September 20, 2024

ನಾರದರು ದಕ್ಷನಿಂದ ಪಡೆದ ಶಾಪವೇನು..?

ಪುರಾಣ ನೀತಿ 

(ಹೆಜ್ಜೆ-12)

ಸತಿದೇವಿಯು ನೀಡಿದ ಶಾಪದ ಕಾರಣ ದಕ್ಷನು “ಮಾರಿಷೆ” ಯೆಂಬ ವೃಕ್ಷ ಕನ್ಯೆಯಲ್ಲಿ ಹತ್ತು ಮಂದಿ ಪ್ರಚೇತಸರೆಂಬ ಋಷಿಗಳಿಗೆ ಒಬ್ಬ ಮಗನಾಗಿ ಹುಟ್ಟಿದನು.ಪ್ರಚೇತಸರ ಅಭೀಷ್ಟದಂತೆ ಬ್ರಹ್ಮದೇವನು ಹಾಗೆ ಹುಟ್ಟಿದವನಿಗೆ ದಕ್ಷನೆಂದೇ ಹೆಸರನ್ನಿತ್ತು ಪ್ರಚೇತಸರನಿಗೆ ಪ್ರಜಾಧಿಪತ್ಯದ ಅಧಿಕಾರವನ್ನಿತ್ತು ಅನುಗ್ರಹಿಸಿ ಸೃಷ್ಟಿ ಕಾರ್ಯದಲ್ಲಿ ನಿಯೋಜಿಸಿದನು.  

ಅಂತೆಯೇ ಇವನು “ಅಸಿಕ್ನಿ” ಎಂಬಾಕೆಯಲ್ಲಿ “ಹರ್ಯಶ್ವ” ರೆಂಬ ಐದು ಸಾವಿರ ಮಂದಿ ಪುತ್ರರನ್ನು ಪಡೆದು ಅವರನ್ನು ಸೃಷ್ಟಿ ಕಾರ್ಯದಲ್ಲಿ ನಿಯೋಜಿಸಿದನು. ಆಗ ದೇವಋಷಿಗಳೆಂದೇ ವಿಖ್ಯಾತರಾದ ನಾರದರು ಹರ್ಯಶ್ವರ ಬಳಿಗೆ ಬಂದು ಅವರಿಗೆ ಅಧ್ಯಾತ್ಮ ತತ್ವವನ್ನು ಭೋಧಿಸಿ ಅವರನ್ನು ತಪಸ್ಸಿಗೆ ಅಟ್ಟಿ ಬಿಟ್ಟರು. ದಕ್ಷನು ಮತ್ತೆ “ಶಬಲಾಶ್ವ” ರೆಂಬ ಒಂದು ಸಾವಿರ ಮಂದಿ ಪುತ್ರರನ್ನು ಪಡೆದು ಸೃಷ್ಟಿ ಕಾರ್ಯದಲ್ಲಿ ನಿಯೋಜಿಸಿದರು. ಆಗಲೂ ನಾರದರು ಬಂದು ಅವರಿಗೆ ಉಪದೇಶ ಮಾಡಿ ಅವರೂ ತಪಸ್ಸನ್ನೇ ಕೈಗೊಳ್ಳುವಂತೆ ಮಾಡಿದರು.  

ದಕ್ಷನಿಗೆ ನಾರದರ ಮೇಲೆ ಸಿಟ್ಟು ಬಂದು “ನಿಂತಲ್ಲಿ ನಿಲ್ಲದೇ ಇರು” ಎಂದು ಶಾಪವನ್ನಿತ್ತರು.ಆಮೇಲೆ ದಕ್ಷನು ಅರವತ್ತು ಮಂದಿ ಹೆಣ್ಣು ಮಕ್ಕಳನ್ನು ಪಡೆದನು.ಅವರಲ್ಲಿ ಮೊದಲ ಹತ್ತು ಮಂದಿಯನ್ನು ಧರ್ಮ ಮಹರ್ಷಿಗೂ, ಹದಿಮೂರು ಮಂದಿಯನ್ನು ಬ್ರಹ್ಮ ಮಾನಸ ಪುತ್ರನಾದ ಮರೀಚಿ ಯೆಂಬವನ ಮಗನಾದ ಕಶ್ಯಪನಿಗೂ ಕೊಟ್ಟನು.  ಮಹರ್ಷಿಯಾದ ಕಶ್ಯಪನು ಸೃಷ್ಟಿ ಕಾರ್ಯದಲ್ಲಿ ನಿಯೋಜಿತನಾಗಿ ತನ್ನ ಹೆಂಡಿರ ಮೂಲಕ ನಾನಾ ವಿಧದ ಸಂತತಿಯನ್ನು ಪಡೆದನು.

ದಿತಿ ದೇವಿಯಲ್ಲಿ ದೈತರು,  ಅದಿತಿಯಲ್ಲಿ ದೇವತೆಗಳು,  ದನುವಿನಲ್ಲಿ ದಾನವರು, ದನಾಯುವಿನಲ್ಲಿ ಸಿದ್ಧರು,ಪಾದಾ ಎಂಬವಳಲ್ಲಿ ಗಂಧರ್ವರು,ಮುನಿ ಎಂಬವಳಲ್ಲಿ ಅಪ್ಸರೆಯರು,ಸುರಸೆಯಲ್ಲಿ ಯಕ್ಷರು ಮತ್ತು ಮಹಾನಾಗರು,  ಇಲಾ ಎಂಬವಳಲ್ಲಿ ವೃಕ್ಷ ಲತಾದಿಗಳು,ಕ್ರೋಧವಶಾ ಎಂಬವಳಲ್ಲಿ ಮಾಂಸಾಹಾರಿಗಳಾದ ದುಷ್ಟ ಮೃಗಜಾತಿಗಳು,ತಾಮ್ರಾ ಎಂಬವಳಲ್ಲಿ ಅಶ್ವ, ಅಶ್ವತರ, ಗರ್ಧಭ, ಶ್ಯೇನ, ಗೃದ್ಧ್ರಾದಿಗಳು, ಕಪಿಲಾ ಎಂಬವಳಲ್ಲಿ ಗೋವುಗಳು, ವಿನುತಾದೇವಿಯಲ್ಲಿ ಅರುಣ, ಗರುಡ ಇತ್ಯಾದಿಯರು, ಕದ್ರುವಿನಲ್ಲಿ ಸರ್ಪ ಜಾತಿಗಳು ಈ ಪ್ರಕಾರವಾಗಿ ಕಶ್ಯಪನು ಸಂತತಿಯನ್ನು ಪಡೆದು ವಿವಿಧ ಜಾತಿಯ ಜೀವಜಂತುಗಳ ಹುಟ್ಟಿಗೆ ಕಾರಣನಾದನು.  

ಆದರೆ ಕಶ್ಯಪ ಮಹಾಮುನಿಯ ಪತ್ನಿಯರಲ್ಲಿ ಸವತಿ ಮಾತ್ಸರ್ಯ ಹೆಚ್ಚಾಗಿ ದ್ವೇಷ ಅಸೂಯೆ ಉಂಟಾಗಿ ಅದು ಅವರ ಸಂತತಿಯಲ್ಲೂ ಬೆಳೆದು ದಾಯಾದ್ಯ ಕಲಹಗಳಿಗೂ ಕಾರಣವಾಗಿತ್ತು. ಅದರಲ್ಲೂ ದೇವಾಸುರರಲ್ಲಂತೂ ಅದು ಬಹಳವಾಗಿ ಬೆಳೆದಿತ್ತು. 

ಹೀಗೆ ಕಶ್ಯಪ ಮಹಾಮುನಿಗೆ ಒಮ್ಮೆ ಯಜ್ಞವನ್ನು ಮಾಡಬೇಕೆಂದು ಮನಸ್ಸಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿದನು. ಆದರೆ ಯಜ್ಞಕ್ಕೆ ಅವಶ್ಯವಾದ ಗೋವುಗಳು ದೊರಕುವುದಿಲ್ಲ ಆಗ ಮುನಿಯು ಯಾರ ಬಳಿಗೆ ಹೋಗುತ್ತಾನೆ.

ಮುಂದಿನ ಸಂಚಿಕೆಯಲ್ಲಿ ….

✍🏻 ಎಸ್ ಕೆ ಬಂಗಾಡಿ.


Leave a Reply

Your email address will not be published. Required fields are marked *