January 19, 2025
23Jathi

ಹಜಾಮ’, ಈ ಪದ ಕೇಳಿದೊಡನೆ ಸವಿತಾ ಸಮಾಜದ ಜನರು ಉರಿದುಬಿದ್ದು ಅಪಮಾನವೆಂಬಂತೆ ಕಂಡು, ಅತ್ಯಂತ ಕೀಳುಮಟ್ಟದ್ದಾಗಿದೆ ಎಂದು ಭಾವಿಸಿ, ಆ ಪದವನ್ನು ಹೇಳಿದ ವ್ಯೆಕ್ತಿಯೊಡನೆ ಜಗಳಕ್ಕಿಳಿದುಬಿಡುವುದು ಅಥವಾ ಇಂದಿಗೆ ಕಾನೂನು ಮಾನ್ಯತೆ ಪಡೆದಿರುವುದರಿಂದ ಅದರ ಹಾದಿಯನ್ನು ಹಿಡಿಯುವವರು ಇದ್ದಾರೆ. 

Image result for salon worker

ಕೇವಲ ಹಜಾಮ ಎನ್ನುವ ಜಾತಿ ಅಥವಾ ಕಾಯಕವನ್ನು ಸೂಚಿಸುವ ಒಂದು ಪದವು ಅತ್ಯಂತ ಶೂದ್ರ ಅಥವಾ ಹೀನ ಎನ್ನುವ ಪರಿಕಲ್ಪನೆಯನ್ನು ಪಡೆದು ನಮ್ಮಲ್ಲಿ ಅತ್ಯಂತ ಮುಜುಗರವನ್ನು ಉಂಟುಮಾಡುವ ಪದವಾಗಿ ಪರಿಣಮಿಸಿದ್ದು ಒಂದು ದುರಂತವೆ ಸರಿ. ಹಾಗೆಯೇ ಸಮಾಜದಲ್ಲಿ ಅತ್ಯಂತ ಹೀನಾಯವಾಗಿ ಕಾಣುವ ಕಾಯಕದ ವರ್ಗವೊಂದು ಕಾನೂನಾತ್ಮಕವಾಗಿ ರಕ್ಷಣೆಯನ್ನು ಪಡೆದು ಸಮಾಜದಲ್ಲಿನ ಶೋಷಿತ ಪದವೊಂದು ಪೀಠದಲ್ಲಿ ಕುಳಿತು ನಗುತ್ತಾ ಮತ್ತು ಅದೇ ಕಾಯಕ ಅಥವಾ ಜಾತಿ ಸೂಚಕ ಇತರೆ ಪದಗಳು ಸಮಾಜದ ಮಾನಸಿಕತೆಯಲ್ಲಿಒಂದು ಹಂತದ ಗರಿಷ್ಠತತೆಯನ್ನು ಪಡೆದು ಒಂದು ವರ್ಗದ ಜನರ ಮುಜುಗರವನ್ನು ತಪ್ಪಿಸಿ, ಭಾವನೆಗಳಿಗೆ ಧಕ್ಕೆಯಾಗದಂತೆ ಕುಳಿತಿದೆ. ನಮ್ಮ ಕಾಯಕ ಅಥವಾ ಜಾತಿ ಸೂಚಕವಾದ ನಮಗೆ ಅತ್ಯಂತ ಗೌರವಯುತವಾದ ಪದವೊಂದು ಸಮಾಜದಲ್ಲಿ ಹೀನವಾಗಿ, ಅಪಹಾಸ್ಯವಾಗಿ, ತೆಗಳುವಿಕೆಯಾಗಿ ಬದಲಾದಾಗ ಸ್ವಾಭಿಮಾನ ಎನ್ನುವುದು ಖಂಡಿತವಾಗಿ ಅಡ್ಡ ಬಂದು ಅದನ್ನು ಹೀನವಾಗಿ ಬಳಸಿದವರ ವಿರುದ್ದ ತಿರುಗಿಬೀಳಲೇಬೇಕಾದ ಅನಿವಾರ್ಯತೆ ಇದೆ. ಅದು ಅತ್ಯಂತ ಕಠೋರವಾದ ಉತ್ತರದಿಂದಲೇ ಆಗಿರಬಹುದು ಆಥವಾ ಅಷ್ಟೇ ನಯವಾಗಿ ಹೇಳಿದವನ ಕಾಯಕ ಸೂಚಿ ಪದವನ್ನು ಅಪಹಾಸ್ಯಕ್ಕೆ ಗುರಿಮಾಡಿ ಅದರ ನೋವು ತಿಳಿಸಿಕೊಂಡುವುದರಿಂದಲಾದರೂ ಆಗಬಹುದು.

Image result for salon worker in india

ಹೀಗೆಯೇ ಕ್ಷೌರಿಕರು ಅವರಿಗೆ ಅರಿವಿದ್ದೂ ಅರಿವಿಲ್ಲದಂತೆ ಸಮಾಜದಲ್ಲಿ ಅವರ ಕಾಯಕ ಸೂಚಿ ಕೆಲವು ಪದಗಳು ಕೂಡ ಈಗಾಗಲೆ ವ್ಯಾಪಕವಾಗಿ ಅಪಹಾಸ್ಯಕ್ಕೆ ಈಡಾಗಿಬಿಟ್ಟಿದೆ. ಇನ್ನೂ ದುರಂತವೆಂದರೆ ಕೆಲವು ಬಾರಿ ಕ್ಷೌರಿಕರೇ ಅಂತಹ ಪದಗಳನ್ನು ಹೇಳಿಕೊಂಡು ತಮಗೆ ತಾವೇ ಅಪಹಾಸ್ಯವನ್ನು ಮಾಡಿಕೊಳ್ಳುತ್ತಿರುವುದೂ ವಿಪರ್ಯಾಸವೆ. ಅಂತಹ ಕೆಲವು ಪದಗಳೆಂದರೆ ಕ್ಲೀನ್ ಶೇವ್, ಕೂಪು, ಬ್ಲೇಡ್, ಹೆರೆತ, ಇತ್ಯಾದಿ ಪದಗಳು ಹೆಚ್ಚು ಬಳಕೆಯಲ್ಲಿ ಇರುವಂತಹವುಗಳು.

Image result for salon worker in india

ಈ ಪದಗಳು ಸೂಚ್ಯವಾಗಿ ಸೂಚಿಸುವುದೇನೆಂದರೆ ಅನಾಯಾಸವಾಗಿ ಅನ್ಯಾಯದ ಅಥವ ಮೋಸದ ಸಂಪಾದನೆ. ಅಥವಾ ಇರುವ ಬೆಲೆಗಿಂತ ಹತ್ತುಪಟ್ಟು ಸಂಪಾದನೆ ಎನ್ನುವ ಅರ್ಥವನ್ನು ಸೂಚಿಸುತ್ತದೆ. ಆದರೆ ಗಮನಿಸಿದಾಗ ಕ್ಷೌರಿಕ ಎರಡು ರೂಪಾಯಿಯ ಬ್ಲೇಡ್ ಬಳಸಿ ೪೦ ರೂಪಾಯಿ ಸಂಪಾದನೆ ಮಾಡುತ್ತಾನೆ ಎಂದರೆ ಎಷ್ಟರಮಟ್ಟಿನ ಲಾಭ ಮಾಡಬಹುದು ಎಂದು ಹುಬ್ಬೇರಿಸುವವರು ಇದ್ದಾರೆ. ಆದರೆ ಅದಕ್ಕೆಂದು ಉಪಯೋಗಿಸುವ ಅದರದೇ ಆದ ಇತರ ಪದಾರ್ಥಗಳು ಬೆಲೆಯನ್ನು ಬಾಳುತ್ತವೆ. ಹಾಗೆಯೆ ವ್ಯೆಕ್ತಿಯ ಗುರುತನ್ನು ನೀಡುವ ಅಥವಾ ಅವನ ಸೌಂದರ್ಯವನ್ನು ಸೂಚಿಸುವ ಅಂದವಾದ ಮುಖವನ್ನು ಒಂದು ಚೂರು ಹಾಳಾಗದಂತೆ, ಒಂದಷ್ಟು ಸುಂದರತೆಯನ್ನು ರೂಪಿಸಿ, ಅವನ ಐಡೆಂಟಿಟಿಯನ್ನು ನೀಡುವ ಸೇವೆಗೆ ಆತ ಒಂದಿಷ್ಟು ಚಾರ್ಜ್ ಮಾಡದೆ ಎರಡು ರೂಪಾಯಿ ಬ್ಲೇಡ್ ಗೆ ನಾಲ್ಕು ರೂಪಾಯಿ ಪಡೆದು ಕಳುಹಿಸಿದರೆ ಅವನ ಜೀವನ ನೆಡೆಯುವುದಾದರೂ ಹೇಗೆ ಸ್ವಾಮಿ, ಅದೂ ಇಂದಿನ ದುಬಾರಿ ಯುಗದಲ್ಲಿ ? ಕ್ಷೌರಿಕ ಎಂದಿಗೂ ಎರಡು ರೂಪಾಯಿಯ ಬ್ಲೇಡಿಗೆ ನೂರು ರೂ ಬೆಲೆ ನಿಗಧಿಪಡಿಸಿ ಡಿಸ್ಕೌಂಟ್ ಬೆಲೆಯಲ್ಲಿ ಐವತ್ತು ರೂ ಗೆ ವ್ಯಾಪರವನ್ನು ನೆಡೆಸಿಲ್ಲ ಎಂದಮೇಲೆ ಅವನ ಕಾಯಕವನ್ನು ಸೂಚಿಸುವ ವಸ್ತುಗಳು ಅಪಹಾಸ್ಯಕ್ಕೆ ಯಾಕೆ ಗುರಿಯಾದವು ಎನ್ನುವುದನ್ನು ಚಿಂತಿಸಬೇಕಾಗಿದೆ.

Image result for salon worker in india

ಇನ್ನೂ ಸೇವೆಯ ಹೆಸರಿನಲ್ಲಿ ಅತಿಯಾಗಿ ದೋಚುವವರ ನಡುವೆ ಕ್ಷೌರಿಕನ ದೋಚುವಿಕೆ ಏನು ಹೆಚ್ಚಿನದಲ್ಲ.‌ ಇದರ ಹೊರತಾಗಿಯೂ ಕೆಲವು ಕ್ಷೌರದಂಗಡಿಗಳು ಹೆಚ್ಚಿನ ಮೊತ್ತವನ್ನು ನಿಗಧಿಪಡಿಸುತ್ತವೆ ಎನ್ನುವ ವಾದವು ಏಳಬಹುದು ಆದರೆ ಅದು ಅಲ್ಲಿನ ಪರಿಸರಕ್ಕೆ ಅವಲಂಬಿಸಿದೆ. ಹತ್ತು ರೂಪಾಯಿಯ ಟೀ ಪರಿಸರ ಬದಲಾದಂತೆ ಎಷ್ಟರ ಬೆಲೆಯಲ್ಲಿ ಮಾರಾಟವಾಗುತ್ತದೆ ಎನ್ನುವುದನ್ನೂ ಅರಿಯಬೇಕಿದೆ. ಸೇವೆಯ ಹೆಸರಿನಲ್ಲಿ ವೈದ್ಯರು ಕೂಡ ಒಂದೈದು ನಿಮಿಷದ ಚೆಕ್ ಅಪ್ ಅಥವಾ ಕೇವಲ ಅವರನ್ನ ಕಾಣುವುದಕ್ಕಾಗಿಯೇ ಇನ್ನೂರರಿಂದ ಮುನ್ನೂರು ರೂಪಾಯಿಗಳನ್ನು ವ್ಯೆಯಿಸಬೇಕಾಗುತ್ತದೆ ಹಾಗಾದರೆ ಅವರದ್ದೇನು ಹಗಲು ದರೋಡೆಯಲ್ಲವೆ ? 

Related image

ಹೀಗೆಯೇ ವ್ಯೆವಹಾರದ ತಂತ್ರಗಳು ಮತ್ತು ಅಗತ್ಯತೆಯ ಮೇಲೆ ವಸ್ತು ಅಥವಾ ಸೇವೆಯ ಬೆಲೆ ನಿಗಧಿಯಾಗುತ್ತದೆ. ಆದರೆ ಇಲ್ಲಿರುವ ಮುಖ್ಯವಾದ ವಿಷಯವೇನೆಂದರೆ ಯಾರೋಬ್ಬರು ವಸ್ತು ಅಥವಾ ಸೇವೆಯಲ್ಲಿ ಅನಗತ್ಯವಾಗಿ ಮೋಸವನ್ನು ಮಾಡುತ್ತಿದ್ದಾರೆ ಎಂದರೆ ಅವರನ್ನು ನೇರವಾಗಿ ಅವರು ಮಾಡುವ ಮೋಸದಿಂದಲೇ ಗುರುತಿಸಬಹುದು. ಆದರೆ ಇದಕ್ಕೆ ಸಂಬಂಧವೇ ಇಲ್ಲದ ಕ್ಷೌರಿಕನ ವೃತ್ತಿಯನ್ನು ಉಪಮೆಯಾಗಿ ಅಥವಾ ಉದಾಹರಣೆಯಾಗಿ ಬಳಸಿ ಯಾಕೆ ಆತನ ಕಾಯಕ ಪೂಜ್ಯ ವಸ್ತುಗಳನ್ನು ಅವಮಾನಿಸಬೇಕು ?

 

ಹೀಗೆಯೇ ಸಾರ್ವಜನಿಕವಾಗಿ ಇಂತಹ ಪದಗಳು ಬಳಕೆಗೆ ಬಂದಾಗ ಕ್ಷೌರಿಕನಿಗೆ ಮುಜುಗರದ ಜೊತೆಗೆ ಮೋಸದ ಮುಖವಾಡ ಹೊತ್ತ ಆರೋಪದ ಮನೋಭಾವ ಕಾಡುವುದು ಸಹಜ. ಒಂದು ಕಾಲದಲ್ಲಿ ಜಾತಿಯನ್ನು ಅತ್ಯಂತ ಹೀನವಾಗಿ ಕಂಡು ಅಪಹಾಸ್ಯಕ್ಕೆ ಈಡಾದಂತೆ ಇಂದಿನ ದಿನದಲ್ಲಿ ಕಾಯಕ ಪೂಜ್ಯ ವಸ್ತುಗಳು ಹೀನವಾಗಿ ಅಪಹಾಸ್ಯಕ್ಕೆ ಈಡಾಗುತ್ತಿದೆ ನಮಗೆ ಅರಿವಿದ್ದೂ ಅರಿವಿಲ್ಲದಂತೆ. ಅಂತಹ ಸಂದರ್ಭ ಮತ್ತು ಸನ್ನೀವೇಶಗಳಲ್ಲಿ ಅದನ್ನು ತಪ್ಪಿಸುವ ಕೆಲಸವನ್ನು ಪ್ರತಿಯೊಬ್ಬ ಕ್ಷೌರಿಕನೂ ಮಾಡಬೇಕಾಗಿದೆ. ಯಾಕೆಂದರೆ ಅಂತಹ ಹೇಳಿಕೆಗಳು ಖಂಡಿತವಾಗಿಯೂ ನಮ್ಮ ವೃತ್ತಿ ಗೌರವವನ್ನು ಕೆಡಿಸುವ ಮಾತುಗಳಾಗಿ ಹೊರಹೊಮ್ಮುತ್ತಿವೆ ಅನಾಯಾಸವಾಗಿ ಬಾಯಿಗೆ ಸಿಲುಕಿ.

ನಾವು ಯಾರೊಬ್ಬರಿಗೂ ಅನ್ಯಾಯವಾಗಿ ಮೋಸಗೊಳಿಸಿ ಬದುಕುತ್ತಿಲ್ಲ ಎಂದಮೇಲೆ ನಮ್ಮ ವೃತ್ತಿ ಇನ್ನೊಬ್ಬರ ಬಾಯಿಚಪಲಕ್ಕೆ ಯಾಕೆ ಆಹಾರವಾಗಿ ಬಲಿಯಾಗಬೇಕು ? ಈ ಪದಗಳು ಈಗಾಗಲೆ ಶೋಷಿತ ಪದಗಳಾಗಿ ಸಮಾಜದಲ್ಲಿ ಹೀನಾಯವಾಗಿ ಬಳಕೆಯಲ್ಲಿದೆ. ಅಂತಹ ದುರುಪಯೋಗದ ಬಳಕೆಯನ್ನು ನಾವು ನಮ್ಮ ವೃತ್ತಿಗೌರವವನ್ನು ಉಳಿಸಿಕೊಳ್ಳಲು ತಡೆಯುವ ಪ್ರಯತ್ನವನ್ನು ಮಾಡಲೇಬೇಕು. ಪ್ರತಿಯೊಬ್ಬ ಕ್ಷೌರಿಕನ ವೃತ್ತಿ ಸ್ವಾಭಿಮಾನದ ವಿಷಯವಾಗಿದೆ.  ನೋಡಲು ಇದೊಂದು ಅಷ್ಟೇನು ಗಂಭೀರ ವಿಷಯವಲ್ಲ ಎಂದೆನಿಸಿ ನಗು ಬಂದರೂ ಗಂಭೀರವಾಗಿ ಯೋಚಿಸಬೇಕಾದ ಅನಿವಾರ್ಯತೆ ಇದೆ. ಕ್ಷೌರಿಕರು ಅಷ್ಟೊಂದು ಮೋಸದ ಬದುಕನ್ನು ನೆಡೆಸಿಯೇ ಜೀವನ ಸಾಗಿಸುತ್ತಿದ್ದಾರೆ ಎಂದು ಅವರ ಆಂತರ್ಯದಲ್ಲೇ ಅಡಕವಾಗಿದ್ದರೆ ಹಾಗೆಯೇ ನಕ್ಕು ಮುಂದೆ ಸಾಗಬಹುದು. ಹೌದು ನಾವುಗಳು ಕತ್ತರಿ, ಕೂಪು, ಕ್ಲೀನ್ ಶೇವ್ ಎಂದುಕೊಳ್ಳುತ್ತಾ. 

 
✍️ವಿಜಯ್ ನಿಟ್ಟೂರು.

Leave a Reply

Your email address will not be published. Required fields are marked *