November 24, 2024
AK bhandary and Prema Bhandary

ಯಕ್ಷಗಾನವೆಂಬುದು ಕರಾವಳಿ ಕರ್ನಾಟಕದ ಗಂಡುಕಲೆ ಎಂದು ಎಲ್ಲರ ಅಂಬೋಣ. ಪ್ರಾರಂಭದಲ್ಲಿ ಈ ಕಲೆ ಹಳ್ಳಿಯ ಪಾಮರರ ಮನರಂಜನೆಯ ಸ್ವತ್ತಾಗಿತ್ತು, ಬಳಿಕ ವಿದ್ವಾಂಸರ ಪ್ರವೇಶದಿಂದ ಬೌದ್ಧಿಕ ಆಯಾಮ ಪಡೆದು ಬೆಳೆದುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರ ಪರಿಮಳ ಇಂದು ಕರ್ನಾಟಕದ ಮೂಲೆ ಮೂಲೆಗೂ ಪಸರಿಸಿದೆ. ಇಂದು ಮಲೆನಾಡಿನಲ್ಲಿಯೂ ಯಕ್ಷಗಾನ ಕಲಿಸುವ ಅನೇಕ ಶಾಲೆಗಳು ಹುಟ್ಟಿಕೊಂಡಿವೆ. ಇದರಲ್ಲಿ ಕಲಿತ ಅನೇಕರು ಅಲ್ಲಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿಯೂ ಯಕ್ಷಗಾನ ಕಲಿಸುವ ಶಾಲೆಗಳು ಇವೆ, ಅಂತೆಯೇ ಅದರ ವಿದ್ಯಾರ್ಥಿಗಳು ಅಲ್ಲಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಈ ರೀತಿ ದೇಶಾದ್ಯಂತ ಯಕ್ಷಗಾನದ ಕಂಪು, ಸುವಾಸನೆ ಬೀರಿದೆ. ಆದರೆ ಕರಾವಳಿ ಪ್ರದೇಶದಷ್ಟು ಎತ್ತರವಾಗಿ ಬೆಳೆಯಲು ಇನ್ನೂ ಕೆಲವು ಸಮಯ ಬೇಕಾಗಬಹುದು. ಜನಸಾಮಾನ್ಯರಿಗೆ ಪೌರಾಣಿಕ ಕಥೆ, ಸಂಸ್ಕಾರ, ಜ್ಞಾನ, ಬದುಕನ್ನು ರೂಪಿಸುವ ಸಲಹೆ, ಸೂಚನೆ, ಜಾನಪದ ಕಥೆಯ ಸೊಗಡನ್ನು ಈ ಯಕ್ಷಗಾನ ತಿಳಿಸುತ್ತದೆ. ಅಂತೆಯೇ ಸ್ವಚ್ಛ, ಶುದ್ಧ ಕನ್ನಡವನ್ನು ಯಕ್ಷಗಾನದ ಪ್ರದರ್ಶನದಲ್ಲಿ ಮಾತ್ರ ವೀಕ್ಷಿಸಲು ಸಾಧ್ಯವೆಂದು ವಿದ್ವಾಂಸರ ಅಭಿಪ್ರಾಯ. ಜಗತ್ತಿನಲ್ಲಿ ಯಕ್ಷಗಾನ ಕಲೆಯ ಪ್ರದರ್ಶನದಷ್ಟು  ಇತರ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಹಾಗಾಗಿ ಇದು ಇಂದು ಅಗ್ರಗಣ್ಯ ಕಲೆಯಾಗಿ ಬೆಳೆದು ನಿಂತಿದೆ.

ಕರಾವಳಿ ಮತ್ತು ಮಲೆನಾಡಿನಲ್ಲಿ ಕೆಲವು ದೇವಸ್ಥಾನಗಳು ಯಕ್ಷಗಾನ ಮೇಳಗಳನ್ನು ನಡೆಸುತ್ತಿವೆ. ಅದರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದವರು ಆರು ಯಕ್ಷಗಾನ ಮೇಳವನ್ನು ನಡೆಸುತ್ತಿದ್ದಾರೆ. ಈ ಮೇಳಗಳು ಬಿಡುವಿಲ್ಲದೆ ಕಾರ್ಯ ಕ್ರಮವನ್ನು ನಿರಂತರ ವರ್ಷದ ಆರು ತಿಂಗಳು ನೀಡುತ್ತವೆ. ಯಕ್ಷಗಾನ ಬಯಲಾಟ ನೀಡಬೇಕೆಂದು ಬಯಸುವ ವ್ಯಕ್ತಿಯೂ ತನ್ನ ಹೆಸರನ್ನು ದೇವಳದಲ್ಲಿ ನೋಂದಾಯಿಸಿ ಕೆಲವು ವರ್ಷ ಕಾಯಬೇಕಾಗುತ್ತದೆ. ತಕ್ಷಣ ಪ್ರದರ್ಶನ ನೀಡಲು ಮೇಳವು ಸಿಗುವುದಿಲ್ಲ. ಮಂಗಳೂರು ಮರೋಳಿ ನಿವಾಸಿ ಶ್ರೀ ಎ.ಕೆ.ಭಂಡಾರಿಯವರು ಹೆಸರು ನೋಂದಾಯಿಸಿ ಹತ್ತೊಂಬತ್ತು ವರ್ಷ ಕಾದ ನಂತರ ತನ್ನ ಸರದಿಯಂತೆ ಫೆಬ್ರವರಿ 10,2019 ನೇ ತಾರೀಕಿನಂದು ಮಂಗಳೂರು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಪ್ರದರ್ಶನದ ಸಂದರ್ಭ ಒದಗಿಬಂತು. ಆ ದಿನ ಸಂಜೆ ಶ್ರೀ ಮರೋಳಿ ಕ್ಷೇತ್ರದಿಂದ ಶ್ರೀ ದುರ್ಗಾಪರಮೇಶ್ವರಿ ದೇವರನ್ನು ಮೇಳದ ಚೌಕಿಗೆ ಓಲಗ, ವಾದ್ಯ, ಕೊಂಬು, ಸಿಡಿಮದ್ದು ಸಿಡಿಸಿ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಕೊಂಡು ಹೋಗಲಾಯಿತು. ರಾತ್ರಿ ಎಂಟೂವರೆ ಗಂಟೆಗೆ ಚೌಕಿ ಪೂಜೆ ನಡೆದು ಬಯಲಾಟದ ರಂಗಸ್ಥಳಕ್ಕೆ ಪ್ರಾರಂಭಿಕ ವೇಷಗಳ ಪ್ರವೇಶವಾಯಿತು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸರಿಸುಮಾರು ಎರಡೂವರೆ ಸಾವಿರ ಮಂದಿ ಭಾಗವಹಿಸಿ, ಶುಚಿ ರುಚಿಯಾದ ಭೋಜನ ಪ್ರಸಾದವನ್ನು ಸ್ವೀಕರಿಸಿದರು.ಸಿಹಿಭೋಜನ ಎಲ್ಲರನ್ನು ಸಂತೋಷಗೊಳಿಸಿತು. ವ್ಯವಸ್ಥೆಯ ಅಚ್ಚುಕಟ್ಟುತನವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದರು. 

ಕೋಡಂಗಿ ವೇಷ, ಕಟ್ಟು ವೇಷ, ಸ್ತ್ರೀ ವೇಷ ಮತ್ತು ಇತರ ಪ್ರಾರಂಭಿಕ ವೇಷಗಳ ನಂತರ ಶ್ರೀ ದೇವಿ ಮಹಾತ್ಮೆಗೆ ಸಂಬಂಧಪಟ್ಟ ವೇಷಗಳ ರಂಗಪ್ರವೇಶವಾಯಿತು. ಬ್ರಹ್ಮ, ವಿಷ್ಣು, ಮಹೇಶ್ವರ ತದನಂತರ ಮಧು ಕೈಟಭರ ಅದ್ಧೂರಿ ಪ್ರವೇಶವಾಯಿತು. ಮುಂದೆ ಮಾಲಿನಿ ಪ್ರವೇಶ, ಮಹಿಷಾಸುರ ವಧೆ ಹೀಗೆಯೇ ಮುಂದುವರಿದು, ಶುಂಭ ನಿಶುಂಭ ರಾಕ್ಷಸರ ವೇಷ, ಚಂಡ ಮುಂಡ ವೇಷಗಳು, ಸುಗ್ರೀವ, ರಕ್ತಬೀಜ, ಅರುಣಾಸುರ, ದೇವೇಂದ್ರ ಮುಂತಾದ ವೇಷಗಳಿಂದ ರಂಗಸ್ಥಳವೇ ವೈಭವೀಕರಿಸಲ್ಪಟ್ಟಿತು. ಎಲ್ಲಾ ರಾಕ್ಷಸರು ಶ್ರೀ ದೇವಿಯಿಂದ ಸಂಹರಿಸಲ್ಪಟ್ಟರು. ಕಲಾವಿದರು ಈ ಕಥಾನಕಕ್ಕೆ ಪೂರಕವಾಗಿ ಅಭಿನಯಿಸಿ ಸೈ ಎನಿಸಿಕೊಂಡರು. ಕಥೆಯ ನಡುವಿನಲ್ಲಿ ಹಾಸ್ಯಗಾರರ ಹಾಸ್ಯ ಚಟಾಕಿಯಿಂದ ಎಲ್ಲರ ನಗೆ ಚಿಮ್ಮುತ್ತಿತ್ತು. ಚೆಂಡೆ ಮದ್ದಳೆ ತಾಳದೊಂದಿಗೆ ಭಾಗವತಿಕೆ ಯಕ್ಷಗಾನಕ್ಕೊಂದು ಕಳೆ ತಂದುಕೊಟ್ಟಿತು. ಪಟಾಕಿ ಸಿಡಿಮದ್ದು ಸಿಡಿಸಿ ವೇಷಗಳನ್ನು ವೈಭವೀಕರಿಸಲಾಯಿತು. ನಕ್ಷತ್ರ ಸಿಡಿಮದ್ದು ಬಾನಂಚಿಗೆ ತಲುಪಿ ಸಿಡಿದು ನಕ್ಷತ್ರಗಳ ಮಳೆ ಸುರಿದಂತೆ ಭಾಸವಾಗುತ್ತಿತ್ತು. ನಕ್ಷತ್ರಗಳ ಚಿತ್ತಾರ ಎಲ್ಲರನ್ನು ಆಹ್ಲಾದಗೊಳಿಸಿತು. ಗರ್ನಾಲು ಸಿಡಿಮದ್ದು ಭೋರ್ಗರೆದು ಸಿಡಿದು ನೀಡಿದ ಖುಷಿ ಸಂತೋಷದ ಇನ್ನೊಂದು ಭಾಗವೇ ಸರಿ.

ನಡುರಾತ್ರಿಯ ನಂತರ ಪ್ರೇಕ್ಷಕರೆಲ್ಲರಿಗೂ ಆಗಾಗ ಚಟ್ಟಂಬಡೆಯೊಂದಿಗೆ ಚಾ ಪಾನೀಯವನ್ನು ಸರಬರಾಜು ಮಾಡಲಾಯಿತು. ಶ್ರೀ ಸೂರ್ಯನಾರಾಯಣ ದೇವಸ್ಥಾನದ ಕಾರ್ಯಕರ್ತರ ಕಾರ್ಯಕ್ಷಮತೆಯ ಬಗ್ಗೆ ಎಲ್ಲರೂ ಖುಷಿಪಟ್ಟರು. ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಸಹಕರಿಸಿದ ಪ್ರತಿಯೊಬ್ಬರಿಗೂ ಶ್ರೀ ಎ.ಕೆ.ಭಂಡಾರಿಯವರು ಮತ್ತು ಶ್ರೀಮತಿ ಪ್ರೇಮ.ಕೆ.ಭಂಡಾರಿಯವರು ಹಾಗೂ ಕುಟುಂಬದವರು ಧನ್ಯವಾದ ಸಮರ್ಪಿಸಿದರು. 

ವಿಜೃಂಭಿಸಿದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವು ಎಲ್ಲರ ಮನಸ್ಸನ್ನು ಮುದಗೊಳಿಸಿದೆ ಎಂಬುದು ನೆರೆದಿದ್ದ ಪ್ರೇಕ್ಷಕರೆಲ್ಲರ ಅಂತರಾಳದ ಅಭಿಪ್ರಾಯವಾಗಿತ್ತು.

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *