ಇತಿಹಾಸ:
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಹೊಯ್ಸಳ ರಾಜ ವಿಷ್ಣುವರ್ಧನನ ಮಹಾಮಂಡಲೀಕನಾಗಿದ್ದ ಭುಜಬಲಕವಿ ಆಳುಪೇಂದ್ರ (ಕ್ರಿ ಶ 1115 -1155 ) ಬಾರಕೂರು ಸೀಮೆಯನ್ನು ಆಳುತ್ತಿದ್ದ ಕಾಲ, ತನ್ನ ಆಶ್ರಿತ ವರ್ಗಕ್ಕೆಲ್ಲ ನಿತ್ಯ ಸಂತೋಷ ನೀಡುತ್ತಿದ್ದ. ಆಳುಪೇಂದ್ರನ ಸುಭಿಕ್ಷ ಕಾಲವದು. ಆ ಕಾಲದಲ್ಲಿ ತನ್ನ ಆಪ್ತ ವರ್ಗದಲ್ಲಿದ್ದ ಭಂಡಾರಿ ಸಮಾಜದ ಮುಖಂಡನಿಗೆ ಆತನ ಆಶೆಯಂತೆಯೇ ಆಳುಪೇಂದ್ರ 1146 ರಲ್ಲಿ ಈಶ್ವರನ ಮಹಾಲಿಂಗವನ್ನು ತರಿಸಿ ಪ್ರತಿಷ್ಠಾಪಿಸಿದ. ಈ ದೇವಸ್ಥಾನಕ್ಕೆಂದೇ ಉಂಬಳಿಯನ್ನೂ ಬಿಟ್ಟು ಪೂಜೆಗೆ ವ್ಯವಸ್ಥೆ ಮಾಡಿದ. ವಾರ್ಷಿಕ ಉತ್ಸವಾದಿಗಳನ್ನೂ , ವಿಶೇಷ ಪರ್ವಾದಿಗಳನ್ನೂ ವಿಜೃಂಭಣೆಯಿಂದ ನಡೆಯುವಂತೆ ವ್ಯವಸ್ಥೆ ಮಾಡಿದ. ಅದಲ್ಲದೇ ಆಡಳಿತ ವ್ಯವಸ್ಥೆಯ ಪೂರ್ತಿ ಜವಾಬ್ದಾರಿಯನ್ನೂ ಭಂಡಾರಿ ಸಮಾಜದವರಿಗೇ ವಹಿಸಿದ. ನಗರದ ಕೇಂದ್ರ ಭಾಗದಲ್ಲಿದ್ದು ಸಹಸ್ರಾರು ಭಕ್ತರಿಂದ ನಿತ್ಯ ಆರಾಧಿಸಲ್ಪಡುತ್ತಿದ್ದ ದೇವರ ದರ್ಶನ ಭಾಗ್ಯವನ್ನು ಮಹಾರಾಜರೂ ನಿತ್ಯವೂ ಪಡೆಯುತ್ತಿದ್ದರು ಎಂಬುದು ಗಣಪತಿ ಐಗಳ ರವರ “ದಕ್ಷಿಣ ಕನ್ಬಡ ಜಿಲ್ಲೆಯ ಪ್ರಾಚೀನ ಇತಿಹಾಸ” ದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ನಾಯಿಂದ ಸಮಾಜದವರೊಬ್ಬರು ಭಾರತದ ಕ್ಷೌರಿಕರ ಬಗ್ಗೆ ಮಾಡಿದ ಸಮಗ್ರ ಅಧ್ಯಯನ ಪ್ರಬಂಧದಲ್ಲಿ ವಿವರಿಸುತ್ತಾ ಆಳುಪೇಂದ್ರನ ಕಾಲದಲ್ಲಿ ಶ್ರೀ ಕೃಷ್ಣನನ್ನು ಕುಲದೇವರಾಗಿ ಪೂಜಿಸುತ್ತಿದ್ದ ಭಂಡಾರಿ ಸಮುದಾಯದ ಕುಟುಂಬಕ್ಕೆ ಒಂದು ದೇವಸ್ಥಾನವನ್ನು ನೀಡಿರುವ ಬಗ್ಗೆ ಉಲೇಖವಿದೆ.
ಅದೇ ರೀತಿ ಅದಮಾರು ಮಠದ ಯತೀವರ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥರ ಪ್ರಕಾರ ಉಡುಪಿಯ ಅಷ್ಟ ಮಠಗಳಿಗೂ ನಗರೇಶ್ವರ ದೇವಸ್ಥಾನಕ್ಕೂ ವಿಶೇಷ ನಂಟು ಇತ್ತು ಎಂಬುದಾಗಿದೆ. ಪ್ರಶ್ನೆ ಚಿಂತನೆಯಲ್ಲೂ ಇದು ಸಾಬೀತಾಗಿತ್ತು. ಸತತವಾಗಿ ವಂಶಪಾರಂಪರ್ಯವಾಗಿ ಆರಾಧಿಸಿಕೊಂಡು ಬಂದ ದೇವಾಲಯ ಸಂಪದ್ಭರಿತವಾಗಿತ್ತು. ಕಾಲಚಕ್ರ ಉರುಳಿದಂತೆ ಕ್ರಿ. ಶ 1713 ರಲ್ಲಿ ಪರದೇಶದಿಂದ ವ್ಯಾಪಾರಕ್ಕೆಂದು ಬಂದ ಪೋರ್ಚುಗೀಸರು ಪ್ರಬಲರಾಗಿ ಕಲ್ಯಾಣಪುರ ,ಬಾರಕೂರು ಸೀಮೆಗಳಿಗೆ ದಾಳಿ ಮಾಡಿ ಸಂಪದ್ಭರಿತವಾಗಿದ್ದ ದೇವಸ್ಥಾನಗಳ ಆಸ್ತಿಯನ್ನು ಕೊಳ್ಳೆ ಹೊಡದು ಸುಟ್ಟು ಹಾಕಿದರು. ಈ ದೇವಸ್ಥಾನಗಳಲ್ಲಿ ನಗರೇಶ್ವರ ದೇವಾಲಯ ಕೂಡಾ ಒಂದಾಗಿತ್ತು. ಈ ದಾಳಿಯ ನಂತರ ಅಳಿದುಳಿದ ದೇವಾಲದಲ್ಲಿ ಪೂಜೆ ಸಲ್ಲುತಿತ್ತು. ನಂತರ ಕ್ರಿ. ಶ 1763 ರಲ್ಲಿ ಮತ್ತೆ ಹೈದರಾಲಿಯ ದಾಳಿಗೆ ತುತ್ತಾಯಿತು. ಈ ದಾಳಿಗೆ ಗರ್ಭಗುಡಿ ಸಹಿತ ಭಗ್ನವಾದವು. ಆದರೂ ನಿತ್ಯ ಪೂಜೆ ಮಾಡುತ್ತಿದ್ದ ಅರ್ಚಕ ಕುಟುಂಬದ ಹಿರಿಯರು ಪೂಜೆ ನಿಲ್ಲಿಸಲಿಲ್ಲ. ಈ ನಂತರ ಈ ದೇವಸ್ಥಾನ ನಾಗೇಶ್ವರ ದೇವಾಲಯವಾಗಿ ಬದಲಾಗಿರುವ ಸಾಧ್ಯತೆಯಿದೆ. ಈ ಕ್ಷೇತ್ರದ ಪುರಾಣ ಕತೆಯ ಪ್ರಕಾರ ಭಂಡಾರಿ ಮಹಿಳೆಯೊಬ್ಬರಿಗೆ ನಾಗೇಶ್ವರ ಒಲಿದು ತಮ್ಮ ಕಷ್ಟ ಪರಿಹಾರವಾದ ಬಗ್ಗೆ ಐತಿಹ್ಯ ಆಧಾರ ಕೂಡಾ ಇದೆ.
ನಿತ್ಯ ಪೂಜೆ ಸಲ್ಲುತ್ತಿದ್ದರೂ ದೇವಾಲಯ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಸೋದರ ಸಮಾಜಕ್ಕೆ ರಾಜ ನೀಡಿದ್ದ ಬಹುತೇಕ ದೇವಾಲಯಗಳೂ ಜೀರ್ಣೋದ್ದಾರಗೊಂಡಿದ್ದವು. ಈ ಬಗ್ಗೆ ಸ್ಥಳೀಯ ಭಂಡಾರಿ ಕುಟುಂಬಗಳಿಗೆ ಅತೀವ ನೋವು ಕಾಡುತಿತ್ತು.
ದೇವಾಲಯದ ಪ್ರಥಮ ಆಡಳಿತ ಮೊಕ್ತೇಸರ ಶ್ರೀ. ಪಾಂಡು ಭಂಡಾರಿ
ಬಾರಕೂರಿನಲ್ಲಿ 1987 ರಲ್ಲಿ ಉಪತಹಸೀಲ್ದಾರ್ ಆಗಿ ಸರ್ಕಾರಿ ಸೇವೆ ಮಾಡುತ್ತಿದ್ದ ಸಂದರ್ಭದಲ್ಲಿ ಮದುವೆ ಸಮಾರಂಭವೊಂದರಲ್ಲಿ ಬೇಟಿಯಾದ ಬಾರಕೂರಿನ ಸ್ಥಳೀಯರಾದ ಶ್ರೀ ಸೋಮ ಭಂಡಾರಿಯವರು ಹಾಳು ಬಿದ್ದ ಭಂಡಾರಿ ಸಮಾಜದ ದೇವಸ್ಥಾನ ಜೀರ್ಣೋದ್ದಾರವಾಗುತ್ತಿಲ್ಲ. ಬೇರೆಲ್ಲ ದೇವಾಲಯಗಳು ಜೀರ್ಣೋದ್ದಾರಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದು ಪಾಂಡುಭಂಡಾರಿಯವರಿಗೆ ಯಾಕೋ ತೀವ್ರ ಪರಿಣಾಮ ಬೀರಿತು. ಅಧೋ ಗತಿಯಲ್ಲಿರುವ ದೇವಸ್ಥಾನವೊಂದನ್ನು ಹಣಬಲ ಜನಬಲವಿಲ್ಲದೇ ಕಟ್ಟುವುದು ಅಸಾಧ್ಯವೆಂಬ ಅರಿವಿದ್ದರೂ ದೇವಸ್ಥಾನವನ್ನು ಉಳಿಸಿಕೊಂಡು ಸಮಾಜದ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದು ಮತ್ತು ಅಭಿವೃದ್ಧಿಗೆ ಪೂರಕವಾಗಿರಲೂ ಸಹಾಯಕ ಎಂಬುದನ್ನು ಅರಿತು, ನಮ್ಮ ದೇವಸ್ಥಾನವನ್ನು ಸುಸ್ಥಿತಿಯಲ್ಲಿಡುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಕಾಡಬೆಟ್ಟು ವಿಶ್ವನಾಥ್ ಭಂಡಾರಿ ಮತ್ತು ಸ್ಥಳೀಯ ಭಂಡಾರಿ ಬಂಧುಗಳನ್ನು ಸೇರಿಸಿ ಮೊದಲು ದೇವಸ್ಥಾನಕ್ಕೊಂದು ಅಧಿಕೃತ ದಾಖಲೆಯನ್ನು ಪಡೆಯಲು ಧಾರ್ಮಿಕ ಮತ್ತು ದತ್ತಿ ಇಲಾಖೆಯಲ್ಲಿ ಭಂಡಾರಿ ಸಮಾಜದ ಹೆಸರಿನಲ್ಲಿ ನೋಂದಾಯಿಸಲಾಯಿತು. ಜವಾಬ್ದಾರಿ ವಹಿಸುವ ಬಂಧುಗಳ ಕೊರತೆಯ ನಡುವೆಯೂ ಜಿಲ್ಲಾ ಸವಿತಾ ಸಮಾಜದ ಆಧ್ಯಕ್ಷರಾಗಿದ್ದ ಶ್ರೀ ಪಾಂಡು ಭಂಡಾರಿ ಹೆಚ್ಚಿನ ಬಂಧುಗಳಿಗೆ ಪರಿಚಿತರಾಗಿದ್ದ ಕಾರಣ ಜನ ಸಂಘಟನೆ ಅಷ್ಟೊಂದು ಕಷ್ಟವಾಗಲಿಲ್ಲ. ಅಷ್ಟಮಂಗಲ ಪ್ರಶ್ನೆಗಾಗಿ ಧನ ಸಂಗ್ರಹ ನಡೆಸಿ ಯಶಸ್ವಿಯಾದರು. ನಿತ್ಯಪೂಜಾ ನಿಧಿ ರಚಿಸಿ ಹಣಸಂಗ್ರಹಿಸಿ ತೃಪ್ತಿಕರವಾದ ಸೇವೆ ನೀಡಿ ಉಜಿರೆಗೆ ವರ್ಗಾವಣೆಯಾದ ಕಾರಣ ದೇವಾಲಯದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗದೇ ತನ್ನ ಮೊಕ್ತೇಸರ ಹುದ್ದೆಯನ್ನು ಕಾಡಬೆಟ್ಟು ವಿಶ್ವನಾಥ ಭಂಡಾರಿಯವರಿಗೆ ನೀಡಿದರು.
ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ರಚನೆ:
ಶ್ರೀ ಪಾಂಡು ಭಂಡಾರಿ, ಕಾಡಬೆಟ್ಟು ವಿಶ್ವನಾಥ ಭಂಡಾರಿ ಮತ್ತು ಇತರ ಸಮಾನಮನಸ್ಕರ ತಂಡದಲ್ಲಿದ್ದ, ಉಳ್ಳಾಲದ ರವೀಂದ್ರ ಭಂಡಾರಿ , ಸುರೇಶ್ ಮರೋಳಿ ಕಂಕನಾಡಿ, ರವೀಂದ್ರ ಎಸ್ ಭಂಡಾರಿ ಕಾಟಿಪಳ್ಳ , ಮಾಧವ ಕೂಳೂರು ಇವರುಗಳ ಸಹಕಾರದೊಂದಿಗೆ ಜೀರ್ಣೋದ್ದಾರ ಸಮಿತಿ ಆರಂಭವಾಯಿತು. ಅಧ್ಯಕ್ಷರಾಗಿ ಶ್ರೀ ವಿಠಲ ಭಂಡಾರಿ ಕುಳಾಯಿ ಅವರನ್ನು ನೇಮಿಸಲಾಯಿತು. ಆದರೆ ವಿವಿಧ ಕಾರಣಗಳಿಂದ ಈ ಸಮಿತಿ ನಿಷ್ಕ್ರಿಯವಾದ ಕಾರಣ ಪಾಂಡು ಭಂಡಾರಿಯವರ ಆತ್ಮೀಯರು ಮತ್ತು ಹಿರಿಯರಾದ ಶ್ರೀ ಸಂಜೀವ ಭಂಡಾರಿ ಕದ್ರಿಯವರನ್ನು ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಕಚ್ಚೂರು ನಾಗೇಶ್ವರ ದೇವರ ನೂತನ ಗರ್ಭಗುಡಿ ಶಿಲಾನ್ಯಾಸ ಸಮಾರಂಭ:
ಭಂಡಾರಿ ಸಮಾಜದ ಏಕೈಕ ಧಾರ್ಮಿಕ ಕೇಂದ್ರವಾದ ಬಾರಕೂರಿನ ಶ್ರೀ ಕಚ್ಚೂರು ನಾಗೇಶ್ವರ ದೇವರ ನೂತನ ಗರ್ಭ ಗುಡಿಯ ಶಿಲಾನ್ಯಾಸ ಸಮಾರಂಭ ಹಿರಿಯರಾದ ಶ್ರೀಯುತ ಕೊರಗ ಭಂಡಾರಿ ಹಿಂದೂ ಧ್ವಜ ಅರಳಿಸಿ ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಸುಮಾರು ಒಂದು ಸಾವಿರ ಭಂಡಾರಿ ಬಂಧುಗಳು ಸೇರಿದ್ದ ಈ ಕಾರ್ಯಕ್ರಮ ಶ್ರೀ. ಕೆ. ಸಂಜೀವ ಭಂಡಾರಿಯವರ ನೇತೃತ್ವದಲ್ಲಿ ನಡೆಯಿತು.
ದೇವಸ್ಥಾನದ ಸಮಗ್ರ ಜೀರ್ಣೊದ್ದಾರಕ್ಕಾಗಿ ಧನ ಸಂಗ್ರಹ ಗುರಿ ಮತ್ತು ಸ್ವಯಂ ಸೇವಕ ತಂಡದ ಸಾಧನೆ:
ಶ್ರೀಯುತ ಸಂಜೀವ ಭಂಡಾರಿ ಕದ್ರಿ ಮತ್ತು ಕಾಡಬೆಟ್ಟು ವಿಶ್ವನಾಥ್ ಭಂಡಾರಿಯವರ ನೇತೃತ್ವದಲ್ಲಿ ಶಿಲಾನ್ಯಾಸ ನಡೆದ ನಂತರ ಧನ ಸಂಗ್ರಹ ಮಾಡುವುದು ಕಷ್ಟದ ಕೆಲಸವಾಗಿತ್ತು. ನಿರೀಕ್ಷೆಯಂತೆ ಜನಬೆಂಬಲ ಇರಲಿಲ್ಲ . ಜವಾಬ್ದಾರಿ ವಹಿಸಿಕೊಳ್ಳಲು ಹಿಂಜರಿಯುವವರ ಸಂಖ್ಯೆ ಹೆಚ್ಚಾಯಿತು. ಶಿಲಾನ್ಯಾಸ ನಡೆದು ಒಂದು ತಿಂಗಳಾದರೂ ನಿಷ್ಕ್ರೀಯವಾಗಿದ್ದನ್ನು ಗಮನಿಸಿದ ಶ್ರೀ. ಎಸ್ ಪ್ರಕಾಶ್ ಭಂಡಾರಿ ಕಟ್ಲಾ ದೇವಸ್ಥಾನ ನಿರ್ಮಾಣದ ಕಾರ್ಯ ಯೋಜನೆಯಂತೆ ಸಾಂಗವಾಗಿ ನಡೆಯಬೇಕಾದರೆ ಸಕ್ರಿಯ ಸಮಾನಮನಸ್ಕರ ಸ್ವಯಂಸೇವಕರ ತಂಡದ ಅಗತ್ಯತೆಯ ಬಗ್ಗೆ ಸಮಿತಿಯ ಮುಂದಿಟ್ಟು ಸ್ವತಃ ಯುವ ಸಮಾನಮನಸ್ಕರಾದ ಶ್ರೀ ಸುರೇಶ್ ಮರೋಳಿ , ನಾಗೇಶ್ ಮಣ್ಣಗುಡ್ಡೆ , ಮಾಧವ ಕೂಳೂರು ಹಾಗೂ ಸುಧಾಕರ ಕಲ್ಬಾವಿ ಯವರೊಂದಿಗೆ ಚರ್ಚಿಸಿ ಸ್ವಯಂ ಸೇವಕರ ತಂಡ ರಚಿಸಿ ನಿಸ್ವಾರ್ಥ ಸಂಕಲ್ಪದೊಂದಿಗೆ ದುಮುಕಿದರು. ನಂತರ ಈ ತಂಡವು ವಿಸ್ತರಣೆಗೊಂಡು ಕೆಲವು ತಾಲೂಕುಗಳಲ್ಲಿ ಸ್ವಯಂಸೇವಕರು ಸೇರಿಕೊಂಡರು. ರಮಾನಾಥ ದೇರ್ಲಕಟ್ಟೆ , ದಯಾನಂದ ಕಾರ್ಕಳ, ಗಣೇಶ ಉಡುಪಿ, ಶಶಿಧರ ಕಾರ್ಕಳ , ರವೀಂದ್ರ ಅತ್ತಾವರ, ಉಡುಪಿಯ ಡಾ. ಸಂದೇಶ್ , ಶೈಲೇಶ್, ಮಂಗಳೂರಿನ ಸುಮಂತ್ ಕುಮಾರ್, ಗೋಪಾಲಕೃಷ್ಣ ಭಂಡಾರಿ , ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಹೆಚ್. ಗೋಪಾಲ ಭಂಡಾರಿ ಹೆಬ್ರಿ , ಕಾರ್ಯದರ್ಶಿ ಶ್ರೀ ವಿಶ್ವನಾಥ ಭಂಡಾರಿ ಉಡುಪಿ ಇತರ ಯುವಕರ ಸಮ್ಮುಖದಲ್ಲಿ ಸಭೆನಡೆದು ತಮ್ಮ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಸುಮಾರು 2000 ಕ್ಕೂ ಮಿಕ್ಕಿ ಮನೆಗಳನ್ನು ದಕ್ಷಿಣಕನ್ನಡ, ಉಡುಪಿ, ಮೈಸೂರು , ಬೆಂಗಳೂರಿನಲ್ಲಿ ಸಂಚರಿಸಿ ಬೇಟಿ ಮಾಡಿ 12 ಲಕ್ಷಕ್ಕೂ ಅಧಿಕ ಧನಸಹಾಯದ ವಾಗ್ದಾನವನ್ನು ಪಡೆದು ಧನಸಂಗ್ರಹದ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ್ದರು. ಈ ಸಂದರ್ಭದಲ್ಲಿ ತೀವ್ರ ಬಡತನದಲ್ಲಿದ್ದ ಭಂಡಾರಿ ಕುಟುಂಬಗಳು ಅತಿ ಹೆಚ್ಚಾಗಿದ್ದ ಕಾರಣ ಹನಿ ಹನಿ ಕೂಡಿದರೆ ಹಳ್ಳ ಎಂಬ ಮಾತಿಗೆ ಬದ್ದರಾಗಿ ಕಾಣಿಕೆ ಡಬ್ಬಿ ಕೊಟ್ಟು ಚಿಲ್ಲರೆ ಹಣ ಸಂಗ್ರಹಿಸಿ ಪ್ರತಿ ಭಂಡಾರಿ ಮನೆ ದೇವಸ್ಥಾನ ನಿರ್ಮಾಣದಲ್ಲಿ ಭಾಗಿಯಾಗಬೇಕೆಂಬ ಆಶಯದಂತೆ ಧನ ಸಂಗ್ರಹಿಸಲಾಯಿತು.
ಶ್ರೀ ಕೆ ಸಂಜೀವ ಭಂಡಾರಿ , ಶ್ರೀ ಸುಮಂತ್ ಭಂಡಾರಿ , ಶ್ರೀ ಜೆ. ಕೆ ಭಂಡಾರಿ , ಶ್ರೀ ಗೋಪಾಲ ಭಂಡಾರಿ ಕಾರ್ಕಳ ,ವೈ ಎಸ್ ಭಂಡಾರಿ , ವೈ ಎಸ್ ತಿಮ್ಮಪ್ಪ ಭಂಡಾರಿ ಹಾಗೂ ಶ್ರೀ ದಿವಾಕರ ಭಂಡಾರಿ ಮೈಸೂರು ಮೊದಲಾದವರು ತಮ್ಮ ವಾಹನಗಳನ್ನು ನೀಡಿ ಸ್ವಯಂ ಸೇವಕರಿಗೆ ಸಹಕರಿಸಿದ್ದರು. ಹಿರಿಯರ ಬೆಂಬಲದಿಂದ ಮತ್ತು ಸ್ವಯಂ ಸೇವಕರ ಉತ್ಸಾಹದಿಂದ ಸ್ವಂತ ಖರ್ಚಿನಲ್ಲಿ ತಮ್ಮ ಕೆಲಸಗಳಿಗೆ ರಜೆಹಾಕಿ ಹಗಲು ರಾತ್ರಿಯೆನ್ನದೇ ಗುರಿ ಸಾಧಿಸಿ ನಾಗೇಶ್ವರನ ಕೃಪೆಗೆ ಪಾತ್ರರಾದರು. ಇಷ್ಟೇ ಅಲ್ಲದೇ ಮುಂಬಯಿ ಬಂಧುಗಳು ಅಪಾರ ಕೊಡುಗೆಯನ್ನು ನೀಡಿರುತ್ತಾರೆ. ಮುಂಬಯಿ ಸೇವಾಸಮಿತಿಯ ಎಂ ಆರ್ ಭಂಡಾರಿ , ಶ್ರೀ ಸತೀಶ್ ಭಂಡಾರಿ , ಶ್ರೀ ಸೋಮಶೇಖರ್ ಭಂಡಾರಿ ಮತ್ತಿತರು ತಂಡದೊಂದಿಗೆ ಹಣ ಸಂಗ್ರಹ ನಡೆಸಿದ್ದರು. ಬೆಂಗಳೂರಿನಲ್ಲಿ ವೈ ಎಸ್ ಭಂಡಾರಿ ಸಹಕಾರ ಅಪಾರವಾಗಿತ್ತು.
ಶ್ರೀ ನಾಗೇಶ್ವರ ದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ
1991 ರಿಂದ ಆರಂಭವಾದ ಜೀರ್ಣೊದ್ದಾರ ಕಾರ್ಯ ದೇವಸ್ಥಾನದ ಗರ್ಭಗುಡಿ, ತೀರ್ಥಮಂಟಪ, ತೀರ್ಥಬಾವಿ ನವೀಕರಣ, ನಾಗನ ಚಿತ್ರಕೂಟ, ಗಣಪತಿಗೆ ಸುಂದರವಾದ ಗುಡಿ ಮತ್ತು ರಕ್ತೇಶ್ವರಿ , ಗುಳಿಗ , ಪರಿವಾರ ದೇವತೆಗಳ ಪ್ರತಿಷ್ಠೆಗೆ ಸಿದ್ದವಾಗಿತ್ತು. ಮಹಾದ್ವಾರ ,ಆಂಬೀಲಾ , ಪೌಳಿಯ ಕಾಮಗಾರಿಗಳು ಶ್ರೀ ಸದಾಶಿವ ಭಂಡಾರಿಯವರ ನೇತೃತ್ವದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಂದರ್ಭದಲ್ಲಿ 1993 ರ ಮೇ 3 ರಿಂದ ಮೇ 12 ರವರೆಗೆ ನಾಗೇಶ್ವರ ದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ವಿಜೃಂಬಣೆಯೊಂದಿಗೆ ನಡೆದಿತ್ತು.
ನಾಗೇಶ್ವರ ಸ್ಮರಣಾ ಸಂಚಿಕೆ ಮತ್ತು ಸಾಧನ ಸಂಚಿಕೆ
ದೇವಸ್ಥಾನದ ಜೀರ್ಣೊದ್ದಾರದ ಸಂದರ್ಭವನ್ನು ಸ್ಮರಣೀಯವಾಗಿಸಲು ಮತ್ತು ಇತಿಹಾಸವನ್ನು ದಾಖಲಿಸುವ ಸಲುವಾಗಿ ನಾಗೇಶ್ವರ ಸ್ಮರಣಾ ಸಂಚಿಕೆ ಮತ್ತು ಸಾಧನ ಸಂಚಿಕೆ ಕ್ರಮವಾಗಿ ಶ್ರೀಯುತ ಉದಯಾನಂದ ಭಂಡಾರಿ ಪೆರ್ಡೂರು ಮತ್ತು ಶ್ರೀಯುತ ಕೆ. ಅನಂತರಾಮ ಬಂಗಾಡಿಯವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಲಾಯಿತು.
ಅಂದಿನಿಂದ ಇಂದಿನವರೆಗೆ ದೇವಸ್ಥಾನ ನಡೆದು ಬಂದ ಬಗೆ:
ನಂತರದ ದಿನಗಳಲ್ಲಿ ಜೀರ್ಣೊದ್ದಾರ ಸಮಿತಿ, ಟ್ರಸ್ಟ್ ಆಗಿ ಬದಲಾಯಿತು. ದೇವಾಲಯಕ್ಕೆ ಬೇಕಾದ ನಿಧಿಗಳನ್ನು ಸ್ಥಾಪಿಸಲಾಯಿತು. ಜೊತೆಗೆ ನಿರಂತರ ಅಭಿವೃದ್ದಿಗಳು ನಡೆಯುತ್ತಾ ಸಾಗಿತು. ಭೋಜನಶಾಲೆ, ಅತಿಥಿ ಗೃಹ, ಶೌಚಾಲಯ ಸಭಾಂಗಣ , ಕಚೇರಿ ಮೊದಲಾದ ಅಭಿವೃದ್ದಿ ಕಾರ್ಯಗಳು 2008 ರವರೆಗೆ ನಡೆದವು. ನಂತರ ಮಾಧವ ಭಂಡಾರಿ ಕೂಳೂರು ಆಡಳಿತ ಮೊಕ್ತೇಸರರಾದ ಸಂದರ್ಭ ದಾನಿಗಳ ಸಹಕಾರದೊಂದಿಗೆ ವಿಶಾಲ ಸಭಾಭವನವೊಂದು ನಿರ್ಮಾಣವಾಯಿತು. ಈ ಸಭಾಭವನವನ್ನು 2018ರಲ್ಲಿ ಮತ್ತೊಮ್ಮೆ ಪುನರ್ ನಿರ್ಮಿಸಲಾಯಿತು. ಕೆಲವು ವರ್ಷಗಳ ಹಿಂದೆ ಸರ್ಕಾರ ದೇವಾಲಯದ ಜವಬ್ದಾರಿಯನ್ನು ದೇವಸ್ಥಾನದ ಟ್ರಸ್ಟ್ ಗೆ ಬಿಟ್ಟುಕೊಟ್ಟಿತು. ಆದ ಕಾರಣ ಜೀರ್ಣೊದ್ಧಾರ ಟ್ರಸ್ಟ್ ವಿಸರ್ಜನೆಗೊಂಡು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ ರಚನೆಯಾಯಿತು.
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ನಿರಂತರ ಅಭಿವೃದ್ಧಿಯ ಹರಿಕಾರರು
ದೇವಸ್ಥಾನ ದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು
ಶ್ರೀ ವಿಠ್ಠಲ್ ಭಂಡಾರಿ ಕುಳಾಯಿ
ಶ್ರೀ ಸಂಜೀವ ಭಂಡಾರಿ ಕದ್ರಿ
ಶ್ರೀ ಶಂಭು ಭಂಡಾರಿ ಎಲ್ಲೂರು
ಶ್ರೀ ರವೀಂದ್ರ ಮರೋಳಿ
ಶ್ರೀ ರಾಜು ಭಂಡಾರಿ ಪಾಂಗಳ
ಶ್ರೀ ಶೇಷಗಿರಿ ಭಂಡಾರಿ ಉಡುಪಿ
ಶ್ರೀ ಸತೀಶ್ ಭಂಡಾರಿ ಕಾಡಬೆಟ್ಟು
ಶ್ರೀ ಮಾಧವ ಕೂಳೂರು
ಶ್ರೀ ವಿಜಯ ಭಂಡಾರಿ ಬೈಲೂರು
ದೇವಸ್ಥಾನದ ಆಡಳಿತ ಮೊಕ್ತೇಸರರು
ಶ್ರೀ ಪಾಂಡು ಭಂಡಾರಿ ಉಜಿರೆ
ಶ್ರೀ ವಿಶ್ವನಾಥ್ ಭಂಡಾರಿ ಕಾಡಬೆಟ್ಟು
ಶ್ರೀ ಭಾಸ್ಕರ್ ಭಂಡಾರಿ ಕಾಡಬೆಟ್ಟು
ಶ್ರೀ ದಿನೇಶ್ ಹಳೆಯಂಗಡಿ
ಶ್ರೀ ಸುಭಾಷ್ ಭಂಡಾರಿ ಉಡುಪಿ
ನೂತನ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷರು
ಶ್ರೀ ಗಂಗಾಧರ ಭಂಡಾರಿ ಬಿರ್ತಿ
ಶ್ರೀ ಸುರೇಶ ಭಂಡಾರಿ ಕಡಂದಲೆ
ಅನೇಕ ಅಭಿವೃದ್ದಿ ಕಾರ್ಯಗಳು ಸಮಾಜಭಾಂದವರ ನಿರಂತರ ಬೆಂಬಲದಿಂದ ನಡೆಯಿತು. ಈಗ ದೇವಸ್ಥಾನದ ವಠಾರದಲ್ಲಿ ವಿಶಾಲ ಸಭಾಂಗಣ , ಸಭಾ ವೇದಿಕೆ, ಭೋಜನ ಗೃಹ , ಪಾರ್ಕಿಂಗ್ ವ್ಯವಸ್ಥೆ, ನೀರಾವರಿ ವ್ಯವಸ್ಥೆ, ಅತಿಥಿ ಗೃಹ ಮೊದಲಾದ ಆಧುನಿಕ ವ್ಯವಸ್ಥೆ ಕಲ್ಪಿಸಲಾಗಿದೆ. ನಿರಂತರ ಅಭಿವೃದ್ದಿ ಕಾರ್ಯಗಳ ಕಾರಣ ಮತ್ತು ಆದಾಯ ಮೂಲಗಳ ಕೊರತೆಯ ಕಾರಣದಿಂದ ದೇವಾಲಯ ಅಷ್ಟೊಂದು ಸಂಪದ್ಬರಿತವಾಗಿಲ್ಲದಿದ್ದರೂ ನಿತ್ಯಪೂಜೆ, ಬ್ರಾಹ್ಮಣ ಸಂತರ್ಪಣೆ, ವಿಶೇಷ ಪೂಜೆಗಳು, ಶಿವರಾತ್ರಿ ಜಾಗರಣೆ, ಕಾರ್ತಿಕ ಮಾಸ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರಸ್ತುತ ಶ್ರೀ ಸುರೇಶ್ ಭಂಡಾರಿ ಕಡಂದಲೆಯವರು ಆಡಳಿತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ದೇವಸ್ಥಾನದ ನಿರ್ಮಾಣದ ಹಂತದಲ್ಲಿ ನಮ್ಮ ಸಮಾಜ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿತ್ತು , ಕೂಲಿ ಕಾರ್ಮಿಕರ , ಬೀಡಿ ಕಾರ್ಮಿಕರು ತಮ್ಮ ಸ್ವಲ್ಪ ಮಟ್ಟಿನ ಉಳಿಕೆಯ ಚಿಲ್ಲರೆ ಹಣವನ್ನು ನಮ್ಮ ದೇವಸ್ಥಾನಕ್ಕೆಂದು ಕಾಣಿಕೆ ಡಬ್ಬಿಯ ಮೂಲಕ ಕೊಟ್ಟ ಹಣದಿಂದ , ಕೆಲವಷ್ಟು ಸ್ಥಿತಿವಂತರ ಹಣದಿಂದ ಕಟ್ಟಿರುವ ನಮ್ಮ ನಾಗೇಶ್ವರ ದೇವಸ್ಥಾನವು ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ
ವರ್ಷಂಪ್ರತಿ ಮೇ ತಿಂಗಳಲ್ಲಿ 8 ನೇ ತಾರೀಕು ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಯಿಂದ ನಡೆಯುತ್ತದೆ. ಈ ವರ್ಷ ವಿಶೇಷವಾಗಿ ದಿನಾಂಕ 7 ಮಂಗಳವಾರ ದಂದು ಟ್ರಸ್ಟ್ ವೊಂದರ ಸಹಾಯಾರ್ಥ ಚತುರ್ವಿಂಶತ್ಯುತ್ತರ ಸಹಸ್ರ ನಾಲಿಕೇರ(1024) ಮಹಾಗಣಯಾಗ ನಡೆಯಲಿದೆ. ಈ ಸಮಾರಂಭಗಳಿಗೆ ಭಂಡಾರಿ ಬಂಧುಗಳು ವಿಶ್ವದ ಮೂಲೆ ಮೂಲೆಗಳಿಂದ ಸಮಾರೋಪಾದಿಯಲ್ಲಿ ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಭಂಡಾರಿ ಬಂಧುಗಳಿಗೆ ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಸ್ವಾಗತ ಕೋರುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತದೆ.
✍🏻 ಪ್ರಶಾಂತ್ ಭಂಡಾರಿ ಕಾರ್ಕಳ
ಮಾಹಿತಿ ಕೃಪೆ: ಶ್ರೀ ನಾಗೇಶ್ವರ ಸ್ಮರಣಾ ಸಂಚಿಕೆ ಮತ್ತು ಸಾಧನಾ ಸಂಚಿಕೆ
ನಾಗೇಶ್ವರ ಸ್ವಾಮಿಯು ಎಲ್ಲರಿಗೂ ಒಳಿತು ಮಾಡಲಿ