“ಬುಧ”ನ ಜನನ ಹೇಗಾಯಿತು ..?
ಪುರಾಣ ನೀತಿ
(ಹೆಜ್ಜೆ-20)
ಹಿಂದಿನ ಸಂಚಿಕೆಯಿಂದ….
ತಾರಾ ಚಂದ್ರರು ಯಾವ ಭಯ ಲಜ್ಜೆ ಸಂಕೋಚಗಳೂ ಇಲ್ಲದೆ ಸುಖಿಸಿದ ವಿಷಯ ತಿಳಿದ ಬೃಹಸ್ಪತಿಯು ನೇರವಾಗಿ ಬ್ರಹ್ಮನಿದ್ದಲ್ಲಿಗೆ ಹೋಗಿ ದೂರನ್ನು ಹೇಳಿದನು. ಚತುರ್ಮುಖನು ತಾರೆಯನ್ನು ಗುರುವಿಗೊಪ್ಪಿಸುವಂತೆ ಚಂದ್ರನಿಗೆ ಆಜ್ಞೆ ಮಾಡಿದನು, ಹಾಗೆಯೇ ಆಯಿತು ಆದರೆ ಆಕೆಯು ಆಗಲೇ ಗರ್ಭವನ್ನು ಧರಿಸಿದ್ದಳು. ಬೃಹಸ್ಪತಿಯು ‘ಗರ್ಭವನ್ನಿಳುಹು’ ಎಂದು ತಾರೆಗೆ ಬಲವಂತ ಮಾಡಿದನು. ಅವಳು ಹಾಗೆಯೇ ಮಾಡಬೇಕಾಯಿತು.
ಶಿಶುವು ಪೂರ್ಣವಾಗಿ ಬೆಳೆದಿರಲಿಲ್ಲ ಆದರೂ ಅದು ಲಾವಣ್ಯದ ಪಿಂಡವೇ ಆಗಿದ್ದಿತು. ಅದನ್ನರಿತ ಚಂದ್ರನು ಬಂದು ತಾರೆಯನ್ನು ಜರೆದು ಶಿಶುವನ್ನೆತ್ತಿಕೊಂಡನು. ಆದರೆ ಬೃಹಸ್ಪತಿಯು ಆಕ್ಷೇಪಿಸಿದನು. ಚಂದ್ರನೂ ಕೇಳಲಿಲ್ಲ. ಗುರುವೂ ಬಿಡಲಿಲ್ಲ. ತನಗೆ- ತನಗೆ ಎಂದು ವಾದವೇ ಎದ್ದಿತು.ಆಗ ಬ್ರಹ್ಮದೇವನೇ ಬರಬೇಕಾಯಿತು. ಬಂದವನೇ ಆ ಮೂವರನ್ನೂ ನಿಲ್ಲಿಸಿಕೊಂಡು “ನೀನು ಯಾರ ಮಗ?” ಎಂದು ಮಗುವನ್ನೇ ಕೇಳಿದನು. ಅದು ನಾನು ಚಂದ್ರನ ಮಗನೆಂದೇ ಹೇಳಿತು.
ಚತುರ್ಮುಖನ ತೀರ್ಮಾನದಂತೆ ಚಂದ್ರನನ್ನೇ ಸೇರಿತು ಕೂಡಾ. ಮಗುವಿಗೆ “ಬುಧ” ನೆಂದು ಹೆಸರನ್ನಿಟ್ಟರು. ಚಂದ್ರನು ಬುಧನಿಗೆ ಸಕಲ ವಿದ್ಯಾವಿಶೇಷಗಳನ್ನೆಲ್ಲಾ ಕಲಿಸಿದನು. ಬ್ರಹ್ಮ ದೇವನು ಬುಧನಿಗೆ ಗ್ರಹಾಧಿಪತ್ಯವನ್ನಿತ್ತು ಅನುಗ್ರಹಿಸಿದನು. ತಾರೆಗೆ ಅತಿಯಾದ ಸಂತಸ, ಚಂದ್ರನಿಗೆ ಕೃತಾರ್ಥತೆ, ಬೃಹಸ್ಪತಿಗೂ ಒಂದು ರೀತಿಯ ನೆಮ್ಮದಿ.ಆದುದರಿಂದ ಬುಧನು ತನ್ನ ಅರ್ಹತೆಯನ್ನು ತುಂಬಿಕೊಳ್ಳುವುದಕ್ಕಾಗಿ ತಪೋನಿರತನಾದನು.