November 22, 2024
purana-1

ದಕ್ಷನು ಶಂಕರನ ಮೇಲೆ ಕ್ರುದ್ಧನಾದದ್ದು ಯಾಕೆ…?

ಪುರಾಣ ನೀತಿ

(ಹೆಜ್ಜೆ-10)

  ಸೃಷ್ಠಿ, ಸ್ಥಿತಿ, ಲಯಕ್ಕೋಸ್ಕರ ಬ್ರಹ್ಮ, ವಿಷ್ಣು, ಮಹೇಶ್ವರರ ಸೃಷ್ಠಿಯಾಯಿತು. ಈ ತ್ರಿಮೂರ್ತಿಗಳು ಅವರವರ ಕಾಯಕವನ್ನು ಮಾಡಲು ತೊಡಗಿದರು. ಹೀಗೆ ಸೃಷ್ಠಿಯ ಕಾರ್ಯದಲ್ಲಿ ನಿಯುಕ್ತನಾದ ಬ್ರಹ್ಮದೇವನಿಗೆ ಅತ್ರಿ, ಅಂಗಿರಸ್ಸು, ಕರ್ದಮ, ಮರೀಚಿ, ಪುಲಸ್ತ್ಯ, ಪುಲಹ, ಕ್ರತು ಮುಂತಾದ ಮಾನಸ ಪುತ್ರರು ಜನಿಸಿದರು. ಅಲ್ಲದೆ ಭೃಗು, ನಾರದ, ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತ ಮುಂತಾದವರು ಅವನ ಸಂಕಲ್ಪ ಮಾತ್ರದಿಂದ ಹುಟ್ಟಿಕೊಂಡರು. ಮಾತ್ರವಲ್ಲ ಇನ್ನೂ ಅನೇಕಾನೇಕರು ಬ್ರಹ್ಮದೇವನ ಮೂಲಕ ಸೃಷ್ಠಿಗೊಂಡರು.

ಸೃಷ್ಠಿಕರ್ತನ ಬಲದ ಹೆಬ್ಬೆಟ್ಟಿನಿಂದ “ದಕ್ಷ” ನೆಂಬುವನು ಹುಟ್ಟಿ, ಸೃಷ್ಠಿಕರ್ತನ ಎಡದ ಹೆಬ್ಬೆಟ್ಟಿನಿಂದ ಹುಟ್ಟಿದ ಓರ್ವಳನ್ನು ಮದುವೆಯಾಗಿ ಇಪ್ಪತ್ತನಾಲ್ಕು ಮಂದಿ ಹೆಣ್ಣು ಮಕ್ಕಳನ್ನು ಪಡೆದನು.

ದಕ್ಷನ ಇಪ್ಪತ್ತನಾಲ್ಕು ಮಂದಿ ಹೆಣ್ಣು ಮಕ್ಕಳಲ್ಲಿ ಶ್ರದ್ಧಾದಿ ಹದಿಮೂರು ಮಂದಿಯನ್ನು ಧರ್ಮ ಋಷಿಗೂ, ಖ್ಯಾತಿ ಎಂಬವಳನ್ನು ಭೃಗುವಿಗೂ, ಸತಿದೇವಿಯನ್ನು ಪರಮೇಶ್ವರನಿಗೂ,ಸಂಭೂತಿ ಎಂಬವಳನ್ನು ಪುಲಸ್ತ್ಯನಿಗೂ, ಕ್ಷಮಾದೇವಿಯನ್ನು ಪುಲಹನಿಗೂ, ಸನ್ನತಿ ಎಂಬವಳನ್ನು ಕ್ರತುವಿಗೂ, ಅನುಸೂಯಾ ದೇವಿಯನ್ನು ಅತ್ರಿಮುನಿಗೂ, ಊರ್ಜಾದೇವಿಯನ್ನು ವಸಿಷ್ಠನಿಗೂ,ಸ್ವಾಹಾದೇವಿಯನ್ನು ಅಗ್ನಿಗೂ,ಸ್ವಧಾದೇವಿಯನ್ನು ಪಿತೃದೇವತೆಗಳಿಗೂ ಕೊಟ್ಟನು. ಆದ್ದರಿಂದ ಈ ದಕ್ಷನ ಕುರಿತಾಗಿ ಎಲ್ಲರೂ ಗೌರವದಿಂದಲೇ ನಡೆದುಕೊಳ್ಳುತ್ತಿದ್ದರು.

ಕೈಲಾಸಪತಿಯಾದ ಶಂಕರನು ಒಮ್ಮೆ ಪರಮ ಋಷಿಗಳಿಂದಲೂ, ಪ್ರಮಥರಿಂದಲೂ ಪರಿವೃತನಾಗಿ ಓಲಗವಿತ್ತಿದ್ದನು.ಆಗ ದಕ್ಷನು ಆ ಸಭೆಯನ್ನು ಪ್ರವೇಶ ಮಾಡಿದನು. ಎಲ್ಲರೂ ಎದ್ದು ನಿಂತು ಅವನಿಗೆ ಗೌರವವನ್ನು ಅರ್ಪಿಸಿದರು.ಆದರೆ ಶಿವನು ಎದ್ದು ನಿಲ್ಲಲಿಲ್ಲ.ದಕ್ಷನಿಗೆ ಅಲ್ಲಿದ್ದ ಯಾರೋ ಒಬ್ಬರು ಆಸನವನ್ನು ತೋರಿಸಿದರು,ಅಷ್ಟೇ… ತನ್ನ ಮಗಳ ಗಂಡನಾದ ಈ ಶಿವನು ಮಾವನಾದ ತಾನು ಅವನ ಬಳಿಗೆ ಬಂದಾಗಲೂ ಎದ್ದು ಗೌರವ ನೀಡಲಿಲ್ಲ ಎಂದು ದಕ್ಷನು ಕ್ರುದ್ಧನಾದನು.

ಈ ಎಲ್ಲರಿಂದಲೂ ವಂದಿಸಲ್ಪಡುವ ಶಂಕರನು ತನ್ನ ಅಳಿಯನೇ ಆಗಿ ಹೀಗೆ ಮಾಡಿದುದು ಅವನ ಅಪರಾಧವೇ ಸರಿ, ಹೀಗೆ ತನ್ನನ್ನು ಅವಮಾನಿಸಿದ್ದು ಶಿವನ ಅಹಂಕಾರ ಎಂದು ಮುಂತಾಗಿ ಭ್ರಮಿಸಿ ಸಿಟ್ಟಿನಿಂದ ತತ್ತರಿಸುತ್ತಿದ್ದ ದಕ್ಷನು ಶಿವನನ್ನು ಬಾಯಿಗೆ ಬಂದಂತೆ ಹಳಿದು ನಿಂದಿಸುತ್ತ ಆ ಕೂಡಲೇ ಅಲ್ಲಿಂದ ಹೊರಟುಹೋದನು.

ಹೀಗೆ ಕ್ರುದ್ಧನಾದ ದಕ್ಷನು ಮಾಡಿದ್ದಾದರೂ ಏನು..?

ಮುಂದಿನ ಸಂಚಿಕೆಯಲ್ಲಿ….

✍🏻 ಎಸ್ ಕೆ ಬಂಗಾಡಿ.


Leave a Reply

Your email address will not be published. Required fields are marked *