November 22, 2024
purana-1

ಚಂದ್ರನ ಸೃಷ್ಟಿ ಹೇಗಾಯಿತು….?

ಪುರಾಣ ನೀತಿ. 

(ಹೆಜ್ಜೆ-13)

ಹಿಂದಿನ ಸಂಚಿಕೆಯಿಂದ…. 

ಕಶ್ಯಪನು ಯಜ್ಞಕ್ಕಾಗಿ ಗೋವುಗಳನ್ನು ತರಲು ವರುಣನ ಬಳಿ ಹೋಗಿ ಅವನಲ್ಲಿ ಗೋವುಗಳನ್ನು ಎರವಲಾಗಿ ತರುತ್ತಾನೆ.ಯಜ್ಞವು ಪೂರ್ಣಗೊಂಡ ನಂತರ ಗೋವುಗಳನ್ನು ಹಿಂತಿರುಗಿಸಬೇಕಾಗುತ್ತದೆ,ಆದರೆ ಕಶ್ಯಪನ ಪತ್ನಿಯರಿಗೆ ಆ ಗೋವುಗಳ ಕುರಿತು ಆಸೆಯಾಗುತ್ತದೆ,ಎರವಲಾಗಿ ತಂದ ಗೋವುಗಳನ್ನು ಹಿಂತಿರುಗಿಸಲು ಕಾಲಹರಣ ಮಾಡುತ್ತಾರೆ.  ಮಡದಿಯರ ಮೇಲಿನ ದಾಕ್ಷಿಣ್ಯ ಅದರಲ್ಲೂ ಅದಿತಿಯೆಂಬುವಳ ಮೇಲೆ ಮತ್ತಷ್ಟು ಅಭಿಮಾನ, ಅವಳ ಮಾತನ್ನು ತಳ್ಳಿ ಹಾಕುವುದಕ್ಕೆ ಕಶ್ಯಪನಿಂದ ಸಾಧ್ಯವಾಗಲಿಲ್ಲ.  

ಇದರಿಂದ ಕ್ರುದ್ದನಾದ ವರುಣನು…”ಲೋಭಗ್ರಸ್ತನಾದ ನೀನೂ ನಿನ್ನ ಪತ್ನಿಯಾದ ಅದಿತಿಯೂ ಅನೇಕ ಜನ್ಮಗಳನ್ನು ತಳೆದು ಪಾಡುಪಟ್ಟು ಶೃಂಖಲಾಬದ್ಧರಾಗಿಯೂ,  ಬಂಧನದಲ್ಲಿದ್ದು ಪುತ್ರಶೋಕವೇ ಮುಂತಾದ ಅನೇಕ ಕಷ್ಟಗಳನ್ನೂ ದುಃಖವನ್ನೂ ಅನುಭವಿಸಿರಿ “…ಎಂದು ಶಪಿಸಿದನು.  

ಇದರಿಂದ ದುಃಖಿತನಾದ ಕಶ್ಯಪರು ಅದಿತಿಯೊಂದಿಗೆ ಅನನ್ಯವಾಗಿ ಶ್ರೀ ಹರಿಯನ್ನೂ ಧ್ಯಾನಿಸಿ ಪರಿ ಪರಿಯಾಗಿ ಪ್ರಾರ್ಥಸಿಕೊಂಡನು.  ಆಗ ಒಲಿದ ಶ್ರೀ ಹರಿಯು…”ತಪ್ಪಿಗೆ ತಕ್ಕ ಶಿಕ್ಷೆ ಆಗಲೇಬೇಕು.ಆದರೂ ನಾನು ನಿಮ್ಮ ತಪಸ್ಸಿಗೆ ಮೆಚ್ಚಿದ್ದೇನೆ.  ಅಂತೆಯೇ ಸಂಕಲೆಯಿಂದ ಬಂಧಿಸಿಕೊಂಡು ಬಹು ವಿಧದ ಪುತ್ರ ಶೋಕವನ್ನೂ ಅನುಭವಿಸುವ ಮುಂದಿನ ನಿಮ್ಮ ಆ ಜನ್ಮವೇ ಕೊನೆಯದಾಗಲಿ. ನೀವು ಶಾಪದಿಂದ ಜನ್ಮವೆತ್ತಿದಾಗೆಲ್ಲಾ ನಾನು ನಿಮ್ಮ ಮಗನಾಗಿ ಹುಟ್ಟಿ ಯಥಾಸಾಧ್ಯವಾದ ಸುಖ ಸಂತಸವನ್ನು ನೀಡುತ್ತೇನೆ”….ಎಂದು ಅನುಗ್ರಹಿಸುತ್ತಾರೆ.

ಸೃಷ್ಟಿ ಕಾರ್ಯದಲ್ಲಿ ನಿಯೋಜಿತನಾದ ಅತ್ರಿ ಮುನಿಯು ಆ ಅರ್ಹತೆಯ ಪ್ರಾಪ್ತಿಗಾಗಿ ತಪೋನಿರತನಾಗಿದ್ದನು.ಆಗ ಅವನ ನೇತ್ರಯುಗ್ಮದಿಂದ ಒಮ್ಮೆಲೇ ಅತಿಶಯವಾದ ತೇಜೋಧಾರೆಯು ಹೊರಸೂಸಿ ಹತ್ತೂ ದಿಕ್ಕುಗಳನ್ನು ವ್ಯಾಪಿಸಿತು.ಹಾಗೆಯೇ ಹತ್ತು ಕಡೆಗಳಿಂದ ಕ್ಷೀರಸಾಗರವನ್ನು ಸೇರಿತು.ಬ್ರಹ್ಮ ದೇವನು ಆ ತೇಜಸ್ಸನ್ನೆಲ್ಲಾ ಒಟ್ಟು ಗೂಡಿಸಿ ಒಂದು ಪುರುಷಾಕೃತಿಯನ್ನು ಸಿದ್ಧಗೊಳಿಸಲು ಅದು ಹಾಲ್ಗಡಲಿನಿಂದ ಮೇಲೆ ಬಂತು.ಆ ಪುರುಷನಿಗೆ ಚಂದ್ರನೆಂದು ಹೆಸರನ್ನಿಟ್ಟು ಬ್ರಹ್ಮ ದೇವನು ಅವನಿಗೆ ಗ್ರಹಾಧಿಪತ್ಯವನ್ನಿತ್ತು ಅನುಗ್ರಹಿಸಿದನು.  

ದಕ್ಷನು ತನ್ನ ಕುವರಿಯರಲ್ಲಿ ಅಶ್ವಿನ್ಯಾದಿ ಇಪ್ಪತ್ತೇಳು ಮಂದಿಯನ್ನು ಈ ಚಂದ್ರನಿಗಿತ್ತು ಸಂತುಷ್ಟನಾದನು.ಆದರೆ ಚಂದ್ರನು ಸದಾ ರೋಹಿಣೀಗತನಾಗಿರುವುದನ್ನು ಕಂಡು ಇತರರು ತಮ್ಮ ತಂದೆಯಾದ ದಕ್ಷನಲ್ಲಿ ದೂರಿಕೊಳ್ಳುತ್ತಾರೆ. 

ಕ್ರುದ್ದನಾದ ದಕ್ಷನು ಚಂದ್ರನಿಗೆ ಏನು ಮಾಡುತ್ತಾನೆ…..?

ಮುಂದಿನ ಸಂಚಿಕೆಯಲ್ಲಿ……

✍🏻 ಎಸ್ ಕೆ ಬಂಗಾಡಿ.


Leave a Reply

Your email address will not be published. Required fields are marked *