ಮಹಿಳಾ ದಿನಾಚರಣೆಯ ಶುಭ ಹಾರೈಸುತ್ತಾ ನನ್ನ ಮಾತು…..
ಮಹಿಳೆ ಒಂದು ಮಹಿಮೆ. ಅವಳನ್ನು ಭೂಮಿಗೆ,ಪೃಕೃತಿಗೆ ಹೋಲಿಸಲಾಗಿದೆ. ತಾಳ್ಮೆ,ಮಮತೆ,ಪ್ರೀತಿ,ವಿಶ್ವಾಸ,ನಂಬಿಕೆಯ ಪ್ರತಿರೂಪ ಅವಳು. ಜೀವನದ ಎಲ್ಲಾ ಏರುಪೇರುಗಳಲ್ಲೂ ಕುಟುಂಬದ ಸಮಾಜದ ಕೈ ಹಿಡಿಯುವವಳು ಅವಳು. ತಾನು ಏನನ್ನೂ ಸಾದಿಸಬಲ್ಲೆ ಎಂದು ಸಾಧಿಸಿ ತೋರಿಸಲು ಸೈ ಅವಳು.
ಮಹಿಳೆ ಹಿಂದಿನ ಕಾಲದಿಂದಲೂ ತನ್ನ ಕರ್ತವ್ಯವನ್ನು ನಿಭಾಯಿಸುತ್ತಾ ಬಂದಿದ್ದಾಳೆ.ಎಂಟು ಹತ್ತು ಮಕ್ಕಳನ್ನು ಸಾಕುತ್ತಾ, ಗದ್ದೆ ಕೆಲಸ ಮಾಡುತ್ತಾ ಮನೆಗೆ ದುಡಿದು ತರುತ್ತಿದ್ದಳು.ಆಗಿನ ಕಾಲವೇ ಬೇರೆ ಈಗಿನ ಸಂದರ್ಭವೇ ಬೇರೆ.ಅಂದಿನ ದಿನಗಳಲ್ಲಿ ಒಂದೊಂದು ಮನೆ ಬಹಳ ದೂರದಲ್ಲಿ ಇರುತ್ತಿದ್ದವು. ಆಧುನಿಕತೆಯ ಗಂಧಗಾಳಿ ಇರಲಿಲ್ಲ.ಆದ್ದರಿಂದ ಹೆಣ್ಣಿಗೆ ವಿಶೇಷ ಸ್ಥಾನಮಾನವಿದ್ದರೂ ಸ್ವಾತಂತ್ರ್ಯ ಇರಲಿಲ್ಲ.
ಆದರೆ ಇಂದು ಮಹಿಳೆಯರನ್ನು ನೋಡುವ ದೃಷ್ಟಿ ಸರಿ ಇಲ್ಲ. ಅವಳನ್ನು ಭೋಗದ ವಸ್ತುವಾಗಿ, ಪ್ರದರ್ಶನದ ವಸ್ತುವಾಗಿ ತೋರಿಸಲಾಗುತ್ತಿದೆ. ಅವಳ ಸಾಧನೆಗೆ ಗಂಡಿಗಿರುವಷ್ಷು ಮನ್ನಣೆ ಇಲ್ಲ.ಆಧುನಿಕತೆಯ ಹೆಸರಿನಲ್ಲಿ ಅವಳನ್ನು ಸಾಮರ್ಥ್ಯಕ್ಕಿಂತ ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ.ಆದರೆ ಪ್ರತಿಫಲ ಕಡಿಮೆ. ಕುಟುಂಬದ ಜವಾಬ್ಧಾರಿ ಹೊತ್ತು ಒಳಗೂ ಹೊರಗೂ ದುಡಿಯುವ ಮಹಿಳೆಯರ ಕಷ್ಟ ಹೇಳತೀರದು.
ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಆಚಾರ,ವಿಚಾರ,ಶಿಕ್ಷಣ,ಸಂಸ್ಕ್ರತಿ ವಿಜ್ಞಾನ,ಆಧುನಿಕತೆ ಎಲ್ಲವೂ ಅವಳನ್ನು ಬದಲಾಯಿಸಿದೆ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ವಿಚಾರ.ಆದರೆ ಅವಳಿಗೆ ಬರಿಯ ಬಾಯಿ ಮಾತಿನಲ್ಲಿ ಸ್ವಾತಂತ್ರ್ಯ ಸಿಕ್ಕಿದೆ.ಕೆಲವು ಮಹಿಳೆಯರು ಆಧುನಿಕತೆ ಎಂದರೆ ಕನಿಷ್ಠ ಉಡುಪು ಧರಿಸುವುದು ಎಂದು ಕೊಂಡಿದ್ದಾರೆ. ಇದರಿಂದ ಬಹಳ ತೊಂದರೆ ಅನುಭವಿಸುತ್ತಿರುವವಳು ಅವಳು ಮಾತ್ರ ಅಲ್ಲ,ಅವಳ ಕುಟುಂಬ ಜೊತೆಗೆ ಇಡೀ ಸಮಾಜ ಕೂಡ.
ಕೆಲವು ಮಹಿಳೆಯರು ಮನೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲದಿದ್ದರು ಮನೆಯವರ ಮಾತಿನ ವಿರುದ್ಧವಾಗಿ ನಡೆದುಕೊಳ್ಳುವವರು ಇದ್ದಾರೆ.ಮಹಿಳಾ ದಿನಾಚರಣೆಯನ್ನು ಅರ್ಥಗರ್ಭಿತವಾಗಿ ಮಾಡುವ ಹೊಣೆ ಮಹಿಳೆಯರ ಮೇಲಿದೆ. ಮಹಿಳೆ ತಾಯಿಯ ರೂಪದಲ್ಲಿ ಮಾತ್ರ ಪೂಜ್ಯನೀಯಳು ಉಳಿದಂತೆ ಕೆಟ್ಟವಳು ಎಂದು ಬಿಂಬಿಸಲಾಗುತ್ತಿದೆ. ಈಗಲೂ ಮಹಿಳೆ ಎಲ್ಲಾ ಸಮಯದಲ್ಲೂ ಪೂಜ್ಯನೀಯಳೆಂದು ತೋರಿಸಕೊಡಬೇಕಾಗಿದೆ.ಆಧುನಿಕತೆ ಅವಳೊಬ್ಬಳನ್ನು ಮಾತ್ರ ಬದಲಾಯಿಸಿದೆ ಎಂದು ಕೊಳ್ಳಬೇಡಿ ಇಡೀ ಸಮಾಜವನ್ನೇ ಬದಲಾಯಿಸಿದೆ.ಒಳ್ಳೆಯ ಕುಟುಂಬ,ಒಳ್ಳೆಯ ಸಮಾಜ ನಿರ್ಮಾಣ ಮಹಿಳೆಯರಿಂದ ಮಾತ್ರ ಸಾಧ್ಯ.
“ಗೀತಾ ಸುಧಾಕರ್ ಭಂಡಾರಿ.ಶಿರಾಳಕೊಪ್ಪ.”
ನಾರಿ ನಿನಗೆ ಯಾರೂ ಸರಿಸಾಟಿ ನಿನಗೆ ನೀನೆ ಸಾಟಿ ಆಧುನಿಕತೆಯ ಭರದಲ್ಲಿ ಮಹಿಳಾತನ ಮರೆಯಾಗದಿರಲಿ