾ ಸೂಕ್ತವಾಗಿ ಬಳಸಿಕೊಂಡು ತನ್ನ ಛಾಪನ್ನು ಮೂಡಿಸುತ್ತಾ ಬಂದವನಿಗೆ ಚಿತ್ರಕಲೆಯನ್ನು ಆಳವಾಗಿ ಅಭ್ಯಸಿಸಲು ಅಗತ್ಯವಾದ ವಾತಾವರಣ, ಗುರುಗಳು ಲಭಿಸಿರಲಿಲ್ಲ. ಆ ಕಾರಣದಿಂದ ತನ್ನ ಚಿತ್ರಕಲೆಯ ಅಭ್ಯಾಸಕ್ಕೆ ಅವನು ಗುರುವಾಗಿ ಆಯ್ದುಕೊಂಡಿದ್ದು ಸಾಮಾಜಿಕ ಜಾಲತಾಣ “ಯೂಟ್ಯೂಬ್” ಎಂಬ ಗುರುವನ್ನು. ಈ ರೀತಿ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ ಚಿತ್ರಕಲೆಯನ್ನು ಅಭ್ಯಾಸ ಮಾಡಿ ಚಿತ್ರಕಲೆಯ ಹಲವು ಪ್ರಾಕಾರಗಳನ್ನು ಕಲಿತು ನೋಡುಗರಿಂದ,ಆಸಕ್ತರಿಂದ ಸೈ ಎನಿಸಿಕೊಂಡ ನಮ್ಮ ಯುವ ಭಂಡಾರಿ ಪ್ರತಿಭೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ “ಅನೀಷ್ ಆರ್ ಭಂಡಾರಿ.”

ಶಿವಮೊಗ್ಗ ಜಿಲ್ಲೆ ಸಾಗರದ ದಿವಂಗತ ರಾಮನಾಥ್ ಭಂಡಾರಿ ಮತ್ತು ಎಂ.ಎಸ್.ವೀಣಾ ರಾಮನಾಥ್ ಭಂಡಾರಿ ದಂಪತಿಯ ಪುತ್ರನಾದ ಅನೀಷ್ ಹುಟ್ಟಿದ್ದು ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಅಜ್ಜಿಯ ಮನೆಯಲ್ಲಿ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸಾಗರದ ಸೆಂಟ್ ಜೋಸೆಫ್ ಪ್ರೈಮರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಆರಂಭಿಸಿ,ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸೇಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ ಪಡೆದು, ಎಸ್ಸೆಸ್ಸೆಲ್ಸಿ ಪೂರೈಸಿ ಪ್ರಸ್ತುತ ಸರ್ಕಾರಿ ಜೂನಿಯರ್ ಕಾಲೇಜು ಸಾಗರದಲ್ಲಿ “ಕಂಪ್ಯೂಟರ್ ಕಾಮರ್ಸ್” ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.


ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಅನೀಷ್ ಚುರುಕಿನ ವಿದ್ಯಾರ್ಥಿಯಾಗಿದ್ದ.ಮೂರನೇ ತರಗತಿಯಲ್ಲಿದ್ದಾಗ ಅಬಕಾಸ್ ಗಣಿತ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದ.ನಂತರ ಮಿಮಿಕ್ರಿ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಪ್ರಾಣಿ ಪಕ್ಷಿಗಳ,ವಾಹನಗಳ,ಸಿನಿಮಾ ನಟರ,ರಾಜಕೀಯ ವ್ಯಕ್ತಿಗಳ ಧ್ವನಿಯ ಅನುಕರಣೆ ಮಾಡತೊಡಗಿದ. ರಾಜಕಾರಣಿ ವಾಟಾಳ್ ನಾಗರಾಜ್ ರ ಧ್ವನಿಯನ್ನು ಯಥಾವತ್ ಅನುಕರಣೆ ಮಾಡುತ್ತಿದ್ದ. ಮಜಾ ಟಾಕೀಸ್ ನ ಗುಂಡುಮಾಮ ನವೀನ್ ಪಡೀಲ್ ರ ಧ್ವನಿಯ ಅನುಕರಣೆ ಜಿಲ್ಲಾ ಮಟ್ಟದ ಪ್ರಶಸ್ತಿ ತಂದುಕೊಟ್ಟಿತು. ಚೆಸ್ ನಲ್ಲಿ ಅಪರೂಪದ ಸಾಧನೆ ಮಾಡಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಗಳಿಸಿದ.

ಇಷ್ಟೆಲ್ಲಾ ಪ್ರತಿಭೆಯ ಸಂಗಮವಾಗಿದ್ದ ಅನೀಷ್ ಗೆ ತಂದೆ ರಾಮನಾಥ್ ಭಂಡಾರಿಯವರ ಅಕಾಲಿಕ ಮರಣ ದೊಡ್ಡ ಆಘಾತವೇ ಆಗಿತ್ತು.ಆದರೆ ತಾಯಿ ವೀಣಾ ಮತ್ತು ಅಕ್ಕ ಅನುಷಾ.ಆರ್ ಭಂಡಾರಿ ಇವನ ಸಾಧನೆಗೆ ಬೆನ್ನೆಲುಬಾಗಿ ನಿಂತರು. ತಂದೆ ಇಲ್ಲದ ಕೊರತೆಯ ನೆನಪು ಬಾರದಂತೆ ಅವನ ಸಾಧನೆಯ ಹಾದಿಗೆ ಬೆಳಕಾಗಿ ಅವರು ನಿಂತಿದ್ದಾರೆ.ಅದರ ಜೊತೆಗೆ ಅವನಲ್ಲಿ ಆತ್ಮವಿಶ್ವಾಸ ತುಂಬಿದ್ದು ಸಾಗರದ “ಅಭಿನಯ ಸಾಗರ” ತಂಡ. ಇದೊಂದು ಕಲಾತಂಡವಾಗಿದ್ದು ಅನೀಷ್ ನಲ್ಲಿರುವ ಸುಪ್ತ ಪ್ರತಿಭೆಗೆ ವೇದಿಕೆ ಕಲ್ಪಿಸಿದ್ದು, ಅವನಲ್ಲಿದ್ದ ಕೀಳರಿಮೆ ಹೋಗಲಾಡಿಸಿ ಎಲ್ಲರೆದುರು ನಿಂತು ಮಾತನಾಡುವ ಸ್ಥೈರ್ಯ, ಧೈರ್ಯ ತುಂಬಿದ್ದು ಅಭಿನಯ ಸಾಗರ ತಂಡ.ಈ ತಂಡದ ಸಂಪರ್ಕದಿಂದ ತನ್ನ ವ್ಯಕ್ತಿತ್ವ ವಿಕಸನಗೊಂಡ ಬಗೆಯನ್ನು ಅನೀಷ್ ವಿನಮ್ರವಾಗಿ ಒಪ್ಪಿಕೊಳ್ಳುತ್ತಾನೆ.

ರಾಜ್ಯಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಕಾಲೇಜನ್ನು ಪ್ರತಿನಿಧಿಸುವ ತಂಡದ ಸದಸ್ಯನಾಗಿರುವ ಅನೀಷ್ ಉತ್ತಮ ಕ್ರೀಡಾಪಟುವೂ ಹೌದು. ಇತ್ತೀಚೆಗೆ ರಾಜ್ಯ ಸರ್ಕಾರ ಆಯೋಜಿಸಿದ್ದ ಮತದಾನದ ಜಾಗೃತಿ ಕುರಿತಾದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಾಮಿಕ್ಸ್ ಓದುವ, ಮೊಬೈಲ್ ಫೋಟೊಗ್ರಫಿ ಮಾಡುವ ಹವ್ಯಾಸಗಳ ಜೊತೆಗೆ ಡ್ರಾಯಿಂಗ್ ಕೂಡ ಇವರ ಹವ್ಯಾಸಗಳಲ್ಲೊಂದು. ಈಗಾಗಲೇ ಪೋಟ್ರೇಟ್ ಮತ್ತು ಕ್ರಿಯೇಟಿವ್ ಆರ್ಟ್ಸ್ ನ ಸರಿಸುಮಾರು ಮೂವತ್ತೊಂದು ಕಲಾಕೃತಿಗಳನ್ನು ಇವರು ರಚಿಸಿದ್ದಾರೆ.ಇದರ ಜೊತೆಗೆ ಚಿತ್ರಕಲೆಯ ಕ್ಲಿಷ್ಟಕರವಾದ ನೆಗೆಟೀವ್ ಆರ್ಟ್ಸ್ ನಲ್ಲಿಯೂ ಪ್ರಯತ್ನಿಸಿದ್ದಾರೆ.ಈ ಪ್ರಾಕಾರದಲ್ಲಿ ನಿಮ್ಮ ಭಾವಚಿತ್ರವನ್ನು ನೀಲಿ ಬಣ್ಣದಲ್ಲಿ ಬಿಡಿಸಿ ಅದನ್ನು ಇನ್ವರ್ಟ್ ಆ್ಯಪ್ ನಲ್ಲಿ ಕನ್ವರ್ಟ್ ಮಾಡಿದಾಗ ನಿಮ್ಮ ಸಹಜ ಭಾವಚಿತ್ರ ಮೂಡುವಂತಹ ತಂತ್ರಗಾರಿಕೆ ಇರುತ್ತದೆ.

ಈಗಾಗಲೇ ಅನೀಷ್ ರ ಕುಂಚದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ,ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಪ್ರಧಾನಿ ನರೇಂದ್ರ ಮೋದಿಯವರ ರೇಖಾಚಿತ್ರಗಳು, ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರ ವ್ಯಂಗ್ಯಚಿತ್ರ ಮುಂತಾದ ಕಲಾಕೃತಿಗಳು ಅರಳಿವೆ. ಹಲವು ಸ್ನೇಹಿತರ ಭಾವಚಿತ್ರಗಳನ್ನು ಯಥಾವತ್ ಚಿತ್ರಿಸಿ ಅವರ ಮುಖದಲ್ಲಿ ಆಶ್ಚರ್ಯ ಮತ್ತು ಮಂದಹಾಸವನ್ನು ಮೂಡಿಸಿದ ಕೀರ್ತಿ ಅನೀಷ್ ರದ್ದು. 

ಜನಪ್ರಿಯ ಚಲನಚಿತ್ರ ನಟ ಸುದೀಪ್ ರ ಭಾವಚಿತ್ರವನ್ನು ಬಿಡಿಸಿ, ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಿಚ್ಚ ಸುದೀಪ್ ಫ್ಯಾನ್ಸ್ ಕ್ಲಬ್ ನ ಸಾಗರ ತಾಳಗುಪ್ಪದ ಸುನಿಲ್.ಎಲ್.ಭಂಡಾರಿಯವರೊಂದಿಗೆ ಅವರ ಮನೆಗೆ ತೆರಳಿ ಸುದೀಪ್ ರಿಗೆ ಉಡುಗೊರೆಯಾಗಿ ನೀಡಿ ಅವರಿಂದ ಮೆಚ್ಚುಗೆ ಗಳಿಸಿದ್ದು ನನ್ನ ಜೀವನದ ಅಮೂಲ್ಯ ಕ್ಷಣಗಳಲ್ಲೊಂದು ಎಂದು ಅನೀಷ್ ನೆನಪಿಸಿಕೊಳ್ಳುತ್ತಾರೆ.

ಪಿಯುಸಿ ಪೂರೈಸಿದ ನಂತರ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆಯುವ ಗುರಿಯನ್ನು ಹೊಂದಿರುವ ಅನೀಷ್ ಭಂಡಾರಿ ಮೈಸೂರಿನ ಜಯಚಾಮರಾಜೇಂದ್ರ ಸರಕಾರಿ ದೃಶ್ಯ ಕಲಾ ಕಾಲೇಜ್ (ಕಾವಾ) ಅಥವಾ ಗುಜರಾತ್ ನ ಬರೋಡಾದಲ್ಲಿರುವ ಚಿತ್ರಕಲಾಶಾಲೆಯಲ್ಲಿ ಪ್ರವೇಶ ಗಿಟ್ಟಿಸಲು ಪರೀಕ್ಷೆ ಎದುರಿಸಲು ಸಜ್ಜಾಗುತ್ತಿದ್ದಾರೆ.

ಜೀವನದ ಯಾವುದೇ ಹಂತದಲ್ಲಿ ಗುರುಗಳ ಮಾರ್ಗದರ್ಶನವಿಲ್ಲದೇ ಚಿತ್ರಕಲೆಯಲ್ಲಿ ಏಕಲವ್ಯನಂತೆ ಸಾಧನೆ ಮಾಡುತ್ತಿರುವ ಯುವ ಭಂಡಾರಿ ಬಂಧು ಅನೀಷ್.ಆರ್.ಭಂಡಾರಿ ತನ್ನ ಇಷ್ಟದ ಚಿತ್ರಕಲಾರಂಗದಲ್ಲಿ ಇನ್ನೂ ಉತ್ತಮ ಸಾಧನೆಯನ್ನು ಮಾಡಿ ಕೀರ್ತಿ ಶಿಖರವನ್ನು ಏರಲಿ, ಅವರ ಪ್ರಯತ್ನದಲ್ಲಿ ಭಗವಂತನು ಸದಾ ಸಹಕಾರ ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

3 thoughts on “ಚಿಪ್ಪಿನೊಳಗಿನ ಭಂಡಾರಿ ಮುತ್ತು -8: ಪ್ರತಿಭೆಯ ಆಗರ ಸಾಗರದ ಅನೀಷ್ ಎಂಬ ಭಂಡಾರಿ ಕುವರ.

Leave a Reply

Your email address will not be published. Required fields are marked *