ಅಲ್ಲಲ್ಲಿ ಹರಿದು, ಸರಿಯಾಗಿ ಜೋಡಿಸದ ಗುಂಡಿಯ ಬಿಳಿಯ ಅಂಗಿ. ಅಂಗಿಯೇನೋ ಬಿಳಿಯದೇ ಆದರೆ ಅದರಲ್ಲಿ ಬಿಳಿಯ ಹೊಳಪು ಎಲ್ಲೂ ಇರಲಿಲ್ಲ. ಕಪ್ಪು ಬಣ್ಣದ ಪ್ಯಾಂಟು. ಅದನ್ನು ಪ್ಯಾಂಟು ಎಂದು ಹೇಳುವುದೋ ಚಡ್ಡಿ ಎಂದು ಹೇಳುವುದೋ ಎಂಬ ಗೊಂದಲ. ಅವೆರಡನ್ನೂ ಒಗೆಯದೇ ಎಷ್ಟು ವರ್ಷಗಳಾಗಿದ್ದವೋ. ಮಣ್ಣಂಟಿದ ರಾಡಿಯ ಬಟ್ಟೆ ಅವನ ಮೈ ಮುಚ್ಚಿದ್ದವು. ಕೆದರಿದ್ದ ಕೂದಲು, ಮಾರುದ್ದ ಬಿಟ್ಟ ಗಟ್ಟ ಎಷ್ಟು ವರ್ಷದವೋ ಅಂದಾಜಿಸಲು ಕಷ್ಟ. ಮುಖ ಮೈಗಂಟಿದ ಮಣ್ಣಿನ ಹೊದಿಕೆ ಹೊದ್ದ ಅವನ ಕಪ್ಪಾದ ಮುಖ, ಕಣ್ಣು ಎಲ್ಲಿದೆ ಎಂದು ಹುಡುಕಬೇಕಿತ್ತು. ಮೈಯಿಂದ ಹೊರಸೂಸುತ್ತಿದ್ದ ದುರ್ಗಂಧ ಸಾರಿ ಹೇಳುತಿತ್ತು ಅವನು ಸ್ನಾನ ಮಾಡದೇ ವರ್ಷಗಳೇ ಕಳೆದದ್ದು. ಜನರನ್ನು ಕಂಡಕೂಡಲೇ ಆಸೆಯ ಕಂಗಳಿಂದ ಅವರನ್ನು ನೋಡಿ ನಗುತ್ತಿದ್ದ ಕೈ ಮುಂದೆ ಮಾಡಿ. ಅದು ಅವನ ಹಸಿವಿನ ಆರ್ತನಾದವನ್ನು ಹೊರಹಾಕುತ್ತಿತ್ತು. ಅವನನ್ನು ಕಂಡು ಕಾಣದಂತೆ ನೆಡೆವವರನ್ನು ನೋಡಿ ಒಂದೇ ಸಮನೆ ಚುರುಗುಟ್ಟುತ್ತಿದ್ದ ಹೊಟ್ಟೆಗೆ ಜೋರಾಗಿ ಬಡಿದುಕೊಳ್ಳಲಾರಂಭಿಸುತ್ತಿದ್ದ ಆಕಾಶಕ್ಕೆ ಅವನ ಅಳು ಕೇಳುವಂತೆ ಜೋರಾಗಿ ಅತ್ತು. ನಿತ್ರಾಣನಾಗಿ ಹಸಿವಿನಿಂದ ಒದ್ದಾಡಿ ಹಾಗೆ ಧರೆಗೆ ಒರಗಿ ಮಲಗಿಬಿಟ್ಟ. ಪ್ರಾಯ ಇಪ್ಪತ್ತೆರಡು ಇಪ್ಪತ್ತು ಮೂರರ ಆಸುಪಾಸಿರಬಹುದೇನೊ.
ಕುತ್ತಿಗೆಗೆ ಚೆಂದ ಬೆಲ್ಟು ಕಟ್ಟಿ ಸರಪಳಿ ಹರಿದುಬಿಟ್ಟ ವಯಸ್ಸಾದ ಕೆಂಪು ನಾಯಿಯೊಂದು ಈ ಹುಚ್ಚನನ್ನು ನೋಡಿ, ಮತ್ತೆ ಮತ್ತೆ ಅವನ ಬಳಿ ಸಾಗಿ ಮೂಸಲಾರಂಭಿಸಿತು. ಆತನನ್ನು ನೋಡಿ ಒಂದು ರೀತಿಯಲ್ಲಿ ಕೂಗಲಾರಂಭಿಸಿತು, ಅವನು ಏಳುವ ಹಾಗೆ ಕಾಣಲಿಲ್ಲ. ಅವನ ಸುತ್ತ ಸುತ್ತುತ್ತಾ ಬಟ್ಟೆಯನ್ನು ಕಚ್ಚಿ ಎಳೆಯಲಾರಂಭಿಸಿತು, ನಿತ್ರಾಣನಾಗಿ ಬಿದ್ದಿದ್ದ ಅವನಿಗೆ ಇದರ ಪರಿವೆಯೇ ಇರಲಿಲ್ಲ. ಸತತವಾಗಿ ಅವನನ್ನು ಅಲ್ಲಿಂದ ಏಳಿಸಲು ಪ್ರಯತ್ನಪಟ್ಟ ನಾಯಿ ಅವನೆದುರು ಸ್ವಲ್ಪ ಹೊತ್ತು ಕುಳಿತು, ತಕ್ಷಣವೇ ಅಲ್ಲಿಂದ ಓಡಲಾರಂಭಿಸಿತು. ಸ್ವಲ್ಪ ಸಮಯ ಬಿಟ್ಟು ನಾಯಿ ಮತ್ತೆ ಅದೇ ಸ್ಥಳಕ್ಕೆ ಬಂದಿತು, ಆದರೆ ಬರುವಾಗ ಅದರ ಜೊತೆಯಲ್ಲಿ ಅದರ ಮಾಲೀಕನೂ ಇದ್ದ. ತಕ್ಷಣವೇ ನಾಯಿ ಆ ಹುಚ್ಚನ ಸುತ್ತ ಬಾಲವನ್ನು ಅಲ್ಲಾಡಿಸುತ್ತಾ, ನಗುಮೊಗವನ್ನು ಹೊತ್ತು ಸುತ್ತಲಾರಂಭಿಸಿತು ಮಾಲೀಕನ ಮುಖವನ್ನು ನೋಡುತ್ತಾ. ತಕ್ಷಣವೇ ನಾಯಿಯ ಅಭಿಲಾಷೆಯನ್ನು ಅರಿತ ಮಾಲೀಕ, ಆ ಹುಚ್ಚನ ಬಳಿ ಸಾಗಿ ದುರ್ಗಂಧದ ದುರ್ನಾತವನ್ನು ಲೆಕ್ಕಿಸದೇ ಬರಿ ಮೂಳೆ ಮನುಷ್ಯನಾಗಿದ್ದ ಅವನನ್ನು ಆರಾಮವಾಗಿ ಹೆಗಲ ಮೇಲೆ ಹೊತ್ತು ತನ್ನ ಕಾರಿನತ್ತ ಸಾಗಿದ. ಇದನ್ನು ನೋಡುತ್ತಿದ್ದ ಪಾರ್ಕಿನಲ್ಲಿದ್ದ ಜನ ಮೂಕವಿಸ್ಮಿತರಾಗಿ ನಿಂತರು.
ಕಾರಿನ ಹಿಂಬದಿಯ ಸೀಟಿನಲ್ಲಿ ಅದೇ ನಿತ್ರಾಣ ಸ್ಥಿತಿಯಲ್ಲಿ ಮಲಗಿದ್ದವನ ಮನೆಗೆ ಕರೆತಂದು ಶುಚಿಗೊಳಿಸಿ, ನೀರು ಕೊಟ್ಟು, ಹೊಟ್ಟೆತುಂಬಾ ಅನ್ನವನ್ನು ನೀಡಿದ. ಹಸಿದು ಎಷ್ಟು ದಿನಗಳಾಗಿತ್ತೋ ಅನ್ನವನ್ನೇ ಕಾಣದವರಂತೆ ಖುಷಿಯಿಂದ ಗಬಗಬನೆ ತಿಂದು ಮುಗಿಸಿದ. ಮನೆಯ ಮಾಲೀಕನಾದ ಸೃಜನ್ ಗೆ ಮತ್ತೆ ಅದೇ ಕೈಗಳಿಂದ ಧನ್ಯವಾದ ಹೇಳಿದ. ಅವನ ಬಾಯಿಯಿಂದ ಸಣ್ಣದಾದ ಒಂದೇ ಒಂದು ಪದ ಹೊರಡುತ್ತಿತ್ತು. ಕುತೂಹಲದಿಂದ ಅದನ್ನು ಕಿವಿಗಾನಿಸಿ ಕೇಳಿದಾಗ ಅದು ಅಮ್ಮ ಎಂಬ ಪದ ಎಂದು ಸ್ಪಷ್ಟವಾಗಿ ಅರಿವಾಯಿತು. ಬಳಿಕ ಕ್ಷೌರಿಕನನ್ನು ಕರೆಯಿಸಿ ಆನಿಗೆ ಸುಂದರವಾಗಿ ಕೇಶಕರ್ತನ ಮಾಡಿಸಿದ. ಎಲ್ಲಾ ರೀತಿಯಿಂದ ಚೆಂದವಾಗಿ ಕಾಣುತ್ತಿದ್ದ ಆತನ ಮುಖವನ್ನು ನೋಡಿದ ಸೃಜನ್ ಗೆ ಈತನನ್ನು ಎಲ್ಲೋ ನೋಡಿದ ನೆನಪು ಸಣ್ಣಗೆ ಆವರಿಸಲಾರಂಭಿಸಿತು. ಟಾಮಿ ಮಾತ್ರ ಬಹಳ ಖುಷಿಯಿಂದ ಅವರಿಬ್ಬರ ಸುತ್ತಲೂ ಸುತ್ತಲಾರಂಭಿಸಿತು. ಆತನ ಮಗಳು ಐದು ವರ್ಷ ಪ್ರಾಯದ ಸುಲೋಚನ “ಅಪ್ಪ ಯಾರಿದು?” ಎಂದು ಮುಗ್ಧತೆಯಿಂದ ಕೇಳಿದರೆ, ಆತನ ಹೆಂಡತಿ ಸಂಧ್ಯಾ “ಇವರಿಗೆ ಊರಲ್ಲಿಲ್ಲದ ಉಸಾಬರಿ, ಹುಚ್ಚರನ್ನೆಲ್ಲಾ ತಂದು ಮನೆಯನ್ನು ಹುಚ್ಚಾಸ್ಪತ್ರೆ ಮಾಡಬೇಕೇನೋ” ಎಂದು ಸಿಡುಕುಗೊಂಡು ಅಡುಗೆ ಕೋಣೆಯತ್ತ ನೆಡೆದಳು.
ಹೆಂಡತಿಯ ಕೋಪಕ್ಕೆ ಸ್ವಲ್ಪ ಹೆದರಿದ ಸೃಜನ್, ಕುತೂಹಲದೊಂದಿಗೆ ಆತನನ್ನ ನಗರದ ಹುಚ್ಚಾಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಸಿದ. ಅಲ್ಲಿಯೇ ಚಿಕಿತ್ಸೆ ಪಡೆಯಲಾರಂಭಿಸಿದ ಹುಚ್ಚ ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿದ. ಆತನ ಹೆಸರು ವಿನಯ್ ಎಂಬುದಾಗಿ ಡಾಕ್ಟರ್ ಕುಲಕರ್ಣಿ ತಿಳಿಸಿದರು. ವಿನಯ್ ಈ ಹೆಸರು ಕೇಳಿದಾಗಲೇ ಸೃಜನ್ ಗೇ ತನ್ನ ಬಾಲ್ಯದ ನೆನಪಾಯಿತು. ಹೌದು ಹಿಂದೆ ಬಾಲ್ಯದಲ್ಲಿ ಈತನಿಗೆ ವಿನಯ್ ಎಂಬ ತನಗಿಂತ ಸ್ವಲ್ಪ ಚಿಕ್ಕ ವಯಸ್ಸಿನ ಹುಡುಗನೊಂದಿಗೆ ಬಿಟ್ಟಿರಲಾರದ ಗೆಳೆತನವೊಂದು ಇತ್ತು. ಇಬ್ಬರೂ ಊರಿನಲ್ಲಿ ಕೃಷ್ಣ ಕುಚೇಲರ ಗೆಳತನ ಎಂದು ಹೆಸರು ಪಡೆದಿದ್ದರು. ಸೃಜನ್ ತುಸು ಶ್ರೀಮಂತ ಕುಟುಂಬದ ಮನೆತನದವನಾದರೆ, ವಿನಯ್ ಬಡತನದಿಂದ ಬಂದ ಕುಟುಂಬದವನಾಗಿದ್ದನು. ಇಬ್ಬರ ಮನೆಯಲ್ಲೂ ಇವರ ಗೆಳೆತನಕ್ಕೆ ಸಂಪತ್ತಿನ ವಿಷಯ ಅಡ್ಡ ಬಂದಿರಲಿಲ್ಲ.
ಅದೊಂದು ದಿನ ಸಂಜೆಯ ಸಮಯ ಸೃಜನ್ ಮತ್ತು ವಿನಯ್ ಆಟವನ್ನು ಮುಗಿಸಿ ಮನೆಗೆ ವಾಪಾಸಾಗುತ್ತಿದ್ದ ಸಮಯ, ಬೀದಿ ನಾಯಿಯೊಂದು ಅವರನ್ನು ಅಟ್ಟಿಸಿಕೊಂಡು ರಕ್ಕಸನಂತೆ ಮೇಲೆ ಬೀಳಲು ಬಂದುಬಿಟ್ಟಿತು. ಇಬ್ಬರೂ ಕಿರುಚಿ ದಾರಿಮಧ್ಯೆ ಓಡಲಾರಂಭಿಸಿದರು. ಅದೇ ಸಮಯದಲ್ಲಿ ವಿನಯ್ ನ ತಂದೆ ಪ್ಯಾಕ್ಟರಿ ಕೆಲಸ ಮುಗಿಸಿ ಬರುತ್ತಿದ್ದವರು ಈ ದೃಶ್ಯವನ್ನು ಕಂಡು ಹೆದರಿ ಆತಂಕಗೊಂಡು, ಮಕ್ಕಳನ್ನು ರಕ್ಕಸ ನಾಯಿಯಿಂದ ತಪ್ಪಿಸಲು ಅದನ್ನು ಓಡಿಸಲು ಮುಂದಾದರು. ಆದರೆ ದುರಾದೃಷ್ಟವಶಾತ್ ಆ ನಾಯಿ ವಿನಯ್ ನ ತಂದೆಯ ಮೇಲೆ ಉದ್ರೇಕಗೊಂಡು ದಾಳಿ ಮಾಡಿ ಅವರ ಪ್ರಾಣವನ್ನು ಅಪಹರಿಸಿಬಿಟ್ಟಿತ್ತು. ಇದರಿಂದ ಮನೆಗೆ ಆಧಾರಸ್ತಂಭವಾಗಿದ್ದ ವಿನಯ್ ನ ತಂದೆಯನ್ನು ಕಳೆದುಕೊಂಡ ಕುಟುಂಬ ಅನಾಥವಾಗಿಬಿಟ್ಟಿತು. ವಿನಯ್ ನ ತಾಯಿ ಕೌಸಲ್ಯ ತನ್ನ ಕುಟುಂಬವನ್ನು ಬೀದಿಗೆ ತಂದ ನಾಯಿಯನ್ನು ಹುಡುಕಿ ಪ್ರತೀಕಾರದ ಹಗೆಯನ್ನು ತೀರಿಸಿಕೊಂಡುಬಿಟ್ಟಳು. ಆದರೆ ಸತ್ತುಬಿದ್ದ ನಾಯಿಯ ಜೊತೆ ಅದರ ಸಣ್ಣ ಮರಿಯೊಂದು ಏನೂ ಅರಿವಿಲ್ಲದೇ ಮಲಗಿರುವುದು ವಿನಯ್ ನ ಕಣ್ಣಿಗೆ ಬಿತ್ತು. ಮೊದಲೇ ನಾಯಿ ಮರಿಗಳೆಂದರೆ ಜೀವ ಬಿಡುವ ಆತ ಅದನ್ನು ಎತ್ತಿ ಮುದ್ದಿಸಲಾರಂಭಿಸಿದ. ಮನೆಯ ಭಾಗ್ಯವನ್ನೇ ಕಳೆದ ನಾಯಿ ಸಂತತಿಯನ್ನ ಕಂಡರೇ ಕೊಂದುಬಿಡುವಂತಾಗಿದ್ದ ಕೌಸಲ್ಯ ಅದು ಮರಿಯೆಂಬ ಕಾರಣಕ್ಕೆ ಅದನ್ನು ಅವನ ಕೈಯಿಂದ ತಪ್ಪಿಸಿ ಎಸೆದುಬಿಟ್ಟಳು. ವಿನಯ್ ನ ಕಣ್ಣು ಮಾತ್ರ ಆ ಮರಿಯ ಮೇಲೆ ಆಸೆಯಿಂದ ಕೂಡಿತ್ತು.
ದಿನನಿತ್ಯವೂ ಶಾಲೆಗೆ ಹೊರಡುವ ಸಂದರ್ಭ ಅಮ್ಮ ಮಾಡಿದ ತಿಂಡಿಯಲ್ಲಿ ಸ್ವಲ್ಪ ಅವನ ಚೀಲ ಸೇರಿರುತಿತ್ತು ದಾರಿಯಲ್ಲಿ ಸಿಗುವ ಮುದ್ದು ಸ್ನೇಹಿತ ನಾಯಿಮರಿಗಾಗಿ. ಬರುತ್ತಾ ಸೃಜನ್ ಖರೀದಿಸಿದ ಅಂಗಡಿ ತಿಂಡಿಯಲ್ಲಿ ವಿನಯ್ ನ ಅರ್ಧಪಾಲು ಅದಕ್ಕೆಂದೇ ಮೀಸಲಿರುತಿತ್ತು. ಸೃಜನ್ ಗೆ ನಾಯಿಮರಿಯ ಮೇಲೆಲ್ಲಾ ಆಸಕ್ತಿ ಇಲ್ಲದ ಕಾರಣ ಅವನು ಅದನ್ನೇನು ಅಷ್ಟಾಗಿ ತಲೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ವಿನಯ್ ನ ಈ ಕೆಲಸಗಳು ಆತನ ತಾಯಿಗೆ ತಿಳಿಯುತ್ತಿದ್ದಂತೆ ಅದೆಷ್ಟು ಬಾರಿ ಹೊಡೆತ ತಿಂದಿದ್ದನೋ…? ಆದರೂ ಅವನಿಗೆ ಆ ಮರಿಯ ಮೇಲಿನ ಒಲವು ಕಡಿಮೆ ಆಗಿರಲಿಲ್ಲ.
ತಿಂಗಳುಗಳು ಕಳೆಯುತ್ತಾ ಬಂತು ಸಾವಿನ ನೆನಪು ವಿನಯ್ ನ ತಾಯಿಗೆ ಮರೆಯದ ಆಘಾತವನ್ನು ನೀಡಿ, ನಿತ್ಯ ಹಿಂಸೆಯನ್ನು ನೀಡತೊಡಗಿತ್ತು. ಎಷ್ಟು ಮರೆಯುವ ಪ್ರಯತ್ನ ಮಾಡಿದರೂ ನೆನಪುಗಳು ಮಾಸದೇ ಹೋದವು. ಅದು ಅವರು ತಿರುಗಿದ್ದ ರಸ್ತೆ, ಅವರಿದ್ದ ಮನೆ, ಹೀಗೆ ಎಲ್ಲೆಂದರಲ್ಲಿ ಅವರು ಕಳೆದ ಕ್ಷಣಗಳ ನೆನಪು ಸದಾ ಹಸಿಯಾಗಿ ಕಾಡುತ್ತಿತ್ತು. ಊರು ಬಿಟ್ಟು ಹೋದರೆ ಬಹುಶಃ ಕಾಡುವ ನೆನಪುಗಳ ನೋವು ಕಡಿಮೆಯಾಗಬಹುದೇನೋ ಎಂದು, ಊರು ಬಿಡುವ ನಿರ್ಧಾರ ಮಾಡಿದರು. ವಿನಯ್ ಗೆ ಊರು ಬಿಡುವ ಸಂದರ್ಭ ತಕ್ಷಣ ನಾಯಿಮರಿಯ ನೆನಪಾಗಿ ಮನೆಗೆ ತೆಗೆದುಕೊಂಡು ಬಂದ. “ಅಮ್ಮಾ ಇದನ್ನು ನಾವು ಹೋಗುವಲ್ಲಿಗೆ ತೆಗೆದುಕೊಂಡು ಹೋಗುವ, ಇದಕ್ಕೆ ನನ್ನ ಬಿಟ್ಟರೆ ಬೇರೆ ಯಾರು ಇಲ್ಲ, ಪಾಪ ಅಮ್ಮನೂ ಇಲ್ಲ” ಎಂದ. ತಕ್ಷಣ ಸಿಟ್ಟಿಗೆದ್ದ ತಾಯಿ “ನಮ್ಮ ಕುಟುಂಬವನ್ನ ಹಾಳು ಮಾಡಿದ ಈ ದರಿದ್ರ ನಾಯಿ ಸಂತತಿಯನ್ನು ಇನ್ನೊಮ್ಮೆ ತಂದರೆ ಅದನ್ನು ಸಾಯಿಸಬೇಕಾಗುತ್ತದೆ ಹುಷಾರ್” ಎಂದು ಜೋರಾಗಿ ಅತ್ತು ಆತನ ಕೈಲಿದ್ದ ನಾಯಿಮರಿಯನ್ನು ರಸ್ತೆಗೆ ಎಸೆದಳು. ಅಮ್ಮನ ಅಳುವನ್ನು ಕಂಡ ವಿನಯ್ ಅವಳನ್ನು ಸಮಾಧಾನಿಸಿ ನಿಧಾನವಾಗಿ ತನ್ನ ಸ್ನೇಹಿತ ಸೃಜನ್ ಮನೆಯ ಕಡೆಗೆ ನೆಡೆದ. ಸೃಜನ್ ಮನೆ ಬಾಗಿಲಿಗೆ ಬಂದಾಗ ವಿನಯ್ ನ ಕೈಲಿ ಮತ್ತೆ ಅದೇ ನಾಯಿ ಮರಿ. ಸೃಜನ ಹತ್ತಿರ “ನೋಡು, ಇದಕ್ಕೆ ಅಪ್ಪ ಅಮ್ಮ ಯಾರೂ ಇಲ್ಲ, ಇನ್ನು ಮುಂದೆ ನಾನೂ ಈ ಊರಿನಲ್ಲಿ ಇರುವುದಿಲ್ಲ. ಇದನ್ನು ತೆಗೆದುಕೊಂಡು ಹೋಗುವ ಎಂದರೆ ಅಮ್ಮ ಬಿಡುತ್ತಿಲ್ಲ. ಇನ್ನು ಮುಂದೆ ಇವನನ್ನ ನೀನಾದರೂ ನೋಡಿಕೊಳ್ತೀಯಾ ?” ಎಂದು ವಿನಯ್ ಕೇಳಿದ. ಸ್ನೇಹಿತನ ಮಾತಿಗೆ ಒಪ್ಪಿಕೊಂಡು, ಮನೆಯಲ್ಲಿ ಬೀದಿ ನಾಯಿ ಸಾಕದ ಕುಟುಂಬವಾದರೂ ಹಠ ಬಿದ್ದು ಮನೆಯವರನ್ನು ಒಪ್ಪಿಸಿ ನಾಯಿಯನ್ನು ಸಾಕಲಾರಂಭಿಸಿದ್ದ ಸೃಜನ್.
ಊರು ಬಿಟ್ಟು ಊರಿಗೆ ಹೋಗಿ, ಕಷ್ಟದ ಬದುಕಿನಲ್ಲಿ ವಿನಯ್ ನ ತಾಯಿ ಮನೆ ಮನೆಯ ಮುಸುರೆ ತಿಕ್ಕಿ ಆತನನ್ನು ಓದಿಸಲಾರಂಭಿಸಿದಳು. ತನ್ನ ಹೊಟ್ಟೆ ಬಟ್ಟೆ ಕಟ್ಟಿ ಹಣ ಕೂಡಿಟ್ಟು ಅವನ ಓದಿಗೆ ಮೀಸಲಿಟ್ಟಳು. ವಿನಯ್ ಗೆ ತನ್ನ ತಾಯಿಯೇ ಪ್ರಪಂಚವಾದಳು. ಅವನಿಗಾಗಿ ಅವಳು ಪಡುತ್ತಿದ್ದ ಪಾಡು ಕಂಡು ತಾಯಿಗೆ ಮುಂದೆ ಇಂತಹ ಕಷ್ಟ ನೀಡಲೇಬಾರದು, ಮುಂದೆ ಮುದ್ದಾಗಿ ನೋಡಿಕೊಳ್ಳಬೇಕು ಎಂದು ಯೋಚಿಸುತ್ತಿದ್ದನು. ಪ್ರಾಯ ಬಂದಹಾಗೆ ತಾನು ಕೂಡ ಉಳಿಸಿಕೊಂಡ ಸಮಯವನ್ನು ದುಡಿಮೆಗಾಗಿ ಮೀಸಲಿಟ್ಟನು. ಅಮ್ಮ ಮಗನ ಪುಟ್ಟ ಪ್ರಪಂಚದ ಅಗಾಧವಾದ ಪ್ರೀತಿ ದೇವರಿಗೂ ಹೊಟ್ಟೆ ಕಿಚ್ಚು ತರಿಸಿಬಿಟ್ಟಿತ್ತೇನೊ. ನೋಡು ನೋಡುತ್ತಿದ್ದಂತೆಯೇ ಕೌಸಲ್ಯ ಮಾರಕ ರೋಗಕ್ಕೆ ತುತ್ತಾಗಿಬಿಟ್ಟಿದ್ದಳು. ಕ್ಯಾನ್ಸರ್ ಎಂಬ ಮಹಾಮಾರಿ ಕೊನೆಯ ಹಂತಕ್ಕೆ ತಲುಪಿಬಿಟ್ಟಿತ್ತು. ತಾಯಿಯನ್ನು ಉಳಿಸಲು ವಿನಯ್ ಕೂಡಿಟ್ಟ ಹಣವನ್ನು ತಂದು ಸುರಿದ, ಊರವರಲ್ಲಿ ಹೇಳಲಾಗದಷ್ಟು ಸಾಲ ಬೇಡಿದ. ವೈದ್ಯರ ಬಳಿ ತನ್ನ ಪ್ರಾಣವನ್ನಾದರೂ ಕಿತ್ತು ತಾಯಿಗೆ ಕೊಟ್ಟು ಬದುಕಿಸಿಕೊಡಿ ಎಂದು ಮರಳು ಹಿಡಿದವನಂತೆ ಕಾಡಿ ಬೇಡಿ ಅಳಲಾರಂಭಿಸಿದ. ತಾಯಿಯಲ್ಲೇ ದೇವರನ್ನು ಕಾಣುತ್ತಿದ್ದವನು ಮೊದಲ ಬಾರಿಗೆ ತಾಯಿಗೆಂದು ದೇವರ ಗುಡಿಯ ಬಳಿ ಸಾಗಿದ, ಇದ್ದಬದ್ದ ಹರಕೆಗಳನ್ನೆಲ್ಲಾ ಹೊತ್ತುಕೊಂಡ. ಆದರೆ ವಿಧಿಯಾಟವೇ ಬೇರೆ ಆಗಿತ್ತು, ತಾಯಿ ಮಗನ ಅಗಲುವಿಕೆ ಅನಿವಾರ್ಯವಾಗಿತ್ತು. ಕೌಸಲ್ಯ ಇಹಲೋಕ ತ್ಯೆಜಿಸಿಬಿಟ್ಟಳು.
ತನ್ನ ಪ್ರಪಂಚವೇ ತಾಯಿಯಾಗಿದ್ದ ಅವನಿಗೆ ಅವಳ ಅಗಲುವಿಕೆಯನ್ನು ಸಹಿಸಲಾಗಲಿಲ್ಲ. ದಿನದಿಂದ ದಿನಕ್ಕೆ ವಿನಯ್ ನ ಮಾನಸಿಕ ಸ್ಥಿತಿ ಹದಗೆಡುತ್ತಾ ಬಂತು. ಆತ ನಿರಂತರವಾಗಿ ತನಗೇ ಅರಿವಿಲ್ಲದಂತೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾ ತಾಯಿಯ ಸಾವಿನ ದೃಶ್ಯವನ್ನು ಕಣ್ಣಿಗೆ ಕಟ್ಟಿಕೊಂಡು, ವಿದ್ಯಾಭ್ಯಾಸದಲ್ಲಿ ಪದವಿ ಪಡೆಯಬೇಕಾದವನು ಹುಚ್ಚನೆಂಬ ಪದವಿಯನ್ನು ಪಡೆದುಕೊಂಡುಬಿಟ್ಟಿದ್ದನು. ಊರು ಊರು ತಿರುಗುತ್ತಾ ಹಸಿವಾದಾಗ ಅನ್ನವನ್ನು ಬೇಡುತ್ತಾ, ಅಮ್ಮನನ್ನು ನೆನೆಯುತ್ತಾ ತನ್ನ ಬಾಲ್ಯದೂರಿಗೆ ಬಂದು ನಿತ್ರಾಣನಾಗಿ ಬಿದ್ದಿದ್ಧವನನ್ನು, ಅಂದು ತನ್ನ ಸ್ನೇಹಿತನಿಗೆ ಜೋಪಾನವೆಂದು ನೀಡಿದ್ದ ಟಾಮಿ ಗುರುತು ಹಿಡಿದುಬಿಟ್ಟಿದ್ದನು. ಆಸ್ಪತ್ರೆಯ ನಿರಂತರ ಚಿಕಿತ್ಸೆಯಿಂದ ಮತ್ತೆ ಮಾನಸಿಕ ಸ್ಥಿಮಿತ ಪಡೆದು ಹೊಸ ಬದುಕನ್ನು ಬದುಕಲು ಟಾಮಿ ಕಾರಣನಾಗಿಬಿಟ್ಟಿದ್ದನು. ವಿನಯ್ ಬದುಕು ಬದುಕಿರುವವರೆಗೂ ನಿನಗೆ ನಾನು ಕೃತಜ್ಞನು ಎಂದು ಟಾಮಿಯನ್ನು ನೋಡುವ ಸಲುವಾಗಿ ಸೃಜನ್ ನೊಂದಿಗೆ ಬಂದಾಗ ಟಾಮಿ ವಿನಯ್ ನನ್ನು ಅಕ್ಕರೆಯಿಂದ ನೆಕ್ಕುತ್ತಾ ಮುದ್ದು ಮಾಡತೊಡಗಿದ. ಅಂದು ತನಗೊಂದು ಬದುಕು ಕೊಟ್ಟವನಿಗೆ ಇಂದು ತಾನು ಬದುಕನ್ನು ನೀಡಿ ಕೃತಜ್ಞತೆಯನ್ನು ಮೆರೆದುಬಿಟ್ಟಿದ್ಧ.
✍️ವಿಜಯ್ ನಿಟ್ಟೂರು