January 18, 2025
faceappcraze
ಆವತ್ತು ಸಂಡೇ ಆದ್ದರಿಂದ ಬೆಳಿಗ್ಗೆ ದಿನವೂ ಏಳುವುದಕ್ಕಿಂತ ಸ್ವಲ್ಪ ಲೇಟಾಗಿ ಎದ್ದೆ. ನನಗಿಂತಲೂ ತಡವಾಗಿ ಏಳುವ ನನ್ನ ತರ್ಲೆ ತಮ್ಮ ಆದಿನ ಬೇಗನೆ ಎದ್ದು ಮೊಬೈಲ್ ನಲ್ಲಿ  ಅದೇನೋ ಕಿತಾಪತಿ ಮಾಡುತ್ತಾ ನಗಾಡುತ್ತಿದ್ದ.ಅಯ್ಯೋ ಇವನಿಗೇನಾಯಿತು? ಎಂಬ ಗೊಂದಲದಲ್ಲಿಯೇ ಅವನ ಹತ್ತಿರ ಹೋಗಿ ಮೊಬೈಲ್ ಗೆ ಮೆಲ್ಲ ಇಣುಕಿದೆ.ಅ ಚಿತ್ರ ಒಂಥರ ವಿಚಿತ್ರವಾಗಿತ್ತು.ಮುಖವೆಲ್ಲಾ ಸುಕ್ಕುಗಟ್ಟಿತ್ತು.ಕೂದಲೆಲ್ಲಾ ಬಿಳಿ ಬಣ್ಣಮಯವಾಗಿತ್ತು.ಈ ಅಜ್ಜಿ ಫೋಟೋ ಯಾರದಪ್ಪ? ಎಂದು ಆಲೋಚಿಸಿದರೂ ತಿಳಿಯಲೇ ಇಲ್ಲ.ಸಿಡುಕುಮೂತಿ ತಮ್ಮ ಯಾಕಾಗಿ ಎದ್ದು ಬಿದ್ದು ನಗುತ್ತಿದ್ದಾನೆ ಎಂಬುದು ತಲೆ ತಿನ್ನಲಾರಂಭಿಸಿತು.ಯೋಚನೆಯಲ್ಲಿ ಮುಳುಗಿದ್ದ ನನ್ನನ್ನು ನೋಡಿ ಇನ್ನೂ ಜೋರು ನಗಲಾರಂಭಿಸಿದ.ಮೊದಲೇ ಗೊಂದಲದಲ್ಲಿದ್ದ ನನ್ನ ಕೋಪ ನೆತ್ತಿಗೇರಿತು.ಕೊನೆಗೆ ಕೇಳಿಯೇ ಬಿಟ್ಟೆ ಯಾಕೆ ಹೀಗೆ ನಗ್ತಿದೀಯಾ ಎಂದು.ಆಗ ಆತ ಹೇಳಿದ್ದು ಕೇಳಿ ಒಂದು ಕ್ಷಣ ಸ್ತಬ್ಧಳಾಗಿ ಬಿಟ್ಟೆ. ಅವನು ಹೇಳಿದ್ದು ಇಷ್ಟೇ ಈ ಪೋಟೋದಲ್ಲಿರುವುದು ನೀನೆ ಎಂದು.ಹೇ ಹೋಗೋ ಇದು ನನ್ನ ಚಿತ್ರ ಅಲ್ಲ ಎಂದು ನೇರವಾಗಿ ಹೇಳಿದೆ.ನೀನು ವಯಸ್ಸಾದ ಮೇಲೆ ಈ ರೀತಿಯೇ ಆಗ್ತಿಯಾ ಎಂದು ಹಸನ್ಮುಖಿಯಾಗಿ ಉತ್ತರಿಸಿದ. ಆಶ್ಚರ್ಯಚಕಿತಳಾದ ನನಗೆ ಇದೆಲ್ಲಾ “ಫೇಸ್ ಆ್ಯಪ್ ಮಾಯೆ”ಎಂದು ಅವನು ಹೇಳಿದ ಮೇಲೆಯೇ ಅರಿವಾದದ್ದು.
 
 
 
 
ಮೂಲತಃ ರಷ್ಯಾ ದೇಶದಲ್ಲಿ ತಯಾರಾದ ಫೇಸ್ ಆ್ಯಪ್ ಅದಾಗಲೇ ವಿಶ್ವದೆಲ್ಲೆಡೆ ನೂರು ಮಿಲಿಯನ್ ಬಳಕೆದಾರರನ್ನು ಸಂಪಾದಿಸಿದೆ.ಎಲ್ಲರಿಗೂ ವಯಸ್ಸಾದ ಮೇಲೆ ನಾವು ಹೇಗೆ ಕಾಣ್ತೇವೆ? ಎಂಬ ಕುತೂಹಲ ಇರುವುದು ಸಹಜ,ಜೊತೆಗೆ ಅಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ ಲೈಕ್ ಗಳಿಸುವುದು,ಕಾಮೆಂಟ್ ನಿರೀಕ್ಷಿಸುವುದು ಈಗಿನ ಟ್ರೆಂಡ್.ಅಂತಹ ಜಾಯಮಾನದವರಿಗೆ ಈ ಫೇಸ್ ಆ್ಯಪ್ ಹೇಳಿ ಮಾಡಿಸಿದ್ದು.
 
 
 
ಇತ್ತೀಚೆಗಷ್ಟೇ ಓದಿದ ನೆನಪು ಚೀನಾದಲ್ಲಿ ಮೂರುವರ್ಷ ವಯಸ್ಸಿನಲ್ಲಿ ಕಿಡ್ನಾಪ್ ಆಗಿದ್ದ ಹುಡುಗ ಹದಿನೆಂಟು ವರ್ಷದ ನಂತರ ತನ್ನ ಹೆತ್ತವರನ್ನು ಸೇರಿದ್ದಾನೆ. ಇದಕ್ಕೆ ಕಾರಣ ಪೋಲಿಸರು ತನಿಖೆಗೆ ಬಳಸಿಕೊಂಡ ಫೇಸ್ ಆ್ಯಪ್ ಅಂತೆ. ಆಶ್ಚರ್ಯವಾದರೂ ಇದು ನೈಜ ಘಟನೆ.ಜಗತ್ತಿನೆಲ್ಲೆಡೆ ಕ್ರೇಜ್ ಹುಟ್ಟಿಸಿದ ಫೇಸ್ ಆ್ಯಪ್ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದೆ.ಸೆಲೆಬ್ರಿಟಿಗಳು ಸಹ ಈ ತಂತ್ರಜ್ಞಾನ ಬಳಸಿ ತಮ್ಮ ಮುಖಚಹರೆ ಬದಲಾಯಿಸಿಕೊಂಡು ಫೋಟೋ ಕ್ಲಿಕ್ಕಿಸಿ,ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು,ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಾಳುಗಳ ಮತ್ತು ತೀರ್ಪುಗಾರರ ವಯಸ್ಸಾದ ಫೋಟೋಗಳನ್ನು ಪ್ರದರ್ಶಿಸಿ ನಗೆರಾಶಿಗಳನ್ನು ಸೃಷ್ಟಿಸುತ್ತಿದ್ದಾರೆ.ಇನ್ನು ಕಾಲೆಳೆಯುವವರಿಗಂತೂ ಈ ಆ್ಯಪ್ ಒಳ್ಳೆಯ ವೇದಿಕೆಯೆ ಸರಿ.ಗೆಳೆಯರ ಪೋಟೋವನ್ನು ಎಡಿಟ್ ಮಾಡಿ ವಾಟ್ಸ್ಯಾಪ್ ಸ್ಟೇಟಸ್ ಹಾಕಿ,ಕಿಚಾಯಿಸುವ, ಮುಜುಗರಕ್ಕೀಡುಮಾಡುವ ಪ್ರಸಂಗಗಳೂ ಸಾಕಷ್ಟು ನಡೆದಿವೆ.
 
 
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಜಲಪ್ರಿಯತೆಯಿಂದಾಗಿ ಸಂಚಲನ ಸೃಷ್ಟಿಸಿದ ಫೇಸ್ ಆ್ಯಪ್ ತಂತ್ರಜ್ಞಾನವು ತನ್ನ ಬಳಕೆದಾರರ ಮಾಹಿತಿಗಳ ಮೇಲೆ ರಷ್ಯಾ ನಿಯಂತ್ರಣ ವಹಿಸಬಹುದು ಎಂದು ಸೈಬರ್ ತಜ್ಞರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಈ ಹೇಳಿಕೆಗೆ ಪ್ರತ್ಯುತ್ತರವಾಗಿ ಫೇಸ್ ಆ್ಯಪ್ ಸಂಸ್ಥೆಯು ಬಳಕೆದಾರರ ಮಾಹಿತಿ ಮೇಲೆ ರಷ್ಯಾ ನಿಯಂತ್ರಣ ಸಾಧಿಸುವ ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ಖಚಿತಪಡಿಸಿದೆ
 
 
ಮಕ್ಕಳಿಂದ ಹಿಡಿದು ಹಿರಿಯರವರೆಗೆ,ವಯೋಮಾನದ ಹಂಗಿಲ್ಲದೇ ಎಲ್ಲರ ಮನಸೆಳೆದಿರುವ  ಫೇಸ್ ಆ್ಯಪ್ ಮನೋರಂಜನೆ ನೀಡುತ್ತಿರುವುದು ನಿಜವಾದರೂ,ಕೆಲವರ ಕಳವಳಕ್ಕೂ ಕಾರಣವಾಗಿದೆ. ಟಿಕ್ ಟಾಕ್,ಪಬ್ ಜೀ,ಕ್ಯಾಂಡಿ ಕ್ರಷ್ ಗಳಂತೆ ಯುವಸಮೂಹದ ದಿಕ್ಕು ತಪ್ಪಿಸುವ,ಅವರ ಅಮೂಲ್ಯ ಸಮಯವನ್ನು ಕಸಿದುಕೊಂಡು ವಿದ್ಯಾರ್ಜನೆಯ ಗುರಿಯಿಂದ ವಿದ್ಯಾರ್ಥಿಗಳ ಮನಸ್ಸನ್ನು ಚಂಚಲಗೊಳಿಸಬಹುದೇ? ಎಂಬುದು ಗುರುಗಳ,ಪೋಷಕರ ಆತಂಕ,ಕಳವಳ. ಆದರೆ ಈಗಿನ ಮಕ್ಕಳು ಅಷ್ಟೇನೂ ನಿರ್ಲಕ್ಷ್ಯರಲ್ಲ.ಅವರ ಜವಾಬ್ದಾರಿಯ ಅರಿವು ಅವರಿಗಿದೆ ಎಂಬುದೇ ಸಮಾಧಾನಕರ.ಆಧುನಿಕತೆಯತ್ತ ಸಾಗುತ್ತಿರುವ ಮಾನವನು ಕಾಲದೊಡನೆ ಸ್ಪರ್ಧಿಸುತ್ತಿದ್ದಾನೆ.ಇಂದು ಮನುಷ್ಯನಿಗೆ ಅಗೋಚರವಾದ ಅಥವಾ ಅವನ ಅರಿವಿಗೆ ಬಾರದ ಯಾವ ವಿಷಯವೂ ಉಳಿದಿಲ್ಲ ಎಂಬುದು ವಿಪರ್ಯಾಸವಾದರೂ ವಾಸ್ತವ ಸಂಗಾತಿ.
 
ಗ್ರೀಷ್ಮಾ ಭಂಡಾರಿ.
ಅಂತಿಮ ಪತ್ರಿಕೋದ್ಯಮ ವಿಭಾಗ.
ವಿ.ವಿ. ಕಾಲೇಜು, ಮಂಗಳೂರು.

Leave a Reply

Your email address will not be published. Required fields are marked *