November 22, 2024
purana-1

ಮಹಾವಿಷ್ಣುವು ಸೃಷ್ಟಿಸಿದ ಸರ್ವಾಂಗ ಸುಂದರನೂ, ಸುಮನೋಹರನು ಯಾರು…?

ಪುರಾಣ ನೀತಿ 

(ಹೆಜ್ಜೆ-14) 

ಹಿಂದಿನ ಸಂಚಿಕೆಯಿಂದ…

ರೋಹಿಣೀಗತನಾಗಿದ್ದ ಚಂದ್ರನಿಗೆ ದಕ್ಷನು ಕ್ರುದ್ದನಾಗಿ “ಚಂದ್ರನಿಗೆ ಕ್ಷಯವೇ ಪ್ರಾಪ್ತಿಸಲಿ” ಎಂದು ಶಪಿಸಿದನು.ಇದರಿಂದ ಭಯಗೊಂಡ ಚಂದ್ರನು ಮಹಾದೇವನ ಮೊರೆ ಹೋಗುತ್ತಾನೆ.ಯಾಕೆಂದರೆ ದಕ್ಷನು ಹಿಂದೆ ಜನ್ಮಾಂತರದಲ್ಲಿ ಶಿವನ ಕೋಪಕ್ಕೆ ತುತ್ತಾಗಿದ್ದನಷ್ಟೇ. ಆದ್ದರಿಂದ ದಕ್ಷನ ಶಾಪದಿಂದ ಮಹಾದೇವನಲ್ಲಿ ಪರಿಹಾರ ಸಿಗಬಹುದು ಎಂಬ ನಂಬಿಕೆಯಿಂದ ಶಿವನ ಬಳಿಗೆ ಹೋಗುತ್ತಾನೆ. ಶಿವನು ಚಂದ್ರನಿಗೆ ಅಭಯವನ್ನು ನೀಡುತ್ತಾನೆ.  

ಇದನ್ನು ಅರಿತ ಬ್ರಹ್ಮ ವಿಷ್ಣು ಇಬ್ಬರೂ ಶಿವನ ಬಳಿ ವಿಷಯ ವಿನಿಮಯ ಮಾಡಿಕೊಳ್ಳುತ್ತಾರೆ.  ಅಂತೆಯೇ ಚಂದ್ರನಿಗೆ ಹದಿನಾರು ಕಲೆಗಳನ್ನು ಒಮ್ಮೆ ಬೇರೆ ಬೇರೆ ಮಾಡಿ ಒಂದನ್ನು ಶಿವನ ಆಶ್ರಯಕ್ಕಿತ್ತರು.  ಶಿವನು ಅದನ್ನು ತನ್ನ ಜಟಾಜೂಟದಲ್ಲಿ ಏರಿಸಿಕೊಂಡನು.ಮತ್ತೆ ಉಳಿದ ಹದಿನೈದು ಕಲೆಗಳನ್ನು ಒಂದಾಗಿ ಜೋಡಿಸಿ ಪ್ರತಿದಿನವೂ ಒಂದೊಂದೇ ಕಲೆಗೆ ಶಾಪದ ಕ್ಷಯವು ನಿರಸನಗೊಂಡು ವೃದ್ಧಿಯೊದಗುವಂತೆಯೂ ವ್ಯವಸ್ಥೆ ಮಾಡಿ ಚಂದ್ರನಿಗೆ ಹದಿನೈದು ದಿನ ಕ್ಷೀಣತೆಯೂ ಇನ್ನು ಹದಿನೈದು ದಿನ ವೃದ್ಧಿಯೂ ಪರ್ಯಾಯ ಕ್ರಮದಿಂದ  ಹೊಂದಿ ಅನುಭವಿಸುವಂತೆ ಮಾಡಿದರು.  ಶಿವಾನುಗ್ರವನ್ನು ಪಡೆದ ಒಂದು ಕಲೆಗೆ ಮಾತ್ರ ಯಾವುದೂ ಇಲ್ಲ ಹೀಗೆ ದಕ್ಷನ ಶಾಪವೂ ಹುಸಿಯಾಗಲಿಲ್ಲ. ಸದಾಶಿವನ ಅಭಯವೂ ಸುಳ್ಳಾಗಲಿಲ್ಲ ಆದರೆ ಚಂದ್ರನು ಮಾತ್ರ ಎರಡನ್ನೂ ನಿತ್ಯ ಅನುಭವಿಸುವಂತಾಯಿತು.

ಬ್ರಹ್ಮ ದೇವನು ಬಹುಮಂದಿ ಮಕ್ಕಳನ್ನು ಪಡೆದು ಅವರನ್ನು ಸೃಷ್ಟಿ ಕಾರ್ಯದಲ್ಲಿ ನಿಯೋಜಿಸಿದ್ದನು.  ಕೆಲವರಿಗೆ ಪ್ರಾಜಾಪತ್ಯವನ್ನೇ ಕರುಣಿಸಿದ್ದನು.ಆದರೆ ಇದೇ ಸಾಲದು ಸಕಲ ವಿದ್ಯೆಗಳಿಗೂ ಅಧಿದೇವತೆಯಾಗಿ ಒಬ್ಬಳನ್ನು ನೇಮಿಸುವುದು ವಿಹಿತ ಎಂದು ಅವನು ಮನಗಂಡನು. ತನ್ನ ಮುಖದಿಂದಲೇ ಒಬ್ಬ ಮಗಳನ್ನು ಪಡೆದು ಆಕೆಗೆ “ಸರಸ್ವತಿ” ಎಂದು ಹೆಸರನ್ನು ಇಟ್ಟನು.  

ಅದೇ ಸಮಯದಲ್ಲಿ ಮಹಾವಿಷ್ಣುವು “ಪಾಲನಾಕಾರ್ಯಕ್ಕೆ ಒಂದಂಶದ ಹೊಣೆಯನ್ನು ಇತರರಿಗೂ ಹೊಂದಿಸಬೇಕು. ಯಾವುದನ್ನೇ ಆದರೂ ರಕ್ಷಿಸಬೇಕಾದರೆ ಅದರ ಮೇಲೆ ಪ್ರೀತಿ ಇರಬೇಕು, ಅವರ ಕುರಿತಾದ ಆಸೆ ಇರಬೇಕು. ಅದಕ್ಕಾಗಿ ಆಸೆಯೂ ಪ್ರೀತಿಯೂ ಜೊತೆಯಾಗಿಯೇ ಇರುವ ‘ಕಾಮ’ವು ಜಗತ್ತಿಗೆ ತೀರಾ ಅಗತ್ಯ ಮುಂದಿನ ಪ್ರಜಾಸೃಷ್ಟಿಗೂ ಇದು ಹೇತುವಾಗಬಹುದು” ಎಂದು ಕಂಡುಕೊಂಡು ಆ ತತ್ವದ ಅಧಿದೇವತೆಯಾಗಿ ಸರ್ವಾಂಗ ಸುಂದರನೂ ಸುಮನೋಹರನೂ ಆದ ಮಗನೊಬ್ಬನನ್ನು ತನ್ನ ಮನಸ್ಸಿನಿಂದಲೇ ಪಡೆದು “ಮನ್ಮಥ” ನೆಂದು ಹೆಸರನ್ನಿಟ್ಟನು.

ಮನ್ಮಥ ಪ್ರಭಾವ ಬ್ರಹ್ಮ ದೇವನ ಮೇಲೆ ಹೇಗೆ ಬೀರಿತು…?

ಮುಂದಿನ ಸಂಚಿಕೆಯಲ್ಲಿ…..

✍🏻 ಎಸ್ ಕೆ ಬಂಗಾಡಿ.

Leave a Reply

Your email address will not be published. Required fields are marked *